ಭಾರತಕ್ಕೆಂದೆ ಪ್ರತ್ಯೇಕವಾದ ಜಿ.ಪಿ.ಎಸ್ ವ್ಯವಸ್ಥೆ - ಬೇಕೆ, ಬೇಡವೆ?

ಭಾರತಕ್ಕೆಂದೆ ಪ್ರತ್ಯೇಕವಾದ ಜಿ.ಪಿ.ಎಸ್ ವ್ಯವಸ್ಥೆ - ಬೇಕೆ, ಬೇಡವೆ?

ನಿಮ್ಮಲ್ಲಿ ಹಲವರಿಗೆ ಇದು ಹಳಸಲು ಸುದ್ದಿಯೇನೊ ಆದರೆ ನನಗೆ ಇತ್ತೀಚಿಗೆ ತಿಳಿಯಿತು, ಇಸ್ರೋದವರು ಭಾರತಕ್ಕೆಂದೆ ಪ್ರತ್ಯೇಕವಾದ, ೮ ಉಪಗ್ರಹಗಳುಳ್ಳ ಜಿ.ಪಿ.ಎಸ್ ವ್ಯವಸ್ಥೆಯನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ; ಅಂದಾಜು ವೆಚ್ಚ ೨೦೦೦ ಕೋಟಿ ರೂ.

ಅಮೇರಿಕೆಯ ಜಿ.ಪಿ.ಎಸ್ ವ್ಯವಸ್ಥೆ ಭದ್ರವಾಗಿ ತಳವೂರಿದೆ; ಒಂದು ಕಾಲದಲ್ಲಿ ಅಮೇರಿಕೆಯ ಸೇನೆಯವರಿಗೆ ಮಾತ್ರ ಕೊಡಲಾಗುತ್ತಿದ್ದ ಕರಾರುವಾಕ್ಕಾದ ಮಾಹಿತಿಯನ್ನು ಎಲ್ಲರಿಗೂ ಕೊಡುವಂತೆ ಕ್ಲಿಂಟನ್ ಸರ್ಕಾರದವರು ಏರ್ಪಡಿಸಿಯಾಗಿದೆ. ರಷ್ಯಾದ ಗ್ಲೋನಾಸ್ ವ್ಯವಸ್ಥೆಯ ಉಪಗ್ರಹಗಳನ್ನು ಭಾರತದಿಂದ ಉಡಾವಣೆ ಮಾಡುವಂತೆಯೂ, ಭಾರತದಲ್ಲಿ ಸೇನೆಯವರೂ ಸಾರ್ವಜನಿಕರೂ ಆ ವ್ಯವಸ್ಥೆಯನ್ನು ಬಳಸಲಾಗುವಂತೆಯೂ ಒಪ್ಪಂದವೇರ್ಪಟ್ಟಿದೆ. ಸಾಲದ್ದಕ್ಕೆ ಯೂರೋಪಿನ ಇ.ಎಸ್.ಎ ಸಂಸ್ಥೆಯವರ ಗೆಲಿಲೆಯೋ ವ್ಯವಸ್ಥೆಯಲ್ಲೂ ಭಾರತ ಪಾಲ್ಗೊಳ್ಳುವಂತೆ ಒಪ್ಪಂದವಾಗಿದೆ. ಇಷ್ಟಿದ್ದೂ ಮತ್ತೊಂದು ವ್ಯವಸ್ಥೆ ಬೇಕೆ? ಇದರಿಂದ ಯಾವ ಹೊಸ ಪ್ರಯೋಜನವಾದೀತು? ಎಲ್ಲ ತಿಳಿದೂ ಯೋಜನೆ ತಯಾರಿಸಿದ ಇಸ್ರೋದವರ ಉದ್ದೇಶವಾದರೂ ಏನಿರಬಹುದು?

ಒಂದು ವೇಳೆ ಸರ್ಕಾರದವರು ಮಂಜೂರು ಮಾಡಿದರೆ ಹೊಸ ವ್ಯವಸ್ಥೆಗೊಂದು ಹೆಸರು ಬೇಕಲ್ಲ? ನಕ್ಷತ್ರ ಚೆನ್ನಾಗಿ ಒಪ್ಪುತ್ತೆ, ಏನಂತೀರಿ?

[ ನ್ಯಾಯವಾಗಿ ಜಿ.ಪಿ.ಎಸ್ ಅಮೇರಿಕೆಯ ವ್ಯವಸ್ಥೆಯ ಹೆಸರು ಮಾತ್ರ; ಉಳಿದವನ್ನು ಆ ಹೆಸರಿನಿಂದ ಕರೆಯಲು ಬಾರದು; ಆದರೆ "ಉಪಗ್ರಹಾಧಾರಿತ ಯಾನವ್ಯವಸ್ಥೆ" ಎನ್ನುವುದರ ಬದಲಾಗಿ ಜಿ.ಪಿ.ಎಸ್ ಎನ್ನುವುದು ಸುಲಭ. ಇದರಿಂದ ಯಾರಾದರೂ ನೊಂದಿದ್ದರೆ ದಯವಿಟ್ಟು ಕ್ಷಮಿಸಿ. ]

ವೆಂ.

Rating
No votes yet