ಸಾಹಿತ್ಯದ ಗುರಿ ಏನು ? ಪ್ರಯೋಜನವೇನು?

ಸಾಹಿತ್ಯದ ಗುರಿ ಏನು ? ಪ್ರಯೋಜನವೇನು?

ಇದು ನಾನು ಇತ್ತೀಚೆಗೆ ಓದಿದ, ಸೇಡಿಯಾಪು ಕೃಷ್ಣಭಟ್ಟರು ಬರೆದ ಒಂದು ಲೇಖನದ ಸಂಗ್ರಹ .
ಸಾಹಿತ್ಯ ಎಂದರೆ ಗ್ರಂಥ ಸಮುದಾಯ. ಗ್ರಂಥಗಳ ಅಧ್ಯಯನ ಮತ್ತು ಪಠನಗಳಿಂದ ಮನೋರಂಜನೆ ಮತ್ತು ಮನಃಸಂಸ್ಕಾರ ಆಗುತ್ತದೆ. ಸಂಸ್ಕಾರದ ಪರಿಣಾಮವೇ ಸಂಸ್ಕೃತಿ. ಹೀಗಾಗಿ ಸಾಹಿತ್ಯ ಎನ್ನುವದು ಸಂಸ್ಕೃತಿಯ ಸಾಧನ. ಯಾವ ಬರವಣಿಗೆ ಸಂಸ್ಕೃತಿಯನ್ನು ಪೋಷಿಸುವದಿಲ್ಲವೋ ಅದು 'ಸಾಹಿತ್ಯ' ಎನ್ನಿಸಿಕೊಳ್ಳುವದಕ್ಕೆ ಅರ್ಹವಲ್ಲವೆಂಬ ಮಾನದಂಡವು ಇದರಿಂದಾಗಿ ಲಭಿಸುತ್ತದೆ. ಸಂಸ್ಕಾರ್‍ಅವೆಂದರೆ ಅಶುದ್ಧವಾದದ್ದನ್ನು ಶುದ್ಧೀಕರಿಸುವದು, ಉತ್ತಮವಲ್ಲದುದನ್ನು ಉತ್ತಮವಾಗಿ ಮಾಡುವದು , ಪರಿಷ್ಕರಿಸುವದು ಎಂದರ್ಥ . ಸುಸಂಸ್ಕೃತಿಯೇ ಸಾಹಿತ್ಯದ ಗುರಿ . ಅರ್ಥಾತ್ ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡುವದೇ ಸಾಹಿತ್ಯದ ಉದ್ದೇಶ .

ಒಳ್ಳೆಯ ನಡೆನುಡಿ , ಸಭ್ಯ ಆಚಾರಶೀಲತೆ , ಸನ್ಮಾರ್ಗದಲ್ಲಿ ವಿಶ್ವಾಸ , ಸತ್ಯಪರತೆ , ಕರ್ತವ್ಯ ನಿಷ್ಠೆ , ಜೀವ ಕಾರುಣ್ಯ , ವಿನಯ ಸಂಪನ್ನತೆ , ಪರೋಪಕಾರಪ್ರವೃತ್ತಿ , ದೀನದಲಿತರಲ್ಲಿ ದಯೆ , ಕ್ರೋಧ ಲೋಭ ಲಾಲಸೆಗಳಿಗೆ ಬಲಿಯಾಗದ ಮನೋಧರ್ಮ , ಸ್ಥಿರಚಿತ್ತತೆ , ಧೈರ್ಯ ಸಂಪನ್ನತೆ , ನ್ಯಾಯಪರತೆ , ಸದ್ಗತಿಯಲ್ಲಿ ಶೃದ್ಧೆ , ಸರ್ವ ಸೌಹಾರ್ದ , ಹಿರಿಯರಲ್ಲಿ ಗೌರವಬುದ್ಧಿ , ಕ್ಷಮಾಶೀಲತೆ , ಉತ್ಸಾಹಸಂಪನ್ನತೆ, ಆತ್ಮಸಂತುಷ್ಟಿ , ವಿಶ್ವಮಹಿಮೆಯಲ್ಲಿ ಪೂಜ್ಯಭಾವ , ಜೀವನವು ಸುಂದರವೂ ಸಾರ್ಥಕವೂ ಆಗುವಂತೆ ಮಾಡುವ ಕಾರ್ಯಗಳಲ್ಲಿ ಆಸಕ್ತಿ ಇತ್ಯಾದಿ ನಾನಾ ಸಾತ್ವಿಕ ಗುಣಗಳು - ಸಂಕ್ಷಿಪ್ತವಾಗಿ ಹೇಳುವದಾದರೆ ಮಾನವ ಸಹಾನುಭೂತಿ , ಉದಾರಭಾವ ಮತ್ತು ಆತ್ಮ ಸಂಯಮ ಇವು ಸುಂಸ್ಕೃತರಾದವರಲ್ಲಿ ಅಷ್ಟಿಷ್ಟಾಗಿ ಕಂಡುಬರುವ ಸದ್ಗುಣಗಳು. ಈ ಸದ್ಗುಣಗಳ ಪೂರ್ಣತೆ ಅಥವಾ ಸಮಷ್ಟಿಯೇ ಸುಸಂಸ್ಕೃತಿ. ಇದನ್ನು ಸಮಾಜದಲ್ಲಿ ಬೆಳೆಸಬಲ್ಲ ಅಥವಾ ಬೆಳೆಯಿಸುವ ಉದ್ದೇಶದಿಂದ ರಚಿತವಾದ ಚಿತ್ತಾಕರ್ಷಕ ವಾಙ್ಮಯವೇ ನಿಜವಾದ ಸಾಹಿತ್ಯ.
ಈ ಸಂಸ್ಕೃತಿ ನಮಗೆ ಏಕೆ ಬೇಕು? ಇದರಿಂದ ನಾವು ಪಡೆಯುವ ಪ್ರಯೋಜನವೇನು ? ಸಮಾಜದ ಕ್ಷೇಮ/ನೆಮ್ಮದಿಯೇ ಅದರ ಫಲ. ವ್ಯಕ್ತಿಯ ಕ್ಷೇಮವು ಸಮಾಜದ ಕ್ಷೇಮವನ್ನೂ , ಸಮಾಜದ ಕ್ಷೇಮವು ವ್ಯಕ್ತಿಯ ಕ್ಷೇಮವನ್ನೂ ಅವಲಂಬಿಸಿದೆ. ಈ ಕ್ಷೇಮ/ ನೆಮ್ಮದಿ ಎಂದರೇನು ? ಎಂದು ವಿಚಾರಿಸಿದರೆ ಮನ:ಸಮಾಧಾನವೇ ಕ್ಷೇಮ ಅಥವಾ ನೆಮ್ಮದಿ ಎಂದು ಗೊತ್ತಾಗುತ್ತದೆ. ಬೇರೆಲ್ಲಾ ಸುಖ, ಸಂಪತ್ತು ಎಷ್ಟಿದ್ದರೂ ಮನಸ್ಸಮಾಧಾನವೊಂದಿಲ್ಲದಿದ್ದರೆ ಆ ವ್ಯಕ್ತಿಗೆ ನೆಮ್ಮದಿ ಇರುವದಿಲ್ಲ . ಬೇರೆ ಯಾವ ಸುಖ , ಸಂಪತ್ತು ಇಲ್ಲದಿದ್ದರೂ ಮನಸ್ಸಮಾಧಾನ ಒಂದಿರುವದಾದರೆ ಆ ವ್ಯಕ್ತಿಗೆ ನೆಮ್ಮದಿ ಇದ್ದೇ ಇರುತ್ತದೆ. ಆದ್ದರಿಂದ ಈ ಪ್ರಪಂಚದಲ್ಲಿ ಅತ್ಯಂತ ಸಾರವಾತ್ತಾದ ಸಂಪತ್ತೆಂದರೆ ಮನಸ್ಸಮಾಧಾನ ಎಂಬುದೇ ಆಗಿದೆ. ಮನಸ್ಸಮಾಧಾನ ಎಂಬುದು ನಮಗೆ ಯಾವ ಯಾವ ಸಂದರ್ಭದಲಿ ಲಭಿಸಿದೆ , ಲಭಿಸುತ್ತದೆ ಎಂದು ನಮ್ಮನ್ನು ನಾವೇ ಪ್ರಶ್ನಿಸಿ ಪರೀಕ್ಷೆ ಮಾಡುತ್ತಾ ಹೋದರೆ - ಯವಾಗ ನಮ್ಮ ಮನಸ್ಸು ರೋಷ,ದ್ವೇಷ ,ಲೋಭ , ಮೋಹಾದಿ ವಿಕಾರಗಳಿಲ್ಲದೆ ತೃಪ್ತವಾಗಿ , ಸಂತುಷ್ಟವಾಗಿ ಇರುತ್ತದೋ ಆಗ ಮಾತ್ರ ನಮಗೆ ಮನ:ಸಮಾಧಾನವಿರುತ್ತದೆಂಬುದರ ಅರಿವಾಗುತ್ತದೆ.ಅಂತಹ ಸ್ಥಿತಿ ನಮಗೆ ಒದಗಿದಾಗಲೆಲ್ಲ ನಮ್ಮ ಪರಿಸರಕ್ಕೂ ನಮಗೂ ಅನಿರ್ವಚನೀಯ ಒಂದು ಸಾಮರಸ್ಯ ಉಂಟಾಗುತ್ತದೆ. ಆಗ ನಮಗೆ ನಮ್ಮ ಪರಿಸರದೊಡನೆ ನಿರ್ಹೇತುಕವಾದ ಒಂದು ಪ್ರೀತಿಯ , ಒಂದು ಸುಖವಿಶೇಷದ ಅನುಭವವಾಗುತ್ತದೆ. ಇದುವೇ ಮನ:ಪರಿಪಾಕದ ಎಂದರೆ ಸಂಸ್ಕೃತಿಯ ಮಹಾಫಲ.
ಇದರಿಂದ ಸಂಸ್ಕೃತಿಪೋಷಕವಾದ ಸಾಹಿತ್ಯವು ವ್ಯಕ್ತಿಯ ಹಗೂ ಸಮಾಜದ ಕ್ಷೇಮಕ್ಕೆ , ಕ್ಷೇಮಸಾಧಕವಾದ ಮನ:ಪರಿಪಾಕಕ್ಕೆ ಎಷ್ಟು ಅವಶ್ಯವೆಂಬುದನ್ನು ಊಹಿಸಿಕೊಳ್ಳಬಹುದು. ಸುಸಂಸ್ಕೃತಿಯುಳ್ಳ ವ್ಯಕ್ತಿಗೆ ತನ್ನಲ್ಲಿ ನೆಲೆಗೊಂಡ ಮನ:ಪರಿಪಾಕದ ಗಾಢತ್ವಕ್ಕೆ ಅನುಗುಣವಾಗಿ , ಮನ:ಸಮಾಧಾನವೆಂಬ ಮಹಾಸುಖವು - ಆಗಾಗ , ಯಾವಾಗ ಬೇಕೋ ಆಗ ಅಥವಾ ಅವಿರತವಾಗಿ ಲಭಿಸುತ್ತಿರುತ್ತದೆ. ಈ ಸುಖಾನುಭವಕ್ಕೆ ಸಾಧನಭೂತವಾದ ಸಂಸ್ಕೃತಿಯನ್ನು ಎಂದರೆ ಮನ:ಪರಿಪಾಕವನ್ನು ನಾವು ಪಡಬೇಕಾದ ಪ್ರಯಾಸವೇನೂ ಇಲ್ಲದೆ - ತಾಯ ಎದೆಹಾಲು ಕುಡಿವ ಶಿಶುವಿನಂತೆ ಆನಂದವಶರಾಗಿ ಸವಿದ ಮಾತ್ರದಿಂದ ನಮಗೆ ಒದಗಿಸುವ ಉದಾತ್ತ ಬುದ್ಧಿಯಿಂದ ಮತ್ತು ಸಮಾಜ ಕ್ಷೇಮವನ್ನು ಹಾರೈಸುವ ಕರುಣಾರ್ದ್ರ ಹೃದಯದಿಂದ ಅವತರಿಸುವ ಗದ್ಯ ಅಥವಾ ಪದ್ಯ , ಸಣ್ಣ ಅಥವಾ ದೊಡ್ಡ , ಜಾನಪದ ಅಥವಾ ಪ್ರೌಢ , ರೌದ್ರ ಅಥವಾ ಸೌಮ್ಯ , ವಿಚಾರ ಪ್ರಧಾನ ಅಥವಾ ಕಲ್ಪನಾಪ್ರಧಾನ ರಚನೆಯಲ್ಲವೂ ನಿಜವಾದ ಸಾಹಿತ್ಯ ; ಅದು ಸಮಾಜವನ್ನೂ ಭಾಷೆಯನ್ನೂ ಏಕಕಾಲಕ್ಕೆ ಮೇಲಕ್ಕೆತ್ತುವ "ಸಾಹಿತ್ಯ" .

( ಈ ಲೇಖನ "ಸೇಡಿಯಾಪು ಕೃಷ್ಣಭಟ್ಟರ ವಿಚಾರ ಪ್ರಪಂಚ" ಪುಸ್ತಕದಲ್ಲಿದೆ.)

Rating
Average: 5 (1 vote)

Comments