ಈ ಊರುಗಳಲ್ಲಿ ನಾಯಿಗಳಿಗೆ ಕಿವಿ ಬಾಲಗಳೇ ಇಲ್ಲ... !

ಈ ಊರುಗಳಲ್ಲಿ ನಾಯಿಗಳಿಗೆ ಕಿವಿ ಬಾಲಗಳೇ ಇಲ್ಲ... !

ಬರಹ

ಕೆಲವು ದಿನಗಳ ಹಿಂದೆ ಪಾವಗಡ ತಾಲ್ಲೂಕಿನ ಇತಿಹಾಸ ಪ್ರಸಿದ್ದ ನಾಗಲಮಡಿಕೆ ಹೋಬಳಿಯಲ್ಲಿ ಕೆಲವು ಕೆರೆಗಳ ಸಂದರ್ಶನಕ್ಕೆಂದು ಹೋಗಿದ್ದೆ.ಅಲ್ಲಿನ ನಾಗಲಮಡಿಕೆಯ ಸುಬ್ರಮಣ್ಯನ ದೇವಸ್ಠಾನ ಪುರಾಣ ಪ್ರಸಿದ್ದವಾದದ್ದು.ಇದು ಆಂಧ್ರದ ಗಡಿ ಭಾಗವಾದ್ದರಿಂದ ತೆಲುಗು ಮನೆ ಮಾತು.
ಇದೇ ಹೋಬಳಿಯ ತಿರುಮಣಿ ,ವಳ್ಳೂರು,ಬಳ್ಳಸಮುದ್ರ,ರಾಯಚೆರ್ಲು,ರಾಪ್ಟೆ,ಇನ್ನೂ ಕೆಲವು ಊರುಗಳ ಕೆರೆಗಳನ್ನು ಸಂದರ್ಶಿಸಿ,ಊರೊಳಗೆ ಬಂದಾಗ ಕಾಣುತ್ತಿದ್ದ ಅತಿ ಸಾಮಾನ್ಯ ಸಂಗತಿಯೆಂದರೆ ಈ ಊರುಗಳ ಸಾಕಿದ ನಾಯಿಗಳಿಗೆ ಕಿವಿ,ಮತ್ತು ಬಾಲ ಮೊಟಕಾಗಿದ್ದದ್ದು.ಇದು ನನಗೆ ವಿಸ್ಮಯವಾಗಿ ಕಾಣದಿದ್ದರೂ(ನಮ್ಮೂರಲ್ಲೂ ಅಲ್ಲೊಂದು ಇಲ್ಲೊಂದು ಬೇಟೆ ನಾಯಿಗಳಿಗೆ ಕಿವಿ ಇಲ್ಲದ್ದನ್ನು ನೋಡಿದ್ದೆನಲ್ಲಾ!!!) ಇಂತಹ ಅಪಾರ ಪ್ರಮಾಣದ ಪ್ರಾಣಿ ಹಿಂಸೆ ಅಸಹನೀಯವಾಗಿತ್ತು.ಈ ಚಿಕಿತ್ಸೆಯಿಂದ ಬಚಾವ್ ಆಗಿದ್ದ ನಾಯಿಗಳು ಬೀದಿ ನಾಯಿಗಳಾಗಿದ್ದವು.

ಕುತೂಹಲ ತಾಳಲಾರದೆ ರಾಯಚೆರ್ಲು ಗ್ರಾಮದ ಮುತ್ಯಾಲಪ್ಪನವರನ್ನು ಈ ಬಗ್ಗೆ ಕೇಳಿದಾಗ ಅವರು ನೀಡಿದ ಉತ್ತರ ದಂಗು ಬಡಿಸುವಂತಿತ್ತು "ಏನಿಲ್ಲಾ ಸಾರ್,ಮನೆಯಿಂದ ಹೊರ ಹೊರಟಾಗ ಕಿವಿ ಅಳ್ಳಾಡಿಸಿದರೆ ಹೋದ ಕೆಲಸ ಅಗುವುದಿಲ್ಲ,ಮನೆಯಲ್ಲಿ ಶುಭ ಕಾರ್ಯ ನಡೆಯುವಾಗ ಬಾಲ ಅಲ್ಲಾಡಿಸಿದರೆ ಆ ಕೆಲಸಕ್ಕೆ ಎಳ್ಳು ನೀರು ಬಿಟ್ಟಂತೆಯೇ"..ಎಂದರು.
ನಾಯಿಗಳು ಚುರುಕಾಗಿರಲೆಂದು ಈ ಚಿಕಿತ್ಸೆಯನ್ನು ಕೆಲವು ಕುರಿ ಕಾಯುವ ಮಂದಿ ಬಯಲು ಸೀಮೆಯ ಕೆಲವು ಕಡೆ ಈ ಪದ್ದತಿಯನ್ನು ಅನುಸರಿಸುತ್ತಾರೆ.
ಇವರ ಅನಿಸಿಕೆಯೇ ಎಲ್ಲರ ಅನಿಸಿಕೆ ಇರಲಾರದೆಂದು ಭಾವಿಸಿ ಹಲವಾರು ಜನರನ್ನು ಈ ಬಗ್ಗೆ ಕೇಳಿದಾಗ ಅವರು ನೀಡಿದ ಉತ್ತರ ಕೂಡಾ ಇದೇ ಆಗಿದ್ದದ್ದು ಅಚ್ಹರಿಯಾಯಿತು.ಮಾನವನ ಮೂಡ ನಂಬಿಕೆಗಳಿಗೆ ಶುನಕಗಳ ಕಿವಿ ಬಾಲಗಳು ತುತ್ತಾಗುತ್ತಿರುವುದನ್ನು ಕಂಡು ವೇದನೆಯಾಯಿತು. ನಿಸರ್ಗ,ನೀರು ,ಭೂಮಿ, ಗಾಳಿ,ಏಕೆ??ಮನುಷ್ಯರನ್ನು ಕೂಡಾ ನೆಮ್ಮದಿಯಾಗಿ ಬದುಕಲು ಬಿಡದ ಮಾನವ, ನಾಯಿಗಳನ್ನಾದರೂ ಅವುಗಳ ಪಾಡಿಗೆ ಅವುಗಳನ್ನು ಬಿಡದೆ ಹಿಂಸಿಸುವ ಮನುಜನ ಮನಸ್ಸಿಗೆ ಏನನ್ನಬೇಕು ತಿಳಿಯದೆ ಬೇಸರವಾಯಿತು