ನಮನ-೦೧: ಪರಿಚಯ

ನಮನ-೦೧: ಪರಿಚಯ

ಹೆಸರು ಉಮೇಶ.
ಸಾಮಾನ್ಯವಾಗಿ, 'ಯು‌ಎನ್‌ಶೆಟ್ಟಿ' ಅನ್ನೋ ಹೆಸರಲ್ಲಿ ವ್ಯವಹಾರ.
ಹೊಸ ವ್ಯವಹಾರಗಳನ್ನು ಆದಷ್ಟು ಕನ್ನಡದಲ್ಲೇ ಮಾಡೋಣ ಅಂತ "ಉಉನಾಶೆ" ಅಂತ ಇಲ್ಲಿ ಉಪಯೋಗಿಸ್ತಾ ಇದ್ದೀನಿ.
"ಉಉನಾಶೆ" ಅಂದ್ರೆ ನಮ್ಮ ಮನೆತನ, ಅಪ್ಪ, ಜಾತಿ ಎಲ್ಲಕ್ಕೂ ಜಾಗ ಕೊಟ್ಟ ಹಾಗೆ ಆಗುತ್ತೆ, ಅಷ್ಟೆ.
ಈ ಹೆಸರನ್ನ ಪ್ರೌಢಶಾಲೆ ಹಂತದಲ್ಲೇ ಉಪಯೋಗಿಸ್ತಾ ಇದ್ದೆ, ಅಪರೂಪಕ್ಕೆ.

ಊರು ಉಡುಪಿ ತಾಲೂಕಿನ ಪರ್ಕಳ. ಮಣಿಪಾಲದ ಹತ್ತಿರ.
ಓದಿಗಾಗಿ ದಾವಣಗೆರೆ, ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿ ಕೆಲ ವರ್ಷ ಕಾಲ ಕಳೆದಿರುವುದರಿಂದ ನನ್ನ ಆಡು-ಕನ್ನಡ ಕಲಸು ಮೇಲೋಗರ ಆಗಿಬಿಟ್ಟಿದೆ.
ಬರೆಯುವಾಗ ಪರವಾಗಿಲ್ಲ ಅಂದ್ಕೊಂಡಿದ್ದೀನಿ.

ಬರೆಯುವ ಅಭ್ಯಾಸ ಕಡಿಮೆಯೇ...
ಓದುವ ಚಟ ಬಹಳ ಇತ್ತು.
ಈಗ ಸ್ವಲ್ಪ ಕಡಿಮೆ ಆಗಿದೆ.

ಅಂದ ಹಾಗೆ, ಈ 'ಸಾಲಿಗೆ ಒಂದೇ ವಾಕ್ಯ' ಬರೆಯುವ ಅಭ್ಯಾಸ, 'ಕಚೇರಿ ಕೆಲಸ'ದಲ್ಲಿ ವಿ-ಅಂಚೆಯಿಂದ ಬಂದಿದ್ದು.
ಸಾಲಿನ ಮೊದಲ ವಾಕ್ಯ ಓದಿ ಉಳಿದದ್ದನ್ನು ಹಾರಿಸಿ ಬಿಡುವ ಜನ ಹೆಚ್ಚಾದ್ದರಿಂದ, ಈ ಉಪಾಯ ಮಾಡಿದೆ.
ಈಗ ಅದೇ ರೂಢಿಯಾಗಿದೆ.

'ನಮನ', - ಯಾಕೋ ಏನೋ, ನನಗೆ ಮೆಚ್ಚಿನ ಹೆಸರು.
ತುಳುವಿನಲ್ಲಿ (ನನ್ನ ಮಾತೃಭಾಷೆ) 'ನಮ್ಮದು' ಎಂಬ ಅರ್ಥವಿದೆ.
www.namana.biz ಅಂತ ಒಂದು ಉರುಳು (URL) ಕೂಡ ನೋಂದಾಯಿಸಿ ಇಟ್ಟುಕೊಂಡಿದ್ದೀನಿ.
ಎಲ್ಲಾದ್ರು, ಭವಿಷ್ಯದಲ್ಲಿ 'ಅಂತರ್ಜಾಲ ಉದ್ಯಮ' ಮಾಡೋದಿದ್ದರೆ ಇರಲಿ, ಅಂತ.

ಬ್ಲಾಗ್ ಬರೆಯಲು ಶುರು ಮಾಡುವ ಮುನ್ನ ಬಹಳ ಯೋಚಿಸಿದೆ.
ಬರೇ ಆರಂಭ ಶೂರತ್ವ ಆಗಿಬಿಡುತ್ತೇನೋ?
ನಿಜ ಪರಿಚಯ ಹೇಳೋದೋ ಬೇಡವೋ?
ನೇರವಾಗಿ ಸತ್ಯ ಹೇಳೋದೊ, ಅಥವಾ ಸುತ್ತು-ಬಳಸಿ ಸತ್ಯ ಹೇಳೋದೊ?
ನಿಜ ಪರಿಚಯ ಹೇಳ್ಬಿಟ್ಟು ಸುತ್ತು-ಬಳಸಿ ಸತ್ಯ ಹೇಳೋದೇ ವಾಸಿ ಅನ್ನಿಸಿದೆ.
ಅಲ್ವೇ ಮತ್ತೆ? ನಾನೇ ಬ್ಲಾಗಿದ್ದು ಅಂತ ಯಾರಿಗೂ ಗೊತ್ತಾಗ್‍ದಿದ್ದರೆ ಏನ್ ಲಾಭ?
ಸುಳ್ಳು ಹೇಳಿದರೂ ಲಾಭವಿಲ್ಲ. ಆದ್ದರಿಂದ, ಅವಶ್ಯ ಅನ್ನಿಸಿದರೆ 'ಸುತ್ತು ಬಳಸಿ ನಿಜ' ಹೇಳ್ತೀನಿ, ಇಲ್ಲಾಂದ್ರೆ ವಿಷ್ಯಾನೇ ಬಿಟ್ಟು ಬಿಡ್ತೀನಿ.

ಹಳೆ ಕತೆಗಳು / ಕವನಗಳು, ನನ್ನ ಭಾವನೆಗಳು (ಮುಖಾಮುಖಿ ಹೇಳಿದರೆ, 'ಕೊರೀತಾನೆ' ಅನ್ನಿಸ್ಕೊಳ್ಳೊ) ಎಲ್ಲವನ್ನೂ ಇಲ್ಲಿ ತುಂಬುವ ಆಲೋಚನೆಯಿದೆ.

ಸದ್ಯಕ್ಕೆ ಈ ಯೋಜನೆ, ಮುಂದೆ ನೋಡೋಣ.

ಇತೀ,

ಉಉನಾಶೆ - ಜುಲೈ ೯, ೨೦೦೬ - ೦೨:೨೮ ಪೂರ್ವಾಹ್ನ

Rating
No votes yet