ಬೆಂಗಳೂರಿನ ಸುತ್ತ ಒಮ್ಮೆ ಸುತ್ತುತ್ತಾ

ಬೆಂಗಳೂರಿನ ಸುತ್ತ ಒಮ್ಮೆ ಸುತ್ತುತ್ತಾ

ಮೊನ್ನೆ ಪುಸ್ತಕ ವಾಪಸ್ ಕೊಡಲೆಂದು ಹರಿ ಮನೆಗೆ ಹೋಗಿ ಅಲ್ಲಿಂದ ಆಫೀಸಿನ ಕಡೆ ತಿರುಗಿದೆ. ಸಾಮಾನ್ಯವಾಗಿ ಮೆಜೆಸ್ಟಿಕ್ ಮಾರ್ಗವಾಗಿ ಸರ್ಜಾಪುರದ ಬಳಿ ಸಾಗುವ ನಾನು, ಅದೇಕೂ ಮೊದಲು ನನ್ನನ್ನು ಅಫೀಸ್ ಕ್ಯಾಬ್ ನವರು ನನ್ನನ್ನು ಕರೆದೊಯ್ಯುತ್ತಿದ್ದ ರಸ್ತೆಯನ್ನೊಮ್ಮೆ ನೋಡೋಣ ನೆನಪಿದಿಯೋ ಇಲ್ಲವೋ ಅಂತ ಮಾಗಡೀ ರೋಡಿನಲ್ಲೇ ಮುಂದುವರೆದೆ. ಟೋಲ್ಗೇಟ್ ಮುಗಿದಮೇಲೆ ಶುರುವಾಯ್ತು ಮಾಗಡಿ ರೋಡಿನ ಬವಣೆ. ಮಧ್ಯಾನ್ಹ ರೀ, ರೋಡಿನ ಮಧ್ಯದಲ್ಲಿ ಕಾಮಗಾರಿಗೆ ಬೇಕಿರೋ ಮರಳು ಕಲ್ಲು ತಂದು ಹಾಕ್ತಿದ್ದಾರೆ. ಅದು ಹ್ಯಾಗೆ ಅಂತೀರಾ? ಟ್ರಾಕ್ಟರ್ಗಳಲ್ಲಿ. ಅನ್ಲೋಡ್ ಮಾಡ್ಲಿಕ್ಕೆ ಆ ಟ್ರಾಕ್ಟರ್ ಅರ್ಧ ದಾರಿ ತಿನ್ನುತ್ತಿತ್ತು. ಯಾಕಪ್ಪಾ ನಾನು ಇವತ್ತೇ ಈ ದಾರೀಲಿ ಬಂದೆ ಅಂದುಕೊಳ್ತಾ, ಹಂಗೂ ಇಂಗೂ ಬಿನ್ನಿ ಮಿಲ್ ತಲುಪಿದ್ದಾಯಿತು.

ಸೆಕೆ, ಬಿಸಿಲು, ನೆರಳೇ ಇಲ್ಲ. ಮೊದಲು ಈ ರಸ್ತೆ ಹೀಗಿರಲಿಲ್ಲ. ರಾತ್ರಿ ಹೊತ್ತು ಆಫೀಸಿನಿಂದ ವಾಪಸ್ ಬರ್ಬೇಕಾದ್ರೆ ಈ ರೋಡನಲ್ಲಿ ಸಕತ್ತಾಗಿ ಗಾಳಿ ಬೀಸೋದು. ಈಗ ಬಿಡಿ ನೋಣಕ್ಕೂ ನೆಮ್ಮದಿ ಇಲ್ಲ. ಹಿಂದೊಮ್ಮೆ ನನ್ನ ಡ್ರೈವರ್ ನಿದ್ದೆಯ ಮಂಪರಿನಲ್ಲಿ ಗುದ್ದಿದ್ದ ಮರವೂ ಇಲ್ಲ. ನಾ ಲಕ್ಕಿ, ಅವತ್ತು ಏನೂ ಆಗ್ದೆ ತಪ್ಪಿಸ್ಕೊಂಡೆ ಈಗ, ಈ ರೋಡ್ನಲ್ಲಿ ಜ್ಯಾಸ್ತಿ ಓಡಾಡ್ಲಿಕ್ಕೆ ಶುರು ಮಾಡಿದ್ರೆ ದೇವ್ರೇ ಗತಿ. 

ಬಿನ್ನಿಮಿಲ್, ಚಾಮರಾಜಪೇಟೆ, ಆಶ್ರಮ, ಬಸವನಗುಡಿ, ಗಾಂಧೀ ಬಜಾರ್ ಮಾರ್ಗವಾಗಿ, ಬನಶಂಕರಿ, ಜಯನಗರ ಅಲ್ಲಿಂದ ಸಿಲ್ಕ್ ಬೋರ್ಡ್, ಅಗರದಲ್ಲಿ ತೂರಿ ನನ್ನ ಆಫೀಸ್ ತಲುಪಿದ್ದಾಯಿತು. ಎಲ್ಲೆಡೆ ನಡೀತಿರೋ ನಗರಾಭಿವೃದ್ದಿ ಕಾರ್ಯಗಳ ಇನ್ಸ್ಫೆಕ್ಷನ್ ಮಾಡಿದ ಹಾಗಾಯ್ತು. ಅಭಿವೃದ್ದಿಗಿಂತ ಗಾರ್ಡನ್ ಸಿಟಿಯ ಹಸಿರನ್ನು ತೆಗೆದು ಅಲ್ಲಿ ಸಿಮೆಂಟಿನ ತೇಪೆ ಹಚ್ಚೋ ಕೆಲಸ ಜ್ಯಾಸ್ತಿ ಜೋರಾಗೇ ನೆಡೆದಿತ್ತು ಅನ್ನಿ. ಹೌದು, ಇದು ನಾವೆಲ್ಲಾ ದಿನಾ ಬೆಳಗ್ಗೆ ನೋಡುತ್ತಿರೋ ದೃಶ್ಯ ಬೆಂಗಳೂರಿನಲ್ಲಿ.

ಇದರ ಮಧ್ಯೆ ರಸ್ತೆ ಕೂಡುವ ಕಡೆಗಳಲ್ಲಿ ಹಿಂದೆ, ಮುಂದೆ, ಅಕ್ಕ, ಪಕ್ಕ ಬರೋ ವಾಹನಗಳೂ ಕಾಣದೆ, ಟ್ರಾಫಿಕ್ ಪೋಲೀಸೂ ಇಲ್ಲದ ದೃಶ್ಯ ಜಯನಗರದಲ್ಲಿ. ಇಲ್ಲಿ ದಿನಾ ಜನ ಹ್ಯಾಗೆ ಓಡಾಡ್ತಾರೋ ಗೊತ್ತಿಲ್ಲ. ನಿಧಾನವಾಗಿ ಗಾಡಿ ತಿರುಗಿಸಿಕೊಂಡ ನನಗೆ, ನಮ್ಮ ಜನರ ಲೇನ್ ಡಿಸಿಪ್ಲೀನ್ ಕಂಡು ಸ್ವಲ್ಪ ನಗು. ಅಲ್ರೀ ಮೊದಲೇ ಅರ್ಧ ರಸ್ತೆ, ಅದ್ರಲ್ಲೂ ಓವರ್ ಟೇಕಾ? ಸರಿ ನೀವೇ ಹೊಗ್ಬಿಡಿ ಪರ್ವಾಗಿಲ್ಲ ಅಂತ ಬಿಟ್ಟು, ಎಡಕ್ಕೆ ತಿರುಗಿ ಸಿಲ್ಕ್ ಬೋರ್ಡ್ ಕಡೆ ತಿರುಗಿದಾಗ ಆ ರಸ್ತೆ ಪೂರ ಅಬ್ಬ ಬಿರು ಬಿರು ಬಿಸಿಲು. ಅದೇಕೋ ನನಗೆ "ಗಿಡ ನೆಡಿ, ಗಿಡ ನೆಡಿ, ಮನೆಯ ಮುಂದೊಂದು ಗಿಡ ನೆಡಿ" ಹಾಡಿನ ಜ್ಞಾಪಕ ಬಂತು. ನೀವೂ ಇದನ್ನು ಕೇಳಿರಬೇಕಲ್ವಾ. ಚಿಕ್ಕವನಿದ್ದಾಗ, ಟಿ.ವಿ ನೋಡ್ತಿದ್ದ ಸಮಯ ಇದನ್ನು ಬಳಸ ಸಲ ನೋಡಿ,ಕೇಳಿ ಹಾಡಿದ್ದೇನೆ. ಆದ್ರೆ ಇದು ಸರ್ಕಾರಕ್ಕೆ ಮರೆತು ಹೋಗಿದೆ ಅನ್ನಿಸ್ತು. ಎಲ್ಲೂ ನಿಲ್ಲಲ್ಲು ನೆಲೆಯಿಲ್ಲ. ಇಕ್ಕೆಲಗಳಲ್ಲಿ ಬರೀ ಅಂಗಡಿಗಳು, ಮಧ್ಯೆ ಕರಿಯ ಟಾರಿನ ರಸ್ತೆ.

ಆಫೀಸಿಗೆ ಒಂದತ್ತು ನಿಮಿಷ ತಡವಾಗಿತ್ತು. ಪರ್ವಾಗಿಲ್ಲ. ಫೋನಿನಲ್ಲೇ ಕೆಲ ಕೆಲಸ ಮಾಡಿ ಮುಗಿಸಿದ್ದರಿಂದ ಅಲ್ಲಿ ಹೋಗಿ ಸ್ವಲ್ಪ ಸುಧಾರಿಸಿಕೊಳ್ಳಲಿಕ್ಕೂ ಸ್ವಲ್ಪ ಸಮಯವಿತ್ತು. ಮತ್ತದೇ ರೊಟೀನ್ ವರ್ಕ್. ಒಂದೇ ಒಂದು ಬದಲಾವಣೆ. ಪ್ರಾಜೆಕ್ಟ್ ಟ್ರೈನಿಗಳಿಗೆ ಗ್ನು/ಲಿನಕ್ಸ್ ಪ್ರಾಜೆಕ್ಟ್ ಕೊಟ್ಟಿದ್ದೀವಿ. ಅವರಿಗೆ ಸ್ವಲ್ಪ ಹೊತ್ತು ಗೈಡ್ ಮಾಡ್ಬೇಕಾಗಿ ಬಂತು. ಕೂಲ್! ಸ್ವಲ್ಪ ಸಮಾಧಾನ. ಮನೆಗೆ ವಾಪಸ್ ಹೊರಡೋ ಹೊತ್ತಿಗೆ ರಾತ್ರಿ ೧೧:೧೫. ಮತ್ತೆ ರಸ್ತೆಯ, ಅಲ್ಲಲ್ಲಿ ಕಿತ್ತಿರೋ, ಕಿತ್ತು ಹಾಕ್ತಿರೋ ಮರಗಳ ಚಿಂತೆ. ಆಗಾಗ ಡ್ರೈವ್ ಮಾಡ್ಬೇಕಾದ್ರೆ ಫೋನಿಂದ ತೆಗೆದ ಚಿತ್ರಗಳು ನೆನಪಿಗೆ ಬಂದ್ವು. ಅರೆ, ಇದರ ಬಗ್ಗೆ ಬರೀಲೇ ಇಲ್ವಲ್ಲ ತುಂಬಾ ದಿನದಿಂದ ಅಂದು ಕೊಂಡೆ. ವಾಪಸ್ ಬರುತ್ತಾ, ಮಾಮೂಲಿ ರಸ್ತೆ. ಮೆಜೆಸ್ಟಿಕ್ ನ ಬಳಿ ಬಂದಾಗ ತನ್ನೆಲ್ಲಾ ವನಪು ವೈಯ್ಯಾರಗಳನ್ನು ಕಳೆದುಕೊಂಡ ಶೇಷಾದ್ರಿ ರಸ್ತೆ. ಅದರಿಂದ ಮುಂದೆ ಹಾಳು ಬಿದ್ದು ಹೋಗ್ಲಿಕ್ಕೆ ಕಾಯ್ತಿರೋ ಇನ್ನು ಅನೇಕ ರಸ್ತೆಗಳ ಗತಿ ಕಂಡು, ಇನ್ಮುಂದೆ ಏನೇ ತಗೊಂಡ್ರೂ "ಒಂದು ಫ್ಯಾನು ಫ್ರೀ" ಅಥವಾ ನಮಗೆ ಓಟು ಹಾಕಿ ತಲೆಗೆ ಕಟ್ಟಿಕೊಳ್ಳೋ ಎ.ಸಿ ಕೊಡ್ತೀವಿ ಅನ್ನೊ ಅಡ್ವರ್ಟ್ರೈಸ್ಮೆಂಟ್ ಬಂದ್ರೂ ಬರಬಹುದು ಅನ್ನಿಸ್ತು.   ಬೋರ್ಡ್ ಗಳಿವೆ ನೋಡಿ ಇಲ್ಲಿ. 

ಅಂತೂ ಇಂತೂ ಮನೆ ಸೇರಿದೆ. ಏನನ್ನೂ ಬರೀಲಿಕ್ಕಾಗ್ಲಿಲ್ಲ. ಇವತ್ತು ಅದಕ್ಕೆ ಘಳಿಗೆ ಕೂಡಿ ಬಂದಿದೆ. ನಾಗರಾಜ್ ಹಾಕಿರೋ "ಮರ ಉಳಿಸಿ" ಕಾರ್ಯಕ್ರಮದ ಬಗ್ಗೆ ಯೋಚಿಸ್ತಿದ್ದ ನನಗೆ ಇದನ್ನೂ ಬರೆದು ಬಿಡೋಣ ಅನ್ನಿಸ್ತು.  ಒಂದು ಫುಲ್ ರೌಂಡ್ ಬೆಂಗಳೂರಿನ ಸುತ್ತ ಮುಗಿದಿತ್ತು. ಹತ್ತತ್ರ ೫೦ ಕಿ.ಮಿ. ಸಂದಿಗೊಂದಿಗೊಂದು ಫ್ಲೈ ಓವರ್ರು. ಬೆಳಗ್ಗೆ ಮಧ್ಯಾನ್ಹ, ಸಾಯಂಕಾಲ ಅದರ ಮೇಲೆ ಮಾಡ್ತಿವಿ ನಾವು ಪಾರ್ಕಿಂಗ್. ಯಾಕಂದ್ರೆ ಗಾಡಿ ಮುಂದೋಗ್ಲಿಕ್ಕೆ ಜಾಗಾನೇ ಇಲ್ಲ ಅಥವಾ ಇರಲ್ಲ. ಈಗ ಕಡೀತಾರಂತಪ್ಪ ಇರೋ ಒಂದೆರಡು ಮರಗಳನ್ನೂ. ಲಾಲ್-ಭಾಗ್ ಇನ್ನೂ ಪೂರಾ ನೋಡಿಲ್ಲ ಬೆಂಗಳೂರಿನಲ್ಲಿದ್ರೂ. ಅಥವಾ ಚಿಕ್ಕವನಲ್ಲಿ ಹೋಗಿದ್ರೆ ಅದರ ನೆನಪಿಲ್ಲ. ಇನ್ಮುಂದೆ ಬರೋ ಜನರೇಶನ್ಗೆ ಇವುಗಳ ಫೋಟೋ ತಗೀಲಿಕ್ಕೂ ನಮಗೆಲ್ಲಾ ಸಮಯ ಇಲ್ವೇನೋ. ನಾಳೆ ಅಲ್ಲಿಗೆ ಹೋಗೋ ಪ್ಲಾನಿದೆ. ನೀವೂ ಬನ್ನಿ. 

ಇನ್ನೊಂದೆರಡು ಘಂಟೆಲಿ ಆಫೀಸಿಗೆ ವಾಪಸ್ ಹೋಗ್ಬೇಕು. ಸಧ್ಯಕ್ಕೆ ನಾನು ಹೋಗಿ ಸ್ವಲ್ಪ ವಿಶ್ರಾಂತಿ ತಗೂತೀನಿ. ಮತ್ತೆ ಸುತುತ್ತಾ ಸುತ್ತುತ್ತಾ ತಲೆ ತಿರುಗಬಾರ್ದು ನೋಡಿ ಅದಕ್ಕೆ. 

Rating
No votes yet

Comments