ಮಂಗಳನ ಕುಱುಹನ್ನಱಸುತ್ತಾ

ಮಂಗಳನ ಕುಱುಹನ್ನಱಸುತ್ತಾ

ಬರಹ

ಕಳೆದ ಮೂಱ್ನಾಲ್ಕು ದಿನಗಳಿಂದ ಇಲ್ಲಿ ಮೋಡ ಮತ್ತು ಮಂಜು ಇದ್ದುದಱಿಂದ ಮೂಡಣ ದಿಕ್ಕಿನಲ್ಲಿ ಬೆಳಿಗ್ಗೆ ಕುಜ(ಮಂಗಳ)ನನ್ನು ಕಾಣಲಾಱದೆ ಹತಾಶೆಯಿಂದ ವಿಷಣ್ಣನಾಗಿದ್ದೆ. ಇಂದು (೧೭ನೇ ಏಪ್ರಿಲ್ ೨೦೦೯) ಬೆಳಿಗ್ಗೆ ೫.೦೦ ಗಂಟೆಗೆ ಎದ್ದು ನೋಡಿದರೆ ಮೂಡಣದಿಕ್ಕಿನಲ್ಲಿ ಶುಕ್ರ ಸ್ವಲ್ಪ ಮೇಲೆ ಪಡುವಣದೆಡೆಗೆ ಗುರು ಮತ್ತು ಇನ್ನೂ ಪಡುವಣದೆಡೆಗೆ ನೆತ್ತಿಯ ಮೇಲೆ ಚಂದ್ರ ಕಂಡ. ಮೋಡ ಮಂಜಿಲ್ಲದ ಸ್ವಚ್ಛ ಆಗಸದಲ್ಲಿ ಇಂದು ಮಂಗಳ ಕಂಡೇ ಕಾಣುತ್ತಾನೆಂಬ ಆತ್ಮವಿಶ್ವಾಸದಿಂದ ಮನೆಯಿಂದ ಬೆಳಗಿನ ನಡೆ ನಡೆದೆ. ಯಾಕೋ ಕಾಲೇಜ್ ಕ್ಯಾಂಪಸ್ಸಿನ ವಿದ್ಯುದ್ದೀಪಗಳು ತಮ್ಮ ಪ್ರಖರತೆಯಿಂದ ಕುಜನನ್ನು ಮಱೆಮಾಡಿದಂತನಿಸಿತು. ಹಾಗಾಗಿ ಬೆಳಕು ಕಡಿಮೆಯಿರುವ ಜಾಗ ಹುಡುಕುತ್ತ ಹೊಱಟೆ. ಮರಗಿಡಗಳು ಮೂಡಣ ದಿಕ್ಕನ್ನು ನೋಡದಂತೆ ಅಡ್ಡವಾಗಿದ್ದವು. ಸುಮಾರು ೫.೧೫ಱ ಹೊತ್ತಿಗೆ ಶಾಲೆಯ ಮೈದಾನದಲ್ಲಿ ಶುಭ್ರ ಆಕಾಶದಲ್ಲಿ ಶುಕ್ರನ ಬಲಪಕ್ಕದಲ್ಲಿರಬೇಕಾದ (ತೆಂಕಣದೆಡೆಗೆ) ಮಂಗಳನನ್ನಱಸತೊಡಗಿದಾಗ ಮಂಗಳಗ್ರಹ ಕಂಡುದುದನ್ನು ಖಾತ್ರಿ ಪಡಿಸಿಕೊಳ್ಳಬೇಕೆನ್ನುವಷ್ಟಱಲ್ಲಿ ಶಾಲೆಯ ಹತ್ತಿರದ ಮನೆಯೊಂದಱ ನಾಯೊಂದು ಬೊಗಳತೊಡಗಿತು. ಯಾಕೋ ಜಾಗ ಸರಿಯಿಲ್ಲ ಎಂದು ಅಲ್ಲಿಂದ ಮುಂದೆ ಇನ್ನೊಂದು ಶಾಲೆಯೆಡೆಗೆ ಹೊಱಟೆ. ಅಂತೂ ಅಸ್ಪಷ್ಟವಾದ ಸಣ್ಣ ಚುಕ್ಕಿಯಂತೆ ಕಾಣುತ್ತಿದ್ದ ಮಂಗಳನನ್ನು ಶುಕ್ರನ ಬಲಪಕ್ಕದಲ್ಲಿ ಕಂಡೆ. ಈ ಸಮಯದಲ್ಲೆ ಕುಜನನ್ನು ಮಱೆಮಾಡುವಂತೆ ಕೆಲವು ಹಕ್ಕಿಗಳು ಹಾಱಿ ನನ್ನನ್ನು ತಬ್ಬಿಬ್ಬುಗೊಳಿಸಿದವು. ಮತ್ತೆ ಕುಜನ ಗುಱುತನ್ನು ಕಂಡುಕೊಂಡು ನನ್ನ ನಡೆಯನ್ನು ಮನೆಯೆಡೆಗೆ ತಿರುಗಿಸಿದೆ. ಕುಜನ ಗುಱುತನ್ನು ಸುಲಭಕ್ಕೆ ಬಿಡಬಾರದೆಂದು ಕುಜನೆಡೆಗೆ ಆಕಾಶದತ್ತ ನೋಡುತ್ತ ಮನೆ ಕಡೆ ನಡೆದೆ. ಮಧ್ಯ ದಾರಿಯಲ್ಲಿ ಹೆಂಗಸೊಬ್ಬಳಿಗೆ ಡಿಕ್ಕಿ ಹೊಡೆಯುವಷ್ಟಱಲ್ಲಿ "ವಾಕ್ ಮಾಡೋವಾಗ ನೆಲ ನೋಡಿ ನಡಿಬೇಕಪ್ಪ. ಆಕಾಶ ನೋಡ್ತಿದ್ದೀಯಲ್ಲ" ಎಂದು ಹೇೞಿದಾಗ ಆಕೆಯತ್ತ ತಿರುಗಿ ನೋಡಿ "ಆಕಾಶದಲ್ಲಿ ಬಿಳಿ ಚುಕ್ಕಿಯ ಬಲಕ್ಕಿರುವ ಸಣ್ಣ ಕೆಂಪು ಚುಕ್ಕಿ ನೋಡುತ್ತಿದ್ದೆ. ಅದು ಮಂಗಳಗ್ರಹ" ಅಂದು ಆಕೆಗೂ ಮಂಗಳನನ್ನು ತೋಱಿಸಿದೆ. ಆಕೆ ಮುಂದುವರೆದು "ಸರಿಯಪ್ಪ. ನೆಲ ನೋಡ್ಕೊಂಡು ನಡೆ. ಯಾರಾದ್ರೂ ಹುಚ್ಚ ಅಂದ್ಕೊಂಡಾರು" ಎಂದಳು. ನಾನು "ಸರಿ" ಎಂದು ಮನಸ್ಸಿನಲ್ಲೇ ’ಯಾರ್ಯಾರಿಗೋ ಏನೇನೋ ಹುಚ್ಚು. ನನಗೀಗ ಮಂಗಳನ ಹುಚ್ಚು’ ಎಂದುಕೊಳ್ಳುತ್ತ ಕುಜನೆಡೆಗೆ ನೋಡುತ್ತ ಮನೆ ಕಡೆ ನಡೆದೆ. ಸುಮಾರು ೫.೫೦ಱ ಹೊತ್ತಿಗೆ ಮೂಡಣದ ಅರುಣರಾಗದಲ್ಲಿ ಕುಜ ಮಱಯಾಗುವುದನ್ನು ದುಃಖದಿಂದಲೇ ಸಹಿಸಿಕೊಂಡೆ. ಆದರೆ ಕುಜನ ಪಕ್ಕವೇ ಇದ್ದ ಬೆಳ್ಳಿಶುಕ್ರನನ್ನು ಸುಮಾರು ೬.೨೦ಱ ತನಕ ವೀಕ್ಷಿಸುತ್ತ ನನ್ನ ಮುಂಜಾನೆಯ ನಡೆಗೆ ಕೊನೆ ಹಾಡಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet