“ಆಧುನಿಕ ಮೌಲ್ಯಗಳು..”.

“ಆಧುನಿಕ ಮೌಲ್ಯಗಳು..”.

ಬರಹ

ಇತ್ತೀಚೆಗೆ “ಸಂಪದ” ದ ಬ್ಲಾಗ್ ಬರಹಗಾರನಾದಮೇಲೆ, ನನ್ನ ಹಳೆಯ ಟಿಪ್ಪಣಿ ಮತ್ತು ಡೈರಿ ಪುಸ್ತಕಗಳನ್ನೆಲ್ಲ ತಿರುವಿ ಹಾಕುವಂತಾಯಿತು. ಲೇಖಕನಾಗಿ ಹಲವು ವರ್ಷಗಳ ನನ್ನ ಅನುಭವದಲ್ಲಿ ಹೇಳಬೇಕೆಂದರೆ, ಅವು ಬಹಳ ಕಚ್ಚಾ ಸಾಮಗ್ರಿಯನ್ನೊದಗಿಸುತ್ತವೆ, ಮತ್ತು ಹೊಚ್ಚ ಹೊಸ ವಿಷಯಗಳಿಗೆ ಇಂಬುಗೊಡುತ್ತ ಸಾರ್ವಕಾಲಿಕ ಮೌಲ್ಯಗಳನ್ನು ತೆರೆದಿಡುತ್ತವೆ. ಅಂತಹ ಬರಹಗಳನ್ನು ನಿಮ್ಮೊಂದಿಗೆ ಸಂಪದದಲ್ಲಿ ಹಂಚಿಕೊಳ್ಳುವ ತವಕವಿದೆ. ಅಂತಹ ಮೊದಲ ಪ್ರಯತ್ನವಿದು...

ವಿಜ್ಞಾನದಿಂದ ತಂತ್ರಜ್ಞಾನ. ತಂತ್ರಜ್ಞಾನದಿಂದ ನಮ್ಮ ಅವಶ್ಯಕತೆಗಳು ಮತ್ತು ಅವುಗಳ ಪೂರೈಕೆ. ಕಂಪ್ಯೂಟರ್ ನಮ್ಮ ದಿನ ನಿತ್ಯದ ಅಗತ್ಯಗಳನ್ನು ಅದೆಷ್ಟು ಸುಸೂತ್ರವಾಗಿ ಸಮರ್ಪ ಕವಾಗಿ ಪೂರೈಸಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲವಲ್ಲ... ಆದರೇನು! ಎಲ್ಲ ಅಗತ್ಯಗಳೂ ಮಾನಸಿಕ ಸ್ಥಿತಿಯನ್ನೇ ಅವಲಂಬಿಸಿವೆಯಲ್ಲ. ನಮಗೆ ಬೇಕಾದದ್ದು ಇತರರಿಗೆ ಬೇಡವಾದೀತು. ನಮಗೆ ಬೇಕಿಲ್ಲದ್ದೂ ಒಣಪ್ರತಿಷ್ಠೆಗಾಗಿಯೇ ಇರಬೇಕೆನಿಸೀತು. ಮೂಲಭೂತ ಅವಶ್ಯಕತೆಗಳ ಮಾತಂತಿರಲಿ, ಹಣ ಬರುವುದು ಹೆಚ್ಚಾದಂತೆಲ್ಲ ಐಷಾರಾಮದೊಂದಿಗೆ ಸಲ್ಲದ ವಿಷಯೋಪಭೋಗಗಳೂ ಬೆಂಬತ್ತಿದರೆ ಆಶ್ಚರ್ಯವೇನಿಲ್ಲ. ಅನೂಚಾನವಾಗಿ ನಮ್ಮ ಸಂಸ್ಕೃತಿ ಪರಂಪರೆಯಲ್ಲಿ ಬಂದ ಮೌಲ್ಯಗಳು ಇಂದು, ಅಂತಹ ಮೌಲ್ಯಗಳಾಗಿಯೆ ಉಳಿದಿವೆ ಎಂಬ ನಂಬಿಕೆ ಎಲ್ಲಿದೆ? ಇಂದಿನ ಯುವಜನಾಂಗ ಇಂತಹ ಮೌಲ್ಯಗಳೆಂಬುದರ ಬಗ್ಗೆ ತಲೆಕೆಡಿಸಿ ಕೊಂಡಂತಿಲ್ಲ. ಅವರಿಗೆ ಅವು ಬೇಕಾಗಿಯೂ ಇಲ್ಲ. ಹಿರಿಯರು ನಡೆದದ್ದೇ ದಾರಿ. ಆ ದಾರಿ ಸರಿಯಾಗಿರುತ್ತದೆ ಎಂಬ ಮಾತೊಂದಿತ್ತು. ಇದೀಗ ಕಿರಿಯರು ನಡೆದದ್ದೇ ದಾರಿ, ಆ ದಾರಿ ಎಲ್ಲಿಗೆ ಹೋಗುತ್ತದೆಂಬುದು ಅವರಿಗೇ ಗೊತ್ತಿದ್ದಂತಿಲ್ಲ...ಗೊತ್ತಿದ್ದರೂ ಗುರಿತಲುಪುವುದು ಭ್ರಮೆಯಷ್ಟೇ...’’ ಇಂತಹ ಮುಂದುವರಿದ ಪೀಳಿಗೆ ಬಗ್ಗೆ ಇಂದಿನ ದಿನಗಳಲ್ಲಿ ಹೆತ್ತವರ,ಹಿರಿಯರ ಆತಂಕ ಕಳವಳಕಾರಿಯಾಗಿದೆ; ಆಗುತ್ತಲೇ ಇದೆಯಲ್ಲ...ಎಷ್ಟೋ ಬಾರಿ, ನಮ್ಮ ನಂಬಿಕೆಗೆ ಒಂದಿಷ್ಟೂ ಅರ್ಹವೆನಿಸದ ಈ ವಿಚಿತ್ರ ಪ್ರಪಂಚದಲ್ಲಿ, ಇಂತಹ ಯುವಜನಾಂಗವೂ ಋಜುಮಾರ್ಗ ತೊರೆಯುವ ಸಂಭವವೇ ಹೆಚ್ಚು ಹೆಚ್ಚಾಗಿ ತೋರುತ್ತಿದೆ. ಯಾವಾಗಲೂ ನಂಬಿಕೆ ಹೊರತು ಪಡಿಸಿದರೆ ಬದುಕಿನ ಪರಿಕಲ್ಪನೆಯೇ ಅಸಾಧ್ಯವಾಗುತ್ತದೆ. ಯುವಜನಾಂಗವೂ ಅಷ್ಟೇ ಎಲ್ಲದರಲ್ಲೂ ಎಲ್ಲರಲ್ಲೂ ನಂಬಿಕೆ ಕಳೆದುಕೊಂಡರೆ ಅವನತಿ ಕಾದಿರುತ್ತದೆ. ಇನ್ನೂ ಹೇಳಬೇಕೆಂದರೆ, ಹೇರಳ ಹಣವಿಲ್ಲದೇನೆ ಯಾವೊಂದು ವ್ಯಕ್ತಿಗತ ನಂಬಿಕೆಗಳೂ ಕಾರ್ಯ ಗತವಾಗಲಾರವು ಎಂಬ ವಾದಕ್ಕೇ ಪುಷ್ಟಿದೊರಕುತ್ತಿರುವುದು ದುರಾದೃಷ್ಟಕರ ಸಂಗತಿ. ಯಾಕೆಂದರೆ, ಅಂಥವರಿಗೆ ಇಂದಿನ ನಮ್ಮ ರಾಜಕೀಯ ಸಾಮಾಜಿಕ ವಿದ್ಯಮಾನಗಳೂ ಅಂತಯೆ ಕಾಡುತ್ತವೆ ಎಂಬುದೇ ದುರಾದೃಷ್ಟಕರ ಸಂಗತಿ. ಧರ್ಮ-ಕರ್ಮದ ನಂಬಕೆ, ಅಗೋಚರವಾದ ಶಕ್ತಿಯೊಂದರ ನಂಬಿಕೆಯೂ ಇಲ್ಲದೆ ನಿರ್ಭಾವುಕ ನಡವಳಿಕೆ, ಸ್ವೇಚ್ಛಾಚಾರಗಳು ಕೃತಕ ಹಾಗೂ ಆಧುನಿಕ ಐಷಾರಾಮೀ ಜೀವನ ಶೈಲಿಗೇ ಮರುಳಾದ, ಸ್ವಾರ್ಥಪರತೆಯ ಸೋಗುಗಳಿಂದ ಕೂಡಿದ, ಪೊಳ್ಳು ನಂಬಿಕೆಗಳಲ್ಲಿ ಹುಟ್ಟುತ್ತಿರುವ ಮೌಲ್ಯಗಳೇ ಆಧುನಿಕ ಮೌಲ್ಯಗಳು ಎನಿಸಿವೆ ಎಂಬ ಗುಮಾನಿ ಈಗೀಗ ಹೆಚ್ಚುತ್ತಿದೆಯಲ್ಲವೇ...?

-ಎಚ್.ಶಿವರಾಂ ಜುಲೈ 10, 2006