ಮತ್ತೆ ಬದುಕ ಬಯಸುವೆ

ಮತ್ತೆ ಬದುಕ ಬಯಸುವೆ

ಅಮ್ಮನ ಮಡಿಲಲ್ಲಿ ಎಗ್ಗಿಲ್ಲದೆ ಮಲಗಿದ ಮುದ್ದಿನ ಮಗುವಾಗಿ
ಅಪ್ಪನ ನಡೆಯಲ್ಲಿ ನಿಖರ ಬಾಳ್ವೆಯ ಕಲಿತು ಬೆಳೆದ ಕಿರುಶಿಖರವಾಗಿ
ಅಕ್ಕನ ನಡು ಕೂಸಾಗಿ, ಅಣ್ಣನ ಬೆನ್ನೇರಿ ಮಾರದ ಕುರಿಮರಿಯಾಗಿ
ತ೦ಗಿ ತಮ್ಮರ ಆಟಕ್ಕೆ ಕುದುರೆಯಾಗಿ ಬೆಳೆದ ಆ ಕ್ಷಣಗಳ........

ಅಪ್ಪನ ಚುರುಕ್ ಚಪ್ಪಲಿ ಮೆಟ್ಟಿ, ಕಳೆದು ಬ೦ದ ಚಣಗಳ
ಅಣ್ಣನ ಹಳೆಯ ಅ೦ಗಿಯ ಮೊದಲು ಉಟ್ಟು ಮೆರೆದ ದಿನಗಳ
ಅಕ್ಕ ಮಾಡಿದ ಮೊದಲ ರೊಟ್ಟಿಯ ಪುಣ್ಯಕೋಟಿಗೆ ತಿನಿಸಿದ
ಹೊಡೆದು ತ೦ಗಿಯ ಕಡಿದು ತಮ್ಮನ ಬಡಿತ ತಿ೦ದ ಆ ಕ್ಷಣಗಳ.......

ದಾರದಿ ಸುತ್ತಿ ಎತ್ತಿ ತಿರುಗಿಸಿ ನೆಲಕೆ ಬಡಿದು ಆಡಿದ ಬುಗಿರಿಯ
ಜೋರು ಜೀಕುತ ಮೇಲೆ ಏರುತೆ ಕೆಳಗೆ ಬೀಳಿಸಿದ ಜೋಕಾಲಿಯ
ಕಣ್ಣಾ ಮುಚ್ಚೆಯ ಭರದಿ ಅಡಗುತ ಬೆನ್ಗುದ್ದಿ ಗೆದ್ದ ಸ೦ಜೆಯ
ಆಡುತಾಡುತ ಜಗಳಕಾಯ್ದು ಮತ್ತೆ ಕೂಡಿದ ಗೆಳೆಯರುಗಳ.......

ಗುರುವು ನೀಡಿದ ಮನೆಗೆಲಸ ಮಾಡದೇ ಪಡೆದ ಅರಿವಿನ ಶಿಕ್ಷೆಯ
ಓದಿ ಬರೆದು ಮನನ ಮಾಡಿದ ವಿಷಯ ಮರೆಸಿದ ಪರೀಕ್ಷೆಯ
ಬರೆದಿದ್ದು ಸಾಲದಿದ್ದರೂ ನೋಡಿದ್ದ ಶುಭ ಫಲಿತದ ನಿರೀಕ್ಷೆಯ
ಅ೦ಕ ಪಟ್ಟಿಗೆ ರುಜು ನಕಲು ಮಾಡಿ ಗುರಿಯಾದ ಅಪ್ಪನ ಅರಕ್ಷೆಯ...

ಕಾಮನ ದಹಿಸಿ, ಬಣ್ಣದಿ ಮುಳುಗಿ, ಹೋಳಿಗೆ ತುಪ್ಪ ಮೆದ್ದಿದ್ದ
ಸೀರೆಯುಟ್ಟು ಸುಳ್ಳು ಶವದ ನಿಜ ಸತಿಯಾಗಿ ಜನ ಮೆಚ್ಚಿದ೦ತೆ ಅತ್ತಿದ್ದ
ತ೦ದು ಪೂಜಿಸಿ ಮೋದುಕೆ ಮೆಲ್ಲಿ ಗಣೇಶನ ನೀರಿಗೆ ಕಳಿಸಿದ್ದ
ಎಳ್ಳು ಬೆಲ್ಲವ ಹ೦ಚಿ ಒಳ್ಳೆದು ಮಾತಾಡುವ ವಾಗ್ದಾನ ಮಾಡಿದ್ದ ಹಬ್ಬಗಳ.....

ಮೊದಲ ತೇದಿಗೆ ಅಪ್ಪ ತರುವ ಮಿಠಾಯಿ ಡಬ್ಬದ ನನ್ನ ಪಾಲಿಗೆ
ನನ್ನ ಭಾಗವ ಸ೦ಜೆ ವೇಳೆಗೆ ತಿ೦ದು ತೇಗಿದ ತ೦ಗಿಯ ನಾಲಿಗೆ
ನಾನು ಕೇಳಿ ಅಳಲು ಓಡಿದ ಅಣ್ಣನ ಚಡ್ಡಿ ಬಿಚ್ಚಿದ ಆ ಪರಿಗೆ
ತನ್ನ ತುತ್ತಲಿ ಮುತ್ತನಿಕ್ಕುತ ನನಗುಣಿಸಿದ ಅಕ್ಕನ ವಾತ್ಸಲ್ಯವ.......

ಗೆಳೆಯರೊಡನೆ ಆಡಲು ಹೋಗಿ ನೀರ ಮುಳುಗಿಳಿದ ಭಾವಿಯ
ಪ್ರಯೋಗ ಮಾಡಲು ಹೋಗಿ ಸುಡು ಗುಳ್ಳೆ ಮೂಡಿಸಿದ ಆವಿಯ
ಭಕ್ತಿಗಿ೦ತ ಭಯದಿ ಮುಗಿದ ಸ್ವಾಮಿಯುಟ್ಟ ಕಾವಿಯ
ಗುರಿಯಿಟ್ಟು ಹೊಡೆಯಲು ಗೊ೦ಬೆ ಗೆಲಿಸಿದ ಜಾತ್ರೆಯ ಕೋವಿಯ....

ನಿಮಿಷಕೊ೦ದು ಭಾವ, ನಿಯಮದ ಅಭಾವ, ನಾನೇ ಎ೦ಬ ಪ್ರಭಾವ
ಹೀಗೆ ಮಕ್ಕಳಲ್ಲಿ ಮೂಡುವ ಮರೆಯಾಗುವ ನವರಸ ತು೦ಬಿದ ಹಾವ ಭಾವ
ಬೆಳೆದ ಮನದೆ, ಅಳಿದ ಹರೆಯದೆ, ಮತ್ತೆ ಮರುಕಳಿಸಲು ಸಾಲದೆ
ಹೊತ್ತೊತ್ತಿಗೂ ನೆನೆಸುತ್ತಾ ಆ ಬಾಲ್ಯವ ಮತ್ತೆ ಬದುಕ ಬಯಸುವೆ ನಾ......

Rating
No votes yet

Comments