ಪಿಯುಸಿಯಲ್ಲಿ ಫೇಲಾಗುವುದು ಹೀಗೆ?

ಪಿಯುಸಿಯಲ್ಲಿ ಫೇಲಾಗುವುದು ಹೀಗೆ?

ನನ್ನ ಅಮ್ಮನ ಲೆಕ್ಕಾಚಾರ ಸರಿಯಾಗಿದ್ದರೆ ನಾನು ಇಷ್ಟು ಹೊತ್ತಿಗೆ ಎಂಬಿಬಿಎಸ್ ಓದುತ್ತಾ ಇರಬೇಕಿತ್ತು. ಅಪ್ಪ ಹೇಳಿದಂತೆ ಕೇಳಿದ್ದರೆ ಈಗ ಕಂಪ್ಯೂಟರ್ ಸೈನ್ಸ್ ಕಲಿಯಬೇಕಿತ್ತು. ಯಾರ ಮಾತನ್ನೂ ಕೇಳದೇ ಇದ್ದುದರಿಂದ ಸಮಾಜ ಕಾರ್ಯ ಕಲಿಯುತ್ತಾ ಇದ್ದೇನೆ. ಈಗ ನಾನು ಬರೆಯಲು ಹೊರಟಿರುವ ವಿಷಯಕ್ಕೆ ಈ ವಿವರಗಳು ಎಷ್ಟರ ಮಟ್ಟಿಗೆ ಬೇಕು ಎಂಬುದು ಗೊತ್ತಿಲ್ಲ. ನನಗೆ ಮಾತ್ರ ಈ ವಿವರಗಳು ಅಗತ್ಯ ಎನಿಸುತ್ತಿವೆ.

ಎರಡು ವಾರದ ಹಿಂದೆ ಮಂಗಳೂರಿನ ಕೆಲವು ಪತ್ರಿಕೆಗಳಲ್ಲಿ ಒಂದು ಸುದ್ದಿ ಪ್ರಕಟವಾಗಿತ್ತು. ಅದು ನಾನು ಪಿಯುಸಿ ಮುಗಿಸಿದ ಕಾಲೇಜಿನ ಸುದ್ದಿಯಾಗಿದ್ದರಿಂದ ಕುತೂಹಲದಿಂದ ಓದಿದೆ. ವಿಷಯ ಬಹಳ ಸರಳ. ಸೈನ್ಸ್ ವಿಭಾಗದ ಹುಡುಗಿಯೊಬ್ಬಳು ಮೊದಲನೇ ವರ್ಷದ ಪಿಯುಸಿಯಲ್ಲಿ ಫೇಲಾಗಿದ್ದಾಳೆ. ಇದು ಪತ್ರಿಕೆಗಳಲ್ಲಿ ಸುದ್ದಿಯಾದದ್ದೇಕೆ ಎಂಬುದು ನಿಜಕ್ಕೂ ಸುದ್ದಿ.

ಆಕೆಯ ಹೆಸರು ಯಶ್ವಥ. ಈಕೆ ಕೆಮಿಸ್ಟ್ರಿಯ ಪ್ರಾಕ್ಟಿಕಲ್ಸ್ ನಲ್ಲಿ 10ಕ್ಕೆ 10 ಅಂಕಗಳನ್ನು ಪಡೆದಿದ್ದಳು. ಆದರೊ ಥಿಯರಿಯಲ್ಲಿ ಮಾತ್ರ 19 ಅಂಕಗಳಿಗೆ ಸಮಾಧಾನ ಪಡಬೇಕಾಗಿತ್ತು. ಪರಿಣಾಮವಾಗಿ ಈಕೆ ಪಿಯುಸಿಯ ಮೊದಲ ವರ್ಷದಲ್ಲೆ ಫೇಲ್. ಎಲ್ಲರಂತೆ ಯಶ್ವಥ ಸಪ್ಲಿಮೆಂಟರಿ ಪರೀಕ್ಷೆ ತೆಗೆದುಕೊಂಡಳು. ಆಕೆಗೆ ಥಿಯರಿಯಲ್ಲಿ ಸಿಕ್ಕದ್ದು ಕೇವಲ 22 ಅಂಕಗಳು. ಈ ಬಾರಿ ಆಕೆಗೆ ನಿಜಕ್ಕೂ ತಲೆಬಿಸಿಯಾಯಿತು. ನಿಗದಿದ ಫೀಸು ಕಟ್ಟಿ ತನ್ನ ಉತ್ತರ ಪತ್ರಿಕೆಯ ಫೋಟೋಸ್ಟಾಟ್ ಪ್ರತಿ ಪಡೆದಳು. ಅದನ್ನು ನೋಡಿದಾಗ ಆಕೆಯ ದುಃಖ ಮತ್ತಷ್ಟು ಹೆಚ್ಚಿತು. ಏಕೆಂದರೆ ಆಕೆಯ ಉತ್ತರ ಪತ್ರಿಕೆಯನ್ನು ಮೌಲ್ಯ ಮಾಪನ ಮಾಡಿದವರು ಮೊದಲಿಗೆ 25 ಅಂಕಗಳನ್ನು ಕೊಟ್ಟಿದ್ದರು. ಇದಾದ ಮೇಲೆ ಏನೋ ಜ್ಞಾನೋದಯವಾದಂತೆ ಕೆಲವು ಉತ್ತರಗಳಿಗೆ ನೀಡಲಾಗಿದ್ದ ಅಂಕಗಳಲ್ಲಿ ಅರ್ಧ ಅಂಕಗಳನ್ನು ಕಡಿಮೆ ಒಟ್ಟು ಮೊತ್ತವನ್ನು 22ಕ್ಕೆ ಸೀಮಿತಗೊಳ್ಳುವಂತೆ ಮಾಡಲಾಗಿತ್ತು. ಈ ಅನ್ಯಾಯದ ಬಗ್ಗೆ ಪ್ರಶ್ನಿಸಿದ ಆಕೆಗೆ ಸಿಕ್ಕ ಉತ್ತರ ಎಲ್ಲ ವಿದ್ಯಾರ್ಥಿಗಳಿಗೆ ಸಿಗುವಂತೆಯೇ ಇತ್ತು-ಅದಷ್ಟೇ, ಚೆನ್ನಾಗಿ ಓದಿ ಇನ್ನೊಮ್ಮೆ ಪರೀಕ್ಷೆ ಬರೆ.

ಆಕೆಗೆ ಈ ಉತ್ತರ ಕೋಪ ತರಿಸಿತು. ಅದಕ್ಕೆ ಸಕಾರಣವೂ ಇದೆ. 25 ಅಂಕಗಳು ದೊರೆತರೆ ಪಾಸ್ ಆಗಬಹುದಿದ್ದ ಆಕೆಯನ್ನು ಉದ್ದೇಶಪೂರ್ವಕವಾಗಿ ಫೇಲ್ ಮಾಡಲಾಗಿತ್ತು. ಇದನ್ನು ಪ್ರತಿಭಟಿಸಿ ಆಕೆ ಪತ್ರಿಕಾ ಕಚೇರಿಗೆ ಹೋದಳು. ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಯಿತು. ಈವರೆಗೂ ಆಕೆಗೆ ನ್ಯಾಯ ದೊರೆತಂತೆ ಕಾಣಿಸುವುದಿಲ್ಲ.

ಪತ್ರಿಕೆಗಳ ವರದಿಗಳನ್ನೇ ನೋಡಿಕೊಂಡು ಹೇಳುವುದಾದರೆ ಆಕೆ ಮರು ಮೌಲ್ಯ ಮಾಪನ ಮಾಡಿಸಿದಾಗ ಮೂವತ್ತು ಅಂಕಗಳು ದೊರತವಂತೆ. ಕಾಲೇಜಿನವರು ಮಾತ್ರ ಈ ತಪ್ಪನ್ನು ಸರಿಪಡಿಸಲು ಸಿದ್ಧವಿಲ್ಲವಂತೆ.

ಇಷ್ಟಕ್ಕೂ ಇದೆಲ್ಲಾ ಯಾಕೆ ನಡೆಯುತ್ತದೆ ಎಂಬುದು ಸೈನ್ಸ್ ನಲ್ಲಿ ಪಿಯುಸಿ ಕಲಿತ ಎಲ್ಲರಿಗೂ ಅಲ್ಲದಿದ್ದರೂ ಮಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಕಲಿತವರಿಗಂತೂ ಗೊತ್ತಿರುತ್ತದೆ. ಈ ಪ್ರತಿಷ್ಠಿತ ಕಾಲೇಜುಗಳ ದೊಡ್ಡ ಸಮಸ್ಯೆಯೆಂದರೆ ಅವರಿಗೆ ಪ್ರತೀ ವರ್ಷ ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ಬೇಕು. ಇದರಲ್ಲಿ ಹೆಚ್ಚಿನವರು 60 ಪರ್ಸೆಂಟ್ ಗಿಂತ ಹೆಚ್ಚು ಅಂಕ ಪಡೆದಿರಬೇಕು. ಒಂದೆರಡು ರಾಂಕ್ ಬಂದರೆ ಒಳ್ಳೆಯದು. ಇದನ್ನು ಸಾಧಿಸುವುದಕ್ಕಾಗಿ ಪಾಸ್ ಕ್ಲಾಸ್ ನ ಮಟ್ಟದಲ್ಲಿರುವ ವಿದ್ಯಾರ್ಥಿಗಳು ಎರಡನೇ ವರ್ಷದ ಪಿಯುಸಿಗೆ ಹೋಗದಂತೆ ತಡೆಯಲು ಉದ್ದೇಶ ಪೂರ್ವಕವಾಗಿ ಫೇಲ್ ಮಾಡಲಾಗುತ್ತದೆ.

ಇದು ನನ್ನ ಅನುಭವ ಕೂಡಾ. ನನ್ನನ್ನೂ ಎರಡನೇ ವರ್ಷದ ಪಿಯುಸಿಗೆ ಹೋಗದಂತೆ ತಡೆಯಲಿಲ್ಲ ಎಂಬುದನ್ನು ಬಿಟ್ಟರೆ ಉಳಿದೆಲ್ಲವೂ ಹೀಗೆಯೇ ಸಂಭವಿಸಿತ್ತು. ಅದಕ್ಕೇ ಇರಬೇಕೇನೋ ಯಶ್ವಥಳ ಕುರಿತ ವರದಿ ಓದಿದಾಗ ಇದು ನನ್ನ ಕುರಿತ ವರದಿಯೂ ಆಗಬಹುದಿತ್ತಲ್ಲ ಅನ್ನಿಸಿತು.

-ಯಾಮಿ
Rating
No votes yet

Comments