ಮಿಡ್ - ಡೇ

ಮಿಡ್ - ಡೇ

ಮಿಡ್ ಡೇ
ಪರಿಚಯದವರೊಬ್ಬರನ್ನು ಭೇಟಿ ಮಾಡಲು ಎಮ್ ಜಿ ರೋಡಿಗೆ ತೆರಳಿದ್ದ ನಾನು ಇಂದು ಉದಯವಾಣಿ ಆಫೀಸಿನಲ್ಲಿ ಒಂದಷ್ಟೊತ್ತು [:http://sampada.net/user/ismail|ಇಸ್ಮಾಯಿಲ್] ಜೊತೆ ಹರಟುತ್ತ ಕುಳಿತಿದ್ದೆ. ಮಾತು ಯಾವುದೋ ವೆಬ್ಸೈಟಿನ ಬಗ್ಗೆ ಪ್ರಾರಂಭವಾಗಿ ಇತ್ತೀಚೆಗೆ ಹೊಸತಾಗಿ ಬೆಂಗಳೂರಿನಲ್ಲಿ ಹೊರತರಲಾಗಿರುವ 'ಮಿಡ್-ಡೇ' ಪತ್ರಿಕೆಯ ಆವೃತ್ತಿಯ ಕಡೆಗೆ ಹೊರಳಿತು. ಎಂದಿನಂತೆ ಸ್ವಚ್ಛ ಮಲೆನಾಡು ಕನ್ನಡದಲ್ಲಿ ಜೋಕುಗಳನ್ನು ಹಾರಿಸುತ್ತಿದ್ದ [:http://sampada.net/user/gundkal|ಗುಂಡ್ಕಲ್ ಸಾಹೇಬ್ರು] ಮಿಡ್-ಡೇ ನಲ್ಲಿ ಝಿನೇಡಿನ್ ಝಿಡಾನ್ ಬಗ್ಗೆ ಬಂದಿರೋ ಜೋಕಿನ ಬಗ್ಗೆ ಹೇಳುತ್ತಿದ್ದಾಗ ಅಲ್ಲೊಂದು ಪೇಪರ್ ರಾಶಿಯಲ್ಲಿ ಇಸ್ಮಾಯಿಲ್ ಪತ್ರಿಕೆಯೊಂದನ್ನು ಹೆಕ್ಕಿ ತೆಗೆದು "ಇದರಲ್ಲೇ ಇದೆ ನೋಡ್ರಿ" ಎಂದು ಕೈಗಿಟ್ಟರು.

(ಝಿಡಾನ್ -ಮ್ಯಾತರಾಝಿ ಜೋಕು)

ಮಿಡ್-ಡೇ ಪತ್ರಿಕೆ ಮೂಲತಃ ಮುಂಬೈನದ್ದು - ಮುಂಬೈನಲ್ಲಿ ಮೊದಲು ಪ್ರಾರಂಭವಾದದ್ದು. ಮುಂಬೈನಲ್ಲಿ 'ಇನ್‌ಸೈಡ್ ಸ್ಟೋರಿ'ಗಳನ್ನು ತಲುಪಿಸುವ ಪತ್ರಿಕೆ ಬೆಂಗಳೂರಿನಲ್ಲಿ ಪ್ರಾರಂಭವಾಗಿರುವ ಬಗ್ಗೆ ಬ್ಯಾನರುಗಳು, ಜಾಹಿರಾತುಗಳು ನೋಡಿದ್ದ ನನಗೆ ಇವರ ಬೆಂಗಳೂರಿನ ಸಂಚಿಕೆ ಹೇಗಿದೆ ಎಂದು ನೋಡಬೇಕೆಂಬ ಕುತೂಹಲವಿದ್ದದ್ದರಿಂದ ಕೈಗೆ ಸಿಕ್ಕಿದ ಪತ್ರಿಕೆಯನ್ನು ಕೇಳಿ ಪಡೆದು ಬ್ಯಾಗಿಗಿಳಿಸಿದೆ. ಮುಂಬೈಗೆ ತೆರಳುತ್ತಿರುವ ವಿಮಾನಗಳಲ್ಲಿ ಅಥವ ಮುಂಬೈನಿಂದ ಹಿಂದಿರುಗಿ ಬೆಂಗಳೂರಿನಿಂದ ಬೇರೆಲ್ಲಿಗಾದರೂ ಪ್ರಯಾಣ ಬೆಳೆಸುತ್ತಿರುವ ವಿಮಾನಗಳಲ್ಲಿ ಮಿಡ್-ಡೇ ಪತ್ರಿಕೆ ಮಾತ್ರ ಯಾವಾಗಲೂ ಇದ್ದೇ ಇರುತ್ತದೆ. ಈ ಪತ್ರಿಕೆಯ ಮುಂಬೈ ಆವೃತ್ತಿಗೆ ತನ್ನದೇ ಆದ ವೈಶಷ್ಟ್ಯತೆ ಇದೆ.

[:http://hpnadig.net/blog/index.php/archives/2005/05/14/khalid-mohammed|ಖಾಲಿದ್ ಮುಹಮ್ಮದ್] ಪದಗಳನ್ನು ತಿರುವಿ ಚಿತ್ರಗಳ ವಿಮರ್ಶೆ ಬರೆಯುತ್ತಿದ್ದ ದಿನಗಳಿಂದ ನಾನು ಆಗಾಗ ಮಿಡ್-ಡೇ ಆನ್ಲೈನ್ ಆವೃತ್ತಿ ಫಾಲೋ ಮಾಡುತ್ತ ಬಂದಿದ್ದೇನೆ. ಬೆಂಗಳೂರಿನಲ್ಲಿದ್ದವರಿಗೆ ಮುಂಬೈ ಬಗ್ಗೆ ತಿಳಿಯದ ಎಷ್ಟೋ ಮಾಹಿತಿ ಮಿಡ್-ಡೇ ಒದಗಿಸುತ್ತದೆ. ಹುಸಿ ಪ್ರತಿಭಟನೆ ನಡೆಸಿ 'ಜೈಲ್ ಭರೋ' ಕಾರ್ಯಕ್ರಮ ನಡೆಸಿದ್ದ ರಾಜಕೀಯ ಪಕ್ಷದವರೊಂದಿಗೆ ಮಿಡ್ ಡೇ ಪತ್ರಕರ್ತನೊಬ್ಬ ನುಸುಳಿ ತಿಹಾರ್ ಜೈಲಿನಲ್ಲಿ ಒಂದು ರಾತ್ರಿ ಕಳೆದು ಅಲ್ಲಿ ನಡೆದ 'ರಾಜಕೀಯ' ಸಂಗತಿಗಳ ಬಗ್ಗೆ, 'ಒಳಗಿನ ಮಾಹಿತಿಯ' ಬಗ್ಗೆ ಬರೆದ ದೃಷ್ಟಾಂತವೂ ಉಂಟು. ಹಾಗಾಗಿ ಈ ಪತ್ರಿಕೆಯ ಬಗ್ಗೆ ನನಗೆ ಸಾಕಷ್ಟು ಕುತೂಹಲವಿತ್ತು.

ಮನೆಗೆ ಬಂದು ಅಷ್ಟೇ ಕುತೂಹಲದಿಂದ ತೆಗೆದು ಓದಿದಾಗ ಮಾತ್ರ ಬೆಂಗಳೂರಿನ ಆವೃತ್ತಿ ನೀರಸವೆನಿಸತೊಡಗಿತು. ಅದೇ ಟೈಮ್ಸ್ ಆಫ್ ಇಂಡಿಯಾದವರ ಗಾಸಿಪ್ಪು. ಈಗಾಗಲೇ ಬೆಂಗಳೂರಿನಲ್ಲಿ ಸಾಕಷ್ಟು ನಾಥ ಹೊಡೆಯುತ್ತಿರುವ 'ನಾರ್ಥಿ' (northy) ಧೋರಣೆ. ಎಲ್ಲಿ ನೋಡಿದರೂ ಹಿಂದಿ ಫ್ರೇಸುಗಳು, ಉತ್ತರದವರ ಭರಾಟೆ - ಒಂದು ರೀತಿಯ ಕಲ್ಚರಲ್ ಇನ್ವೇಶನ್.
ಬ್ಯಾಂಗಲೂರ್ ಬೆಂಗಳೂರು ಆಗಬೇಕೆಂಬ ಅನಂತಮೂರ್ತಿಯವರ ಮಾತು ವಿಪರೀತ ಟೀಕೆಗೆ ಒಳಪಟ್ಟಿದ್ದು ನನಗ ನೆನಪಿರುವಂತೆ ಇಂತಹ ಕೆಲವು ನಾರ್ಥಿ ಧೋರಣೆಯ ಪತ್ರಕರ್ತರಿಂದಲೇ. ಕನ್ನಡ ನಾಡಿನಲ್ಲಿರುವ aliensಗಾಗಿ ಪ್ರಾರಂಭಿಸಿದಂತಿದೆ ಈ ಪತ್ರಿಕೆ. ಬಸವನಗುಡಿ ಸುತ್ತಮುತ್ತಲಲ್ಲಿ ಮನೆಮಾಡಿರುವ ಕನ್ನಡಿಗರಿಗಿರುವ comfort zone (ಏರ್ಪೋರ್ಟ್ ರೋಡಿನಲ್ಲಿ ಮನೆ ಮಾಡಿದ ಕನ್ನಡಿಗರಿಗೆ ಇಲ್ಲದಂತಹ ಅದೇ 'comfort zone') - ಕಳೆದುಕೊಂಡ ಅನುಭವ ಈ ಪತ್ರಿಕೆ ಓದಿದಾಗ ನಮಗಾಗುತ್ತದೆ. ಜಗತ್ತು ಹೆಚ್ಚು 'ಲೋಕಲೈಸ್' ಆಗುತ್ತಿರುವ ಸಂದರ್ಭದಲ್ಲಿ ಈ ರೀತಿಯ 'ಹೊರಗಿನಿಂದ ಸಂಸ್ಕೃತಿ ತಂದು ಉಣಬಡಿಸುವ' ಪತ್ರಿಕೆಗಳು ಎಷ್ಟು ಭರ್ಜರಿಯಾಗಿ ಓಡುತ್ತವೋ ತಿಳಿಯದು, ಕೆಟ್ಟ ಟ್ರೆಂಡು ನಿರ್ಮಾಣ ಮಾಡಿ ಇಡಿಯ ಸಂಸ್ಕೃತಿಯನ್ನೇ ಕಲಕುವುದರಿಂದ ಸೃಜನಶೀಲವಂತೂ ಅಲ್ಲವೆಂದು ನನಗನ್ನಿಸ್ತುತ್ತದೆ. ಕಮರ್ಶಿಯಲ್ ಆಗಿ ನೋಡಿದರೆ ಬಿಡಿ, ಸರಿ ತಪ್ಪು ಎಲ್ಲ ಗಾಳಿಗೇ. ಒಟ್ಟಾರೆ ಈ ಪತ್ರಿಕೆಯಂತೂ ತನ್ನ ಜೋಕು, ಮಸಾಲೆ, ಗಾಸಿಪ್ಪುಗಳನ್ನು ತುಂಬಿಕೊಂಡು ಬೆಂಗಳೂರಿನ ಹಲವು ಆಫೀಸುಗಳಲ್ಲಿ, ಮನೆಗಳಲ್ಲಿ ಮೇಜುಗಳನ್ನಲಂಕರಿಸುವುದಂತೂ ನಿಜ.

Rating
No votes yet

Comments