ಅಂತರಾಳದ ಅರ್ಥಗಳು

ಅಂತರಾಳದ ಅರ್ಥಗಳು

ಬರಹ

ಅಂತರಾಳದ ಅರ್ಥಗಳನ್ನೆಲ್ಲ ಶಬ್ದಗಳಲ್ಲಿ ಸೆರೆಹಿಡಿಯುವುದೂ ಸಾಗರದ ಅಲೆಗಳೊಡನೆ ಸ್ಪರ್ಧಿಸುವೂದೂ ಒಂದೇ... ಆದರೇನು! ಈ ವಿಶ್ವದ ಉದ್ದಗಲಕ್ಕಿಂತ ವಿಸ್ತಾರವಾಗಿ ಅರ್ಥೈಸಿಕೊಳ್ಳಬಲ್ಲ ಶಕ್ತಿಯೊಂದಿದ್ದರೆ, ಅದು ನಮ್ಮ ಆತ್ಮಶಕ್ತಿಯೆ. ಧ್ಯಾನ ಮುದ್ರೆಯಲ್ಲಿ ಆತ್ಮವು, ಸಾಗರದಾಚೆ ಏನು ಇಡೀ ಬ್ರಹ್ಮಾಂಡವನ್ನೇ ಸುತ್ತಿಬರಬಲ್ಲದೆಂಬುದು ಸಿದ್ಧಿಪಡೆದವರಿಂದ ಅನುಭವವೇದ್ಯವೇ... ಈ ವಿಚಿತ್ರ ಪ್ರಪಂಚದಲ್ಲಿ ಒಬ್ಬ ತನ್ನ ಅಸ್ತಿತ್ವಕ್ಕಾಗಿ ಹೋರಾಡುವುದೆಂದರೆ, ಸಾಗರತಳದಲ್ಲೋ, ಹಿಮಾಲಯದಲ್ಲೆಲ್ಲೋ ತನ್ನ ಅಂತಾರಾತ್ಮನಿಗೆ ಸರಿಯೆನಿಸುವ ಮೌಲ್ಯಗಳನ್ನು ಹೆಕ್ಕಿತೆಗೆದಂತೆಯೆ, ಇಲ್ಲ ಹುಡುಕಿ ತೆಗೆದಂತೆಯೇ ಆದೀತು!... ಇತರರ ಅಂತರಾಳದಲ್ಲೇನಿದೆ? ಎಂಬುದನ್ನು ಅರಿಯಲು ಸಾಧ್ಯವಾದರೆ ಮನುಷ್ಯ ಮನುಷ್ಯನಾಗಿಯೆ ಇರುತ್ತಿರಲಿಲ್ಲ.  ಅಷ್ಟಕ್ಕೂ, ಅಂತರಂಗ ತಿಳಿಸಿಕೊಡುವ ಮಾನವೀಯತೆನ್ನು ತಿರಸ್ಕರಿಸಿ ನಡೆದುಕೊಂಡರೆ ಅವನು ದಿಕ್ಕೆಟ್ಟು ಅಲೆಯುತ್ತಾ ಪಶುವಿಗೂ ಕಡೆಯಾಗುತ್ತಾನೆ.

*****

 ಹೌದು, ಪ್ರಪಂಚ ವಿಚಿತ್ರವೆನಿಸಿದರೆ, ನಮ್ಮ ಮನಸ್ಸಿನ ಆಟಗಳೂ ಅಷ್ಟೇ ವಿಚಿತ್ರವಲ್ಲವೇ?  ಅಲ್ಲಿ ಭಾವನೆಗಳು ನೂರಾರು, ಅವುಗಳಿಗೆ ಪ್ರತಿಕ್ರಿಯೆಗಳೋ ಸಹಸ್ರಾರು, ನಿತ್ಯ ಆ ಒಳಗಿನ ಹೋರಾಟವೂ ಅದೆಷ್ಟೋ.. ವಯಸ್ಸು ಕಳೆದಂತೆಲ್ಲ; ಕಷ್ಟನಷ್ಟಗಳು, ನಿಷ್ಟೂರಗಳು, ಇಲ್ಲಿನ ಅಮಾನವೀಯ ಸಂಗತಿಗಳು ಇತ್ಯಾದಿ ಸಂದಿಗ್ಧಿಕರ ವಿದ್ಯಮಾನಗಳನ್ನೆಲ್ಲ ನೋಡಿದಂತೆಲ್ಲ ಆಕಸ್ಮಿಕಗಳೇ ತುಂಬಿರುವ ಈ ಜನಜೀವನದಲ್ಲಿ ನಮ್ಮದೇನೂ ನಡೆಯಲಾರದೆಂಬ ಸತ್ಯವೂ ಕಾಡುವುದೇ.... ನೋಡಿ, ನಮ್ಮ ಮನಸ್ಸೇನು ಮುಗಿಲಾಚೆಗೂ ಹಾರಿಬಿಡುತ್ತದೆ. ಮನಸ್ಸಿನೊಂದಿಗೆ ಮೈಯನ್ನು ಹೊಂದಿಸಿಕೊಂಡು ಹೋಗುವುದೇ ಪ್ರಯಾಸದ  ಕೆಲಸ.  ಅದು ನಿಯಂತ್ರಣ ತಪ್ಪಿದ ಆಕಾಶ ನೌಕೆಯಂತೆಯೆ ಇರುತ್ತದೆ; ಜೀವನದ ಎಷ್ಟೋ ಸಂದರ್ಭಗಳಲ್ಲಿ, ಇದನ್ನು ಅರಿತು ಸದಾ ಎಚ್ಚರಿಕೆಯಿಂದಿದ್ದರೇನೆ ಯಾರೊಬ್ಬರ ಬದುಕು ಕ್ಷೇಮಕರ.   ಆಗ  ಮುಗಿಲ ಮೋಹಕ್ಕಿಂತ ನಮಗೆ ನೆಲದಲ್ಲಿ  ತಲುಪಬೇಕಾದ ಮಜಲು ಅತಿ ಕ್ಲಿಷ್ಟಕರವಾದರೂ ಸುಸ್ಪಷ್ಟವಾಗಿರುತ್ತದೆ; ಜತೆಗೆ ಗುರುತರ ಜವಾಬ್ದಾರಿಯೂ ಮುಂದಿರುತ್ತದೆಯಲ್ಲ...

****

 

ಸುತ್ತಣ ಸಮಾಜ ಒಡೆದು ಛಿದ್ರವಾಗುತ್ತಿದೆ ಎಂದೆನಿಸುತ್ತಿರುವಾಗ ಅದರೊಂದಿಗೇ ಹೊಂದಿಕೊಂಡು ಬಾಳಲು ಒಂದು ಕಠಿಣ ಕ್ರಮವನ್ನು ಒತ್ತಾಯ ಪೂರ್ವಕದಿಂದಲಾದರೂ ಹುಡುಕಿಕೊಳ್ಳಬೇಕಾಗುತ್ತದೆ. ಅಂತಹ ಕ್ರಮದಲ್ಲಿ ತನ್ನ ಸ್ವಂತಿಕೆ ಕಾಪಾಡಿಕೊಳ್ಳುತ್ತ, ಬದುಕನ್ನು ಮತ್ತೆ ಮತ್ತೆ ರೂಪಿಸುತ್ತ ಹೊಸತನ ಕಂಡುಕೊಳ್ಳುತ್ತ, ಈ ಪ್ರಪಂಚದ ಕ್ರೌರ್ಯಕ್ಕೆ ಅಳುಕದೆ ರೋಸಿಕೊಳ್ಳದೇ, ಅಥವಾ ರೋಷಾವೇಶಕ್ಕೊಳಗಾಗದೇ, ಆಗಿ ಹೋದುದಕ್ಕೆ ವ್ಯಥೆಪಡುತ್ತ ಕೂರದೆ, ಜಿಗುಪ್ಸೆ ತಾಳದೆ, ಸ್ವಾನುಕಂಪದಿಂದ ಪಶ್ಚಾತ್ತಾಪ ಪಡದೆ, ಮುಂದಿನ ವಸ್ತುಸ್ಥಿತಿಗೆ ಬೆಲೆ ಕೊಡುತ್ತ ಭವಿಷ್ಯದಲ್ಲಿ ಬಂದೆರಗಬಹುದಾದು ದೇನಲ್ಲವನ್ನೂ ಎದುರಿಸಲು ಸಿದ್ಧವಾಗುತ್ತ ನಡೆಯುವುದೇ ಜೀವಂತಿಕೆಯ ಲಕ್ಷಣವೆನಿಸುತ್ತದೆ.

 -ಎಚ್.ಶಿವರಾಂಜುಲೈ 12, 2006.