ಮನಸೆ ನೀ ನಿನ್ನ ಮನದ ಮಾತ ಕೇಳ ಬೇಡ..

ಮನಸೆ ನೀ ನಿನ್ನ ಮನದ ಮಾತ ಕೇಳ ಬೇಡ..

ಮನಸೆ ನೀ ನಿನ್ನ ಮನದ ಮಾತ ಕೇಳ ಬೇಡ
ಹಾಳಾಗುವೆ ನನ್ನ೦ತೆ, ನಾ ಕೇಳಿ ಕೆಟ್ಟ ನಿನ್ನ ಮಾತಿನ೦ತೆ

ನೆನಪಿದಯೆ ನಿನಗೆ, ಬಾಲ್ಯದಲಿ ನಾ ನಿನ್ನ ಮಾತ ಕೇಳಿದ್ದು,
ನೀ ನನ್ನ ಆಟದೆ ಮೈಯ ಮರೆಸಿದ್ದು, ಆಡುತಾಡುತ ನಾ ಗುರಿಯ ಮರೆತಿದ್ದು,
ಅರಿತು ಏಳುವ ಮುನ್ನವೇ ನನ್ನ ಸು೦ದರ ಬಾಲ್ಯವ ಕಳೆದು ಕೊ೦ಡಿದ್ದು,

ಬಾಲ್ಯ ಬಲಿಯದೆ, ಬುದ್ಧಿ ಬೆಳೆಯದೆ ಮತ್ತೆ ನಾ ಕೇಳೆ ನಿನ್ನ ಮಾತು
ಅದಾವ ಛಲವೋ ನನ್ನ ಮೇಲೆ ನಿನಗೆ, ತು೦ಬಿದ್ದೆ ನನ್ನಲಿ ಗೆಲುವಿನ ಭ್ರಾ೦ತು
ಗೆದ್ದೆನೆ೦ದುಕೊ೦ಡಿದ್ದ ಪೆದ್ದು ನಾನು, ಬರಿಯ ಬಿದ್ದು ಸಾವರಿಸಿಕೊ೦ಡಿದ್ದೇ ಬ೦ತು

ಗೆಲ್ಲುವ ಛಲದಲಿ ಓಡಿದ್ದೆ ನಾನು, ಇತರರ ಸೋಲಿಸುವ ಹುನ್ನಾರದಲಿ
ಓಡಿ ಓಡಿ ಬವಳಿ ನಿ೦ತಿದ್ದೆ ನಾನು, ನೋಡಲೆನ್ನ ಗೆಲುವ, ಸುಳ್ಳು ಹುರುಪಿನಲಿ
ಓಡುವ ಭರದಲಿ ನೋಡುವದ ಮರೆತಿದ್ದೆ, ಮರೆತ೦ತೆ ಬಾಳ್ವೆಯ,ಬದುಕುವ ಮರ್ಮದಲಿ

ನನ್ನತನಕೆ ಕಡಿವಾಣ ಬಡಿಯಲು ನೀನು, ವ೦ತಿಕೆಯಲಿ ಮಡಿದ ಗುಲಾಮನಾದೆ ನಾನು
ಹೊಳೆದ ಯೋಚನೆ, ಊಳಿದ ಬಿತ್ತನೆ, ಬೆಳೆದ ತೆನೆ ಯಾವುದರಲ್ಲೂ ಇರಲಿಲ್ಲ ನಾನು
ನನ್ನವರೆ೦ಬ ಜನರ ಯೋಚನೆಯೇ ತು೦ಬಿ ಬಾಳಿದ ನನ್ನ ಜೀವನ ನಡೆಸಿದವ ನೀನು

ನೀ ನನ್ನಲಿ ಬೆರೆತು, ನಾನು ನಿನ್ನ ಅರಿತು, ನಾನು ನಾನಾಗುವ ಹೊತ್ತಿಗೆ,
ಕರಗಿ ಹೋದ ಬಾಳ್ವೆಯ, ತಿರುಗಿ ಬಾರದ ಕ್ಷಣವ, ಕರೆದು ಮರುಗುವ ಸುಳಿಗೆ
ನನ್ನ ನೀ ತಳ್ಳಿ, ನಿನ್ನ ಛಲವ ತೀರಿಸಿಕೊ೦ಡಾಗ, ನಾ ಹಾಳಾಗಿ ಹೋದ೦ತೆ.

Rating
No votes yet