ಅಡಿಗೆಯಲ್ಲೇಕೆ ಕೀಳರಿಮೆ?

ಅಡಿಗೆಯಲ್ಲೇಕೆ ಕೀಳರಿಮೆ?

ಈ ವಿಷಯದ ಬಗ್ಗೆ ಎಷ್ಟೋ ದಿವಸದಿಂದ ಬರೀಬೇಕು ಅಂತಿದ್ರೂ, ಸಂಪದದಲ್ಲಿ ಇವತ್ತು ನೋಡಿದ ಸುಪರ್ ಮಾರ್ಕೆಟ್ ಬರಹ ಮತ್ತ ಗೋಡಂಬಿ ಪಲ್ಯ ದ ಬರಹದಿಂದ ತಕ್ಷಣ ಬರೆಯೋಣ ಅನ್ನಿಸ್ತು.

ನಮಗ್ಯಾಕೆ ನಮ್ಮ ಅಡಿಗೆ ಊಟದ ಬಗ್ಗೆ ಕೀಳರಿಮೆ ಇರ್ಬೇಕು? ಬೆಂಗಳೂರಲ್ಲಿ, ಮೈಸೂರಲ್ಲಿ ಮಾಡುವ ಎಂಟಿಆರ್, ಆರ್ಕೇ ಮೊದ್ಲಾದವರ ಇನ್ಸ್ಟಾಂಟ್ ಪ್ರಾಡಕ್ಟ್ ಗಳನ್ನ ನೋಡಿ - ಅದು ಯಾಕೆ ’ರವಾ ಇಡ್ಲಿ ಮಿಕ್ಸ್’ ’ರವಾ ದೋಸಾ ಮಿಕ್ಸ್’ ’ರಸಂ ಪೌಡರ್’ ’ಇನ್ಸ್ಟಾಂಟ್ ಉಪ್ಮ’  ’ಮುರುಕು’ ಆಗಿರ್ಬೇಕು? ರವೆ ಇಡ್ಲಿ, ರವೆ ದೋಸೆ, ಸಾರಿನ ಪುಡಿ,  ಹುಳೀ ಪುಡಿ, ಚಕ್ಲಿ ಅಂತ ಯಾಕಿರ್ಬಾರ್ದು? ಒಂದು ಕಡೆ ಅಂತೂ  ಕೋಡುಬಳೆಗೆ ’spicy rice rings' ಅಂತಲೋ ಏನೋ ಬರೆದಿದ್ದನ್ನ ನೋಡಿದ್ದೆ! ಗುಜರಾತಿಗಳು ಅವರ ಡೋಕ್ಲಾನ ಮಾರೋವಾಗ ಡೋಕ್ಲಾ ಅಂತ್ಲೇ ಬರೀತಾರೆ. ಮಲಯಾಳಿಗಳು ಅವರ ಪುಟ್ಟು ನ ಪುಟ್ಟು ಅಂತ್ಲೇ ಕರೀತಾರೆ. ಅಂತಾದ್ರಲ್ಲಿ ನಮ್ಮ ಗೊಜ್ಜು, ಪಲ್ಯ, ಒಬ್ಬಟ್ಟು, ಕೋಡ್ಬಳೇನಾ ಹಾಗೇ ಬರೆಯೋಕೆ, ಹಾಗೇ ಪ್ರಚಾರ ಮಾಡೋಕೆ ನಮಗ್ಯಾಕೆ ಆಗ್ಬಾರ್ದು?

ಬೆಂಗಳೂರಲ್ಲಿ ಎಷ್ಟೋ ಕಡೆ ಮುದ್ದೆ ಊಟ ಸಿಗೋ ಜಾಗಗಳಲ್ಲಿ 'Ragi Balls Available' ಅಂತ ಬರೆದಿರತ್ತೆ. ಇದಕ್ಕೂ ಅಪದ್ಧ ಬೇಕಾ? ಮುದ್ದೆಯ ಸವಿ ಗೊತ್ತಿದ್ದು ಅದನ್ನ ತಿನ್ನಕ್ಕೆ ಬರೋವ್ರಿಗೆ ’ರಾಗಿ ಮುದ್ದೆ’ ಅಂತ (ಲಿಪಿ ಯಾವುದೇ ಇರಲಿ) ಬರೆದ್ರೆ ಸಾಲೋದಿಲ್ವಾ?

ಇನ್ನು ಹೊಸ ರುಚಿ ವಿಭಾಗ - ಟಿವಿಯಲ್ಲಿ ತೋರಿಸೋ ಅಡಿಗೆಗಳು, ಕೆಲವು ಮಟ್ಟಿಗೆ ಪ್ರಿಂಟ್ ಮೀಡಿಯಾದಲ್ಲೂ - ಅದನ್ನ ಕೇಳ್ಲೇ ಬೇಡಿ. ಅಡುಗೆ ಮಾಡಿ ತೋರಿಸ್ತಿರೋದು ಕನ್ನಡ ಕಾರ್ಯಕ್ರಮ - ಆದ್ರೆ ಬೇಕಾಗೋ ಪದಾರ್ಥಗಳು ಮಾತ್ರ "ಒಗ್ಗರಣೆಗೆ ಒಂದು ಚಮಚ ಜೀರಾ, ಒಂದು ಚಿಕ್ಕ ಸ್ಪೂನ್ ಹಲ್ದೀ ಮತ್ತು ಎಂಟು ಗ್ರೀನ್ ಚಿಲ್ಲೀಸ್" - ಅದ್ಯಾಕೋ? ಮೆಣ್ಸಿನಕಾಯಿ, ಜೀರಿಗೆ, ಅರಿಶಿನ ಅಂದ್ರೆ ನಾಲ್ಗೆ ಏನಾದ್ರೂ ಸುಟ್ಟು ಹೋಗತ್ತೋ, ಅಥವಾ ರುಚಿ ಕಡಿಮೆಯಾಗತ್ತೋ?

ಊಟದಲ್ಲೂ ನಮ್ಮತನಾನ ನಾವು ಕಳ್ಕೋಬೇಕಾ? ಇನ್ನೂ ಉದಯ ಟೀವಿ ಸೀರಿಯಲ್ ಸ್ಟೈಲಲ್ಲಿ ಹೇಳ್ಬೇಕಿದ್ರೆ "ಇದು ನಮಗೆ ಬೇಕಿತ್ತಾ?" - (ಇದೂ ತಮಿಳಿನ ’ಇದು ಉನಕ್ಕ್ ತೇವೈಯಾ?’ ಅನ್ನೋ ಮಾತಿನ ನೇರ ಅನುವಾದ ಅನ್ನಿ!). 

ಇನ್ನು ಕನ್ನಡಿಗರ ಅಡುಗೆಯನ್ನ ಯಾರು ಕಾಪಾಡ್ತಾರೋ ಗೊತ್ತಿಲ್ಲ ಬಿಡಿ.

-ಹಂಸಾನಂದಿ

 

Rating
No votes yet

Comments