ಕವಿತೆಗಳನ್ನು ಅರ್ಥೈಸಿಕೊಳ್ಳುವದು ಹೇಗೆ ?

ಕವಿತೆಗಳನ್ನು ಅರ್ಥೈಸಿಕೊಳ್ಳುವದು ಹೇಗೆ ?

ಬರಹ

ಕವಿತೆಗಳನ್ನು ಅರ್ಥೈಸಿಕೊಳ್ಳುವದು ಹೇಗೆ ? ಈ ಬಗ್ಗೆ ಹಿಂದೊಂದು 'ಎಲ್ಲೋ ಹುಟ್ಟಿ ಎಲ್ಲೋ ಬೆಳೆದು' ಸಣ್ಣ ಲೇಖನವನ್ನು ಬರೆದಿದ್ದೆ . ಮೊನ್ನೆ ಸಂಪದದಲ್ಲಿ ಬೇಂದ್ರೆಯವರ 'ಪರಾಗ' ಕವಿತೆಯ ಕುರಿತು ಒಂದು ಒಳ್ಳೆಯ ಲೇಖನ ನೋಡಿದೆ . ಇತ್ತೀಚೆಗೆ ಶ್ರೀ ಎಚ್. ಎಸ್. ವೆಂಕಟೇಶಮೂರ್ತಿಯವರ 'ಮೂವತ್ತು ಮಳೆಗಾಲ' ( ಸಮಗ್ರ ಕಾವ್ಯ ) - ಭಾಗ ಒಂದರಲ್ಲಿ ಈ ಕೆಳಗಿನ ಕವನ ನೋಡಿದೆ. ಕವನ ತುಂಬ ಸರಳವಾಗಿದೆ . ಅದರೆ ಅದು ಕಾವ್ಯವನ್ನು ಅರ್ಥೈಸಿಕೊಳ್ಳುವ ಕುರಿತಾಗಿರುವದರಿಂದ ಕಾವ್ಯಾಸಕ್ತರಿಗೆ ಅನುಕೂಲವಾಗಬಹುದೆಂದು ಇಲ್ಲಿ ಕೊ(ಕು)ಟ್ಟಿದ್ದೇನೆ.

 

ಹಾಡು ಹಾಡು ಎಂದರೆ ಇನ್ನೂ ಜಾಡು ಮೂಡದ ಕಾಡು !

ಹಿಡಿದದ್ದೇ ಹಾದಿ , ಅದೇ ಆದಿ .

ರೊಟ್ಟಿ ಮುರಿಯುವದಕ್ಕೆ ಒಂದು ಮುಖವೇ ?

ಹಲ್ಲೊಂದಿದ್ದರೆ ಹೇಗೂ ಸುಖವೇ.

ಈ ಹಾಡು ತನಗೆ ತಾನೇ ಮೂಡಿ ಇಂದು ಕಾಡು

ಹೀಗೆ ಹೋಗುವದು , ಹಾಗೆ ಹೋಗುವದು ಎಂದು ಇಲ್ಲೇನಿಲ್ಲ ಕಟ್ಟುಪಾಡು !

ಹೇಡಿಗಳು ಇದ ಕಂಡು ಹೆದರಿ ಹಿಂದಕೋಡಿದರೆ

ಮೊಂಡು ಜನ ಇದರಲ್ಲಿ ಕಂಡ ಕಡೆ ನುಗ್ಗಿ ಮೈ ನೆಗ್ಗಿ - ನುಗ್ಗಿ ,

ಕೈ ಕಾಲು ಮಂಡಿ ನೋಯಿಸಿಕೊಂಡರೆ

ಸೋಗಲಾಡಿ ಕಿಲಾಡಿ ಜನ ದೂರದಿಂದಲೇ

ಇದರ ಚೂರು ಫೋಟೋ ಹಿಡಿದು

ಕಟ್ಟು ಗಾಜಿನ ಮಧ್ಯೆ ಇಟ್ಟು ಕೊಂಡಾಡಿದರೆ

ಶಕ್ತ ನುಗ್ಗಿ , ನಿಶ್ಶಕ್ತ ನೆಗ್ಗಿ ಒಬ್ಬನಿಗೆ ಬರೀ ಕೋತಿ ,

ಕೋಳಿ , ಹಾವು , ಹಂದಿ ಒಬ್ಬನಿಗೆ ಗಿಳಿ, ನವಿಲು, ಬೆಳ್ಳಕ್ಕಿ , ಜಿಂಕೆ .

ಯಾರೋ ಪುಣ್ಯಾತ್ಮನಿಗೆ , ಜಲಪಾತಗೀತ -

ಇದ್ದಕ್ಕಿದ್ದಂತೆ , ಅಥವಾ ಬೆಳಕನು ಕಂಡ ಯಾವ ಮುನಿಯೋ ಲಭ್ಯವಿದ್ದಂತೆ

ಕಾಡಿನಲಿ ಕಂಡರೆ - ತಾವು ಕಂಡುದೆ ಸತ್ಯ ಎಂದು ಅವರೆಂದರೆ ನಮಗೇನು ತೊಂದರೆ ? -

 

ಎಚ್. ಎಸ್.ವೆಂಕಟೇಶಮೂರ್ತಿಯವರ 'ಮೂವತ್ತು ಮಳೆಗಾಲ' ( ಸಮಗ್ರ ಕಾವ್ಯ ) - ಭಾಗ ಒಂದು - ಪುಸ್ತಕದಿಂದ