ಇಟಲಿ ( ಅಝೂರಿ ), ಇಂದಿನ ಕಾಲ್ಚೆಂಡಾಟದ, ೨೦೦೬ ರ ವಿಶ್ವ ಛಾಂಪಿಯನ್ !

ಇಟಲಿ ( ಅಝೂರಿ ), ಇಂದಿನ ಕಾಲ್ಚೆಂಡಾಟದ, ೨೦೦೬ ರ ವಿಶ್ವ ಛಾಂಪಿಯನ್ !

ಬರಹ

೧೮ ನೆಯ ವಿಶ್ವಕಪ್ ಕಾಲ್ಚೆಂಡಿನಾಟದ ಫೈನಲ್ಸ್ ಭಾನುವಾರ, ೯ ನೆಯ ತಾರೀಖು ಜುಲೈ ೨೦೦೬ ರಂದು ಜರ್ಮನಿಯ ಒಲಂಪಿಯ ಸ್ಟೇಡಿಯಾನ್, ಬರ್ಲಿನ್ ನಲ್ಲಿ ನಡೆಯಿತು.ಈ ಮಹಾಸಮರದಲ್ಲಿ ಇಟಲಿಯ ತಂಡ (೫-೩) ಗೋಲಿನ ಅಂತರದಿಂದ ಫ್ರಾನ್ಸ್ ನ್ನು ಧ್ವಂಸಗೊಳಿಸಿ ಫುಟ್ಬಾಲ್ ಛಾಂಪಿಯನ್ ಪಟ್ಟವನ್ನೇರಿತು. ಇದು ೧೨೦ ನಿಮಿಷದ ನಂತರವೂ ಹಣಾ ಹಣಿ ಮುಂದುವರಿದಾಗ ಅಂತಿಮ ಫಲಿತಾಂಷ ನಿರ್ಧರಿಸಲು ಪೆನಾಲ್ಟಿಶೂಟ್ ಔಟಿನಿಂದ ಮಾತ್ರ ಸಾಧ್ಯವಾಯಿತು.ಇಟಲಿ ೧೯೮೨ ರಲ್ಲಿ ಛಾಂಪಿಯನ್ ಆಗಿತ್ತು.ಪುನಃ ೨೪ ವರ್ಷಗಳ ಬಳಿಕ ಅದನ್ನು ದಕ್ಕಿಸಿಕೊಂಡಿದೆ !

ಬಲಿಷ್ಠ ಇಟಲಿ, ಮತ್ತು ಫ್ರಾನ್ಸ್ ದಳಗಳು ನಿಯಮಿತ ೯೦ ನಿಮಿಷಗಳ ಬೃಹತ್ ಸಮರದಲ್ಲಿ (೧-೧) ಗೋಲಿನಿಂದ ಡ್ರಾ ಮಾಡಿಕೊಂಡು ಸಮಬಲ ಸ್ಥಾಪಿಸಿದ್ದರು. ಫ್ರಾನ್ಸಿನ ನೆಚ್ಚಿನ ಆಟಗಾರ ಸಾಕರ್ ಮಾಂತ್ರಿಕ, ಕಪ್ತಾನ್ ಜಿದಾನೆಯವರು ಪಂದ್ಯದುದ್ದಕ್ಕೂ ಭವ್ಯ ಆಟದ ಪ್ರದರ್ಶನ ತೋರಿಸಿದ್ದರು. ಇದೇ ಮಟ್ಟದ ಆಟವನ್ನು ಕಾಯ್ದುಕೊಳ್ಳಲು ಮತ್ತು ಫ್ರಾನ್ಸ್ ತಂಡವನ್ನು ಗೆಲುವುಗೇರಿಸಲು ಬಹಳ ಶ್ರಮಪಟ್ಟರು. ತಮ್ಮ ೧೨ ವರ್ಷಗಳ ಕಾಲ್ಚೆಂಡಿನಾಟದ ಜೀವನಕ್ಕೆ ಕ್ರೀಡಾಂಗಣದಲ್ಲಿ ಸರ್ವರ ಸಮ್ಮುಖದಲ್ಲಿ ಪ್ರಚಂಡ ಹರ್ಷೋದ್ಗಾರ ಕರತಾಡನ ಹಾಗೂ ಶ್ಲಾಘನೆಗಳ ಮಹಾಪೂರದ ಮಧ್ಯೆ ನಿವೃತ್ತಿ ಅದರೊಂದಿಗೆ, ವಿದಾಯ ಘೋಷಿಸುವ ಕನಸು ಕಾಣುತ್ತಿದ್ದರು. ಹಾಗೆಯೇ ಅವರಲ್ಲಿ ಉದ್ವಿಗ್ನತೆ, ಸಂಭ್ರಮ, ಕಾತುರ, ಆತಂಕಗಳು ಸಮಾವೇಷಗೊಂಡಿದ್ದವು. ಆದರೆ ವಿಧಿ ಕೇಳಬೇಕಲ್ಲ. ಅದು ಬಗೆದದ್ದೇ ಬೇರೆಯಾಗಿತ್ತು !

ವಿಶ್ವವೆಲ್ಲಾ ಬೆಕ್ಕಸ ಬೆರಗಾಗಿ ವೀಕ್ಷಿಸುತ್ತೆದ್ದ ಫೈನಲ್ಸ್ ನಲ್ಲಿ, ರೆಫರಿ 'ಶೀಟಿ' ಊದಿದ ೭ ನೆ ನಿಮಿಷದಲ್ಲೇ ಜಿದಾನೆಯವರು ತಮ್ಮ ತಂಡಕ್ಕೆ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಈ ಅಪರೂಪದ ಕ್ಷಣಗಳು ಫ್ರಾ‍ನ್ಸ್ ನ ದಿಟ್ಟ ಮುನ್ನಡೆಯ ತೀವ್ರತೆಯನ್ನು ಸ್ಪಶ್ಟವಾಗಿ ಗುರುತಿಸುವ ಹಾದಿಯಲ್ಲಿ ಮುಂದುವರೆದವು. ಇದಾದ ಬಳಿಕ ಇಟಲಿ ತನ್ನ ಆಟವನ್ನು ಚುರುಕು ಗೊಳಿಸಿತು. ೧೯ ನೆಯ ನಿಮಿಷದಲ್ಲಿ ಕಾರ್ನರ್ ನಿಂದ ಪಿರ್ಲೋ ಹೊಡೆದ ಚೆಂಡನ್ನು ಅದ್ಭುತವಾಗಿ ಹೆಡ್ ಮಾಡಿ ಮಾಟರಾಝಿಯವರು ಗೋಲಾಗಿ ಪರಿವರ್ತಿಸಿದರು. ಹೆಚ್ಚುವರಿ ಆಟದ ಸಮಯದಲ್ಲೂ ಜಿದಾನೆ ಹೆಡ್ಡರ್ ಮೂಲಕ ಗೊಲನ್ನು ಮಾಡಲು ಪಟ್ಟ ಶ್ರಮ ನಿಷ್ಪಲವಾಯಿತು.ಇಟಲಿಯ ಸಮರ್ಥ ಕ್ಷೇತ್ರ ರಕ್ಷಕ ಲುಯುಗೆ ಬಫಾನ್ ರವರು ಚೆಂಡನ್ನು ತಡೆದರು.

ಕ್ರೀಡೆ ಯ ೬೦ ನೆ ನಿಮಿಷದಲ್ಲಿ ಇಟಲಿಯ ಆಕ್ರಮಣವನ್ನು ತಡೆಗಟ್ಟಲು ಫ್ರಾನ್ಸ್ ಹೊಡೆದಾಡಿತು. ಟೋನಿ ಹೊಡೆದ ಗೋಲನ್ನು ರೆಫರಿ ಒಪ್ಪಿಕೊಳ್ಳಲಿಲ್ಲ.ಅದು ಆಫ್ ಸೈಡಿನಲ್ಲಿ ಮಾಡಿದ ಗೋಲಾಗಿತ್ತು.

ಹೆಚ್ಚುವರಿ ಆಟದ ವೇಳೆಯಲ್ಲಿ, ಒಂದು 'ಅಚಾತುರ್ಯ'ನಡೆದು ಪಂದ್ಯದ ದಿಕ್ಕನ್ನೇ ಏರುಪೇರು ಮಾಡಿತು. ಇಟಲಿಯ ಡಿಫೆಂಡರ್ ಮಾಟರಾಝಿ ಜಿದಾನೆಯವರಿಗೆ ಕ್ರೀಡಾಂಗಣದಲ್ಲಿ ಎಲ್ಲರ ಸಮ್ಮುಖದಲ್ಲಿ ಹಂಗಿಸಿ ಬಿರುನುಡಿಗಳನ್ನಾಡಿದರು.ಇದು ಒಂದೆರಡು ಬಾರಿ ಪುನರಾವರ್ತನೆಯಾಯಿತೆಂದು ಆಟದ ಬಳಿಕ ಆದ ಪತ್ರಿಕಾ ಕರ್ತರ ಸಂದರ್ಶನದಲ್ಲಿ ಜಿದಾನೆ ಯವರು ಸ್ಪಷ್ಟ ಪಡಿಸಿದರು. ಮಾನಸಿಕ ಸಂತುಲನವನ್ನು ಕಳೆದುಕೊಂಡ ಅವರು ಟಗರಿನಂತೆ ಎಗರಿ, ತಮ್ಮ ತಲೆಯಿಂದ ಅವರ ಎದೆಗೆ ಅಪ್ಪಳಿಸಿದರು. ಮಾಟರಾಝಿ ನೋವಿನಿಂದ ಚೀರಿ ನೆಲಕ್ಕೆ ಬಿದ್ದು ಬಿಟ್ಟರು. ಕ್ಷಣಾರ್ಧದಲ್ಲಿ ಇವೆಲ್ಲಾ 'ಕನಸಿ'ನಂತೆ ನಡೆದು ಹೋದವು. ರೆಫ್ರಿ ಎಲಿಝಾಂಡೋ ರವರಿಗೆ ಸ್ಪಷ್ಟವಾಗಿ ತಿಳಿಯುವ ವೇಳೆಗೆ ಬಹಳ ತಡವಾಗಿತ್ತು. ಇಟಲಿಯ ಗೋಲಿ, ಹಾಗೂ ಆಟಗಾರರು ತೀವ್ರ ವಾಗಿ ಖಂಡಿಸಿ ನ್ಯಾಯ ಬೇಕೆಂದು ಆಗ್ರಹಿಸಿದರು. ೪ನೆ ಅಧಿಕಾರಿಯನ್ನು ಸಂಪರ್ಕಿಸಿ ರಫ್ರಿ, 'ಕೆಂಪು ಕಾರ್ಡ್' ತೋರಿಸಿದರು.ಟೀವಿ ಕ್ಯಾಮರಗಳು ಬಿರುಸಿನಿಂದ ಎಲ್ಲಾ ಗತಿವಿಧಿಗಳನ್ನೂ 'ಕಿರುತೆರೆ' ಯಮೇಲೆ ಪ್ರದರ್ಶಿಸುತ್ತಿದ್ದರು. ಫ್ರಾನ್ಸ್ ನಲ್ಲಿ ನ ಜಿದಾನೆಯವರ ಪರಿವಾರ ದವರ ಸಮೇತ, ವಿಶ್ವದ ಮಿಲಿಯಗಟ್ಟಲೆ ಸಾಕರ್ ಅಭಿಮಾನಿಗಳು ನೋಡಿ ತಲ್ಲಣಗೊಂಡಿದ್ದಲ್ಲದೆ, ಬಹಳವಾಗಿ ನೊಂದುಕೊಂಡರು.ಕಾಲ್ಚೆಂಡಿನ ಪ್ರೇಮಿಗಳಿಗೆ 'ತೀವ್ರ ವಿಷಾದ' ಮತ್ತು 'ನಿರಾಸೆ' ಯ ಅನುಭವವಾಗಿತ್ತು !

ಈ ಘಟನೆ, ಫ್ರಾನ್ಸ್ ನ ಗೆಲುವಿನ ಆಸೆಗೆ ತಣ್ಣೀರೆರಚಿತ್ತು. ಜಿದಾನೆಯವರಿಗೆ ತಮ್ಮ ತಪ್ಪಿನ ಅರಿವಾಯಿತು. ಆದರೆ ಕಾಲ ಮಿಂಚಿತ್ತು ! ಅವರು ಖಿನ್ನರಾಗಿ, ವ್ಯಸನದಿಂದ ತಲೆತಗ್ಗಿಸಿಕೊಂಡು ಕ್ರೀಡಾಂಗಣದಿಂದ ನಿಧಾನವಾಗಿ ನಿರ್ಗಮಿಸಿ ಕಣ್ಮರೆಯಾದರು.ಆಗ ೧೦೬ ನೆಯ ನಿಮಿಷದ ಆಟ ಬಿರುಸಿನಿಂದ ಸಾಗಿತ್ತು. ಕ್ರೀಡೆಯ ನಂತರ ರನ್ನರ್ ಅಪ್ ಗಳಿಗೆ ಪ್ರದಾನ ಮಾಡುವ ಪದಕಗಳನ್ನು ಸ್ವೀಕರಿಸಲೂ ಅವರಿಗೆ ಕರೆಬರಲಿಲ್ಲ. ೧೨ ವರ್ಷದ ತಮ್ಮ ಸಾಕರ್ ಜೀವನ ದಲ್ಲಿ ಅವರು ೧೦೮ ಪಂದ್ಯಗಳಲ್ಲಿ ಭಾಗವಹಿಸಿದ್ದರು.೧೯೯೮ ರಲ್ಲಿ ಫ್ರಾನ್ಸ್ ವಿಶ್ವಛಾಂಪಿಯನ್ ಆಗಿ ಮೆರೆದಿತ್ತು. ಆವರ ಜಯದ ಹಿಂದೆ ಜಿದಾನೆಯವರ ಶ್ರಮ ಎಷ್ಟಿತ್ತೆಂದು ಪ್ರತಿಯೊಬ್ಬ ಫ್ರಾನ್ಸ್ ಜನರಿಗೆ ತಿಳಿದಿತ್ತು.೨೦೦೬ ರ ಸಮಯದಲ್ಲಿ ಇಂದಿನ ಫೈನಲ್ಸ್ ಗೇರಲು ಜಿದಾನೆಯವರಂತೆ ಅನೇಕರು ಶ್ರಮಿಸಿದ್ದಾರೆ. ಜಿದಾನೆಯವರ
ಅನುಪಸ್ಥಿತಿಯಲ್ಲಿ ಆಟವನ್ನು ಮುಂದುವರೆಸುವ ಮನೋಬಲ ಏಕೋ ಕಡೆಮೆಯಾದಂತೆ ತೋರುತ್ತಿತ್ತು.

ಹೀಗೆ ವಿಶ್ವದ ಮಹಾನ್ ಸಾಕರ್ ಖಿಲಾಡಿಯ ಮಹತ್ವಾಕಾಂಕ್ಷೆಯ ಕನಸುಗಳು ನುಚ್ಚುನೂರಾಗಿ ಬಹಳ 'ಹೀನಾಯ' ಪರಿಸ್ಥಿತಿಯಲ್ಲಿ ಅವರ ವೃತ್ತಿಜೀವನ ಕೊನೆಗೊಂಡಿದ್ದು ನಿಜಕ್ಕೂ ಶೋಚನೀಯ ! ಅಬ್ಬ, ಅದೊಂದು ಹೃದಯವಿದ್ರಾವಕ ಘಟನೆ ಹಾಗೂ ಅನುಭವ ಸಹಿತ !

೨೦೦೬ ರಲ್ಲಿ ಪೆನಾಲ್ಟಿ ಶೂಟ್ ಔಟ್ ಮಾಡಿ ನಿರ್ಣಯ ಪಡೆದ ಹಾಗೆ, ೧೯೯೪ ರಲ್ಲೂ ಬ್ರೆಸಿಲ್, ಪೆನಾಲ್ಟಿ ಶೂಟ್ ಔಟ್ ನಿಂದಲೇ ಇಟಲಿಯನ್ನು (೩-೨) ಗೋಲಿನ ಅಂತರದಿಂದ ಮಣಿಸಿ ವಿಶ್ವಕಪ್ ಗಿಟ್ಟಿಸಿತ್ತು.
ಇಟಲಿ, ೧೯೩೪, ೧೯೩೮, ೧೯೮೨, ಮತ್ತು ಈಗ ೨೦೦೬ ರಲ್ಲಿ ಅಂದರೆ ೪ ನೆಯಬಾರಿ ವಿಶ್ವಛಾಂಪಿಯನ್ ಪಟ್ಟ ಅನುಭವಿಸಿದೆ ! ೧೯೯೦ ರಲ್ಲಿ ಅದು ೩ ನೆ ಸ್ಥಾನ ಪಡೆದರೆ, ೧೯೯೪ ರಲ್ಲಿ ೨ ನೆಯ ಸ್ಥಾನದಲ್ಲಿತ್ತು.

ಪೆನಾಲ್ಟಿ ಶೂಟ್ ಔಟ್ ಹೇಗಿತ್ತೆಂದು ನೋಡೋಣ :

ಇಟಲಿಯ ಕಡೆ ಗೋಲ್ ಚಚ್ಚಿದವರು.

೧. ಆಂದ್ರೆ ಪಿರ್ಲೋ ೨. ಮಾರ್ಕೊ ಮಾಟರಾಝಿ ೩. ಡೇನಿಯಲ್ ಡಿ.ರೊಸ್ಸಿ ೪. ಅಲೆಸೆಂಡ್ರೋ ಡೆಲ್ ಪಿಯಾರೋ ೫. ಫ್ಯಾಬಿಯೊ ಗ್ರಾಸ್ಸೊ

ಫ್ರಾನ್ಸ್ ಕಡೆ ಗೋಲ್ ಹೊಡೆದವರು :

೧. ಸಿಲ್ವಿಯನ್ ವಿಲ್ ಟೋರ್ಡ್ ೨.ಎರಿಕ್ ಅಬಿದಾಲ್ ೩. ವಿಲ್ಲಿ ಸಿಗ್ನೋಲ್ ೪. ಡೇವಿಡ್ ಟ್ರೆಝ್ಯೆ ಗ್ಯುಟ್ ( ಬದಲಿ ಆಟಗಾರ ) ಇವರು ಹೊಡೆದ ಚೆಂಡು ಕ್ರಾಸ್ ಬಾರ್ ಗೆ ಬಡಿದು ಹೊರಗೆ ಹೋಯಿತು.ಗೋಲ್ ಆಗಲಿಲ್ಲ.

ಒಮ್ಮೆ ಫ್ರಾನ್ಸ್ ಮತ್ತು ಇಟಲಿಯ ಆಟಗಾರರ ಆಟದ ವೈಖರಿ ನೋಡೋಣ :

೧. ಫ್ರಾನ್ಸ್ ನ ತಂಡ ಅತಿ ಅನುಭವಿ ಹಾಗೂ ಹಿರಿಯರ ತಂಡ. ಜಿದಾನೆಯವರಂತೆ ಹಿರಿಯರು ಫ್ರಾನ್ಸ್ ನ್ನು ಫನಲ್ಸ್ ವರೆಗೆ ಒಯ್ಯಲು ಬಹಳ ಕಷ್ಟಪಟ್ಟಿದ್ದಾರೆ.ಜಿದಾನೆಯವರ ಅನಿರೀಕ್ಷಿತ ನಿರ್ಗಮನದಿಂದ ಫ್ರಾನ್ಸ್ ಮನೊಬಲ ಕ್ಷೀಣಿಸಿದ್ದನ್ನು ಎಲ್ಲರೂ ನೋಡಿದ್ದಾರೆ. ಕೇವಲ ೧೦ ನಿಮಿಷಗಳ ಕ್ರೀಡೆ ಉಳಿದಿತ್ತು. ಆದರೆ ೧೦ ಜನ ಕ್ರೀಡಾಳು ಗಳ ಸಹಾಯದಿಂದ ಇದು , ಸಾದ್ಯವೆ ಎನ್ನುವಂತೆ ಅವರಿಗೆ ಭಾಸವಾಗುತ್ತಿತ್ತು.

೧. ಇಟಲಿಯ ಬಣದ ಆಟಗಾರರೆಲ್ಲ ಯುವಕರು. ಸಮವಯಸ್ಕರು. ಒಳ್ಳೆಯ ಭರ್ಜರಿ ಅಂಗಸೌಷ್ಟವ ಶಾರೀರಿಕ ಶಕ್ತಿಯನ್ನು ಹೊಂದಿದವರು. ಅವರ ಆಟದಲ್ಲಿ ಶಿಸ್ತು, ಸಹನೆ, ಸಹಿಷ್ಣುತೆ,ತಾಳ್ಮೆ,ವೇಗದ ಆಟದ ಜೊತೆಗೆ, 'ಒಗ್ಗಟ್ಟು' ಅವರನ್ನು ಒಂದು ಉತ್ತಮ ಟೀಮ್ ಎಂದು ತೋರಿಸುತ್ತಿತ್ತು. ಅವರು ಯಾವುದೆ 'ಒಬ್ಬ ವ್ಯಕ್ತಿ'ಯ ಆರಾಧಕರಾಗಿರಲಿಲ್ಲ. ಪ್ರತಿ ಆಟಗಾರನೂ ತನ್ನದೆ ಆದ ವೈಯಕ್ತಿಕ ವಿಶೇಷತೆಯನ್ನು ಮೈಗೂಡಿಸಿಕೊಂಡು, ಅದನ್ನು ಬೆಳಸಿಕೊಂಡು ಒಟ್ಟಾರೆ ಯಾಗಿ ಎದುರಿಸಿದರು. ಜಯವನ್ನು ಸಂಪಾದಿಸಿದರು ! 'ಸಂಘ ಶಕ್ತಿ'ಗೆ ಇದೊಂದು ಸೊಗಸಾದ ಉದಾಹರಣೆ.

ಮಾಟರಾಝಿ, ಜಿದಾನೆ ಪ್ರಕರಣ :

ಇದು ಮ್ಯಾಚಿನ ಬಳಿಕವೂ ಮುಂದುವರೆದು, ಬಹಳ ವಿವಾದದಲ್ಲಿದೆ. ಇನ್ನೂ ಯಾವ ನಿರ್ಧಾರವೂ ಆಗಿಲ್ಲ. ಮೊನ್ನೆ ನಡೆದ ಫ್ರೆಂಚ್ ಟೀವಿಗೆ ಕೊಟ್ಟ ಸಂದರ್ಶನದಲ್ಲಿ, ಜಿದಾನೆಯವರು ಅಂದು ನಡೆದದ್ದು ಒಂದು 'ದುರದೃಷ್ಟಕರ ಘಟನೆ' ಎಂದು ವರ್ಣಿಸಿದ್ದಾರೆ.'ಫಿಫಾ ತನಿಖಾ ಆಯೋಗ'ಇಬ್ಬರಿಗೂ ಸಮನ್ ಸಲ್ಲಿಸಿ, ಲಿಖಿತರೂಪದಲ್ಲಿ ಅವರ ಅಹವಾಲುಗಳನ್ನು ಸಲ್ಲಿಸುವಂತೆ ಮನವಿಮಾಡಿಕೊಂಡಿದ್ದಾರೆ. ಕೆಲವು ಮೀಡಿಯಾ ವಕ್ತಾರರು ಹೇಳುವಂತೆ, ಜಿದಾನೆಯವರ ಪ್ರಶಸ್ತಿ ಕಿತ್ತುಕೊಳ್ಳುವ ಸಾಧ್ಯತೆ ಯನ್ನು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ.

೧೮ ನೆ ವಿಶ್ವಕಪ್ ಯಜಮಾನಿಕೆಯನ್ನು ಅತ್ಯಂತ ಸಮರ್ಥವಾಗಿಯೂ ಯಶಸ್ವಿಯಾಗಿಯೂ ನಡೆಸಿಕೊಟ್ಟಿದ್ದಕ್ಕೆ ಜರ್ಮನ್ ಒಕ್ಕೂಟಕ್ಕೆ ಅಭಿನಂದನೆಯ ಸುರಿಮಳೆಯಾಗಿದೆ. ವಿಶ್ವ ಮಾನವತೆ, ಸ್ನೇಹ, ಪ್ರೀತಿಗಳನ್ನು ಪ್ರತಿಪಾದಿಸುವ ಜರ್ಮನ್ ಒಕ್ಕೂಟ 'ನುಡಿದಂತೆ ನಡೆಯುವ ಗುಣಗ್ರಾಹಿ ರಾಷ್ಟ್ರ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಫುಟ್ಬಾಲ್ ಇಂದಿನ ಜಗತ್ತಿನ ಅತಿಜನಪ್ರಿಯ ಆಟಗಳಲ್ಲಿ ಅಗ್ರಸ್ಥಾನದಲ್ಲಿದೆ. ಅತಿ ಸುಲಭವಾಗಿ ಯಾರು ಬೇಕಾದರು ಆಡಬಲ್ಲ ಕ್ರೀಡೆ ಇದು.ಆರೋಗ್ಯವಾದ ಗಟ್ಟಿ ಮುಟ್ಟಾದ ಮೈಕಟ್ಟಿನ ಮಿಂಚಿನಂತೆ ಮುನ್ನುಗ್ಗುವ ಧರ್ಯ, ಸ್ಥೈರ್ಯ ಗಳಿಂದ ಪರಿಸ್ಥಿಗೆ ಹೊಂದಿಕೊಂಡು ಸಿಕ್ಕ ಅತಿ ಚಿಕ್ಕ ಸನ್ನಿವೇಶವನ್ನುತನ್ನ ಕೈವಾಡ ಮಾಡಿಕೊಳ್ಳುವ ಶಕ್ತಿ, ಹಾಗೂ ಸದಾ ಮುನ್ನುಗ್ಗುವ ಮನೋಭಾವ ವಿರುವ ಕ್ರೀಡಾಳು ಹೆಚ್ಚ್ಚಿಗೆ ಉಪಯೋಗಿಯಾಗುತ್ತಾನೆ. ಇಂತಹ ಹಲವು ಗುಣ ವಿಶೇಷಗಳನ್ನು ಕಪ್ಪು ಹಾಗೂ ಮಿಶ್ರ ಜಾತೀಯರಲ್ಲಿ ಕಾಣಬಹುದೆಂಬುದು ಕೇವಲ ತೋರಿಕೆಯ ಮಾತಲ್ಲ !ಅದರಿಂದಲೇ ಯೂರೋಪಿನ ಎಲ್ಲಾ ಪ್ರಮುಖ ಟೀಮ್ ಗಳಲ್ಲು ಇಂತಹವರ ಆಯ್ಕೆ ಇದ್ದೇ ಇದೆ !

ಜೆರಾಲ್ಡ್ ಅಸಮೋಹ್, ಎಂಬ 'ಘಾನ ಸಂಜಾತ' ಈಗ ಜರ್ಮನ್ ರಾಷ್ಟ್ರೀಯ ಫುಟ್ಬಾಲ್ ತಂಡದಲ್ಲಿ ಪ್ರಧಾನ ಕ್ರೀಡಾಳುವಾಗೆ ದುಡಿಯುತ್ತಿದ್ದಾರೆ. " ಜರ್ಮನಿಯಲ್ಲಿ ನನಗೆ ದೊರೆತ ಪ್ರೀತಿ, ಗೌರವ, ಸ್ನೇಹಗಳು ಎಲ್ಲಾ ಕಪ್ಪು ವರ್ಣೀಯರಿಗೂ ದೊರೆಯುವಂತಾಗಲಿ" ಎಂದಿರುವ ಅವರ ಅಂತರಂಗದ ಮಾತುಗಳು ಕೇವಲ ಶುಷ್ಕ ಘೋಶಣೆ ಗಳಲ್ಲ ! ಜರ್ಮನ ಒಕ್ಕೂಟದ ನೈಜಕಾರ್ಯಾಚರಣೆ, ಕ್ರೀಡಾ ಸಂಬಂಧೀ ವಹಿವಾಟುಗಳ ಪಾರದರ್ಶಿಕೆಗೆ ಹಿಡಿದ ಕನ್ನಡಿಯಾಗಿದೆ !

೧೯ ನೆಯ ವಿಶ್ವಕಪ್ ೨೦೧೦ ರಲ್ಲಿ ದಕ್ಷಿಣ ಅಫ್ರಿಕದಲ್ಲಿ ನಡೆಯಲಿದೆ. ಅಲ್ಲಿಯೂ ಇದೇತರಹ ಮಾನವೀಯತೆ ಸ್ನೇಹ ಸೌಹಾರ್ದಗಳ ವಾತಾವರಣ ಮೇಳವಿಸಲಿ. ಕ್ರೀಡೆಗಳು ಜನರ ತನು ಮನಗಳನ್ನು ಈ ಅರ್ಥದಲ್ಲಿ ಆವರಿಸಲಿ !

ನಮ್ಮ 'ರಾಷ್ಟ್ರ ಕವಿ ಕುವೆಂಪು' ರವರ ಕನಸಿನ 'ವಿಶ್ವಮಾನವತ್ವ'ಎಲ್ಲೆಡೆ ಸಂಭ್ರಮಿಸಲಿ. ಶಾಂತಿ ಸೌಹಾರ್ದಗಳ ಸಹಬಾಳ್ವೆ, ಕ್ರೀಡೆಗಳ ಮುಖಾಂತರ ವಿಶ್ವದಲ್ಲೆಲ್ಲಾ ಪಸರಿಸಲಿ !