ಇದು 'ಶೂ'-ನಾಮಿ!

ಇದು 'ಶೂ'-ನಾಮಿ!

ಬರಹ

ಇದು ಈ ಬಾರಿಯ ವಿಶೇಷ. ಈ ಬೆರಗು ಕಣ್ಣುಗಳಿಗೆ ಇದು ಬೆರಗಿಗಿಂತ ಹೆಚ್ಚು ಕೊರಗಾಗಿ ಕಾಣುತ್ತಿದೆ. ಮೊದಲಿಗೆ ಶುರುವಾಗಿದ್ದು ಪಿ ಚಿದಂಬರಮ್ ಅವರ ಮೇಲಿನ ಚಪ್ಪಲಿ ಎಸೆತದ ಜತೆ. ಅದರ ನಂತರ ಹತ್ತಿಕೊಂಡ ಬೆಂಕಿ ಕಾಳ್ಗಿಚ್ಚನಂತೆ ಹಬ್ಬಿ ಬಯಸದೇ ಬಂದ ಭಾಗ್ಯ ಅನ್ನೋ ರೀತಿ ಸಿಕ್ಕ ಸಿಕ್ಕವರಿಗೆ ಸಿಗಬಾರದಷ್ಟು ಪ್ರಚಾರ ಕೊಡ್ತಾ ಇದೆ ನೋಡಿ. ಈ ಚಪ್ಪಲಿ ಹಾರದ ಬಗ್ಗೆ ಅಥವಾ ಶೂನಾಮಿ ಬಗ್ಗೆ ಏನ ಹೇಳಲಿ ನೀವೇ ಹೇಳಿ.

ಬಹುಷಃ ಚಿದಂಬರಮ್ ಗೆ ಶೂ ಎಸೆಯುವ ಹೊತ್ತಿಗೆ ಈ ಶೂ-ನಾಮಿಗೆ ಭಾಷ್ಯ ಬರೆಯುವೆನೆಂದು ಜರ್ನೇಲ್ ಸಿಂಗ್ ತಿಳಿದುಕೊಂಡಿರುವ ಸಾಧ್ಯತೆ ಇಲ್ಲವೇ ಇಲ್ಲ. ಈ ಕರ್ನಾಟಕದ ಮೂಲೆಯೊಂದರಲ್ಲಿ ಕುಳಿತು ನನ್ನಂತವರು ಆತನ ಹೆಸರನ್ನು ಪ್ರಸ್ತಾಪಿಸುವಷ್ಟು ಫೇಮಸ್ ಅಸಾಮಿ ಆಗಿಬಿಟ್ಟ ಆ ಜರ್ನೇಲ್ ಸಿಂಗ್ ಅನ್ನೋ ಪತ್ರಕರ್ತ. ಇಲ್ಲಾಂದ್ರೆ ಅವನ ಪತ್ರಿಕೆ ಬಿಟ್ರೆ ಬೇರ್ಯಾವುದರಲ್ಲಿ ಅವನ ಹೆಸರಿಗೆ ಜಾಗ ಇರ್ತಿತ್ತು ಹೇಳಿ. ಹೀಗೆ ಶುರು ಮಾಡಿದ ಶೂ-ನಾಮಿ ಪ್ರಕರಣಕ್ಕೆ ಮಾತ್ರ ಒಳ್ಳೇ ಪ್ರಚಾರ ಕೊಟ್ಟ ನ್ಯಾಶನಲ್ ಮೀಡಿಯ ಸರಿಯಾಗಿಯೇ ಕೆಲಸ ಮಾಡಿದ್ದೂ ಹೌದು. ಅಂತೂ ಇಂತೂ ಜಗದೀಶ್ ಟೈಟ್ಲರ್ ನಂತಹ ಖದೀಮರಿಗೆ ಚುನಾವಣೆ ನಿಲ್ಲದಂತೆ ಮಾಡಿದ್ದು ಇದೇ ಶೂ-ನಾಮಿ ಅಲ್ಲವೇ. ಅಂತೂ ಒಂದಿಬ್ಬರು ಕ್ರಿಮಿ-ನಲ್ ಗಳು ಚುನಾವಣೆಯಿಂದ ದೂರ ಉಳಿದಂಗಾಯ್ತು ಅನ್ನೋಣ.

ಚಿದು ಮೇಲೆ ಶೂ-ಬಾಣಇದಾದಮೇಲೆ ಶುರುವಾಗಿದ್ದೇ ಶೂ-ನಾಮಿಯ ಪ್ರಬಲಾವತಾರ. ಒಂದರ ಬೆನ್ನಲ್ಲಿ ಇನ್ನೊಂದು ಶೂ, ಚಪ್ಪಲಿ, ಸಾಕ್ಸ್, ಅದೂ ಇದೂ ಅಂತ ಎಸೆಯೋ ಪರಿಪಾಠ ನಮ್ಮೂರ ಅಂಗಳಕ್ಕೂ ಬಂದಂತಾಗಿಬಿಟ್ಟಿದೆ. ನಮ್ಮ ದೇಶದ ಸಧ್ಯದ ಪ್ರಧಾನಿ ಮನಮೋಹನ ಸಿಂಗ್, ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ, ಜಿತೇಂದ್ರ, ಹೀಗೆ ಒಬ್ರಾ ಇಬ್ರಾ. ಶೂಗಳು, ಚಪ್ಪಲಿಗಳು ಹಾರಿದ್ದೇ ಹಾರಿದ್ದು. ಚಪ್ಪಲಿ ಅಂಗಡಿಗಳಲ್ಲಿ ಇಲೆಕ್ಷನ್ ಸ್ಪೆಷಲ್ ಸೇಲ್ ಅಂತ ಬೋರ್ಡ್ ಗಳು ಬೀಳೋದೊಂದು ಬಾಕಿ.

ಪಾಪ ನಮ್ಮ ಮುಖ್ಯಮಂತ್ರಿಗಳು ಮಾತ್ರ ಕೆಂಡಾಮಂಡಲವಾಗಿದ್ದು ಮಜಾದ ಸಂಗತಿ. ಯಾವತ್ತು ಸಿಡಿಮಿಡಿಗೊಳ್ಳುತ್ತಲೇ ಇರೋ ನಮ್ಮ ಯೆಡ್ಯೂರಪ್ಪನವರಿಂದ ಹೊಸತನ್ನು ಹೇಗಾದ್ರೂ expectಮಾಡೋದು ಅಂತೀರಾ. ಅದೂ ಸರಿಯೇ. ಇನ್ನು ಹಾಸನಕ್ಕೆ ಹೋಗಿ ಚಪ್ಪಲಿ ಎಸೆತಕ್ಕೊಳಗಾದ ಬೇಜಾರೂ ಇರ್ಬಹುದು ಅನ್ನೋಣ. ಅವರ ಸ್ಟ್ಯಾಂಡರ್ಡ್ ಕಡಿಮೆ ಆಯ್ತು ಅಂದುಕೊಂಡಿರ್ಬಹುದಾ. ಅಲ್ಲಿ ಚಿದಂಬರಮ್, ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬ್ರಾಂಡೆಡ್ ಶೂಗಳು ಬಿದ್ದಿದ್ರೆ ನಂಗ್ಯಾಕೆ ಯಾವುದೋ ಹಳೇ ಚಪ್ಪಲೇ ಗತಿಯಾಯ್ತು ಅನ್ನೋ ಕೊರಗಿತ್ತಾ ಅವರ ಮಾತಲ್ಲಿ. ಇದ್ರೂ ಇರ್ಬಹುದು ಅನ್ನೋಣ.ಚಿದಂಬರಮ್ ಗೆ ಶೂ ಬಾಣ

ಈಗಾಗ್ಲೇ ಇಂತಹಾ ಕನಿಷ್ಟ ಆರು ಕೇಸಗಳು ದೇಶಾದ್ಯಂತ ಸುದ್ದಿಯಾಗಿದೆ. ಕಳೆದ ವರ್ಷ ಇರಾಕ್ ನಲ್ಲಿ ನಡೆದ ಬುಷ್ ಮೇಲಿನ ಶೂ ದಾಳಿಯಿಂದ ಇದೆಲ್ಲಾ ಆರಂಭವಾದ್ರೂ ಭಾರತಕ್ಕೆ ಚಿದಂಬರಮ್ ಅವರ ಮೇಲಿನ ಶೂ-ಅಸ್ತ್ರ ಪ್ರಯೋಗವೇ ಆರಂಭ. ಹೀಗೆ ಶೂಗಳ ಮೇಲೆ ಶೂಗಳು ಬೀಳುತ್ತಲೇ ಇರುತ್ವಾ, ಅಥವಾ ಚುನಾವಣೆಯ ನಂತರವಾದ್ರೂ, ಈ recessionಕಾಲದಲ್ಲಿ ಚಪ್ಪಲಿ, ಶೂ ಎಸೆತದ ಪ್ರಕರಣಗಳು ಕಡಿಮೆಯಾಗುತ್ವಾ ಅನ್ನೋದು ಮಾತ್ರ ಕುತೂಹಲ ಕೆರಳಿಸುತ್ತಿದೆ