ಲ್ಯಾಪ್‌ಟಾಪಿನ ಮೂಲಕವೇ ವಿದ್ಯಾರ್ಥಿಗಳಿಗೆ ಪರೀಕ್ಷೆ

ಲ್ಯಾಪ್‌ಟಾಪಿನ ಮೂಲಕವೇ ವಿದ್ಯಾರ್ಥಿಗಳಿಗೆ ಪರೀಕ್ಷೆ

ಬರಹ

 

blog
ನಾರ್ವೆಯಲ್ಲಿ ಹದಿನಾರು ವರ್ಷ ತುಂಬಿದ ವಿದ್ಯಾರ್ಥಿಗಳಿಗೆ ಸರಕಾರ ಲ್ಯಾಪ್‌ಟಾಪ್ ಪೂರೈಸುವ ಪ್ರಯೋಗ ನಡೆದಿದೆ.ಅವರುಗಳ ಪೈಕಿ ಆರು ಸಾವಿರ ಜನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮೂಲಕವೇ ಪರೀಕ್ಷೆ ತೆಗೆದುಕೊಳ್ಳುವ ಪ್ರಾಯೋಗವೂ ಅಲ್ಲಿ ನಡೆದಿದೆ.ಸರಕಾರ ಪೂರೈಸಿದ ಲ್ಯಾಪ್‌ಟಾಪಿನಲ್ಲಿ ವಿದ್ಯಾರ್ಥಿಯ ಅಧ್ಯಯನಕ್ಕೆ ಅಗತ್ಯವಾದ ತಂತ್ರಾಂಶಗಳನ್ನೆಲ್ಲಾ ಒದಗಿಸಲಾಗಿರುತ್ತದೆ. ಪರೀಕ್ಷೆ ತೆಗೆದುಕೊಳ್ಳಲು ಅಗತ್ಯವಾದ ತಂತ್ರಾಂಶವೂ ಅದರಲ್ಲಿ ಸೇರಿದೆ, ವಿದ್ಯಾರ್ಥಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಎಸಗಿದಾಗ ಅದನ್ನು ಪತ್ತೆ ಹಚ್ಚಲು ತಂತ್ರಾಂಶ ಸಮರ್ಥವಾಗಿದೆ. ವಿದ್ಯಾರ್ಥಿ ಅಕ್ರಮ ಎಸಗಿದ್ದು ಕಂಡು ಬಂದರೆ, ಆತನನ್ನು ನಪಾಸು ಎಂದು ಘೋಷಿಸಲಾಗುತ್ತದೆ.
ತಂತ್ರಾಂಶವು ವಿದ್ಯಾರ್ಥಿ ಒತ್ತಿದ ಕೀಲಿಗಳ ದಾಖಲೆ ಇಟ್ಟು ಕೊಳ್ಳುವುದರ ಮೂಲಕ ಮತ್ತು ಆತನ ಲ್ಯಾಪ್‌ಟಾಪಿನ ತೆರೆಯ ದೃಶ್ಯವನ್ನು ಆಗಾಗ ತೆಗೆದು ಉಳಿಸಿಕೊಳ್ಳುವುದರ ಮೂಲಕ ಪರೀಕ್ಷಕರಿಗೆ ವಿದ್ಯಾರ್ಥಿಯ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಅನುವು ಮಾಡುತ್ತದೆ.
ಪ್ರಶ್ನೆಪತ್ರಿಕೆಯನ್ನು ಅಂತರ್ಜಾಲ ತಾಣದಿಂದ ಇಳಿಸಿಕೊಳ್ಳುವ ಅಥವ ಕಾಗದದಲ್ಲಿ ಮುದ್ರಿಸಿದ ಪ್ರಶ್ನೆಪತ್ರಿಕೆಗಳನ್ನು ಬಳಸುವ ಆಯ್ಕೆಗಳಿವೆ. ವಿದ್ಯಾರ್ಥಿಯ ಲ್ಯಾಪ್‌ಟಾಪಿನ ತಂತ್ರಾಂಶದ ಮೂಲಕ ಆತ ಅಂತರ್ಜಾಲ ಅಥವ ಕಂಪ್ಯೂಟರ್ ಜಾಲಕ್ಕೆ ಸಂಪರ್ಕ ಪಡೆಯುವುದನ್ನು ನಿಲ್ಲಿಸಲು ಬರುತ್ತದೆ. ಈ ಸೆಟ್ಟಿಂಗನ್ನು ಪರೀಕ್ಷಕರಿಗೆ ಮಾತ್ರ ನಿರ್ವಹಿಸಲು ಬರುತ್ತದೆ. ಸ್ಪೆಲ್ಲಿಂಗ್ ಪರೀಕ್ಷಿಸುವಂತಹ ಸಾಧನಗಳ ಪ್ರಯೋಜನ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಅನುವು ನೀಡಲಾಗುತ್ತದೆ.ಈ ಪ್ರಯೋಗಕ್ಕೆ ಒದಗಿದ ಆರಂಭಿಕ ಸಫಲತೆಯ ಕಾರಣ,ಲ್ಯಾಪ್‌ಟಾಪ್ ಪರೀಕ್ಷೆಯನ್ನು ಸಾರ್ವತ್ರಿಕಗೊಳಿಸುವ ಬಗ್ಗೆಯೂ ಚಿಂತನೆ ನಡೆದಿದೆ.
-----------------------------------------------------------------
ಯುಟ್ಯೂಬ್ ವಿಡಿಯೋ ನೋಡಿ ಪತ್ನಿಯ  ಹೆರಿಗೆ ಮಾಡಿಸಿದ ಪತಿರಾಯ!

ಮಾರ್ಕ್ ಸ್ಟೀಫನ್ಸ್ ಪತ್ನಿ ತುಂಬು ಗರ್ಬಿಣಿ. ಆ ದಿನ ಆಕೆ ಎಂದಿನಂತಿರಲಿಲ್ಲ. ಅದನ್ನು ಗಮನಿಸಿದ ಪತಿ ಯುಟ್ಯೂಬಿನಿಂದ ಹೆರಿಗೆ ಬಗೆಗಿನ ಕೆಲವು ವಿಡಿಯೋಗಳನ್ನು ಹುಡುಕಿ ನೋಡಿದ್ದ.ಸುಮಾರು ನಾಲ್ಕು ಗಂಟೆ ಕಳೆದಾಗ ಆಕೆಗೆ ಹೆರಿಗೆ ನೋವು ಆರಂಭವಾಯಿತು. ಆಕೆಗೆ ಮನೆಯಲ್ಲೇ ಹೆರಿಗೆ ಮಾಡಿಸುವ ನಿರ್ಧಾರ ಮಾಡಿ,ಸೂಲಗಿತ್ತಿಯನ್ನು ಬರಹೇಳಿದರೂ ಆಕೆ ಬರುವ ಸ್ಥಿಯಲ್ಲಿರಲಿಲ್ಲ. ಕೊನೆಗೆ ಆಸ್ಪತ್ರೆಗೆ ಸಾಗಿಸಲು ಅಂಬ್ಯುಲೆನ್ಸ್‌ಗೆ ಕರೆಯನ್ನೂ ಮಾಡಲಾಯಿತು. ಆದರೆ ಅಷ್ಟರಲ್ಲಿ ಹೆರಿಗೆ ನೋವು ಹೆಚ್ಚಿದ್ದು ನೋಡಿದ ಸ್ಟೀಫನ್ಸ್, ತಾನು ಮೊದಲು ವಿಡಿಯೋದಲ್ಲಿ ನೋಡಿದ್ದನ್ನು ಪ್ರಯೋಗಕ್ಕಿಳಿಸಲು ತೀರ್ಮಾನಿಸಿದ.ಗಾಬರಿಗೊಳ್ಳದೆ ಪತ್ನಿಗೆ ಸಹಕರಿಸಿ, ಮಗುವಿನ ಜನನ ಸುಸೂತ್ರವಾಗುವಂತೆ ಅನುಕೂಲ ಕಲ್ಪಿಸಿದ. ಹೆರಿಗೆಯ ನಂತರವಷ್ಟೇ ತಾಯಿ-ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಯಿತು.ಅಂದ ಹಾಗೆ ಅದವರ ನಾಲ್ಕನೇ ಮಗು.
----------------------------------------------------------------------
ವೊಲ್ವರೀನ್ ಚಿತ್ರದ ವಿಲಕ್ಷಣ ಚೌರ್ಯ ಪ್ರಕರಣ
ಚಲನಚಿತ್ರಗಳ ಚೌರ್ಯದ ಬಗ್ಗೆ ನೀವು ಸಾಕಷ್ಟು ಕೇಳಿದ್ದೀರಿ.ಆದರೆ "ವೊಲ್ವರೀನ್" ಚಿತ್ರದ ಅಂತರ್ಜಾಲ ಚೌರ್ಯ ಅವುಗಳನ್ನೆಲ್ಲಾ ಮೀರಿಸಿದೆ. ಈ ಚಿತ್ರದ ಅತ್ಯುತ್ತಮ ಗುಣಮಟ್ಟದ ಪ್ರತಿಗಳು ಅಂತರ್ಜಾಲದಲ್ಲಿ, ಚಿತ್ರದ ಅಧಿಕೃತ ಬಿಡುಗಡೆಗೆ ಒಂದು ತಿಂಗಳ ಮೊದಲೇ ಲಭ್ಯವಾಗಿ ಹೊಸ ದಾಖಲೆಯನ್ನೇ ಬರೆದಿದೆ.ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದರ ಜತೆಗೆ ಅದರ ಪ್ರತಿ ಅಂತರ್ಜಾಲದಲ್ಲೂ ಲಭ್ಯವಾಗುವುದೀಗ ವಿಶೇಷವೆಂದು ಪರಿಗಣಿತವಾಗುವುದೇ ಇಲ್ಲ.ಮಾರ್ಚ್ ಮೂವತ್ತೊಂದರಂದು ಚಿತ್ರ ಬಿಡುಗಡೆಯಾಗುವಾಗ ಒಂದು ದಶಲಕ್ಷ ಜನರದನ್ನು ನೋಡಿ ಆಗಿತ್ತು! ಈಗ ಈ ಘಟನೆಯ ಬಗ್ಗೆ ಎಫ್ ಬಿ ಐ ತನಿಖೆ ನಡೆಸಿದೆ.ಶರವೇಗದ ಅಂತರ್ಜಾಲ, ಚಿತ್ರದ ಕಡತಗಳನ್ನು ಅಂತರ್ಜಾಲದಲ್ಲಿ ಇಡುವ ಅನಿವಾರ್ಯತೆ ಚೌರ್ಯಕ್ಕೆ ಅನುಕೂಲಕರವಾಗಿ ಪರಿಣಮಿಸಿದೆ.ಚಿತ್ರದಲ್ಲಿ ವಾಟರ್‌ಮಾರ್ಕ್ ಅನ್ನು ಹುದುಗಿಸುವಂತಹ ತಂತ್ರಜ್ಞಾನಗಳು ಹೆಚ್ಚು ಸಫಲತೆಯನ್ನು ಕಂಡಿಲ್ಲ. ಇದಕ್ಕೆ ಕಾರಣ ಕಳ್ಳರು, ಅವುಗಳನ್ನು ಕಿತ್ತು ಹಾಕುವ ಪ್ರತಿತಂತ್ರ ಹೂಡಲು ಶಕ್ತರಾಗಿದ್ದಾರೆ.
--------------------------------------------------------------------------
ನಾಸಾದಿಂದಲೂ ಉದ್ಯೋಗಗಳಿಗೆ ಕತ್ತರಿ
ನಾಸಾ ಅಮೆರಿಕಾದ ಖ್ಯಾತ ಬಾಹ್ಯಾಕಾಶ ಸಂಸ್ಥೆ. ಮುಂದಿನ ವರ್ಷದ ನಂತರ ಅದರ ಸ್ಪೇಸ್ ಶಟಲ್ ಕಾರ್ಯಕ್ರಮ ಮುಂದುವರಿಯುವುದಿಲ್ಲ. ಹಾಗಾಗಿ ಸ್ಪೇಸ್ ಶಟಲ್ ತಯಾರಿಕಾ ಘಟಕವು ಮುಚ್ಚಲಿದೆ. ಸ್ಪೇಸ್ ಶಟಲ್‌ನ ಭಾಗಗಳ ತಯಾರಿಕೆಯು ಒಪ್ಪಂದಾನುಸಾರ ಹಲವು ಕಂಪೆನಿಗಳಲ್ಲಿ ನಡೆಯುತ್ತಿತ್ತು. ಈಗದಕ್ಕೆ ಕೊನೆ ಬಂದಿದೆ. ಹೀಗಾಗಿ ಮುಂದಿನ ಐದಾರು ತಿಂಗಳಲ್ಲಿ ಸುಮಾರು ಒಂಭೈನೂರು ಜನ ನೌಕರಿ ಕಳೆದುಕೊಂಡರೆ ಅಚ್ಚರಿಯಿಲ್ಲವಂತೆ.ಇನ್ನು ಮುಂದೆ ನಾಸಾವು ಚಂದ್ರನತ್ತ ಯಾನಿಗಳನ್ನು ಒಯ್ಯಬಲ್ಲ ಅಪೊಲೋ ತೆರನ ವಾಹನಗಳನ್ನು ತಯಾರಿಸಲಿದೆ.
--------------------------------------------------------
ಕಾರು ಚಾರ್ಜ್ ಮಾಡಲು ಸೂಕ್ತ ಸಮಯ ನಿರ್ಧರಿಸುವ  ಸ್ಮಾರ್ಟ್ ಚಾರ್ಜರ್
ವಿದ್ಯುಚ್ಛಕ್ತಿಚಾಲಿತ ಕಾರನ್ನು ವಿದ್ಯುತ್ ಲೈನಿಗೆ ಸಂಪರ್ಕಿಸಿ ಗಂಟೆಗಳ ಹೊತ್ತು ಚಾರ್ಜ್ ಮಾಡಬೇಕಾಗುತ್ತದೆ. ಮಿಲಿಯಗಟ್ಟಲೆ ಕಾರುಗಳನ್ನು ಕಚೇರಿ ಸಮಯದ ನಂತರ ಮನೆಗೆ ಮರಳಿದೊಡನೆ ಚಾರ್ಜ್ ಆಗಲು ಇಟ್ಟರೆ,ವಿದ್ಯುತ್ ಪರಿಸ್ಥಿತಿ ಗಂಭೀರವಾಗದೆ ಇರದು ತಾನೇ? ನಡುರಾತ್ರಿಯೋ, ಮುಂಜಾವೋ ವಿದ್ಯುತ್ ಬೇಡಿಕೆ ಕಡಿಮೆ ಇರುವ ಹೊತ್ತು ಕಾರು ಚಾರ್ಜ್ ಆಗುವಂತಿದ್ದರೆ ಒಳಿತು ತಾನೇ? ಸೀಟಲ್‌ನ ಪ್ಯಾಸಿಫಿಕ್ ನಾರ್ತ್‌ವೆಸ್ಟ್ ನ್ಯಾಶನಲ್ ಲ್ಯಾಬೋರೇಟರಿಯ ಸಂಶೋಧಕರು ಅಂತಹ ಸಾಮರ್ಥ್ಯವಿರುವ ಸ್ಮಾರ್ಟ್ ಚಾರ್ಜರ್ ಸಾಧನಗಳನ್ನು ತಯಾರಿಸಿದ್ದಾರೆ. ಈ ಸಾಧನಗಳನ್ನು ಪ್ರೊಗ್ರಾಮ್ ಮಾಡಿ,ಕಡಿಮೆ ಬೆಲೆಯಲ್ಲಿ ವಿದ್ಯುಚ್ಛಕ್ತಿ ಲಭ್ಯವಿರುವ ಹೊತ್ತು ಚಾರ್ಜ್ ಆಗುವಂತೆಯೂ ಮಾಡಲು ಬರುತ್ತದೆ.
-----------------------------------------------
ಅಗ್ಗದ ಏಸರ್ ನೆಟ್‌ಟಾಪ್ ಕಂಪ್ಯೂಟರ್
ಕಂಪ್ಯೂಟರನ್ನು ಅಗ್ಗಗೊಳಿಸಿ,ಅದರ ಬಳಕೆಯನ್ನು ವ್ಯಾಪಕಗೊಳಿಸ ಬೇಕೆಂಬ ಯೋಚನೆಯಿಂದ ಏಸರ್ ಕಂಪ್ಯೂಟರ್ ನೆಟ್‌ಟಾಪ್ ಎನ್ನುವ ಕಂಪ್ಯೂಟರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಾಮಾನ್ಯ ಕಂಪ್ಯೂಟರುಗಳ ಮೂರನೇ ಒಂದು ಗಾತ್ರದ ಇವು ಒಂದು ಜಿಬಿ ರಾಮ್ ಸ್ಮರಣಸಾಮರ್ಥ್ಯ, ನೂರ ಅರುವತ್ತು ಜಿಬಿ ಹಾರ್ಡ್ ಡಿಸ್ಕ್,ಕೀಲಿಮಣೆ,ಮೌಸ್ ಹೊಂದಲಿವೆ.ಮಾನಿಟರ್ ಮತ್ತು ನಿರ್ವಹಣ ತಂತ್ರಾಂಶವಿಲ್ಲದ ನೆಟ್‌ಟಾಪ್ ಕಂಪ್ಯೂಟರಿಗೆ ಬೆಲೆ ಹನ್ನೆರಡು ಸಾವಿರ.ಇದರಲ್ಲಿ ಇಂಟೆಲ್ ಕಂಪೆನಿಯ ಏಸರ್ ಸಂಸ್ಕಾರಕ ಇದೆ.ಕಡಿಮೆ ವಿದ್ಯುತ್ ಬಳಕೆ ಇದರ ಇನ್ನೊಂದು ಧನಾತ್ಮಕ ಅಂಶ.ಡಿವಿಡಿ ರೈಟರ್ ಕೂಡಾ ಇದೆ.

udayavani

*ಅಶೋಕ್‌ಕುಮಾರ್ ಎ