ಹಂಪೆಯ ಚಿತ್ರಗಳು ತಂದ ನೋವು ನಲಿವು!

ಹಂಪೆಯ ಚಿತ್ರಗಳು ತಂದ ನೋವು ನಲಿವು!

ನಾಗರಾಜ್ ಅವರ ಹಂಪೆಯ ಫೋಟೋಗಳನ್ನು ನೋಡಿ ಸಂತೋಷವಾಯಿತು. ಅದರ ಜೊತೆಗೆ ಒಂದು ಕಹಿ ನೆನಪೂ ಮರುಕಳಿಸಿತು.

ಹಂಪಿಯನ್ನು ನಾನು ನೋಡಿದ್ದೇನೆ. ನನ್ನ ಗೆಳೆಯರು ಹಾಗೂ ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀ ಬಾಲಸುಬ್ರಹ್ಮಣ್ಯ ಅವರು ನನಗೆ ಹಂಪೆಯನ್ನು ಸಾಕಷ್ಟು ಪರಿಚಯ ಮಾಡಿಕೊಟ್ಟಿದ್ದಾರೆ. ಅವರು ನನಗೆ ತೋರಿಸಿದ ಮೂರು ವಿಷಯಗಳನ್ನು ನಿಮ್ಮೊಡನೆ ಹಂಚಿಕೊಳ್ಳಬಯಸುತ್ತೇನೆ. ಎರಡು ವಿಷಯಗಳು ಮುದ ಕೊಡುವಂತಹವು. ಮೂರನೆಯದು ನೋವನ್ನು ನೀಡುವಂತಹದ್ದು!

೧. ಹಂಪೆಯಲ್ಲಿ ಆದಿ ಮಾನವರು ಬರೆದ ಚಿತ್ರಗಳಿರುವ ಒಂದು ಪುಟ್ಟ ಗುಹೆಯಿದೆ. ಹಂಪೆಗೆ ಹೋಗುವವರು ಈ ಚಿತ್ರಗಳನ್ನು ನೋಡಲು ಸಾಮಾನ್ಯವಾಗಿ ಹೋಗುವುದೇ ಇಲ್ಲ! ಈ ಸ್ಠಳದ ನಿಖರವಾದ ದಾರಿಯನ್ನು ತಿಳಿಸಲಾರೆ.  ಆದರೆ ಇದು ಹಂಪೆಯ ಪರಿಧಿಯಲ್ಲಿದೆ ಎಂದು ಹೇಳಬಲ್ಲೆ.

೨. ರಾಣಿವಾಸದವರು ಬಳಸುತ್ತಿದ್ದ ಶೌಚಾಲಯ! ಹೌದು. ವಿಜಯನಗರದ ಅರಮನೆಗಳಲ್ಲಿ ಶೌಚಾಲಯವನ್ನು ಅರಮನೆಯ ಒಳಗೇ ಕಟ್ಟುತ್ತಿದ್ದರು. (ಇತಿಹಾಸ ಓದುವಾಗ ಇಂತಹ ಕ್ಷುಲ್ಲಕ (!) ವಿಷಯಗಳು ನಮ್ಮ ನೆನಪಿಗೇ ಬರುವುದಿಲ್ಲ. ಅಲ್ಲವೆ!!) ಅಂತಹವನ್ನು ಈಗಲೂ ನೋಡಬಹುದು. ಸೂರು ಎಲ್ಲ ಬಿದ್ದು ಹೋಗಿದೆ. ಕೇವಲ ಸ್ನಾನಗೃಹ, ಶೌಚಾಲಯ ಇತ್ಯಾದಿಗಳು ಮಾತ್ರ ಉಳಿದಿವೆ. ದಯವಿಟ್ಟು ಯಾರಾದರೂ ಸಂಪದಿಗರು ಹಂಪಿಗೆ ಭೇಟಿಯನ್ನು ನೀಡಿದರೆ, ಅದರ ಒಂದು ಫೋಟೋವನ್ನು ಕ್ಲಿಕ್ಕಿಸಿ. ಎಲ್ಲರಿಗೂ ಶೌಚಾಲಯ ದರ್ಶನವನ್ನು ಮಾಡಿಸಿ :)

೩. ನೋವಿನ ಸಂಗತಿ. ಹಂಪೆಯ ವಿರೂಪಾಕ್ಷನ ದೇವಸ್ಥಾನ ಉತ್ತಮ ಚಿತ್ರಕಲೆಯನ್ನು ಹೊಂದಿರುವ ಕಲ್ಲಿನ ಕಟ್ಟಡವಾಗಿದೆ. ಕಲ್ಲಿನ ಮೇಲೆ ಶತಮಾನಗಳ ಧೂಳು ಕುಳಿತಿತ್ತು. ಯಾರೋ “ಪುಣ್ಯಾತ್ಮ” ರಿಗೆ ಸ್ಯಾಂಡ್ ಬ್ಲಾಸ್ಟಿಂಗ್ ಮೂಲಕ ಈ ಕೊಳೆಯನ್ನು ತೆಗೆದು ಶುದ್ಧೀಕರಿಸಬಹುದು ಎಂದು ಜ್ಞಾನೋದಯವಾಯಿತು. ಕೂಡಲೇ ಅನುಮತಿಯನ್ನು ಪಡೆದು ಬ್ಲಾಸ್ಟಿಂಗ್ ಆರಂಬಿಸಿಯೇ ಬಿಟ್ಟರು!

ಸ್ಯಾಂಡ್ ಬ್ಲಾಸ್ಟಿಂಗ್ ಎಂದರೆ ಮರಳಿನ ಕಣಗಳನ್ನು ಅತಿವೇಗದಲ್ಲಿ ಚಿಮ್ಮಿ ಶುದ್ದೀಕರಿಸುವ ಒಂದು ತಂತ್ರಜ್ಞಾನ. ಕಣಗಳ ಹೊಡೆತಕ್ಕೆ ಶಿಲ್ಪದ ಮೇಲೆ ಇರುವ ಕೊಳೆ ನಾಶವಾಗುತ್ತದೆ; ಅದರ ಜೊತೆಗೆ ಶಿಲ್ಪದ ಒಂದು ಪದರು ಕಿತ್ತುಬರುತ್ತದೆ! ಕೆಲವು ಸಲ ಮರಳಿನ ಬದಲು ಕಾರ್ಬೊರಂಡಂ, ಉಕ್ಕಿನ ಚೂರು, ತಾಮ್ರದ ಚೂರು ಮುಂತಾದ ಚೂರುಗಳನ್ನು ಬಳಸುವುದುಂಟು. ೧೮೭೦ರಲ್ಲಿ ಬೆಂಜಮಿನ್ ಚೂ ಟಿಲ್ಗ್ಮನ್ ಎಂಬ ಮಹಾಶಯ ಈ ತಂತ್ರವನ್ನು ಜನಪ್ರಿಯಗೊಳಿಸಿದನು.

ಸ್ಯಾಂಡ್ ಬ್ಲಾಸ್ಟಿಂಗ್ ಮಾಡುವಾಗ ಶಿಲ್ಪದ ಒಂದು ಪದರ ಹಾರಿಹೋಗುತ್ತದೆ ಎಂದೆನಲ್ಲವೆ! ವಿರೂಪಾಕ್ಷ ದೇವಸ್ಥಾನದ ಕಂಬಗಳನ್ನು, ಶಿಲ್ಪಗಳನ್ನು ನೋಡಿ. ಎಲ್ಲವೂ ತಮ್ಮ ಕುಸುರಿ ಕೆತ್ತನೆಯನ್ನು ಕಳೆದುಕೊಂಡು ಒರಟೊರಟಾಗಿವೆ! ಆ ಕಲಾ ನಯವಂತಿಕೆ, ಕಸುಬುಗಾರಿಕೆಯೇ ಮಾಯವಾಗಿದೆ! ನೋಡಿದರೆ ಹೊಟ್ಟೇ ಉರಿದುಹೋಗುತ್ತದೆ.

ಯಾರೋ ದುಷ್ಕರ್ಮಿಗಳು ಹಂಪೆಯನ್ನು ಹಾಳುಗೆಡವಿದರು. ನಿಜ. ಆದರೆ ನಮ್ಮವರೇ, ಸೋ ಕಾಲ್ಡ್ ವಿದ್ಯಾವಂತರೇ ಸ್ಯಾಂಡ್ ಬ್ಲಾಸ್ಟ್ ತಂತ್ರದ ನೆರವಿನಿಂದ ವಿರೂಪಾಕ್ಷ ದೇವಸ್ಥಾನಕ್ಕೆ ಮಾಡಿರುವ ಅಪಚಾರವನ್ನು ಹೇಗೆ ತಾನೇ ಕ್ಷಮಿಸಲು ಸಾಧ್ಯ?

ಸಂಪದಿಗರೆ! ನಿಮ್ಮಲ್ಲಿ ಯಾರಾದರೂ ಹಂಪೆಗೆ ಹೋದರೆ, ಈ ಸ್ಯಾಂಡ್ ಬ್ಲಾಸ್ಟಿನಿಂದ ಆಗಿರುವ ಅನಾಹುತದ ಚಿತ್ರಗಳನ್ನು ತೆಗೆದು ದಯವಿಟ್ಟು ಇಲ್ಲಿ ಹಾಕಿ. ಸ್ಯಾಂಡ್ ಬ್ಲಾಸ್ಟಿಂಗಿಂತಲೂ ಮೊದಲೇ ತೆಗೆದ ಚಿತ್ರಗಳು ಸಿಕ್ಕರೆ ಅವನ್ನೂ ಹಾಕಿ. ಹೋಲಿಕೆಯಿಂದ ಆಗಿರುವ ಅನಾಹುತ ನಮಗೆ ಮನವರಿಕೆಯಾಗುತ್ತದೆ.

ಸಧ್ಯಕ್ಕೆ ಅಂತರ್ಜಾಲದಲ್ಲಿ ದೊರೆತ ಎರಡು ಚಿತ್ರಗಳನ್ನು ಹಾಕಿದ್ದೇನೆ. ಪಿಕಾಸವೆಬ್ ನ ಗೌತಮ ಗ್ಯಾಲರಿಯಲ್ಲಿರುವ ಚಿತ್ರಗಳನ್ನು ಕೆಳಗಿನ ಕೊಂಡಿಯ ಮೂಲಕ ತಲುಪಬಹುದು. ಅಲ್ಲಿ ಅವರೂ ಸಹಾ The carved pillars are covered with kemmaNNu and suNNa - Now being removed by sand blasting. It has resulted in loss of details in fine sculptures ಎಂಬ ವಿವರಣೆಯನ್ನು ನೀಡಿದ್ದಾರೆ. 

ತಂತ್ರಜ್ಞಾನ ಪೂರಕವಾಗಿರಬೇಕೆ ಹೊರತು ಮಾರಕವಾಗಿರಬಾರದು.

-ನಾಸೋ 

 

picasaweb.google.com/.../ zOVxwbFYHLNTfARbJYTCxQ

Rating
No votes yet

Comments