ಹೀಗೊಂದು ವಿಭಿನ್ನ ಪುಸ್ತಕ.

ಹೀಗೊಂದು ವಿಭಿನ್ನ ಪುಸ್ತಕ.

ಬರಹ

ಹೈಸ್ಕೂಲಿನಲ್ಲಿದ್ದಾಗ ಯಾವುದೊ ಕಾದಂಬರಿಯನ್ನು ಓದುತ್ತ ಹತ್ತನೆ ಪುಟಕ್ಕೆ ಬರುತ್ತಿದ್ದಂತೆ ವಾಕರಿಕೆ ಶುರುವಾಗಿ ಕಾದಂಬರಿಗಳ ಸಹವಾಸವೇ ಬೇಡ ಎಂದು ಅನೇಕ ವರ್ಷ ಆ ಸಾಹಿತ್ಯ ಪ್ರಕಾರದ ಕಡೆ ತಲೆ ಹಾಕಿರಲಿಲ್ಲ. ತದನಂತರ ನಾನು ಓದಿದ ಮೊದಲ ಕಾದಂಬರಿ ಪೂಚಂತೇ ಅವರ ಜುಗಾರಿ ಕ್ರಾಸ್ ಅದೂ ಸ್ನಾತಕೋತ್ತರ ಪದವಿಯ ಕಡೆಯ ವರ್ಷದಲ್ಲಿ! ನಂತರ ನಿಧಾನವಾಗಿ ಭೈರಪ್ಪ, ಅನಂತಮೂರ್ತಿ, ತರಾಸು, ಅನಕೃ, ಶಿವರಾಮ ಕಾರಂತರು, ಕುಂವಿ ಅನೇಕರ ಪರಿಚಯವಾಯಿತು. ನಾನು ಓದಿದ ಬೆಸ್ಟ್ ಕಾದಂಬರಿ ಎನ್ನಬಹುದಾದದ್ದು ರಾವ್ ಬಹದ್ದೂರರ ’ಗ್ರಾಮಾಯಣ’.

ಈಗ ಇನ್ನೊಂದು ಅತ್ಯುತ್ತಮ ಕೃತಿ ನಾನೊದಿದ್ದು ಶಂಕರ ಮೊಕಾಶಿ ಪುಣೇಕರರ ’ಅವಧೇಶ್ವರಿ’. ಈ ಕೃತಿಗೆ ೧೯೮೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಈ ಹಿಂದೆ ಇವರ ಗಂಗಮ್ಮ ಗಂಗಾಮಾಯಿ ಓದಿದ್ದೆ. ಅವಧೇಶ್ವರಿ ವೇದಕಾಲೀನ ರಾಜಕೀಯ ಕಾದಂಬರಿ. ಶಂಕರ ಪುಣೇಕರರ ಅಧ್ಯಯನ, ಇತಿಹಾಸ ಪ್ರಜ್ಞೆ, ತಮಗೆ ತಿಳಿದಿರುವ ಪರಿಧಿಯಲ್ಲಿ ಕಥೆ ಹೇಳುವ ನೈಪುಣ್ಯ, ಘಟನೆಗಳಿಗೆ ತಮ್ಮದೇ ತರ್ಕವನ್ನು ಕೊಡುವ ಬಗೆ ಮೆಚ್ಚುಗೆಗೆ ಪಾತ್ರವಾಗುತ್ತದೆ. ಭಾಷೆಯ ಬಳಕೆ ಆಕರ್ಷಕವಾಗಿರದಿದ್ದರೂ ಕಾದಂಬರಿಯ ಓಘ ನಮ್ಮನ್ನು ಹಿಡಿದಿಡುತ್ತದೆ.

ಪುಣೇಕರರಿಗೆ ಈ ಕಾದಂಬರಿ ಬರೆಯಲು ಮುಖ್ಯವಾದ ಆಧಾರಗಳು ಮೆಹ್ಂಜೋದಾರೊದಲ್ಲಿ ದೊರೆತ ಕೆಲವು ಮುದ್ರಿಕೆಗಳು ಹಾಗೂ ಕೆಲವು ವೇದಕಾಲೀನ ಮಂತ್ರಗಳು. ಅಯೊಧ್ಯೆಯ ಮಹಾರಾಣಿ ಪುರುಕುತ್ಸಾನಿ ಸುಖಲೋಲುಪನಾದ ತನ್ನ ಗಂಡನಿಂದ ನಾಶವಾಗಬಹುದಾಗಿದ್ದ ರಾಜ್ಯವನ್ನು ತನ್ನ ಕುಶಲ ಬುದ್ಧಿ ಮತ್ತು ರಾಜನೈತಿಕ ನಿಪುಣತೆಯಿಂದ ಹೇಗೆ ರಕ್ಷಿಸುತ್ತಾಳೆ ಎಂಬುದು ಮೊದಲ ಭಾಗದ ಕಥೆ. ನಂತರದ ಕಥೆಗಳಲ್ಲಿ ಮಹಾರಾಜ ಇಕ್ಷ್ವಾಕು, ಮೆಹಂಜೋದಾರೊ ಮುದ್ರಿಕೆಗಳನ್ನು ಮುದ್ರಿಸಿದ ತ್ರಸದಸ್ಯು, ವೇದದ ಸೂಕ್ತಕರ್ತ ವೃಶಜಾನ ಇವರೆಲ್ಲರ ಕಥೆಗಳು ಬರುತ್ತವೆ. ಇವರ ಹೆಸರುಗಳು ಹಾಗೂ ಕಥೆಗಳಿಗೆ ಮೂಲಾಧಾರವಾಗಿ ವೇದದ ಸೂಕ್ತಗಳನ್ನು ಮತ್ತು ಹರಪ್ಪ ನಾಗರೀಕತೆಯ ಮುದ್ರಿಕೆಗಳನ್ನು ಬಳಸುತ್ತಾರೆ.

ಯಾವುದೇ ಪೌರಾಣಿಕ ಕಥೆಗಳನ್ನು ಓದುವಾಗ ಅದು ನಮ್ಮನ್ನು ಹೇಗೆ ಉತ್ತಮ ಮನುಷ್ಯನನ್ನಾಗಿ ಮಾಡಬಹುದು ಎಂಬ ದೃಷ್ಟಿಕೋನದಿಂದ ಓದಬೇಕು ಎಂದು ಡಿ.ವಿ.ಜಿ ಹೇಳುತ್ತಿದ್ದರು. ಯಾವುದೇ ಕೃತಿಯ ಅದರಲ್ಲೂ ಐತಿಹಾಸಿಕ ಕೃತಿಗಳ ಲೇಖಕನಿಗೆ ಸಾಕ್ಷಿಪ್ರಜ್ಞೆ ಎಂಬುದು ಇರಬೇಕಾಗುತ್ತದೆ. ಮೊಟ್ಟಮೊದಲನೆಯದಾಗಿ ನಾವು ಮಾಡುವ ತಪ್ಪೆಂದರೆ ಆಸ್ತಿಕರಾಗಿದ್ದಲ್ಲಿ ಅಧ್ಯಾತ್ಮದ ಪರಿಧಿಯಿಂದ ಆಚೆಗೆ ಇವುಗಳನ್ನು ನೋಡುವುದೇ ಇಲ್ಲ. ನಾಸ್ತಿಕರಾದಲ್ಲಿ ಇವೆಲ್ಲಾ ಬುರುಡೆ ಎಂದು ಸಾಧಿಸಲು ಕುತರ್ಕದ ಪ್ರಶ್ನೆಗಳನ್ನಿಟ್ಟು ವಿಶಿಷ್ಟ ದೃಷ್ಟಿಕೋನದಲ್ಲಿ ಇವನ್ನು ನೋಡುವ ಅವಕಾಶವನ್ನೇ ಕಳೆದುಕೊಂಡು ಬಿಡುತ್ತೇವೆ. ಇವೆಲ್ಲವಕ್ಕಿಂತ ಹೊರತಾದ ಸಾಕ್ಷಿಪ್ರಜ್ಞೆಯೊಂದಿಗೆ ವೇದಕಾಲೀನ ರಾಜಕೀಯದ ಒಳಸುಳಿಗಳನ್ನು ಓದುಗರೆದುರು ತೆರೆದಿಡುತ್ತಾ ಹೋಗುತ್ತಾರೆ ಶಂಕರ ಪುಣೇಕರರವರು.

ಹರಪ್ಪದ ನಂತರ ಅಲೆಕ್ಸಾಂಡರ್‌ನ ಆಕ್ರಮಣದವರೆಗೆ ಭಾರತದಲ್ಲಿ ಅಂಧಕಾರ ಯುಗವಿತ್ತು ಎಂದು ಇತಿಹಾಸಕಾರರು ಪ್ರತಿಪಾದಿಸುತ್ತಾರೆ. ಈ ಅಂಧಕಾರ ಯುಗವೆಂದರೇನು? ಸಾವಿರಾರು ವರ್ಷಗಳ ಕಾಲ ಭಾರತದಲ್ಲಿ ಜನರೇ ವಾಸವಾಗಿದ್ದಿಲ್ಲವೇ? ಅಥವಾ ಕುರುಹೇ ಇಲ್ಲದಂತೆ ವಾಸವಾಗಿದ್ದರೆ? ಸಾವಿರಾರು ವರ್ಷ ಸೂರ್ಯ ಭಾರತದ ಮೇಲೆ ಬೆಳಕನ್ನೇ ಬೀರದಂತೆ ಸಾಗುತ್ತಿದ್ದನೆ? ಈಜಿಪ್ಟ್ ಫೆರೊಗಳ ಸಮಯದಲ್ಲಿ ಭಾರತದಲ್ಲಿ ಪರಿಸ್ಥಿತಿ ಹೇಗಿತ್ತು? ಇವೆರಡು ಪ್ರಾಂತಗಳ ಮಧ್ಯೆ ವ್ಯವಹಾರಗಳಿರಲಿಲ್ಲವೆ ? ಹರಪ್ಪದ ಚಿಹ್ನೆಗಳು ಬ್ಯಾಬಿಲೋನ್, ಪೆಸಿಫ಼ಿಕ್ ದ್ವೀಪಗಳಲ್ಲಿ ಸಿಕ್ಕದ್ದು ಹೇಗೆ? ಅಂಧಕಾರ ಯುಗ ಎಂದು ಕರೆಯಲ್ಪಡುವ ಸಮಯದಲ್ಲಿ ಭಾರತದ ಸ್ಥಿತಿಗತಿಗಳು ಹೇಗಿದ್ದಿರಬಹುದು? ಇತ್ಯಾದಿ ಪ್ರಶ್ನೆಗಳು ನನ್ನ ತಲೆಯನ್ನು ತುಂಬಾದಿನದಿಂದ ಕೊರೆಯುತ್ತಿದ್ದವು.

ಶಂ.ಭಾ ಜೋಶಿ, ಪ್ರೊ.ಎಸ್.ಆರ್.ರಾವ್ ಇತ್ಯಾದಿ ಸಂಶೊಧಕರ ಪುಸ್ತಕಗಳನ್ನು ಗುಡ್ಡೆ ಹಾಕಿಕೊಂಡು ಪರ್ವ, ಅವಧೇಶ್ವರಿಯಂತಹ ಕಾದಂಬರಿಗಳ ಸಾಂಗತ್ಯಕ್ಕೆ ಬರುತ್ತಿದ್ದಂತೆ ವಿಷಯಗಳು ಸ್ಪಷ್ಟವಾಗತೊಡಗಿದವು. ವಚನ, ಕಾವ್ಯ, ನಾಟಕ ಇತ್ಯಾದಿಗಳನ್ನು ಇತಿಹಾಸ ಅಧ್ಯಯನದ ಸಾಕ್ಷಿಗಳನ್ನಾಗಿ ದಾಖಲೆಗಳನ್ನಾಗಿ ನೋಡಬಹುದಾದರೆ ವೇದ, ಉಪನಿಷತ್ತುಗಳು, ಮಹಾಭಾರತಾದಿ ಕಾವ್ಯಗಳನ್ನು ಆಧಾರ ಗ್ರಂಥಗಳನ್ನಾಗಿ ಯಾಕೆ ನೋಡಬಾರದು? ರಾಜತರಂಗಿಣಿ, ಐನ್-ಎ-ಅಕ್ಬರಿ, ತುಜ಼ುಕ್ ಎ ಬಾಬರಿ, ಶಾಕುಂತಲೆ ಗಳನ್ನು ಇತಿಹಾಸವನ್ನು ನಿರ್ಧರಿಸಲು ಆಧಾರವಾಗಿ ತೆಗೆದುಕೊಳ್ಳಬಹುದಾದರೆ ವೇದ ವೇದಾಂಗಗಳು ಸಹ ಇತಿಹಾಸದ ಘಟನೆಗಳಿಗೆ ಆಧಾರವಾಗುವ ಸಾಮರ್ಥ್ಯವನ್ನು ಹೊಂದಿವೆ. ಉತ್ಪ್ರೇಕ್ಷೆಗಳನ್ನು ತೆಗೆದುಹಾಕಿದರೆ ಮಹಾಭಾರತವು ಇತಿಹಾಸ ಗ್ರಂಥವಾಗಬಲ್ಲುದು ಎಂದು ಖ್ಯಾತ ಇತಿಹಾಸ ತಜ್ಞ ಡಾ|.ಎಸ್.ಆರ್. ರಾವ್ ಹೇಳುತ್ತಾರೆ. ಭಾಗವತವು ಮಹಾಭಾರತದ ನಂತರ ರಚನೆಯಾದದ್ದು. ಉತ್ಪ್ರೇಕ್ಷೆಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ಇವನ್ನೂ ಇತಿಹಾಸದ ಆಧಾರಗಳನ್ನಾಗಿ ತೆಗೆದುಕೊಳ್ಳಬಹುದು ಎಂಬುದು ಡಾ.ರಾವ್ ರವರ ಅಭಿಪ್ರಾಯ. ಡಾ.ರಾವ್ ಶ್ರೀಕೃಷ್ಣನ ದ್ವಾರಕೆಯ ಉತ್ಖನನದ ನೇತೃತ್ವ ವಹಿಸಿದ್ದವರು. ಉತ್ಖನನದಿಂದ ದೊರೆತ ಮಾಹಿತಿಯನ್ನು "The lost city of Dvaraka " ದಲ್ಲಿ ದಾಖಲಿಸಿದ್ದಾರೆ. (ಕನ್ನಡದಲ್ಲೂ ಚಿಕ್ಕ ಹೊತ್ತಗೆಯ ರೂಪದಲ್ಲಿ ಇದು ಸಿಗುತ್ತದೆ. )ಹಸ್ತಿನಾವತಿಯ ಉತ್ಖನನದಲ್ಲಿ ದೊರೆತ ಪಾತ್ರೆಗಳು ಮಹಾಭಾರತದ ಘಟನೆಗಳಿಗೆ ಸಾಕ್ಷಿಯೊದಗಿಸುತ್ತವೆ ಎಂದೂ ಅವರು ಹೇಳಿದ್ದಾರೆ.

ಭೂಖಂಡಗಳ ಚಲಿಸುವಿಕೆಯಂತಹ ಸಂಗತಿಗಳು ವೇದಕಾಲದ ನಂತರ ಪ್ರಾರಂಭವಾಗಿ ಅವತಾರಗಳ ಕಲ್ಪನೆಗೆ ಕಾರಣವಾಗಿವೆ ಎಂಬ ಥಿಯರಿಯನ್ನು ಪುಣೇಕರರು ಪುಸ್ತಕದ ಮುನ್ನುಡಿಯಲ್ಲಿ ಇಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಮಿಥೇನ್ ಅನಿಲದ ಉಬ್ಬರದಿಂದಾಗಿ ಭೂಖಂಡಗಳು ಸರಿದಾಡುವ ವಿಷಯವನ್ನು ಗೊಲ್ಡ್ ಎಂಬ ಅಮೇರಿಕದ ವಿಜ್ಞಾನಿ ವಿವರಿಸಿರುವುದನ್ನು ಪ್ರಸ್ತಾಪಿಸುತ್ತಾರೆ. ಭೂಖಂಡಗಳು ಐದು ಲಕ್ಷ ವರ್ಷಗಳಿಂದ ಚಲಿಸಿರದೇ ವೇದಕಾಲದ ನಂತರದಿಂದ ಭೂಪಲ್ಲಟಗಳಾಗಿ ಸಂಸ್ಕೃತಿಗಳ ಸಂಗಮವಾಗಿರುವ ಸಾಧ್ಯತೆಯನ್ನು ತರ್ಕಿಸಿದ್ದಾರೆ. ಈ ತರ್ಕ ಎಷ್ಟರ ಮಟ್ಟಿಗೆ ಸತ್ಯಕ್ಕೆ ಹತ್ತಿರ ಎಂಬುದನ್ನು ಹೆಚ್ಚಿನ ಮಾಹಿತಿ ಸಂಗ್ರಹಿಸಿ ತಿಳಿದುಕೊಳ್ಳಬೇಕು.

ಇತಿಹಾಸವನ್ನು ಸರಿಯಾಗಿ ಅರಿಯುವುದಕ್ಕೆ ದಾಖಲೆಗಳಲ್ಲದೆ ಆ ದಾಖಲೆಗಳ ಮತ್ತು ಚಾರಿತ್ರಿಕ ಹಿನ್ನೆಲೆಗಳನ್ನು ವಿಮರ್ಶಿಸಬೇಕಾಗುತ್ತದೆ. ದಾಖಲೆಗಳು ಎಷ್ಟರ ಮಟ್ಟಿಗೆ ಸತ್ಯ ಎಷ್ಟರ ಮಟ್ಟಿಗೆ ಉತ್ಪ್ರೇಕ್ಷೆಗಳನ್ನು ಒಳಗೊಂಡಿವೆ ಎಂಬುದನ್ನು ತರ್ಕಿಸಬೇಕಾಗುತ್ತದೆ. ಕಮ್ಯುನಿಷ್ಟರು ಕೊಟ್ಟಷ್ಟೆ ಸಮರ್ಥವಾಗಿ ತಿರುಚಿದ ಇತಿಹಾಸವನ್ನು ಆರೆಸ್ಸೆಸ್ಸಿಗರು ನೀಡಿದ್ದಾರೆ. ಸಾವರ್ಕರ್ ಬಗೆಗಿನ ಉತ್ಪ್ರೇಕ್ಷೆಗಳನ್ನು, ಅಸತ್ಯಗಳನ್ನು ನೋಡಿದ ಮೇಲೆ ಬಲಪಂಥೀಯರನ್ನೂ ನಂಬದೇ ನೇರ್‍ಅವಾಗಿ ಇತಿಹಾಸ ಗ್ರಂಥಗಳ ದಾಖಲೆಗಳ ಮೊರೆ ಹೋಗುವುದು ನನಗೆ ಅನಿವಾರ್ಯವಾಯಿತು. ಇಂತಹ ದಾಖಲೆಗಳನ್ನು ಓದುವಾಗ ಅದನ್ನು ಸರಿಯಾದ ತರ್ಕಗಳಿಂದ ಅರಿಯುವ ಬಗೆಯನ್ನು ಅವಧೇಶ್ವರಿಯಂತಹ ಕಾದಂಬರಿ ನಮಗೆ ಕಲಿಸಿಕೊಡುತ್ತದೆ.