ಶಿರಾಡಿ ಘಾಟಿಯಲ್ಲಿ ಒಂದು ರಾತ್ರಿ ಪ್ರಯಾಣ

ಶಿರಾಡಿ ಘಾಟಿಯಲ್ಲಿ ಒಂದು ರಾತ್ರಿ ಪ್ರಯಾಣ

ಮತ್ತೊಂದು ಬಾರಿ ಶಿರಾಡಿ ಘಾಟಿ ತಾತ್ಕಾಲಿಕವಾಗಿ ದುರಸ್ತಿಗೊಂಡಿದೆ. ಏಪ್ರಿಲ್ ೨೯, ೨೦೦೯ರಂದು ಐರಾವತ ಬಸ್ಸಿನಲ್ಲಿ ಊರಿಗೆ ಹೊರಟೆನು. ರೈಲು ಟಿಕೆಟು ಸಿಗದಿದ್ದ ಕಾರಣ ಬಸ್ಸು ಹಿಡಿಯಬೇಕಾಯೊತು. ೩೦ಕ್ಕೆ ಮತ ಹಾಕಲೆಂದೆ ರಜ ಹಾಕಿದ್ದೆ. ಮೊದಲ ಬಾರಿ ಮತ ಚಲಾಯಿಸುವ ಅನುಭವ. ಬಸ್ಸು ನಿಗದಿತ ಸಮಯಕ್ಕೆ ಹೊರಟು ಜಾಲಹಳ್ಳಿ ಕ್ರಾಸಿಗೆ ಬಂದಾಗ ನನಗೆ ಆಶ್ಚರ್ಯವಾಯಿತು. ಹೆಚ್ಚಾಗಿ ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ವೊಲ್ವೋ ಬಸ್ಸುಗಳು ಈಗ ಮತ್ತೆ ಹಾಸನ ಮುಖಾಂತರ ಮಂಗಳೂರಿಗೆ ಹೋಗುತ್ತಿದೆ. ನಿರ್ವಾಹಕರನ್ನು ವಿಚಾರಿಸಿದಾಗ, ಈಗ ಘಾಟಿ ಸರಿಯಾಗಿರುವುದರಿಂದ ಹಾಸನ ಮಾರ್ಗದಲ್ಲಿ ಸಂಚರಿಸುತ್ತಿದ್ದೆವೆ ಎಂಬ ಉತ್ತರ ನೀಡಿದರು. ನನಗೆ ಬಹಳ ಸಂತಸವಾಯಿತು. ಕಡೆಗೂ ಹೆದ್ದಾರಿ ಇಲಾಖೆಯವರಿಗೆ ಕರುಣೆ ಬಂತಲ್ಲ ಎಂದು ಸಮಾಧಾನವಾಯಿತು.

ಜಾಲಹಳ್ಳಿ-ಕ್ರಾಸ್ ನಿಂದ ನೆಲಮಂಗಲ ಜಂಕ್ಷನ್ ವರೆಗೆ ಷಟ್ಪಥ ಕಾಮಗಾರಿಯನ್ನು ನವಯುಗದವರು ಗುತ್ತಿಗೆ ಪಡೆದುಕೊಂಡಿದ್ದಾರೆ. ಬಹಳ ಬಿರುಸಿನ ಕಾಮಗಾರಿ ನಡೆಯುತ್ತಿದೆ. ಎಲಿವೇಟೆಡ್-ಹೈವೆಯ ಪಿಲ್ಲರ್ಗಳು, ಅಂಡರ್ಪಾಸುಗಳು, ಫೈ-ಓವರ್ಗಳ ಕೆಲಸ ವೇಗವಾಗಿ ನಡೆಯುತ್ತಿದೆ. ರಾತ್ರಿ ಪಾಳಿಯಲ್ಲೂ ಹಲವಾರು ಕಾರ್ಮಿಕರು ದುಡಿಯುತ್ತಿದ್ದಾರೆ. ಅತ್ತ ರಾಹೆ-೪೮ರಲ್ಲಿ ನೆಲಮಂಗಲ್ ಜಂಕ್ಷನ್ ನಿಂದ-ದೇವಿಹಳ್ಳಿ ಜಂಕ್ಷನ್ ವರೆಗೆ ಲ್ಯಾಂಕೋ ಅವರು ಚತುಷ್ಪಥ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದಾರೆ. ಕಾಮಗಾರಿ ಮಾತ್ರ ಬಹಳ ನಿಧಾನವಾಗಿ ನಡೆಯುತ್ತಿದೆ. ಎನ್.ಎಚ್.ಎ.ಐ ನವರು ಯೋಜನೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬಂತೆ ತೋರುತ್ತದೆ. ಒಂದು ಪಥವಾದರೂ ಪೂರ್ಣವಾಗಿರಬಹುದೆಂಬ ನನ್ನ ಊಹೆ ಸುಳ್ಳಾಗಿದೆ. ಬಹುಶಃ ಭೂಸ್ವಾಧಿನ ಪ್ರಕ್ರಿಯೆ ವಿಳಂಬವಾಗುತ್ತಿದೆಯೋ ಅಥವಾ ಇನ್ನೆನು ವಿಘ್ನಗಳಿವೆಯೋ ಯಾರಿಗೊತ್ತು.

ತುಂಬಾ ನಿದ್ದೆ ಬರುತ್ತಿತ್ತು. ಎಚ್ಚರವಾದಾಗ ಬಸ್ಸು ಬಾಳ್ಳುಪೇಟೆಯಲ್ಲಿತ್ತು. ಹಾಸನ ಜಿಲ್ಲೆಯ ಮಲೆನಾಡು ಪ್ರದೇಶ ಬಹುಶಃ ಇಲ್ಲಿಂದಲೇ ಪ್ರಾರಂಭವಾಗುವುದೇನೊ. ಅಯ್ಯಬ್ಬ ಎಷ್ಟೊಂದು ಅದಿರು ಲಾರಿಗಳು(ಮಾರಿಗಳು). ಕಿಲೋಮೀಟರ‍್ಗೆ ಕಡಿಮೆ ಎಂದರೂ ೫ ಅದಿರು ಲಾರಿಗಳು, ೩ ಬುಲ್ಲೆಟ್ ಟ್ಯಾಂಕರ್ಗಳು. ಇವುಗಳಿಗೇನೂ ಆರ್ಥಿಕ ಹಿಂಜರಿತವಿಲ್ಲವೇ? ಈ ಗಣಿ ವ್ಯವಹಾರ ಎಂದು ಅಂತ್ಯ ಕಾಣುವುದೋ? ಶಿರಾಡಿ ಘಾಟಿ ಈಗ ಸುಸ್ಥಿತಿಯಲ್ಲಿದೆ. ಒಂದೇ ಒಂದು ಹೊಂಡ ಇಲ್ಲ. ಪ್ರವಾಸಿಗರು ಈ ರಸ್ತೆಯನ್ನು ಅಂಜಿಕೆಯಿಲ್ಲದೆ ಬಳಸಬಹುದು. ಮಳೆಗಾಲದಲ್ಲಿ ಇದೇ ರೀತಿಯಲ್ಲಿ ಅದಿರು ಲಾರಿಗಳು ಕಾಣಿಸಿಕೊಂಡರೆ, ಶಿರಾಡಿಯಲ್ಲಿ ಮತ್ತೆ ಹೊಂಡ ಬೀಳುವುದು ನಿಶ್ಚಿತ. ಇನ್ನೊಂದು ವಿಷಯ ಎಂದರೆ ಈ ಲಾರಿಗಳು ಶೋ-ಸ್ಟಾಪರ್ಗಳ ಹಾಗೆ. ಕಿಲೋಮೀಟರ್ ದೂರ ಸಾಗಿದರೂ ಇವುಗಳನ್ನು ಹಿಮ್ಮೆಟ್ಟಿಸುವುದು ಬಹಳ ಕಷ್ಟವಾದ ಕೆಲಸ, ಏಕೆಂದರೆ ಸಕಲೇಶಪುರದಿಂದ ಮಂಗಳೂರಿನವರೆಗೆ ನೇರ ರಸ್ತೆಗಳೇ ಕಡಿಮೆ. ಬೆಟ್ಟ-ಗುಡ್ಡಗಳು ಅಧಿಕವಾಗಿ ತುಂಬಿಕೊಂಡಿವೆ. ಇಂತಹ ರಸ್ತೆಯಲ್ಲಿ ಹಿಮ್ಮೆಟ್ಟುವುದು ಸಾಹಸವೇ ಸರಿ. ವರ್ಷಾನುಗಟ್ಟಲೆ ಯಾವುದೇ ದುರಸ್ತಿಯಿಲ್ಲದೆ ಆರೋಗ್ಯವಾಗಿದ್ದ ಶಿರಾಡಿ ಘಾಟಿ, ಇತ್ತೀಚಿಗೆ ಅದಿರು, ಪೆಟ್ರೋಲಿಯಮ್ ಲಾರಿಗಳಿಂದಾಗಿ ಒಂದೇ ಮಳೆಗಾಲಕ್ಕೆ ಹಾಳಾಗುತ್ತಿದೆ. ಇದಕ್ಕೆ ಹೆದ್ದಾರಿ ಇಲಾಖೆಯ ಭ್ರಷ್ಟಾಚಾರವೂ ಕಾರಣ ಎಂದು ಹೇಳಲಾಗಿದೆ. ಇದಕ್ಕಿಂತ ಹೆಚ್ಚಿನ ಅದಿರು ಲಾರಿಗಳನ್ನು ಸಹಿಸುವ ಯಲ್ಲಾಪುರ ಘಾಟಿ, ಕಳೆದ ಮೂರು ವರುಷದ ಮಳೆಗಾಲವನ್ನು ಎದುರಿಸಿ ಯಶಸ್ಸು ಕಂಡಿದೆ. ಇದಕ್ಕೆ ಕಾರಣ ಅದರ ಗುತ್ತಿಗೆ ಪಡೆದ ಎಲ್ ಆಂಡ್ ಟಿ ಕಂಪೆನಿ ಕೂಡ.

ಸಧ್ಯಕ್ಕೆ ಸಕಲೇಶಪುರ-ಬಂಟ್ವಾಳ ರಸ್ತೆ ಸುಸ್ಥಿತಿಯಲ್ಲಿದೆ. ಅತ್ತ ಬಂಟ್ವಾಳ-ಸುರತ್ಕಲ್ ಚತುಷ್ಪಥ ಕಾಮಗಾರಿ ಕುಂಟುತ್ತಾ ನಡೆದಿದೆ. ೪ ವರ್ಷವಾದರೂ ಮುಗಿಯುವ ಯಾವುದೇ ಸೂಚನೆಗಳಿಲ್ಲ. ೩ ಫ್ಲೈ-ಓವರ್, ಒಂದು ಅಂಡರ‍್ಪಾಸ್, ಒಂದು ರೈಲ್-ಓವರ್-ಬ್ರಿಡ್ಜ್ ಇನ್ನೂ ಆರಂಭಿಕ ಹಂತದಲ್ಲಿದೆ. ಇನ್ನೊಂದು ತಿಂಗಳ ನಂತರ ಮಳೆಗಾಲ ಪ್ರಾರಂಭವಾಗುವುದರಿಂದ ಯಾವುದೇ ಕಾಮಗಾರಿಗಳು ನಡೆಸಲು ಸಾಧ್ಯವಿಲ್ಲ. ಬಹುಶ: ನನಗೆ ಬಿಳಿಗಡ್ಡ ಬಂದ ನಂತರವೇ ಮುಗಿಯುವುದೇನೋ? ಇಷ್ಟು ಮಂದಗತಿಯಲ್ಲಿ ಹೆದ್ದಾರಿ ಕಾಮಗಾರಿ ನಡೆಸಬಹುದೆಂದು ತೋರಿಸಿಕೊಟ್ಟ ಇರ್ಕಾನಿಗೆ ನಮೋ ನಮಃ

ಇತ್ತೀಚಿನ ವರದಿಯ ಪ್ರಕಾರ ಮಳೆಗಾಲದ ನಂತರ ಶಿರಾಡಿ ಘಾಟಿ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲಾಗುವುದೆಂದು ಹೆದ್ದಾರಿ ಇಲಾಖೆ ತಿಳಿಸಿದೆ. ಕೇಂದ್ರ ಈ ಯೋಜನೆಗೆ ೧೧೦ ಕೋಟಿ ರುಪಾಯಿ ಬಿಡುಗಡೆ ಮಾಡುವ ಭರವಸೆಯನ್ನಿತ್ತಿದೆ. ಈ ಬಾರಿ ಅನುಭವಿ ಗುತ್ತಿಗೆದಾರರಿಗೆ ಮಾತ್ರ ಅವಕಾಶ ಎಂದೂ ಕೂಡ ಹೇಳಿದೆ

ಉದಯವಾಣಿ ಪತ್ರಿಕೆಯ ವರದಿ ಇಲ್ಲಿ ನೋಡಿ: http://www.udayavani.com/showstory.asp?news=0&contentid=647019&lang=2
-------------------------------------------------------------------------------------------------------------------------------------------------
ಸೂಚನೆ: ನವಯುಗ, ಲ್ಯಾಂಕೋ, ಎಲ್ ಆಂಡ್ ಟಿ, ಇರ್ಕಾನ್ ಇವು ನಿರ್ಮಾಣ ಕಂಪೆನಿಗಳ ಹೆಸರುಗಳು

Rating
No votes yet

Comments