ಮುಂಬೈ ಮೇರಿ ಜಾನ್- ಒಳ್ಳೆಯ ಸಿನಿಮ - ಸಿಕ್ಕರ ನೋಡ್ರಿ

ಮುಂಬೈ ಮೇರಿ ಜಾನ್- ಒಳ್ಳೆಯ ಸಿನಿಮ - ಸಿಕ್ಕರ ನೋಡ್ರಿ

ಈ ಸಿನಿಮಾ ಈಗೀಗ ಟೀವಿಯಲ್ಲಿ ಬರುತ್ತ ಇದೆ. ಮೊನ್ನೆ ಕಲರ್ಸ್ ಚಾನೆಲ್ಲಿನಲ್ಲೋ ಮತ್ತೆಲ್ಲೋ ಬರುತ್ತ ಇತ್ತು. ನೋಡಿದೆ. ಮತ್ತೆ ಬಂದೀತು . ಗಮನಕ್ಕೆ ಬಂದರೆ ನೋಡಿ.

ಮುಂಬೈಯಲ್ಲಿ ೨೦೦೬ ಜೂಲೈ ೧೧ ರಂದು ನಡೆದ ಸರಣಿಸ್ಫೋಟದ ಹಿನ್ನೆಲೆ ಹೊಂದಿದೆ. ಆಗ ಟ್ರೇನುಗಳಲ್ಲಿಟ್ಟಿದ್ದ ಬಾಂಬುಗಳು ಸ್ಫೋಟಿಸಿ ಎರಡುನೂರಕ್ಕೂ ಹೆಚ್ಚು ಜನ ಸತ್ತಿದ್ದರು. ಎಷ್ಟೋ ಜನ ಕೈಕಾಲು ಕಳೆದುಕೊಂಡರು.

ಸರಳ ಗೆರೆಯ ಹಾಗಿನ ಕತೆ ಇಲ್ಲಿಲ್ಲ . ಆದರೆ ಕೊಲಾಜ್ ಮಾದರಿಯಲ್ಲಿ ಅನೇಕ ಸಂಗತಿಗಳನ್ನು ಚೆನ್ನಾಗಿ ಚಿತ್ರಿಸಿದ್ದಾರೆ ನಿರ್ದೇಶಕರು. ಮುಂಬೈನ ಜನತೆಯ ಪ್ರತಿಕ್ರಿಯೆ , ಅವರ ಮೇಲಾದ ಪರಿಣಾಮ ಇತ್ಯಾದಿಗಳನ್ನು ನೈಜವಾಗಿ ತೋರಿದ್ದಾರೆ . ಎಲ್ಲ ಮಗ್ಗುಲುಗಳನ್ನು ಸಹಜವಾಗಿ ಎನ್ನುವಂತೆ , ಬಿಡಿಬಿಡಿ ಎಂದು ತೋರದಂತೆ ಪ್ರಸ್ತುತಪಡಿಸಿದ್ದಾರೆ .

ಜನ ಹೆದರಿದ್ದಾರೆ . ಔಷಧಿಗಳ ಮೊರೆ ಹೋಗಬೇಕಾಗಿದೆ. ಹೆದರಿಕೆಯ ಬಗ್ಗೆ ಚಿಂತಿಸಬೇಕಿಲ್ಲ - ಹೆದರುವುದು ಮಾನವಸಹಜ ಅಂತ ಸೈಕಾಲಜಿಸ್ಟ್ ಹೇಳುವಳು .
ಯಾರೋ ಸ್ಕೂಟರ್ ಅನ್ನು ಬೀದಿಯಲ್ಲಿ ನಿಲ್ಲಿಸಿ ಅವಸರದಿಂದ ಆಟೋ ಹತ್ತಿ ಹೋಗುವರು. ಜನ ಪೋಲೀಸಿಗೆ ಹೇಳಿ , ಪೋಲೀಸು ಪಡೆ ಬಂದು ಸ್ಕೂಟರ್ ಅನ್ನೆಲ್ಲ ಬಿಚ್ಚಿ ನೋಡುವಾಗ ಅದರ ಒಡೆಯ ಬಂದು "ಅಯ್ಯೋ, ನನ್ನ ಸ್ಕೂಟರ್ ಕೆಟ್ಟಿತ್ತು; ಮೆಕ್ಯಾನಿಕ್ ಕರೆತರಲು ಹೋಗಿದ್ದೆ" ಅಂತ ಗೋಳಾಡುವನು .
ಯಾರೋ ಒಬ್ಬ ಮುಸ್ಲಿಂ ಮುದುಕ ಸೈಕಲ್ ಗೆ ಒಂದು ಚೀಲ ಹಾಕಿಕೊಂಡು ಬರುವಾಗ ಇಬ್ಬರು ಮೂವರು ಅವನನ್ನ ತಡೆದು ಏನಿದೆ ಚೀಲದಲ್ಲಿ ? ಬಾಂಬಾ ? ಅಂತ ಹುಡುಕುವರು . ಆ ಹೊತ್ತಿಗೆ ಬೀಟ್ ಮೇಲಿದ್ದ ಪೋಲೀಸು ಬಂದು "ಏನು ನಡೀತಿದೆ ಇಲ್ಲಿ?" ಅಂದಾಗ "ಏನೂ ಇಲ್ಲ ; ಚೆಕ್ ಮಾಡ್ತಾ ಇದ್ದೀವಿ" ಅನ್ನುವರು . "ಅದೆಲ್ಲ ನಮ್ಮ ಕೆಲ್ಸ" ಅಂತ ಪೋಲೀಸಪ್ಪ ಅಂದಾಗ , "ಅಯ್ಯೋ ನೀವು ಚೆಕ್ ಮಾಡ್ತಾ ಇದ್ರೆ ಬಾಂಬ್ ಸ್ಫೋಟ ಯಾಕೆ ಆಗ್ತಾ ಇತ್ತು ? ಲಂಚ ತಕೊಂಡು ಇದ್ದೀರ ಅಷ್ಟೇ " ಅಂತ ಅಸಹನೆ ತೋರುವರು.
ಈ ನಡುವೆ ಮಾಲ್ ಸಂಸ್ಕೃತಿಯಿಂದಾಗಿ ಹೆಂಡರು ಮಕ್ಕಳ ಮುಂದೆ ಅವಮಾನಕ್ಕೀಡಾದ ಮನುಷ್ಯ ಮಾಲ್ ಗಳ ಮೇಲೆ ಸೇಡು ತೀರಿಸಿಕೊಳ್ಳಲು ಮಾಲ್ ಗಳಲ್ಲಿ ಬಾಂಬ್ ಇದೆ ಅಂತ ಫೋನ್ ಮಾಡುವನು . ಮೊದಲಿಗೆ ಸಂತಸ ಉಂಟಾಗುವುದಾದರೂ ಗಾಬರಿಯಿಂದಾದ ನೂಕುನುಗ್ಗಲಿನಲ್ಲಿ ಹಿರಿಯನಾಗರಿಕನೊಬ್ಬನಿಗೆ ಹೃದಯಾಘಾತ ಆದದ್ದನ್ನು ನೋಡಿ ತನ್ನ ತಪ್ಪು ಮನಗಾಣುವನು.
ಚಹಾ ಅಂಗಡಿಯಲ್ಲಿ ಆಗಾಗ ನೋಡುವ ಮುಸ್ಲಿಂ ಯುವಕ ಬಾಂಬ್ ಸ್ಫೋಟ ನಡೆದ ದಿನದಿಂದ ಕಾಣುತ್ತ ಇಲ್ಲ ; ಏಕೆ ? ಅಂತ ಮೂವರು ಯುವಕರು ಅವನ ಮನೆಗೆ ಹೋಗಿ ಹುಡುಕುವರು. ಕೊನೆಗೆ ತಮ್ಮ ಸಂಶಯ ತಪ್ಪು ; ಅವನು ಹಿಂದೂಮುಸ್ಲಿಮರಿಬ್ಬರೂ ನಡೆದುಕೊಳ್ಳುವ ಶಿರಡಿಯ ಸಾಯಿಬಾಬಾ ದರುಶನಕ್ಕೆ ಹೋಗಿದ್ದುದು ಗೊತ್ತಾಗುವದು.
ಈ ನಡುವೆ ಟಿವಿ ಮಾಧ್ಯಮಗಳು ಹೇಗೆ ನಡೆದುಕೊಳ್ಳುತ್ತಾ ಇವೆ ? ಟಿ ಆರ್ ಪಿ ಹೆಚ್ಚಿಸಿಕೊಳ್ಳ ಬಯಸುವ ಒಂದು ಚಾನೆಲ್ ತನ್ನ ವರದಿಗಾರಿಯ ಮದುವೆ ಗಂಡೇ ಬಾಂಬ್ ಸ್ಫೋಟದಲ್ಲಿ ಕಾಣೆಯಾಗಿರುವ ವಿಷಯವನ್ನು ಬಣ್ಣಬಣ್ಣವಾಗಿಸಿ ವರದಿ ಮಾಡಬಯಸುತ್ತದೆ . ವೈಯುಕ್ತಿಕವಾಗಿ ನೋವನ್ನನುಭವಿಸುತ್ತಿರುವ ಆ ವರದಿಗಾರ್ತಿಯೂ ಇದರಿಂದ ಹೆಚ್ಚು ನೊಂದರೂ ಸಹಕರಿಸುವಳು.
ಈ ನಡುವೆ ಒಬ್ಬ ಪೋಲೀಸಪ್ಪ ರಿಟಾಯರ್ ಆಗಲಿರುವನು. ಅವನ ಕಣ್ಣಲ್ಲಿ ಪೋಲೀಸುವ್ಯವಸ್ಥೆ , ಮುಂಬೈ ನಗರ ಮತ್ತು ಜನಜೀವನ ಇವುಗಳನ್ನೂ ನೋಡಬಹುದು.
ಈ ಪೋಲೀಸಪ್ಪನ ಪಾತ್ರದಲ್ಲಿ ಸಾಮಾನ್ಯವಾಗಿ ಹಾಸ್ಯಪಾತ್ರದಲ್ಲಿ ಅದ್ಭುತ ಮನರಂಜನೆ ನೀಡುವ ಪರೇಶ್ ರಾವಲ್ ಗಂಭೀರವಾಗಿ ಮನತಟ್ಟುವಂತೆ ನಟಿಸಿದ್ದಾರೆ .

Rating
No votes yet

Comments