ಉತ್ತರ ಹುಡುಕ ಹೊರಟವರಿಂದ ಬೇಜವಾಬ್ದಾರಿತನದ ಪ್ರದರ್ಶನ!!!

ಉತ್ತರ ಹುಡುಕ ಹೊರಟವರಿಂದ ಬೇಜವಾಬ್ದಾರಿತನದ ಪ್ರದರ್ಶನ!!!

ಉಡುಪಿಯಲ್ಲಿ ಸುಗುಣಮಾಲಾ ಧಾರ್ಮಿಕ ಪತ್ರಿಕೆಯ ರಜತ ಮಹೋತ್ಸವ ಸಮಾರಂಭಗಳು ಮೇ ಒಂದನೇ ದಿನಾಂಕದಿಂದ ಮೂರು ದಿನ ನಡೆದವು.

ಕೊನೆಯ ದಿನ ಅಂದರೆ ರವಿವಾರ ಮೇ ಮೂರರಂದು ಶ್ರೀಕೃಷ್ಣ ಮಠದ ಆವರಣದಲ್ಲಿರುವ ರಾಜಾಂಗಣದಲ್ಲಿ ಸಾಯಂಕಾಲ ನಾಲ್ಕೂವರೆ ಘಂಟೆಗೆ "ಪ್ರಸಕ್ತ ರಾಜಕೀಯದ ದುಸ್ಥಿತಿಗೆ ಪರಿಹಾರವೇನು?" ಎನ್ನುವ ವಿಷಯದ ಮೇಲೆ ವಿಚಾರ ಮಂಡನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ದಿನ ಪತ್ರಿಕೆಗಳಲ್ಲಿ ಪ್ರಕಟವಾದ ವಿವರಗಳ ಪ್ರಕಾರ, ಶ್ರೀಮತಿ ಸಂಧ್ಯಾ ಎಸ್. ಪೈಯವರ ಅಧ್ಯಕ್ಷತೆಯ ಆ ಸಭೆಯಲ್ಲಿ ರವಿ ಬೆಳಗರೆ, ವಿಶ್ವೇಶ್ವರ ಭಟ್, ಮಹೇಶ್ ಜೋಷಿ, ಸುಧೀಂದ್ರ, ಗೋಕುಲದಾಸ್ ಪೈ ಹಾಗೂ ಮಾಸ್ಟರ್ ಹಿರಣ್ಣಯ್ಯ ಇವರು ಹಾಜರಿರಬೇಕಿತ್ತು.

ನಾನು ಮತ್ತು ನನ್ನ ತಮ್ಮ , ನಾಲ್ಕು ಘಂಟೆಗೆ ಸರಿಯಾಗಿ ರಾಜಾಂಗಣದಲ್ಲಿ ಹಾಜರಿದ್ದೆವು. ನಮ್ಮಿಬ್ಬರಿಗೂ ರವಿ ಬೆಳಗರೆ ಮತ್ತು ವಿಶ್ವೇಶ್ವರ ಭಟ್ ಇವರ ಮಾತುಗಳನ್ನು ಕೇಳುವ ಮತ್ತು ಮಾಸ್ಟರ್ ಹಿರಣ್ಣಯ್ಯನವರ "ನಡುಬೀದಿ ನಾರಾಯಣ" ನಾಟಕವನ್ನು ವೀಕ್ಷಿಸುವ ಇಚ್ಚೆ ಇತ್ತು.

ನಾನು ನನ್ನ ತಮ್ಮನಿಗೆ ರವಿ ಬೆಳಗರೆ ಅಂದು ಮಂಡ್ಯದಲ್ಲಿ "ಈ ಟಿವಿಯ ಎಂದೂ ಮರೆಯದ ಹಾಡು" ಕಾರ್ಯಕ್ರಮದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿರುವುದರಿಂದ ಉಡುಪಿಗೆ ಬರುವುದು ಅನುಮಾನ ಅಂದೆ. ಅಲ್ಲದೆ ರವಿ ಬಾರದೇ ಇದ್ದರೆ ವಿಶ್ವೇಶ್ವರ ಭಟ್ ಕೂಡ ಬಾರದೇ ಉಳಿಯಬಹುದು ಎಂದೆ.

ಆದರೆ ಕಾರ್ಯಕ್ರಮದ ನಿರೂಪಕರು ನಾಲ್ಕೂಕಾಲು ಘಂಟೆಗೊಮ್ಮೆ ಮತ್ತು ನಾಲ್ಕೂವರೆಗೊಮ್ಮೆ, ಈ ಎಲ್ಲಾ ಅತಿಥಿಗಳ ಹೆಸರುಗಳನ್ನು ಒತ್ತಿ ಒತ್ತಿ ಸಾರಿದರು.

ನಾಲ್ಕೂ ಮುಕ್ಕಾಲಕ್ಕೆ ಕಾರ್ಯಕ್ರಮ ಶುರು ಆಯ್ತು.

ರವಿ ಬೆಳಗರೆ, ವಿಶ್ವೇಶ್ವರ ಭಟ್ ಮತ್ತು ಮಹೇಶ್ ಜೋಷಿ ಎಲ್ಲೂ ಕಂಡು ಬರಲಿಲ್ಲ. ಕಾರ್ಯಕ್ರಮ ಮುಂದುವರೆಯಿತು. ಕೊನೆಗೆ ಮುಗಿಯಿತು ಕೂಡ.

ಮಾಸ್ಟರ್ ಹಿರಣ್ಣಯ್ಯ ಮತ್ತು ಸುಧೀಂದ್ರ ಅರ್ಥಗರ್ಭಿತವಾಗಿ ಮಾತನಾಡಿದ್ದರು.

ಸಮಯೋಚಿತ ಮತ್ತು ಮಾರ್ಮಿಕವಾಗಿ ಮಾತನಾಡಿದ ಶ್ರೀಮತಿ ಸಂಧ್ಯಾ ಪೈಯವರ ಮಾತುಗಳನ್ನು ಕೇಳಿದಾಗ, ಇದುವರೆಗೆ ಆಕೆಯನ್ನು ತೀರಾ ವ್ಯಾಪಾರೀ ಮನೋವೃತ್ತಿಯ ಹೆಂಗಸಷ್ಟೆ ಎಂದು ತಿಳಿದಿದ್ದ ನನ್ನ ಅಭಿಪ್ರಾಯಗಳು ಸ್ವಲ್ಪ ಬದಲಾದವು.

ಆದರೆ, ನಾನು ಕಾರ್ಯಕ್ರಮದ ಉದ್ದಕ್ಕೂ, ಗೈರು ಹಾಜರಾದ ಆ ಮೂವರು ಅಂದಿನ ಸಭೆಗೆ ಯಾಕೆ ಬರಲಿಲ್ಲ ಅನ್ನುವುದನ್ನು ಸಭೆಯಲ್ಲಿ ಭಾಗವಹಿಸಿದವರ ಗಮನಕ್ಕೆ ತರುತ್ತಾರೋ ಅಥವಾ ಅವರ ಗೈರುಹಾಜರಿಗೆ ಸಭಿಕರ ಕ್ಷಮೆ ಕೇಳುವ ನೈತಿಯ ಜವಾಬ್ದಾರಿಯ ಪ್ರದರ್ಶನವನ್ನು ಯಾರಾದರೂ ತೊರಿಸಿಯಾರೇ ಎಂದು ಕಾಯುತ್ತಲೇ ಇದ್ದೆ.

ಆದರೆ, ಹಾಗಾಗಲೇ ಇಲ್ಲ.

ರವಿ ಬೆಳಗರೆ ಒಪ್ಪಿಕೊಂಡಿದ್ದು ನಿಜವೇ? ಎರಡೂ ಕಡೆ ಒಂದೇ ಸಮಯದಲ್ಲಿ ಹಾಜರಿರಲು ಆತ ಹೇಗೆ ಒಪ್ಪಿಕೊಂಡಿರಬಹುದು? ಅಲ್ಲದೇ, ಆತ ಮತ್ತೀರ್ವರು ತಮಗೆ ಬರಲಾಗುತ್ತಿಲ್ಲ ಎನ್ನುವುದನ್ನು ಕಾರ್ಯಕ್ರಮ ಶುರು ಆಗುವ ತನಕವೂ ನಿಯೋಜಕರಿಗೆ ತಿಳಿಸದೇ ಇರಲು ಸಾಧ್ಯವೇ?

ಯಾವುದೇ ಸಭೆಯಲ್ಲಿ ಭಾಗವಹಿಸಬೇಕಾದವರು, ಬಾರದೇ ಇದ್ದಾಗ, ಸಭಿಕರಿಗೆ ಅವರ ಗೈರುಹಾಜರಿಯ ಕಾರಣವನ್ನು ತಿಳಿಯಪಡಿಸಿ ಕ್ಷಮೆ ಕೇಳುವ ನೈತಿಕ ಜವಾಬ್ದಾರಿ ಕಾರ್ಯಕ್ರಮ ಹಮ್ಮಿಕೊಂಡವರಿಗೆ ಇರುವುದಿಲ್ಲವೇ?

"ಪ್ರಸಕ್ತ ರಾಜಕೀಯ ದುಸ್ಥಿತಿಗೆ ಪರಿಹಾರವೇನು?" ಎನ್ನುವ ಪ್ರಶ್ನೆಗೆ ಅಂದು ಆ ಕಾರ್ಯಕ್ರಮ ಹಮ್ಮಿಕೊಂಡವರ "ಆ ಸಾಮಾಜಿಕ ಬೇಜವಾಬ್ದಾರಿತನದ ಪ್ರದರ್ಶನ" ದಿಂದ ನನಗೆ ಉತ್ತರ ಸಿಕ್ಕಿತ್ತು.

ಪ್ರತಿಯೊಬ್ಬ ಪ್ರಜೆಯಲ್ಲೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿದರೆ ಮಾತ್ರ ಈ ದೇಶ ಉದ್ಧಾರ ಆಗಬಹುದೇನೋ.

ನೀವೆನಂತೀರಿ ಓದುಗರೇ?

Rating
No votes yet

Comments