ಹಿಂಗೂ ಮಸ್ತ್ ಜಗಳಗಳು !!!

ಹಿಂಗೂ ಮಸ್ತ್ ಜಗಳಗಳು !!!

ಫ಼ೋರಮ್‍ನ ಮೆಕ್ ಡೊನಾಲ್ಡ್ಸ್ ನಲ್ಲಿ ತಿಂಡಿ ಪಡೆಯಲು ಸರದಿಯಲ್ಲಿ ನಿಲ್ಲಬೇಕಿತ್ತು. ಸ್ನೇಹಿತರೊಡನೆ ಸಾಲಿನ ಕಡೆ ಹೋಗುತ್ತಿದ್ದಂತೆ ತಡೆದ ಕಾವಲಿನ ಯುವಕ " Sir, Only one for a group in the queue" ಎಂದ. ನಾನು ಬೇಕೆಂತಲೆ ’ಹಾಂ ?’ ಎಂದೆ. ಮತ್ತೊಮ್ಮೆ "Sir, Only one for a group in the queue " ಎಂದ.

"ನಂಗೆ ಹಿಂದಿ ಅರ್ಥ ಆಗಲ್ಲ ಕಣಯ್ಯ" ಎಂದೆ.

"It is not Hindi it is English" ಎಂದ.

"ಹೌದಾ. ವೆರಿಗುಡ್ ವೆರಿಗುಡ್. ಥ್ಯಾಂಕ್ ಯು" ಅಂದು "ಬರ್ರಲೆ" ಅಂತ ಸ್ನೇಹಿತರನ್ನು ಕರೆದೆ.

"ಸರ್. ಸಾಲಿನಲ್ಲಿ ಒಬ್ಬರು ಮಾತ್ರ ಹೋಗಬೇಕು. ಎಲ್ಲಾರ ಆರ್ಡರು ಒಬ್ಬರೆ ಕೊಡಬೇಕು" ಅಂದ.

"ಹಂಗೆ ಚಂದಾಗಿ ಮಾತಾಡಪ್ಪ. ಕನ್ನಡ ಮಾತಾಡಿದ್ರೆ ನಾಲಿಗೆ ಸವ್ದು ಹೋಗಲ್ಲ"

"ಬೇರೆ ಕಡೆಯಿಂದ ಬಂದೊರಿಗೆ ಅರ್ಥ ಆಗಲ್ಲ ಸರ್"

"ಅವರಿಗೂ ಕನ್ನಡದಲ್ಲೇ ಹೇಳು ನಿದಾನಕ್ಕೆ ಕಲಿತು ಅರ್ಥ ಮಾಡ್ಕೊತಾರೆ"

"ಕನ್ನಡದಲ್ಲಿ ಮಾತಾಡಿದ್ರೆ ಬಾಸ್ ಬೈತಾರೆ."

"ಕರ್ಕೊಂಬಾ ಯಾವನವ್ನು ಕಾಲಗಿನ್ವು ತಗೊಂಡು ಹೊಡಿತಿನಿ. ಈ ಥರ ಆರ್ಡರ್ ಮಾಡಿದ್ದಾರೆ ಅಂತ ಗೊತ್ತಾದ್ರೆ ನಿನ್ ಬಾಸು ನಿನ್ ಅಂಗಡಿ ಗ್ಲಾಸು ಪೀಸ್ ಪೀಸ್ ಆಗಿ ರಸ್ತೆ ಮೇಲೆ ಬಿದ್ದಿರ್ತಿರಾ."

"ಸಾರಿ ಸರ್".

*******

ರೈಲ್ವೆ ಮಂತ್ರಿ ಲಲ್ಲೂ ಯಾದವ್ ಹಿಂದಿನ ವರ್ಷ ಬಂಪರ್ ಲಾಭ ಬಂದದ್ದನ್ನು ಘೋಷಿಸಿ ಪ್ಯಾಸೆಂಜರ್ ರೇಲ್ವೇ ದರವನ್ನು ಕಡಿಮೆ ಮಾಡಿದ್ದರು. ಮೈಸೂರಿನಿಂದ ಬೆಂಗಳೂರಿಗೆ ಓಡುವ ಎಕ್ಸ್‍ಪ್ರೆಸ್ ದರವನ್ನು ಎರಡು ರೂಪಾಯಿ ಕಡಿಮೆ ಮಾಡಿದ್ದರು. ಮಯಿಲಾಡುತುರೈ ಎಕ್ಸ್‍ಪ್ರೆಸ್‍ ಟಿಕೆಟ್‍ಗಾಗಿ ಸಾಲಿನಲ್ಲಿ ನಿಂತಿದ್ದೆ. ನನ್ನ ಸರದಿ ಬಂದೊಡನೆ ಕಿಂಡಿಯೊಳಗೆ ಹಣ ತೂರಿಸಿ "ಬೆಂಗಳೂರು" ಅಂದೆ. "ಚಿಲ್ಲರೆ ಕೊಡಿ" ಅಂದ.

"ಚಿಲ್ಲರೆ ಇಲ್ಲ ಸರ್" ಅಂದೆ.

"ಚಿಲ್ಲರೆ ಬೇಕು. ಇಲ್ಲ ಟಿಕೆಟ್ ಕೊಡ್ಲಿಕ್ಕೆ ಆಗಲ್ಲ" ಎಂದು ಜಬರಿಸಿದ.

"ಚಿಲ್ಲರೆ ನೀವೆ ಇಟ್ಟುಕೊಳ್ಳಿ ಪರ್ವಾಗಿಲ್ಲ. ಹೊತ್ತಾಗುತ್ತೆ ಟಿಕೆಟ್ ಕೊಡಿ" ಅಂದರೂ ಕೇಳದೆ "ಯಾವನಾದ್ರು ಇನ್ಸ್‍ಪೆಕ್ಶನ್ ಗೆ ಬಂದ್ರೆ ಕಷ್ಟ ಆಗುತ್ತೆ. ಸುಮ್ಮನೆ ಚಿಲ್ಲರೆ ಕೊಡಿ" ಅಂತ ಜೋರಾಗಿಯೇ ಹೇಳಿದ. ಅವನಿಗೆ ಇನ್ಸ್‍ಪೆಕ್ಷನ್ ಗೆ ಬಂದಾಗ ಸಿಕ್ಕಿಹಾಕೊಳ್ಳುವ ಭಯವಿತ್ತೇ ಹೊರತು ಪರರ ದುಡ್ಡು ತಿನ್ನಬಾರದೆಂಬ ಆದರ್ಶವೇನೂ ಇರಲಿಲ್ಲ.

"ಚಿಲ್ಲರೆ ಕೊಡೊದು ನಿಮ್ಮ ಕರ್ತವ್ಯ. ಹಿಂಗೆಲ್ಲಾ ರೀಸನ್ಸ್ ಕೊಟ್ಟು ಟಿಕೆಟ್ ಕೊಡಲ್ಲ ಅನ್ನೊ ಹಾಗಿಲ್ಲ. ಅದು ಹೆಂಗೆ ಕ್ಯೂ ಮುಂದೆ ಹೋಗುತ್ತೊ ನಾನೂ ನೋಡ್ತಿನಿ" ಅಂತ ದನಿ ಎತ್ತರಿಸಿ ಅಲ್ಲೇ ನಿಂತೆ.

ಪಕ್ಕದಲ್ಲಿ ನಿಂತಿದ್ದ ಪೋಲಿಸ್ " ಸರ್ ಹೋಗಿ ಚಿಲ್ಲರೆ ತಂದುಬಿಡಿ. ಸುಮ್ಮನೆ ಅವ್ರಿಗೆ ತೊಂದ್ರೆ ಆಗುತ್ತೆ. ನೀವು ಮತ್ತೆ ಕ್ಯೂನಲ್ಲಿ ಬರ್ಬೇಕಿಲ್ಲ ಹಂಗೆ ಬಿಡ್ತಿನಿ. ಹೋಗಿ ಚಿಲ್ರೆ ತನ್ನಿ" ಅಂದ. ಪ್ಲಾಟ್‍ಫ಼ಾರ್ಮ್ ಎಲ್ಲಾ ಅಡ್ಡಾಡಿ ಹದಿನೆಂಟು ರೂಪಾಯಿ ಖರ್ಚು ಮಾಡಿ ಚಿಲ್ಲರೆ ಸಂಪಾದಿಸಿದ್ದಾಯಿತು.

ಅಂದಿನಿಂದ ಒಂದು ಎರಡು ರೂಪಾಯಿಯ ನಾಣ್ಯಗಳನ್ನು ಸಂಗ್ರಹಿಸತೊಡಗಿದೆ. ಹದಿನೈದು ದಿನಗಳಲ್ಲಿ ಮತ್ತೆ ಬೆಂಗಳೂರಿಗೆ ಹೋಗಬೇಕಾಗಿ ಬಂತು. ಅದೇ ಕಿಂಡಿಯ ಬಳಿ ಹೊಗಿ ನಲವತ್ತ ಮೂರು ಒಂದು ರೂಪಾಯಿ ನಾಣ್ಯಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿಕೊಟ್ಟು "ಒಂದು ಬೆಂಗಳೂರು" ಎಂದೆ.

"ಏನ್ರಿ ಇದು ?"

"ನಲವತ್ಮೂರು ರೂಪಾಯಿ ಇದೆ. ಬೆಂಗಳೂರಿಗೆ ಟಿಕೆಟ್ ಕೊಡಿ. ಮೈಲಾಡುತುರೈ ಎಕ್ಸ್‍ಪ್ರೆಸ್"ಎಂದೆ.

"ಕಾಯಿನ್ ಗಳನ್ನು ಕೊಟ್ರೆ ಹೆಂಗೆ ನೋಟು ಕೊಡ್ರಿ."

"ನೋಟು ಕೊಟ್ರೆ ಚಿಲ್ರೆ ಅಂತಿರಿ. ಚಿಲ್ರೆ ಕೊಟ್ರೆ ನೋಟು ಅಂತಿರಿ. ಈಗ ಟಿಕೆಟ್ ಕೊಡಿ"

"ತಗಳಕ್ಕೆ ಆಗಲ್ರಿ ನೋಟು ಕೊಡ್ರಿ"

"ಯಾಕೆ ತಗಳಕೆ ಆಗಲ್ಲ? ಇದೇ ಡಿನಾಮಿನೆಶನ್ ನಲ್ಲಿ ಹಣ ಕೊಡಬೇಕು ಅಂತ ರೂಲ್ಸ್ ಏನು ಇಲ್ಲ. ನೋಟು ಇಲ್ಲ. ಇರೊದೆ ಇದು. ಪೂರ್ತಿ ಹಣ ಕೊಟ್ಟಿದ್ದಿನಿ. ಇಲ್ಲ ಅನ್ನೋಕೆ ಬರಲ್ಲ. ಟಿಕೆಟ್ ಕೊಡಬೇಕು ಅಷ್ಟೆ."

ಆತ ಹಣ ಎಣಿಸತೊಡಗಿದ. ಹೆಚ್ಚು ಹೊತ್ತು ತೆಗೆದುಕೊಳ್ಳುತ್ತಿರುವುದನ್ನು ನೋಡಿ ಒಂದಿಬ್ಬರು ಅಸಹನೆಯಿಂದ ದನಿ ಎತ್ತತೊಡಗಿದರು. "ಎಷ್ಟು ಟೈಮ್‍ರೀ ಅದು?"

ಕಿಂಡಿಯೊಳಗಿನವನು "ಕಾಯಿನ್ ಕೊಟ್ಟಿದ್ದಾರೆ ನೋಡಿ" ಅಂದ.

"ರೀ ಸ್ವಾಮಿ. ನೋಟು ಕೊಡಕಾಗಲ್ವೇನ್ರಿ?"

"ಹೋದ ಸಾರಿ ನೋಟು ಕೊಟ್ಟಾಗ ಚಿಲ್ರೆ ಬೇಕು ಅಂದಿದ್ರು. ಅದಕ್ಕೆ ಕೊಟ್ಟಿದ್ದಿನಿ" ಅಂದೆ.

"ಅದಕ್ಕೆ ಒಂದು ಎರಡು ರೂಪಾಯಿ ಕೊಡಬೇಕಾ? ಹತ್ರವು ನಾಕು ಒನ್ದರದು ಮೂರು ಕೊಡ್ಲಿಕ್ಕಾಗಲ್ವಾ?"

"ಅದು ನನ್ನಿಷ್ಟ. ಇಂಥಿಂತದೇ ನೋಟು ಕೊಡಬೇಕು ಅಂತ ಎನಾದ್ರು ಕಾನೂನು ಇದೆಯಾ? ಇದ್ರೆ ಬೋರ್ಡ್‍ನಲ್ಲಿ ಹಾಕಲಿ." ಎಂದು ಸಲ್ಪ ಜೋರಾಗಿಯೇ ಮಾತು ತಿರುಗಿಸಿದೆ. ಸಾಲಿನಲ್ಲಿ ಕಾಯುತ್ತಿದ್ದ ಸಾಕಷ್ಟು ಜನರಿದ್ದರು. ಒಳಗೊಳಗೆ ಅಳುಕಿದ್ದರೂ ಹೇಗೋ ಭಂಡ ಧೈರ್ಯ ತೆಗೆದುಕೊಂಡು ಮಾತಾಡಿದ್ದೆ. ಸಧ್ಯ ನನ್ನ ಮಾತಿಗೆ ಎದುರುತ್ತರ ಬರಲಿಲ್ಲ.

ಎಣಿಸುವುದನ್ನು ಅರ್ಧಕ್ಕೆ ನಿಲ್ಲಿಸಿದ ಕಿಂಡಿಯವನು ಟಿಕೆಟ್ ಹರಿದು ಕೊಟ್ಟು "ತಗೊಳಪ್ಪ. ದೊಡ್ಡ ನಮಸ್ಕಾರ" ಅಂದ.

***********

ಇಲ್ಲಿಯವರೆಗೆ ನಮ್ಮ ನೆರೆಯವರೊಡನೆ ನಡೆದ ಏಕೈಕ ಜಗಳ ಇದು. ಪಕ್ಕದ ಮನೆಯಾಕೆಗೆ ಎಲ್ಲರೊಡನೆಯೂ ಕಾಲು ಕೆರೆದು ಜಗಳ ತೆಗೆಯುವ ಹವ್ಯಾಸವಿತ್ತು. ಆಕೆಯ ಗುಣಸ್ವಭಾವಗಳಂತೂ ಥೇಟ್ ರಾಮಾಯಣದ ಶೂರ್ಪನಖಿಯನ್ನು ಹೋಲುತ್ತಿದ್ದವು. ಹತ್ತನೇ ಇಯತ್ತೆಯಲ್ಲಿದ್ದೆ. ಯಾಕೋ ಒದಿಕೊಳ್ಳುತ್ತಾ ಕೂತಿದ್ದೆ. ಶೂರ್ಪಣಖಿಯ ಮನೆಯಿಂದ ಜೋರಾದ ಪಾಪ್ ಗಾಯನ ಕೇಳತೊಡಗಿತು. ನನ್ನ ಓದಿಗೇನೂ ಭಂಗ ಎನ್ನಿಸಲಿಲ್ಲ. ಭದ್ರವಾದ ಏಕಾಗ್ರತೆ ಮತ್ತು ತೀಕ್ಷ್ಣ ನೆನಪಿನ ಶಕ್ತಿ ನನಗೆ ದೇವರು ಕೊಟ್ಟ ವರಗಳು. ಈಗಲೂ ನನಗೆ ಪುಸ್ತಕ ಒದುವಾಗ ಟಿಪ್ಪಣಿ ಬರೆದಿಟ್ಟುಕೊಳ್ಳುವ ಬುಕ್‍ಮಾರ್ಕ್ ಇಟ್ಟುಕೊಳ್ಳುವ ಅಭ್ಯಾಸ ಇಲ್ಲ. ಕೆಲಸಕ್ಕೆ ಸೇರಿದಾಗಿನಿಂದ ತಲೆ ಉಪಯೋಗಿಸಿಲ್ಲವಾಗಿ ನೆನಪಿನ ಶಕ್ತಿಯ ತೀಕ್ಷ್ಣತೆ ಕಡಿಮೆಯಾಗಿದೆ. ಗಾಯನದ ಮಧ್ಯೆಯೂ ನನ್ನ ಓದು ಆತಂಕವಿಲ್ಲದೆ ಸಾಗಿತ್ತು. ನಡುವೆ ನೀರು ಕುಡಿಯಲೆಂದು ಎದ್ದಾಗ ಅಮ್ಮನ ಮತ್ತು ಶೂರ್ಪಣಖಿಯ ದನಿ ಕೇಳಿತು. ಹೋಗಿ ನೋಡಿದಾಗ ಅಮ್ಮ ಕೇಳಿಕೊಳ್ಳುತ್ತಿದ್ದರು "ನನ್ನ ಮಗ ಓದೋದ ಅಪರೂಪ. ಇವತ್ತು ಯಾಕೊ ಮನಸ್ಸು ಮಾಡಿ ಓದ್ಲಿಕ್ಕ ಹತ್ಯಾನ. ಆಫ಼್ ಮಾಡು ಅಂತ ಹೇಳಕತ್ತಿಲ್ಲ. ಸಲ್ಪ ಸೌಂಡರ ಕಡಿಮಿ ಮಾಡು. ಎಗ್ಸಾಮ್ ಹತ್ರ ಬಂದಾವು"

"ಅದು ನಿಮ್ಮ ಖರ್ಮರೀ. ನಾನೇನು ನಿಮ್ಮ ಮನೇಲಿ ಹಾಕಿಲ್ಲ. ನಮ್ಮ ಮನೇಲಿ ಹಾಕ್ಕೊಂಡಿದ್ದಿನಿ. ನೀವ್ಯಾರ್ರಿ ನಮ್ಮನೆ ಸುದ್ದಿ ಕೇಳೋಕೆ" ಎಂದು ಅಮ್ಮನ ಅರ್ಧ ವಯಸ್ಸಿನ ಶೂರ್ಪಣಖಿ ಜೋರು ಮಾಡುತ್ತಿದ್ದಳು.

ನಡುವೆ ಹೋಗಿ "ಕೆಸರಿನ್ಯಾಗ ಯಾಕ ಕಲ್ಲು ವಗಿತಿ ಬಾರಬೇ" ಅಂತ ಹೇಳಿ ಅಮ್ಮನನ್ನು ಒಳಗೆ ಕರೆತಂದೆ.

ನಮ್ಮ ಮನೆಯಲ್ಲಿ ಬಾಗಿಲಿಗೆ ಅಳವಡಿಸಿದ್ದ ಬರ್ಗ್ಲರ್ ಅಲಾರಂ ಇತ್ತು. ಅದನ್ನು ಸ್ವಿಚ್ ಆನ್ ಮಾಡಿ ಬಾಗಿಲು ತೆರೆದರೆ ಅರ್ಧ ಮೈಲಿಯವರೆಗೆ ಅದರ ಸದ್ದು ಕೇಳುತ್ತಿತ್ತು. ಅಲಾರಂನ ಸ್ಪೀಕರ್‌ನ್ನು ತಂದು ಶೂರ್ಪಣಖಿಯ ಮನೆಯ ಕಡೆಗೆ ಇರುವ ಕಿಟಕಿಗೆ ಕಟ್ಟಿ ಅಲಾರಮ್ ಸ್ವಿಚ್ ಹಾಕಿದೆ. ಅಲಾರಮ್ ಓಣಿಗೆಲ್ಲ ಕೇಳುವಂತೆ ಮೊಳಗತೊಡಗಿತು. ನನ್ನ ಇಂತಹ ’ಕ್ರಾಂತಿ’ಗಳಿಗೆ ಯಾವಾಗಲೂ ತೊಡರು ಹಾಕುತ್ತಿದ್ದ ಅಮ್ಮ ಯಾಕೋ ಸುಮ್ಮನಿದ್ದರು. ಸುಮಾರು ಹೊತ್ತಾದರೂ ಆ ರಣಶಬ್ದ ನಿಲ್ಲದಿದ್ದಾಗ ಮಧ್ಯಾಹ್ನದ ಸವಿನಿದ್ದೆಯಲ್ಲಿದ್ದವರು, ಊಟದ ನಂತರ ಕೆಲಸಕ್ಕೆ ಹೊರಡುವ ಮೊದಲು ಚಿಕ್ಕ ನಿದ್ರೆಗಾಗಿ ಅಡ್ಡಾದವರು ಎಲ್ಲಾ ಮನೆಯ ಮುಂದೆ ಓಡಿಬಂದರು. ಗುಂಪಿನಲ್ಲಿ ಶೂರ್ಪಣಖಿಯೂ ಇದ್ದಳು.

"ಏನಪ್ಪಾ ಅದು ಸೌಂಡು. ಬಂದ್ ಮಾಡಬಾರದಾ"

"ನನ್ನ ಮನೇಲಿ ಏನಾದರೂ ಹಾಕ್ಕೊತಿನಿ. ಅದನ್ನೆಲ್ಲ ಯಾಕೆ ಕೇಳ್ತಿರಿ?"

ಓಣಿಯಲ್ಲಿ ಸಭ್ಯ ಹುಡುಗ ಎಂದು ಹೆಸರಾಗಿದ್ದ ನಾನು (ಹಾಗಂತ ’ಹೆಸರಾಗಿದ್ದೆ’ ಅಷ್ಟೆ!) ಉಲ್ಟಾ ಮಾತಾಡಿದಾಗ ಏನೋ ಏಡವಟ್ಟಾಗಿದೆ ಎಂದುಕೊಂಡರೇನೋ "ಏನಾತಪ್ಪ? ಮೊದ್ಲು ಆಫ಼್ ಮಾಡು ಮಾತಾಡೊಣ" ಅಂದರು.

ಆರಿಸಿದ ಮೇಲೆ "ಹಿಂಗಿಂಗಾತು" ಎಂದು ವಿವರಿಸಿ " ನನ್ನ ಓದಿಗೆ ತೊಂದರೆ ಆಗುತ್ತಿದೆ" ಎಂದೆ. ನಿಜ ಹೇಳಬೇಕೆಂದರೆ ತೊಂದರೆ ಏನೂ ಆಗಿರಲಿಲ್ಲ. ಆಕೆ ಅಮ್ಮನ ಮೇಲೆ ರೇಗಿದ್ದರ ಸೇಡು ತೀರಿಸಿಕೊಳ್ಳಬೇಕಿತ್ತು ನಾನು.

ಬಂದವರು ಶೂರ್ಪಣಖಿಗೆ ಉಗಿದು ಬುದ್ದಿ ಹೇಳಿದರು. ಹಿರಿಯರೊಬ್ಬರು "your independence ends where others nose starts " ಎಂದು ಹೇಳಿ ಗಾಂಧಿಜಿಯ ವಿನೋಬಾರ ಹೇಳಿಕೆಗಳನ್ನು ’ಕೋಟಿ’ಸಿ ಪುಟ್ಟ ಭಾಷಣವನ್ನೂ ಮಾಡಿದರು.

"ಚೆನ್ನಾಗಿ ಓದಪ್ಪ ಒಳ್ಳೆದಾಗಲಿ. ಅಪ್ಪ ಅಮ್ಮಂಗೆ ಕೀರ್ತಿ ತರಬೇಕು " ಎಂದು ಹರಸಿ ಹೊರಟರು. ಎಸ್ಸೆಸ್ಸೆಲ್ಸಿಯಲ್ಲಿ ನಾನು ಕಿಸಿದದ್ದೂ ಅಷ್ಟಕ್ಕಷ್ಟೆ! ತಂದೆ ತಾಯಿಗೆ ಕೀರ್ತಿ ತಂದೆನೋ ಇಲ್ಲವೊ ಗೊತ್ತಿಲ್ಲ. ತಲೆ ತಗ್ಗಿಸುವಂತೆ ಅಂತೂ ಯಾವತ್ತೂ ಮಾಡಿಲ್ಲ ವಿಶ್ವಾಸದಿಂದ ಹೇಳಬಲ್ಲೆ..

Rating
No votes yet

Comments