ಇದೇನಾ ಪತ್ರಿಕೋದ್ಯಮ?

ಇದೇನಾ ಪತ್ರಿಕೋದ್ಯಮ?

ಬರಹ

"ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ" - ಎಂದು ಸುದ್ದಿಯ ಅರಿವು (ನ್ಯೂಸ್ ಸೆನ್ಸ್) ಮೂಡಿಸಲು ಪತ್ರಿಕೋದ್ಯಮದ ಮೊದಲ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಮೇಷ್ಟ್ರು ಹೇಳುವ ಪಾಠ. ಇದರರ್ಥ ಸಾಮಾನ್ಯವಾಗಿರುವುದಕ್ಕಿಂತ ಅಸಾಮಾನ್ಯವಾಗಿದ್ದೇ ಸುದ್ದಿ.

ಆದರೆ ಕಳೆದ ಐದಾರು ವರ್ಷಗಳಲ್ಲಿ ಸರಕಾರದ ಉದಾರೀಕರಣ ನೀತಿಯಿಂದಾಗಿ ಹತ್ತಾರು ಪತ್ರಿಕೆಗಳು ಅಷ್ಟೇ ಸಂಖ್ಯೆಯ ಟಿವಿ ಚಾನೆಲ್ ಗಳು ಮೈಕೊಡವಿಕೊಂಡು ಆಖಾಡಕ್ಕಿಳಿದಿವೆ. ಪತ್ರಿಕೆಗಳಿಗಿಂತ ಟಿವಿ ಚಾನೆಲ್‌ಗಳ ಮಧ್ಯೆ ಸುದ್ದಿ ಸಮರವೇ ನಡೆದಿದೆ. "News happens only once" ಎನ್ನುವಂತೆ, ಸುದ್ದಿ ಒಂದೇ ಬಾರಿ ಘಟಿಸಿದರೂ, ದಿನವಿಡೀ ಬೇರೆ ಬೇರೆ ಚಾನೆಲ್‌ಗಳಲ್ಲಿ, ಬೇರೆ ರೀತಿಯ ಸುದ್ದಿ, ವಿವಿಧ ವಿಶ್ಲೇಷಣೆಯ ಚರ್ವಿತ ಚರ್ವಣ.

ಮುಂಬೈ ಲೋಕಲ್ ಟ್ರೇನ್ ಗಳ ಮೇಲೆ ನಡೆದ ಸರಣಿ ಬಾಂಬ್ ದಾಳಿ, ಶ್ರೀನಗರದಲ್ಲಿ ನಡೆಯುವ ಉಗ್ರರ ಆಕ್ರಮಣದಂಥ ಸಂದರ್ಭಗಳಲ್ಲಿ ಕ್ಷಣ ಕ್ಷಣದ ಸುದ್ದಿಗೆ ಮಹತ್ವವಿರುತ್ತದೆ. ಆದರೆ ತನ್ನ ಮೈಗೆ ಬಟ್ಟೆ ಅಲರ್ಜಿ ಎಂಬಂತೆ ಉಡುಪು ಧರಿಸುವ ಬಾಲಿವುಡ್ ಬಿಚ್ಚಮ್ಮ ರಾಖಿ ಸಾವಂತ್‌ಗೆ ಆಕೆಯ ಗೆಳೆಯನೊಬ್ಬ ಮುತ್ತು ಕೊಟ್ಟಿದ್ದನ್ನೇ ದೊಡ್ಡ ಸುದ್ದಿಯಾಗಿ, ನಂತರ ವಿಶ್ಲೇಷಣೆಯಾಗಿ, ಬಳಿಕ ನೋಡುಗರಿಗೆ ನೀವೇನಂತೀರಿ ಎಂದು "ಓಪಿನಿಯನ್ ಪೋಲ್" ಮೂಲಕ ತಲೆ ತಿನ್ನುವ ಕಾರ್ಯಕ್ರಮಗಳು. ಇದೂ ಸಾಲದೆಂಬಂತೆ ರಾಖಿ ಸಾವಂತ್‌ಗೆ ಮುತ್ತು ಕೊಟ್ಟಿದ್ದನ್ನು ಮೊಟ್ಟ ಮೊದಲು ಪ್ರಸಾರ ಮಾಡುತ್ತಿರುವುದು ನಾವೇ, "ಇದು ನಮ್ಮ ಚಾನೆಲ್‌ನ ಎಕ್ಸ್‌ಕ್ಲೂಸಿವ್ ಕವರೇಜ್" ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದನ್ನು ನೋಡಿದರೆ ನಮ್ಮ ಮಾಧ್ಯಮಗಳು ಎಲ್ಲೋ ದಾರಿ ತಪ್ಪಿವೆಯೇನೋ ಎಂಬ ಸಂಶಯ ಮೂಡುತ್ತದೆ.

ಅಶ್ಲೀಲ ಉಡುಪು ಧರಿಸಿ, ಅರೆಬೆತ್ತಲೆ ಪೋಸು ನೀಡಿದ್ದಕ್ಕೆ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡರೂ, "ಐ ಡೋಂಟ್ ಕೇರ್, ಮೇರಾ ಕಪಡಾ, ಮೇರಾ ಮರ್ಜಿ" ಎಂದು ನಿನ್ನೆ ಮೊನ್ನೆವರೆಗೂ ಹೇಳುತ್ತಿದ್ದ "ಐಟಂ ಹುಡುಗಿ"ಗೆ ಆಕೆಯ ಗೆಳೆಯನೇ ಮುತ್ತು ಕೊಟ್ಟರೆ ನಮ್ಮ ಮೀಡಿಯಾಗಳ ಪ್ರಕಾರ ಇದೊಂದು ಅಬಲೆಯ ಮೇಲೆ ನಡೆದ ಅನ್ಯಾಯ. ಒಂದು ಟಿವಿ ಚಾನೆಲ್ ಈ ಸುದ್ದಿ ಬಿತ್ತರಿಸಿದೆ ಎಂದರೆ ಅದರ ಪ್ರತಿಸ್ಪರ್ಧಿ ಸುಮ್ಮನಿರಲಾದೀತೆ? ಆ ಚಾನೆಲ್ ನ ಕ್ಯಾಮರಾ ನೇರವಾಗಿ ಆಕೆಯ ಮನೆಗೇ ಹೋಗುತ್ತದೆ. ಅಲ್ಲಿಂದ ಸ್ಟುಡಿಯೋಗೆ ನೇರ ಪ್ರಸಾರ. ಅಲ್ಲಿ ರಾಖಿ ಪ್ರವರ...

ಇದು ಟಿವಿಗಳ ಮಾತಾಯಿತು. ಇನ್ನು ಪತ್ರಿಕೆಗಳದು.

ಹಿಂದಿನ ದಿನ, ರಾತ್ರಿಯಿಡೀ ಬೇರೆ ಬೇರೆ ಟಿವಿಗಳಲ್ಲಿ ಪ್ರಮುಖ ಸುದ್ದಿಯಾಗಿ ಪ್ರಸಾರವಾದ ಸಾವಂತಾಯಣ ಮರು ದಿನ ಪತ್ರಿಕೆಗಳಲ್ಲೂ ರಾರಾಜಿಸುತ್ತದೆ. ಮೂರನೇ ಪುಟದಲ್ಲಿ ಬರಬೇಕಾದ ಒಂದು ಕಾಲಂ ಸುದ್ದಿ ಮೊದಲ ಪುಟದಲ್ಲೇ ಅರೆ ತೆರೆದೆದೆಯ ರಾಖಿಗೆ ಆಕೆಯ ಗೆಳೆಯ "ಮಿಕ" ಕಣ್ಮುಚ್ಚಿ ಮುತ್ತು ನೀಡುತ್ತಿರುವ ರಂಗು ರಂಗಿನ ಚಿತ್ರಗಳು ಅಚ್ಚಾಗುತ್ತವೆ.

ಟಿವಿ-ಪತ್ರಿಕೆಗಳು ಭಾರಿ ಸುದ್ದಿ ಮಾಡಿವೆ ಎಂದ ಮೇಲೆ ಪೊಲೀಸರು ಸುಮ್ಮನಿರುತ್ತಾರಾ? ಉಹ್ಜ್ಞೂ, ಸುತಾರಾಂ ಇಲ್ಲ. "IPC ..." ಪ್ರಕಾರ ಮಹಿಳೆಯ ಮಾನಭಂಗಕ್ಕೆ ಯತ್ನ ಎಂಬ ಕೇಸು ಜಡಿಯುತ್ತಾರೆ.

ಅಲ್ಲಿಗೆ ಪತ್ರಿಕೆ ಟಿವಿ ಚಾನೆಲ್‌ಗಳದು ಸಂಭ್ರಮೋತ್ಸವ. ಇದು "ನಮ್ಮ ಚಾನೆಲ್ ಇಂಪ್ಯಾಕ್ಟ್" ಎಂದು ಮತ್ತೆ ಸ್ವಯಂ ಶಹಭಾಷ್‌ಗಿರಿ.

ಸುದ್ದಿಗಾಗಿ ಹಾತೊರೆಯುತ್ತಿರುವ ಮಾಧ್ಯಮಗಳು, ಪ್ರಚಾರಕ್ಕಾಗಿ ಹಪಹಪಿಸುತ್ತಿರುವ ಸಾವಂತ್‌ರಂಥವರಿಂದಾಗಿ ಇಂಥ ಅವಾಂತರಗಳು ಆಗಾಗ ನಡೆಯುತ್ತಿರುತ್ತವೆ ಎಂಬುದು ನೂರಕ್ಕೆ ನೂರು ಸತ್ಯ.

ಇಂದು ನಮ್ಮ ನಗರಗಳಲ್ಲಿ ಎಷ್ಟೊಂದು ಅತ್ಯಾಚಾರಗಳು ನಡೆಯುತ್ತವೆ. ಅವುಗಳಲ್ಲಿ ಅರ್ಧದಷ್ಟೂ ಪತ್ರಿಕೆಗಳಲ್ಲಿ ಪ್ರಕಟವಾಗುವುದಿಲ್ಲ. ಪ್ರಕಟವಾದರೂ ಕಾಟಾಚಾರಕ್ಕೆ ಮೂರನೇ ಪುಟದಲ್ಲಿ ಎಂದಿನಂತೆ "ಮಹಿಳೆ ಮೇಲೆ ಅತ್ಯಾಚಾರ" ಎಂಬ ತಲೆಬರಹದಡಿ ಒಂದು ಪ್ಯಾರಾ ಪ್ರಕಟವಾಗಿ ಮರುದಿನ ಅಂಥದೇ ಸುದ್ದಿ ಅದೇ ಪುಟದ ಅದೇ ಕಾಲಂನಲ್ಲಿ ರೀಪ್ಲೇಸ್ ಆಗುತ್ತದೆ. ಅಲ್ಲಿಗೆ ಹಿಂದಿನ ದಿನದ ಸುದ್ದಿ ಹತ್ತರಲ್ಲಿ ಹನ್ನೊಂದಾಗುತ್ತದೆ.

ಶಿವಾನಿ ಭಟ್ನಾಗರ್ ನಂಥ ಹೈ ಪ್ರೊಫೈಲ್ಡ್ ಕೇಸ್ ಗಳು ಮಾತ್ರ ಮಾಧ್ಯಮಗಳಲ್ಲಿ ಫಾಲೊ-ಅಪ್ ಆಗುತ್ತವೆ. ಸ್ವಲ್ಪ ಬಿಸಿ ಆರಿದ ಮೇಲೆ ಅವುಗಳದ್ದೂ ಅದೇ ಕತೆ.

ಮುಂದುವರಿಯುತ್ತದೆ...

ನಾಳೆ, ಪತ್ರಿಕೋದ್ಯಮದ ಮೇಲೆ ಜಾಗತೀಕರಣದ ಪ್ರಭಾವ.