ಒಹ್, ಜುಲೈ, ಜುಲೈ - ನಿನ್ನ ಪ್ರತಾಪ ಹೀಗೇಕೆ ?!

ಒಹ್, ಜುಲೈ, ಜುಲೈ - ನಿನ್ನ ಪ್ರತಾಪ ಹೀಗೇಕೆ ?!

ಬರಹ

'ಅಯ್ಯೊ ಮತ್ತೆ ಬಂತೆ, ಜುಲೈ, ಮೆರೆಸಿತೆ, ದುರ್ದಶೆಯ ತಾಂಡವ ನೃತ್ಯವ' ! ಇಂದು ೨೬, ನೆಯ ಜುಲೈ, ೨೦೦೬, ಒಂದು ವರ್ಷದ ನಂತರದ ಅನುಭವದ ಮಧ್ಯೆಯೂ ಸ್ವಲ್ಪ ಅಧೀರತೆಯನ್ನು ತರುತ್ತೆ ! ೨೦೦೫ ರಂದು, ಇದೇ ದಿನದ ದಾರುಣ 'ವ್ಯಥೆಯ ಕಥೆ', ಕೆಟ್ಟ 'ಕರಾಳ ರಾತ್ರಿ'ಯ ಕಹಿ ನೆನೆಪಿನ ಅನುಭವ ಗಳನ್ನು ಅನುಭವಿಸಿದವರೆಗೆ ಮಾತ್ರ ಗೊತ್ತು ! 'ದೈವ ಬಗೆದದ್ದೇ ಇದನ್ನ' ಎಂದಾಗ ನಾವು ಹೇಳುವದಾದರೂ ಯಾರಿಗೆ ? ನಮ್ಮ ಕೈಲೇನಿದೆ ? ನಮ್ಮವರೇ ಆದ ಮನುಕುಲದ ದಿಗ್ಗಜರೇ ಹೀಗೆ ಮಾಡಿದ್ದಾರೆ. ಒಳ್ಳೆಯದನ್ನು ಮಾಡಲು ಮನಸ್ಸಿಲ್ಲ. ದೈತ್ಯರಂತೆ ವರ್ತಿಸಿ, ಈ ವರ್ಷದ ಜುಲೈ ೧೧ ರಂದು, ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ, 'ನಿರ್ದೋಷಿ' ಗಳ ಮೇಲೆ 'ಬಾಂಬ್ ಸ್ಫೋಟಿಸಿ' ಸೇಡು ತೀರಿಸಿ ಕೊಂಡಿದ್ದಾರೆ ! ಇದು ಯಾವ ಪುರುಷಾರ್ಥಕ್ಕೆ ! ಇದಾವ ನ್ಯಾಯ ? ಯಾವ ಸಮಾಜ, ಧರ್ಮ, ಪಂಗಡ, ಇಂತಹ ಕಗ್ಗೊಲೆಯನ್ನು ಅನುಮೋದಿಸೀತು ? ಮುಂಬೈ ೧೯೯೩ ರ ನಂತರ, ಎಲ್ಲಾ ತರಹದ 'ಹೀನ ಸಾಹಸ ಕೃತ್ಯ'ಗಳಿಗೆ ಬಹಳವಾಗಿ ಬಲಿಯಾಗಿರುವುದು ನಮ್ಮ ದುರ್ದೈವ ! ಇಂತಹ ಪರಿಸ್ಥಿತಿಯಲ್ಲಿ ನಲುಗಿ, ಬವಣೆಯನ್ನು ಅನುಭವಿಸಿದವರಿಗೆ ಮಾತ್ರ 'Terrorism' ನ ನೈಜ ಪರಿಚಯವಾದೀತು ! ಅಂತಹ ಅದೃಷ್ಟಹೀನರಲ್ಲಿ ನಾನು, ನನ್ನ ಪರಿವಾರದವರೂ ಜುಲೈ ೨೬,೨೦೦೫ ರಂದು, ಪಟ್ಟ ಮಾನಸಿಕ ಯಾತನೆಯನ್ನು ವರ್ಣಿಸಲು ಅಸಾಧ್ಯ. ದೇವರ ದಯದಿಂದ ಅದು 'ಅತಿಯಾಗಿ ಉಲ್ಬಣಿಸದೆ' ಸಣ್ಣದರಲ್ಲೇ 'ಸುಖಾಂತ್ಯ'ದಿಂದ ಕೊನೆಗೊಂಡಿತು ! ನಮ್ಮ ಕಾಲೋನಿಯ ಮಿತ್ರರು ಹಾಗೂ ಪಡೋಸಿನವರು ಪಟ್ಟ ದಾರುಣ ಕಥೆಗಳನ್ನು ಕೇಳಿದಾಗ ಕರುಳು 'ಝಿಲ್' ಎನ್ನುತ್ತದೆ ! ಬಿ. ಎಮ್. ಸಿ, ಮತ್ತು ರಾಜ್ಯ ಸರ್ಕಾರ, ಈ ಬಾರಿ ಸ್ವಲ್ಪ ಉತ್ತಮ ಕೆಲಸ ಮಾಡಿದೆ. ಆದರೆ ಬೃಹತ್ ಮುಂಬೈನ ಬೃಹತ್ ಸಮಸ್ಯಗಳಿಗೆ ಹೋಲಿಸಿದಾಗ ಈ 'ಪ್ರತಿಕ್ರಿಯೆ' ತೀರ ಕಡಿಮೆಯೆನ್ನಿಸುತ್ತದೆ ! ರಾಷ್ಟ್ರಪತಿ, ಶ್ರಿ ಎ.ಪಿ.ಜೆ ಅಬ್ದುಲ್ ಕಲಾಂ ರವರು ಆ ಸಮಯದಲ್ಲಿ ಮುಂಬೈಗೆ ಆಗಮಿಸಿ, ತಾವೆ ಕಣ್ಣಾರೆ ಪರಿಸ್ಥಿತಿಯನ್ನು ಅವಲೋಕಿಸಿ ಸಹಾಯದ 'ಅಭಯಹಸ್ತ' ವನ್ನು ನೀಡಿದ್ದಾರೆ. ಸಾಂತ್ವನ ನೀಡಿದ್ದಾರೆ.ಅವರು ಹಾಗೂ ಮುಖ್ಯ ಮಂತ್ರಿಗಳು, 'ಮಾಹಿಮ್ ರೈಲ್ವೆ ತಾಣ'ದಲ್ಲಿ ಎಲ್ಲರೊಡನೆ ಬೆರೆತು ಜುಲೈ, ೧೮ ನೆಯ ತಾರೀಖು ಸಾಯಂಕಾಲ ೨ ನಿಮಿಷ 'ಮೌನ' ಆಚರಿಸಿದರು. (೬.೨೫ ರಿಂದ ೬-೩೦) ಎಲ್ಲಾ ಕೇಬಲ್ ಆಪರೇಟರ್ ಗಳು, ೨ ನಿಮಿಷ ತಮ್ಮ ಚಾನಲ್ ಗಳನ್ನು ಬಂದ್ ಮಾಡಿದ್ದರು. ಮಹಾರಾಷ್ಟ್ರದಲ್ಲಿ ಲಕ್ಷಾಂತರ ಜನ 'ಹಿತಾಕಾಂಕ್ಷಿ'ಗಳು 'ಮೌನ'ವನ್ನು ಆಚರಿಸಿದರು. ಮೃತರ ಆತ್ಮಕ್ಕೆ 'ಶಾಂತಿ'ಕೋರಿದರು. ಅವರೆಲ್ಲಾ 'ಆತಂಕವಾದ', 'ಭಯೋತ್ಪಾದನೆ'ಗಳ ವಿರುದ್ಧ ಒಟ್ಟಾರೆ ಹೋರಾಡುವ 'ಶಪಥ' ಮಾಡುತಿದ್ದಾರೇನೋ, ಎನ್ನಿಸುತ್ತಿತ್ತು.ಈ ಪ್ರಕ್ರಿಯೆ ನೊಂದ, ಘಾಸಿಗೊಂಡ ಮನಗಳ, ದುಗುಡತುಂಬಿದ ಹೃದಯಕ್ಕೆ ತಂಪೆರೆದಂತಾಗಿತ್ತು ! ಪ್ರಪ್ರಥಮವಾಗಿ, ಸಾಮೂಹಿಕವಾಗಿ ಮಾಡಿದ 'ಪ್ರಾರ್ಥನೆ' ಒಂದು ರಾಷ್ಟ್ರೀಯ ಜಾಗೃತಿಯ 'ಚಿನ್ಹೆ' ಯಾಗಿತ್ತೆಂದು ಬಣ್ಣಿಸಬಹುದು ! ೧೯೯೩ ರಿಂದ ೨೦೦೬ ರ ವರೆಗೆ ಆದ ಮುಂಬೈನ 'ಅಮಾನುಷ ಕೃತ್ಯ'ಗಳಲ್ಲಿ ಒಂದಾದ, 'ಬಾಂಬ್ ಸ್ಫೋಟ'ದ ವಿವರಗಳು ಹೀಗಿವೆ : ಜುಲೈ ೧೧, ೨೦೦೬- ಮುಂಬೈನ ಪಶ್ಚಿಮ ರೈಲಿನ ಮೊದಲ ದರ್ಜೆಯ ಬೋಗಿಯಲ್ಲಿ ಆದ 'ಸರಣಿ ಬಾಂಬ್ ಸ್ಫೋಟ'ದಲ್ಲಿ ೨೨೮ ಜನ ಮೃತರಾಗಿದ್ದಾರೆ. ೮೯೦ ಜನಕ್ಕೆ ಗಾಯ (*೧೪೦೦) ಆಗಸ್ಟ್ ೨೫, ೨೦೦೩, 'ಗೇಟ್ ವೇ ಆಫ್ ಇಂಡಿಯ', ಮತ್ತು 'ಜವೇರಿ ಬಜಾರ್' ನಲ್ಲಿ ೫೦ ಜನ ಮೃತರಾದರು. ೧೫೦ ಜನರಿಗೆ ಗಾಯ. ಜುಲೈ ೨೯, ೨೦೦೩- ಘಾಟ್ಕೋಪರ್, ನಲ್ಲಿ ೩ ಜನರ ಸಾವು, ೩೪ ಜನಕ್ಕೆ ಗಾಯ. ಏಪ್ರಿಲ್ ೧೪, ೨೦೦೩- ಬಾಂದ್ರದಲ್ಲಿ, ಒಬ್ಬನ ಸಾವು. ಮಾರ್ಚ್ ೧೩, ೨೦೦೩- ಮುಲುಂಡ್ ರೈಲ್ವೆ ನಿಲ್ದಾಣದಲ್ಲಿ, ೧೧ ಜನರ ಸಾವು, ೮೦ ಜನಕ್ಕೆ ಗಾಯ. ಜನವರಿ ೨೭, ೨೦೦೩- ವಿಲೆಪಾರ್ಲೆನಲ್ಲಿ, ಒಬ್ಬನ ಸಾವು, ೨೫ ಜನರಿಗೆ ಗಾಯ. ಡಿಸೆಂಬರ್ ೬, ೨೦೦೨- ಮುಂಬೈ ಸೆಂಟ್ರೆಲ್ ರೈಲ್ವೆ ನಿಲ್ದಾಣದಲ್ಲಿ, ೨೫ ಜನಕ್ಕೆ ಗಾಯ. ಡಿಸೆಂಬರ್ ೨, ೨೦೦೨- ಘಾಟ್ಕೊಪರ್, ನಲ್ಲಿ ಎರಡನೆಯ ಬಾರಿ, ೩ ಜನರ ಸಾವು, ೩೧ ಜನಕ್ಕೆ ಗಾಯ. ಫೆಬ್ರವರಿ ೨೭, ೧೯೯೮- ವಿರಾರ್, ನಲ್ಲಿ ೯ ಜನರ ಸಾವು. ಜನವರಿ ೨೪, ೧೯೯೮- ಮಲಾಡ್, ನಲ್ಲಿ ಒಬ್ಬನಿಗೆ ಗಾಯ. ಆಗಸ್ಟ್ ೨೮,೧೯೯೭- ಜುಮ್ಮಾ ಮಸೀದಿಯ ಬಳಿ, ೩ ಜನಕ್ಕೆ ಗಾಯ. ಮಾರ್ಚ್ ೧೨, ೧೯೯೩- ನಗರದ ಪ್ರಮುಖ ೧೩ ಜಾಗದಲ್ಲಿ ಸರಣಿ ಬಾಂಬ್ ಸ್ಫೋಟ, ೨೫೭ ಜನರ ಸಾವು, ೭೧೩ ಜನಕ್ಕೆ ಗಾಯ. 'ಅತಿವೃ‍ಷ್ಟಿ'ಯಿಂದಾದ ಸಾವು ನೋವುಗಳ ಪಟ್ಟಿ : ಜುಲೈ ೨೬, ೨೦೦೫ ರಂದು ೧೦೦ ವರ್ಷಗಳಲ್ಲೆ ಅಧಿಕವಾದ , ೯೪೪ ಮಿ.ಮಿ.( ೩೭.೨.ಅಂಗುಲ)ಮಳೆ ಬಿದ್ದಿತ್ತು. ೨೪ ಘಂಟೆಗಳಲ್ಲಿ ಬಿದ್ದ ಮಳೆಯಿಂದ ಮಹಾರಾಷ್ಟ್ರದಲ್ಲಿ ೧,೦೦೦, ಜನ, ಮರಣ ಹೊಂದಿದರು. ಕೇಂದ್ರಾಡಳಿತದಲ್ಲಿರುವ ಲಕ್ಷದ್ವಿಪದಲ್ಲಿನ 'ಅಮಿನಿದಿವಿ' ಎಂಬೆಡೆ, ೨೪ ಘಂಟೆ ಗಳಲ್ಲಿ, ೧,೧೬೮ ಮಿ.ಮಿ ( ೪೬ ಅಂಗುಲ) ಮಳೆ, ಮೇ, ೬, ೨೦೦೪ ರಂದು, ಸುರಿಯಿತು.ಇದೊಂದು ಹೊಸ ದಾಖಲೆ ! ೧೯೭೪ ರಲ್ಲಿ ೨೪ ಘಂಟೆಗಳಲ್ಲಿ, ಮುಂಬೈ ನಲ್ಲಿ, ೫೭೫ ಮಿ.ಮಿ. (೨೨.೬ ಅಂಗುಲ) ಎಲ್ಲಾ ಸಮಯದಲ್ಲೂ ಸತ್ತವರ ಸಂಖ್ಯೆ ನೂರಾರು ! ಬರುವ ೨೦೦೭ ರಲ್ಲಿ ಹಾಗೂ ಮುಂದೆ, ಏನು ಕಾದಿದೆಯೋ, ದೇವರಿಗೇ ಗೊತ್ತು !! *ಕೆಲವು ಮೂಲಗಳ ಪ್ರಕಾರ. ** ಅಂಕಿ ಅಂಶಗಳು, 'ಅಂತರಜಾಲ'ದಿಂದ