ಕನ್ನಡವನ್ನು ಆ ಕಾಲದಲ್ಲಿ ಉಳಿಸಿದವರು ವೀರಶೈವರು ( ಉ.ಕ.ಕ-೫)
ಈ ಕಡೆಯ ಬ್ರಾಹ್ಮಣರು ಮರಾಠೀ ಪತ್ರಿಕೆಗಳನ್ನೇ ಓದುತ್ತಿದ್ದರೆಂದು ಹೇಳಿದೆಯಷ್ಟೆ . ಪ್ರಾಯಶ: ಕನ್ನಡವನ್ನು ಆ ಕಾಲದಲ್ಲಿ ಉಳಿಸಿದವರು ವೀರಶೈವರು. ಅವರು ನಡೆಸುತ್ತಿದ್ದ ಪ್ರತಿಯೊಂದು ಮಠವೂ ಒಂದು ಕನ್ನಡ ಶಾಲೆಯೇ ಆಗಿತ್ತು . ೧೮೮೦ ರವರೆಗೆ ಪ್ರತಿಯೊಂದು ಹಳ್ಳಿಯಲ್ಲಿಯೂ ವೀರಶೈವರದೊಂದು ಶಾಲೆಯು ಕಣ್ಣಿಗೆ ಬೀಳುತ್ತಿತ್ತು.
ಉತ್ತರ ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಮತ್ತು ಮರಾಠಿಗಳನ್ನು ಕಡ್ಡಾಯವಾಗಿ ಕಲಿಸಲಾಗುತ್ತಿತ್ತು .
ವಿಜಾಪುರದಲ್ಲಿ ಹೊರಟ ಮೊದಲ ಪತ್ರಿಕೆ ಮರಾಠಿಯದು . ೧೯೧೭ ರಲ್ಲಿ ವಿಜಾಪುರದ ಸಾರ್ವಜನಿಕ ವಾಚನಾಲಯದಲ್ಲಿ ಇದ್ದ ೩೦೦೦ ಪುಸ್ತಕಗಳಿದ್ದು ಕೇವಲ ೩೦೦ ಮಾತ್ರ ಕನ್ನಡದ್ದು ಆಗಿದ್ದವು . ಕನ್ನಡ ಪುಸ್ತಕ ಕೊಳ್ಳದಿರಲು ಮರಾಠಿ ಆಡಳಿತಗಾರರು ಕೊಟ್ಟ ಕಾರಣವೆಂದರೆ ಕನ್ನಡ ಪುಸ್ತಕ ಓದಲು ವಿಜಾಪುರದವರಿಗೆ ಇಚ್ಛೆ ಇಲ್ಲವೆಂದು.
ಶಾಲೆಗಳ ವಿಷಯವೂ ಹೀಗೆಯೇ . ಹೆಣ್ಣುಮಕ್ಕಳಿಗೆ ಕನ್ನಡ ಕಲಿಸುವ ವ್ಯವಸ್ಥೆ ಇದ್ದಿಲ್ಲ ಮರಾಠಿ ಶಾಲೆಯ ಕಟ್ಟಡ ಸುಂದರವಾಗಿ ಆಕರ್ಷಕವಾಗಿತ್ತು . ಅಲ್ಲಿ ಶಿಕ್ಷಕರಿಗೆ ಹೆಚ್ಚು ಸಂಬಳ ಇತ್ತು.
... ಮುಖಂಡರೆನ್ನಿಸಿಕೊಳ್ಳುವವರೂ ಅಧಿಕಾರಸ್ಥರೂ ಮರಾಠಿಗರೇ ಆಗಿದ್ದರು ...
ಕರ್ನಾಟಕದಲ್ಲಿ ಕನ್ನಡ ಶಾಲೆಗಳಿರಬೇಕೆಂದು ಕನ್ನಡಿಗರು ಬಡಿದಾಡಬೇಕಾಯಿತು. ಒಮ್ಮೆ ವೆಂಕಟರಂಗೋ ಕಟ್ಟಿಯವರು ಮನೆಯ ದೀಪವೆಂದು ಮುದ್ದಿಡಲಿಕ್ಕೆ ಬರುವದಿಲ್ಲ ಎಂದು ಅಗ್ರಲೇಖವನ್ನೂ ಬರೆದರು .
"ಶುಭೋದಯ"ದಲ್ಲಿ ಶ್ರೀ ಕೆ. ವಾಸುದೇವಾಚಾರ್ಯರು ತಮ್ಮದೇ ಆದ ಶೈಲಿಯಲ್ಲಿ ಹೀಗೆ ಬರೆದರು .
" ವಿಜಾಪುರ ಜಿಲ್ಲೆಯಂಬುದೊಂದು ಪ್ರಾಂತವು ಕರ್ನಾಟಕದ ಮಧ್ಯದಲ್ಲಿರುವದು . ಆ ಪ್ರಾಂತದ ಮಧ್ಯದಲ್ಲಿರುವ ವಿಜಾಪುರವೆಂಬ ಊರಾದರೂ ಕರ್ನಾಟಕದಲ್ಲಿಯೇ ಇರುವದೆಂಬುದನ್ನು ವ್ಯಾಪವ್ಯಾಪಕ ವಿಚಾರದಿಂದ ನೋಡಿದರೆ ಸಿದ್ಧವಾಗುವದು ,. ಆ ಊರಿನ ಒಕ್ಕಲಿಗರೆಲ್ಲರೂ ಕನ್ನಡಿಗರು . ಅಲ್ಲಿರುವ ವ್ಯಾಪಾರ ಉದ್ದಿಮೆ ಮಾಡುವವರೆಲ್ಲರು ಆಡುವ ಮಾತು ಕನ್ನಡವಲ್ಲದೆ ಬೇರೊಂದಿಲ್ಲ . ಅಲ್ಲಿನ ದೇಸಾಯಿ , ದೇಶಪಾಂಡೆಯವರು , ಗೌಡ ಕುಲಕರ್ಣಿಗಳು , ಆಯಗಾರ ಕೂಲಿಯವರು , ಭಟ್ಟ ಭಿಕ್ಷುಕರು , ಇನ್ನುಳಿದ ಸುಖವಸ್ತಿಯರು ಎಲ್ಲರೂ ಕನ್ನಡಿಗರೇ ... ಹೀಗಿದ್ದರೂ ಕನ್ನಡನುಡಿಯ ನಡುಮನೆಯಲ್ಲಿ ಮರಾಠಿ ಭಾಷೆಯು ಹೊಕ್ಕುಕೊಂಡು ಕನ್ನಡನುಡಿಗೆ ಎದ್ದಲಗಾಟ ಕೊಟ್ಟಿರುವದೆಂಬ ಮಾತು ಕೇಳಿ ಯಾರಿಗೆ ಸಖೇದವಾದ ಆಶ್ಚರ್ಯವಾಗಲಿಕ್ಕಿಲ್ಲ ? ... ಎಲ್ಲವ್ವನ ಜಾತ್ರೆಯಲ್ಲಿ ಮುಲ್ಲಾನ ಅಧಿಷ್ಠಾನವೆಂಬಂತೆ ಇಲ್ಲಿಯ ಕನ್ಯಾಶಾಲೆ*ಯಲ್ಲಿ ಮರಾಠಿ ಮುಲೀ ಜನರು ಸೇರಿಕೊಂಡು ಬಿಟ್ಟಿರುವರು . ಇಷ್ಟೆಲ್ಲ ಅನಾವಸ್ಥೆಗೆ ಕಾರಣವೇನೆಂದು ಯಾರಾದರೂ ಕುತೂಹಲದಿಂದ ಪ್ರಶ್ನೆ ಮಾಡಬಹುದು . ಪ್ರಸ್ತ** ಮಾಡಿಸುವ ಯಜಮಾನನು ಒಕ್ಕಲಿಗನು. ತಂಗಳ ರೊಟ್ಟಿಯನ್ನು ಸೋಟೆ ಹರಿಯುವಂತೆ ಕಟೆದು*** ಬಂದು ಆ ಮಂದಮತಿಯಾದ ಒಕ್ಕಲಿಗನು ತುಪ್ಪ, ಸಕ್ಕರೆ, ಬದಾಮ, ಕೇಶರಗಳ ಕೊಲೆ ಮಾಡುತ್ತಿರುವ ಬ್ರಾಹ್ಮಣರಿಗೆ ಕೈಜೋಡಿಸಿ 'ಸಂತೋಸರೇ' ಎಂದು ಕೇಳುವ ಹಾಗೆ ನಾವು ಮತಿಮಂದರಾದ ಕರ್ನಾಟಕಸ್ಥರ ಗತಿಯಾಗಿದೆ. ಕೆಲಕಾಲದ ಹಿಂದೆ ವಿಜಾಪುರದ ಸರಕಾರೀ ಕಾಮಗಾರರೆಲ್ಲರೂ ಮರಾಠೀ ಮಾತನಾಡುವ ಜನರೇ ಆಗಿದ್ದರು. ಆ ಕಾಲದಲ್ಲಿ ಅಧಿಕಾರೀ ಜನರಿಗೆ ಜನರೆಲ್ಲರೂ ಅಂಜಿ ಗಡಗಡನೇ ನಡುಗುವರು. ಅದಕ್ಕಾಗಿ ಬಾಪೂಸಾಹೇಬ , ನಾನಾಸಾಹೇಬ , ಪೇಠೆ , ಬಾಜಾರೆ , ಕಾಳೇ , ಗೋರೇ, ಖರೇ , ಖೋಟೇ ಮುಂತಾದ ಜನರೇ ಅಧಿಕಾರಬಲದಿಂದ ನಮ್ಮನ್ನು ಆಳಿಕೊಂಡರು. ನಮ್ಮಲ್ಲಿ ಪ್ರಮುಖರೆಂಬವರು ಅಭಿಮಾನ ಶೂನ್ಯರಾಗಿ ಸ್ವಭಾಷೆ , ಸ್ವಾಚಾರಗಳನ್ನು ನಿಂದಿಸಿ ಮರಾಠೀ ಜನರ ಆಚರಣಗಳನ್ನೂ ಅವರ ಭಾಷೆಯನ್ನೂ ಡುಬ್ಬದ ಮೇಲೆ ಹೊತ್ತುಕೊಂಡು ಡೊಗ್ಗಿ ನಿಂತುಕೊಂಡರು . ' ಚಹಾ ಝಾಲ ಕಾಯ್ ? ಥೋಡೇಸೆ ಇಕಡೆ ಯಾ ! ಫಾರ್ ಉತ್ತಮ್ ' ಎಂಬ ಮರಾಠೀ ವಾಕ್ಯಗಳನ್ನಾಡೀ .. ಹೆಂಡರನ್ನು ವಿನೋದಗೊಳಿಸಿ ಸಂತೋಷದಿಂದ ನಕ್ಕರು".
*ಕನ್ಯಾಶಾಲೆ- ಹೆಣ್ಣುಮಕ್ಕಳ ಶಾಲೆ
**ಪ್ರಸ್ತ - ಶುಭಕಾರ್ಯ
***ಕಟೆದು - ಕಟೆಯುವ ಬಗ್ಗೆ ಒಂದೆರಡು ದಿನಗಳ ಹಿಂದೆ ಸಂಪದದಲ್ಲಿ ಬ್ಲಾಗಿಸಿದ್ದಾರೆ