ಮೊಬೈಲ್ ಮೌನಿಗಳು
2
ಫಿನ್ಲೆಂಡ್ ಬಗ್ಗೆ ಒಂದು ಜೋಕ್ ಇದೆ. ಫಿನ್ಲೆಂಡ್ ಜನರನ್ನು 'ಫಿನ್ನಿಶ್' ಎಂದು ಕರೆಯಲಾಗಿರುವುದರಿಂದ ಇದು ಫಿನ್ನಿಶ್ ಜೋಕ್ ಕೂಡ. ಇದನ್ನು ಏಕೆ ಹೇಳುತ್ತಿದ್ದೇನೆಂದು ಈ ಜೋಕ್ ಫಿನಿಶ್ ಆದ
ನಂತರ ತಿಳಿಸುವೆ. ಈ ಜೋಕ್‌ನ ವಿಶೇಷವೇನೆಂದರೆ ಇದರಲ್ಲಿ ಶೇಕಡ ಐವತ್ತರಷ್ಟು ಭಾಗದ ಕ್ರೆಡಿಟ್ ನನಗೆ ಸಲ್ಲುತ್ತದೆ.
ಫಿನ್ಲೆಂಡ್ ನಲ್ಲಿ ಒಬ್ಬ ವ್ಯಕ್ತಿ ಪರಿಚಿತನಾಗಿ ನಂತರ ಆ 'ವ್ಯಕ್ತಿ' ಹೋಗಿ 'ಸ್ನೇಹಿತ'ನಾದ. (ಈ ಜೋಕ್ ಓದುವ ಮುನ್ನ ಅಥವ ಓದುವಾಗ ಇಂಗ್ಲೀಷ್ ಭಾಷೆಯಲ್ಲಿ ಫ್ರೆಂಡ್ ಎಂದರೆ ಗಂಡೂ ಆಗಿರಬಹುದೆಂಬ ನಿಮ್ಮ ನೆನಪಿನಲ್ಲಿರಲಿ) ಒಂದು ಸಂಜೆ ಬೇಸರವಾಗುತ್ತಿದ್ದುದ್ದರಿಂದ ಆ ಫ್ರೆಂಡನ್ನು ಭೇಟಿ ಮಾಡಬೇಕೆನಿಸಿತು. ಫೋನಾಯಿಸಿದೆ. "ಲೆಟ್ಸ್ ಹ್ಯಾವ್ ಅ ಡ್ರಿಂಕ್" "ಓಕೆ", ಎಲ್ಲಿ ಎಷ್ಟೊತ್ತಿಗೆ ಎಂದೆಲ್ಲ ಕೇಳಿ "ಭಾರತೀಯ ನೀನು. ಹೇಳಿದ ಸಮಯಕ್ಕೆ ಸರಿಯಾಗಿ ಬರತಕ್ಕದ್ದು" ಎಂದೆಚ್ಚರಿಸಿತ್ತು ಆ ಫ್ರೆಂಡ್. ಶುದ್ಧ ಭಾರತೀಯನಾದುದರಿಂದ ತಡವಾಗಿ ಹೋದೆ. ದಂಡ ರೂಪದಲ್ಲಿ ಬಿಯರ್ ಕೊಡಿಸಿದೆ ಆ ಫ್ರೆಂಡ್‌ಗೆ. ಒಂದನೆಯ ಬಿಯರ್ ಹೊರತುಪಡಿಸಿ ಮಿಕ್ಕ ನಾಲ್ಕು ಬಿಯರನ್ನು ಆ ಫ್ರೆಂಡ್ ತನ್ನ ಖರ್ಚಿನಲ್ಲೇ ಕುಡಿದು ಮುಗಿಸಿತು. ನಲ್ವತ್ತು ನಿಮಿಷವಾಯಿತು, ಒಂದೂ ಮಾತಿಲ್ಲದೆ.
ಬಾಯಿ ನವೆ ತಡೆಯಲಾರದೆ ಕೇಳಿಯೇ ಬಿಟ್ಟೆ, "ಏನಾದರೂ ಮಾತನಾಡುವ?"
"ಏನು! ಮಾತನಾಡುವುದೆ? ಕುಡಿಯಲಿಕ್ಕಲ್ಲವ ನೀನು ನನ್ನನ್ನು ಕರೆದದ್ದು!!"
ಒಂದು ವಾರದ ನಂತರ ಆ ಫ್ರೆಂಡ್ ಫೋನಾಯಿಸ್ತು. "ಬೇಜಾರು ಮಡಿಕೊಳ್ಳಬೇಡ, ಈ ಸಲ ನನ್ನ ಟ್ರೀಟ್. ಈ ಸಲ ಕುಡಿದು ಮಾತನಾಡುವ". ಅದೇ ಆರ್ಡರಿನಲ್ಲೇ ಆಗಲೆಂದು ಸುಮ್ಮನೆ ಕುಡಿದು
ಕುಳಿತಿದ್ದೆವು. ಮತ್ತೆ ನಲ್ವತ್ತು ನಿಮಿಷ ಸಂದಿತು. ಕಳೆದ ವಾರ ನಾನು ಬಳಸಿದ್ದ ಒಂದೇ ಒಂದು ವಾಕ್ಯವನ್ನು ಮತ್ತೆ ಬಳಸಿದ್ದೆ. "ಏನಾದರೂ ಮಾತನಾಡುವ!" ಅಳು, ನಗು ಮತ್ತು ನವರಸವನ್ನೆಲ್ಲ ಅರೆದು
ಕುಡಿದಂತಹ ಶಾಂತ ಮುಖಭಾವದಲ್ಲೀ ಆ ಫ್ರೆಂಡ್ "ಓಕೆ ಮಾತನಾಡುವ" ಎಂದು ಜೇಬಿಗೆ ಕೈ ಹಾಕಿ, ಹೊರತೆಗೆದು, ಸರಿಯಾಗಿ ಮುವತ್ತೈದು ನಿಮಿಷ ಮಾತನಾಡಿತು, ನೋಕಿಯ ಮೊಬೈಲ್ ನಲ್ಲಿ-ಯಾರೋ ಸ್ನೇಹಿತರೊಂದಿಗೆ!!
ನಾನೇ ಪಾತ್ರವಾಗಿದ್ದ ಜೋಕ್ ಇದು. ಭಾರತಕ್ಕೆ ಬಾವುಟವಿರುವಂತೆ ಫಿನ್ನಿಶ್ ಜನರಿಗೆ ಈ ಜೋಕ್ ಎಲ್ಲ ರೀತಿಯಲ್ಲೂ ಅವರ ರಾಷ್ಟ್ರೀಯ ಲಾಂಛನವಾಗುವ ಯೋಗ್ಯತೆ ಇದೆ. ಅಲ್ಲಿನ ಜನ ಟೈಟಾದ ನಂತರವೇ ನಿಜವಾಗಿ ಕುಡಿಯಲು ಶುರುಮಾಡುತ್ತಾರೆ. 'ಲ್ಯಾಪಿನ್ ಕುಲ್ತ' ಎಂಬ, ಜಾಸ್ತಿ ಕಿಕ್ ಹೊಡಿಯದ ಬಿಯರ್ ನಮ್ಮ ಯು.ಬಿ ಬಿಯರ್‌ನಂತೆ. ಅರ್ಧ ಗಂಟೆ ಕಾಲ, ಪೂರ ಬಾರ್ ಖಾಲಿ ಇದ್ದು, ಒಂದೇ ಟೇಬಲ್ಲಿನಲ್ಲಿ ನೀವಿಬ್ಬರೇ ಇರುವ ಸಂದರ್ಭದಲ್ಲಿ ಎರಡನೆಯವರು ಫಿನ್ನಿಶ್ ಆದರೆ, ನೀವು ಅಸ್ತಿತ್ವದಲ್ಲೇ ಇಲ್ಲವೆಂಬಂತೆ ಮೌನವಾಗಿರುವ ಜನ ಅವರು. ಮತ್ತು ನಿಮ್ಮ ಫಿನ್ನಿಶ್ ಫ್ರೆಂಡ್‌ಗಳು ತಮ್ಮ ಮೊದಲ ಡ್ರಿಂಕ್‌ಅನ್ನು ತಾವೇ ಕೊಂಡುಕೊಳ್ಳುತ್ತಾರೆ. ಅದರ ನಂತರ, ಕಡೆಯ ಡ್ರಿಂಕ್ ತನಕ ನೀವು ಫಿನ್ನಿಶ್ ಪ್ರಜೆ ಅಲ್ಲದಿದ್ದರೆ ತಮ್ಮ ಡ್ರಿಂಕ್ ಜೊತೆ ನಿಮ್ಮ ಡ್ರಿಂಕ್ ಅನ್ನೂ ಕೊಂಡುಕೊಡುತ್ತಾರೆ. ಹೆಂಗಸರಾದರೆ ತಾವು ಕುಡಿದ ನಂತರವೂ, ಅಥವ ತಾವು ಕುಡಿದು ನಿಲ್ಲಿಸಿದ ನಂತರವೂ ನಿಮಗೆ ಕುಡಿಯಲು ಕಾಸು ತಾವೇ ಕೊಡುತ್ತಾರೆ. ಅವರಿಗೇನು ಗೊತ್ತು ಒಂದು ರೂಪಾಯಿ ಬೆಲೆ. ಹೇಗೆ ಗೊತ್ತಾಗಬೇಕು ಹೇಳಿ, ಅವರು ಬಳಸುವುದು ರುಪಾಯಿಗಳನ್ನಲ್ಲವಲ್ಲ. ೨೦೦೨ರವರೆಗೂ ಫ್ರಾಂಕ್ಸ್ (ಏಳು ರುಪಾಯಿಗೊಂದು ಫ್ರಾಂಕ್) ಆ ನಂತರ ಯೂರೋ (೬೫
ರೂಪಾಯಿ) ಬಳಸುತ್ತಿದ್ದಾರೆ ಫಿನ್ನಿಶ್ ಜನ.
ವಿಪರೀತ ಕುಡಿಯುವುದು, ಮೌನ ಮುರಿಯಲು ಬರದಿರುವುದು, ವರ್ಷದ ಎಂಟೊಂಬತ್ತು ತಿಂಗಳ ಕಾಲ ದಿನಕ್ಕೆ ಮೂರು ಗಂಟೆಕಾಲವೂ ಸೂರ್ಯನ ದರ್ಶನ ಮಾಡದಿರುವುದು, ಈ ಮೂರೂ
ಕಾರಣಗಳಿಂದಲೂ ಮಾನಸಿಕವಾಗಿ ಕುಸಿಯುವುದು, ಮತ್ತು ಈ ನಾಲ್ಕು ಕಾರಣಗಳಿಂದಾಗಿ ಇಡೀ ಯುರೋಪಿನಲ್ಲೇ ಅತ್ಯಂತ ಹೆಚ್ಚಿನ ಆತ್ಮಹತ್ಯೆ ಮಾಡಿಕೊಳ್ಳುವ ಮಂದಿ ಫಿನ್ನಿಶ್ ಜನ!
ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬುವರಿಗೆ ಎಲ್ಲೋ ಒಂದಿಷ್ಟು ಬದುಕುವ ಆಸೆ ಉಳಿದಿರುವುದು ಸಹಜವಷ್ಟೇ. ಆತ್ಮಹತ್ಯೆ ಯತ್ನವನ್ನು ಪೂರೈಸಿ ಸಫಲವಾಗಿ ಬದುಕಿಬಂದವರನ್ನು ಕೇಳಿ ನೋಡಿ. ಹಾಗೆ ದಾಟಿ ಬರುವ ಮಜವನ್ನು ಒಂದಷ್ಟು ವಿವರಿಸುವವರು ಯಾರಾದರೂ ಸಿಕ್ಕಾರೆಯೇ ಎಂದು ಈ ಜನ ಯಾವಾಗಲೂ ಜನರನ್ನು ಹುಡುಕುತ್ತಿರುತ್ತಾರೆ. ಭಾರತದಲ್ಲೇ ಹುಟ್ಟಿ ಬೆಳೆದವರಿಗೆ ಜನರಿಲ್ಲದ ಫಿನ್ಲೆಂಡನ್ನು
ಕಲ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ.
ಕರ್ನಾಟಕದ ಪಶ್ಚಿಮದ ಘಾಟಿಗೆ ಹೋಗಿರುತ್ತೀರಿ ಎಂದಿಟ್ಟುಕೊಳ್ಳಿ. ಮೈಲಿಗೋ ಹತ್ತು ಮೈಲಿಗೋ ಸಿಗುವ ಮನೆ, ಪ್ರಯಾಣಿಸುತ್ತಿರುವ ವಾಹನದ ಸೌಕರ್ಯ, ಮತ್ತೆ ಜನನಿಬಿಢ ಊರಿಗೆ ಹಿಂದಿರುಗುತ್ತೇವೆಂಬ ನಂಬಿಕೆಯಿಂದಾಗಿ ಆ ಘಟ್ಟಗಳು ಸೊಗಸಾಗಿ ಕಾಣುತ್ತವೆ. ಅಂತಹ ಒಂದು ಪ್ರಯಾಣದಿಂದ ಹಿಂದಿರುಗುವಾಗ ನಿಮ್ಮ ಜನನಿಬಿಡ ಊರು ಎಂದಿಗೂ ಸಿಗದೆ, ಆ
ಘಟ್ಟವೇ ಚಿರಕಾಲ ಪುನರಾವರ್ತನೆಯಾಗುತ್ತಿದೆ ಎಂದಿಟ್ಟುಕೊಳ್ಳಿ. ಬೇಗ ಈ ಕನಸಿನಿಂದ ಎದ್ದರೆ ಸಾಕಪ್ಪ ಎಂದು ನೀವು ಬೇಡಿಕೊಳ್ಳತೊಡಗುತ್ತೀರ. ನೀವು ಸಿನೆಮ ನಟರಾದರೆ ನಾಟಕೀಯವಾಗಿ
ಕೈಯನ್ನೂ ಇನ್ನೊಂದರಿಂದ ಚಿವುಟಿಕೊಳ್ಳುತ್ತೀರಿ. ಮನೆ, ಜನ, ಮನೆಮಟಗಳಿಂದ ತುಂಬಿರುವ ಜನನಿಭಿಡ ಊರಿನ ಸೊಬಗೇ ಬೇರೆ. ಟ್ರಾಫಿಕ್ ಜಾಸ್ತಿಯಾದಷ್ಟೂ ವೇಗದ ಅಪಘಾತದ ಭಯ ಮಾಯವಾಗುವುದಿಲ್ಲವೆ ಹಾಗೆ.
ಈ ಪ್ರವಾಸ ಕಥನದ ಇತರ ಭಾಗಗಳು