ವೂಲ್ಫಾಮ್ ಆಲ್ಫಾ ಎಂಬ ಸರ್ವಜ್ಞ

ವೂಲ್ಫಾಮ್ ಆಲ್ಫಾ ಎಂಬ ಸರ್ವಜ್ಞ

ಬರಹ

ಗೂಗಲ್ ಶೋಧ ಸೇವೆಯನ್ನು
ಬಳಸದವರೇ ಇಲ್ಲ. ಒಂದು ಪದಗುಚ್ಚ ನೀಡಿದಾಗ
, ಅಂತ ಪದಗುಚ್ಚ ಇರುವ ಅಂತರ್ಜಾಲ ಪುಟಗಳ ಪಟ್ಟಿಯನ್ನು ನೀಡುವ
ಮಾಯಕವನ್ನದು ಕ್ಷಣಮಾತ್ರದಲ್ಲಿ ಮಾಡುತ್ತದೆ. ನಿಮಗೆ ಬೇಕಾದ ಮಾಹಿತಿಯು ಪಟ್ಟಿಯ ಮೊದಲಿಗೇ ಇರುವ ಸಾಧ್ಯತೆಯೇ
ಹೆಚ್ಚು ಎನ್ನುವುದು ಗೂಗಲಿನ ಹೆಗ್ಗಳಿಕೆ.ಇದಕ್ಕಿಂತ ಭಿನ್ನ ಫಲಿತಾಂಶ ನೀಡುವ ವೂಲ್‌ಫಾರ್ಮ್ ಆಲ್ಫಾ
ಎಂಬ ಸೇವೆ ಇನ್ನೇನು ಮೇ ಹದಿನೆಂಟರಿಂದ ಲಭ್ಯವಾಗಲಿದೆ. ಈ ಸೇವೆಯಲ್ಲಿ
, ಪದಗುಚ್ಛಕ್ಕೆ ಸಂಬಂಧಿಸಿದ
ಪುಟಗಳನ್ನು ಪಟ್ಟಿ ಮಾಡುವ ಬದಲಿಗೆ
,ಅದಕ್ಕೆ ಸಂಬಂಧಿಸಿದಂತೆ cnnಅಂತರ್ಜಾಲದಲ್ಲಿ ಲಭ್ಯವಿರುವ ಅಧಿಕೃತ
ಮಾಹಿತಿಗಳನ್ನು ಕ್ರೋಡೀಕರಿಸಿ
, ವಿಸ್ತೃತ ವರದಿಯನ್ನು ತಯಾರಿಸಿಕೊಡಲು ಶೋಧ ಇಂಜಿನ್ ಶಕ್ತವಾಗಿದೆ.
ಈ ವರದಿಯಲ್ಲಿ ಬರೇ ಪುಟಗಟ್ಟಲೆ ಶಬ್ದಾಡಂಬರದ ಬದಲಿಗೆ
,ನಕ್ಷೆ,ಚಿತ್ರ ಹೀಗೆ ವೈವಿಧ್ಯಮಯ ಮಾಹಿತಿಯನ್ನು ಬಳಸಿಕೊಳ್ಳಲಾಗುತ್ತದೆ.

-----------------------------------------------

ಅಂತರ್ಜಾಲ:ಉಚಿತ ಅನುಚಿತ?

ಹಲವಾರು ಪತ್ರಿಕೆಗಳು,ಟಿವಿ ಚಾನೆಲುಗಳ ಒಡೆಯ
ರೂಪರ್ಟ್ ಮುಡ್ರೋಕ್ ಅವರು ಅಂತರ್ಜಾಲದಲ್ಲಿ ಪತ್ರಿಕೆಗಳ ಆನ್‌ಲೈನ್ ಆವೃತ್ತಿಗಳನ್ನು ಪುಕ್ಕಟೆಯಾಗಿ
ಒದಗಿಸುವ ಪರಿಪಾಠಕ್ಕೆ ವಿದಾಯ ಹೇಳಲು ಬಯಸಿದ್ದಾರೆ. ಈ ವರ್ಷಾಂತ್ಯಕ್ಕೆ ಇಂತಹ ಪರಿಪಾಠ ನಿಲ್ಲಬಹುದು
ಎಂದು ಅವರ ಲೆಕ್ಕಾಚಾರ.ಕುಸಿಯುತ್ತಿರುವ ಪತ್ರಿಕಾ ಪ್ರಸಾರ ಸಂಖ್ಯೆಯಿಂದ ಅವುಗಳ ಜಾಹೀರಾತು ಆದಾಯದಲ್ಲಿ
ಕಡಿತ ಉಂಟಾಗಿದೆ. ಅವನ್ನು ನಡೆಸುವುದು ಕಠಿನವಾಗಿದೆ. ಹಾಗಾಗಿ ಅಂತರ್ಜಾಲ ಆವೃತ್ತಿಗಳಂತಹ ಸೇವೆಯನ್ನು
ಪಡೆಯಲು ಬಳಕೆದಾರರಿಗೆ ನಿಗದಿತ ಶುಲ್ಕ ವಿಧಿಸುವುದು ಅನಿವಾರ್ಯ ಎಂದು ಮುಡ್ರೋಕ್ ಅವರ ವಾದ. ಇದಕ್ಕೆ
ಇತರ ಪತ್ರಿಕೆಗಳವರೂ ದನಿಗೂಡಿಸುತ್ತಾರಾದರೂ
, ಇಂತಹ ಪ್ರಯತ್ನ ಯಶಸ್ವಿಯಾಗುತ್ತದೋ ಎಂದು ಸಂಶಯ ಪಡುವವರ
ಸಂಖ್ಯೆಯೂ ಧಾರಾಳವಾಗಿದೆ. ಕೆಲವರಾದರೂ ತಮ್ಮ ಪುಟಗಳನ್ನು ಉಚಿತವಾಗಿ ಒದಗಿಸುವುದನ್ನು ಮುಂದುವರಿಸದೆ
ಇರರು-ಹಾಗಾದಾಗ ದುಡ್ಡು ತೆತ್ತು ಪುಟ ವೀಕ್ಷಿಸಲು ಬಳಕೆದಾರರು ಮನ ಮಾಡುತ್ತಾರೆಯೋ ಎನ್ನುವುದಿವರ ಸಂಶಯ.
ಜತೆಗೆ ಬ್ಲಾಗ್ ಬರೆಯುವ ಹವ್ಯಾಸಿ ಬರಹಗಾರರ ಪ್ರತಿಸ್ಪರ್ಧೆ ಬೇರೆ.ದುಡ್ಡು ತೆತ್ತು ಪ್ರಖ್ಯಾತ ಮಾಧ್ಯಮ
ತಜ್ಞರ ಏಕಪಕ್ಷೀಯ ಬರಹಗಳನ್ನು ಓದುವುದಕ್ಕೆ ದುಡ್ಡು ತೆರಲು ಮುಂದೆ ಬರುವವರ ಸಂಖ್ಯೆ ಎಷ್ಟಿರ ಬಹುದು
ಎನ್ನುವುದು ಕುತೂಹಲಕಾರಿ.

------------------------------------------------------------

ಹೊಸ ವಿಂಡೋಸ್ 7

ವಿಂಡೋಸ್ ವಿಸ್ತಾದ ನಂತರವೀಗ ಮೈಕ್ರೋಸಾಫ್ಟ್ ಕಂಪೆನಿಯ ಹೊಸ ಕಂಪ್ಯೂಟರ್ ಕಾರ್ಯನಿರ್ವಹಣಾ ತಂತ್ರಾಂಶ
ವಿಂಡೋಸ್
7. ಇದರ ಪ್ರಾಯೋಗಿಕ ಉಚಿತ
ಆವೃತ್ತಿ ಅಂತರ್ಜಾಲದಲ್ಲಿ ಲಭ್ಯ.ವಿಸ್ತಾ ಬಳಕೆದಾರರು ಇದನ್ನು ಬಳಸಲಾರಂಭಿಸಿದರೆ
, ಮೈಕ್ರೋಸಾಫ್ಟ್ ತಾಂತ್ರಿಕ
ಸಹಾಯ ನೀಡಲು ಬದ್ಧ. ವಿಂಡೋಸ್-ಎಕ್ಸ್‌ಪಿ ಬಳಕೆದಾರರಿಗೆ ಅಂತಹ ಸೌಲಭ್ಯ ಇಲ್ಲ. ಹಾಗಾಗಿ ಎಕ್ಸ್‌ಪಿ
ಬಳಕೆದಾರರು ತಮ್ಮ ಕಂಪ್ಯೂಟರಿನ ಮಾಹಿತಿಯನ್ನು ಸುರಕ್ಷಿತ ಮಾಡಿ
,ಬಳಿಕವಷ್ಟೇ ತಂತ್ರಾಂಶ
ಅನುಸ್ಥಾಪಿಸುವುದು ಉಚಿತ.ಒಂದು ವರ್ಷದ ಬಳಿಕ ಈ ತಂತ್ರಾಂಶ ಕೆಲಸ ಮಾಡದು
, ಹಾಗಾಗಿ ವಿಂಡೋಸ್ 7ರ ಪೂರ್ಣ ಆವೃತ್ತಿಯನ್ನು ಖರೀದಿಸಲು ಸಾಧ್ಯವಿರುವವರು ಮಾತ್ರಾ
ವಿಂಡೋಸ್
7ನ್ನು ಬಳಸಲು ಹೊರಡುವುದು
ಒಳ್ಳೆಯದು. ಇಲ್ಲವಾದರೆ
, ಕಂಪ್ಯೂಟರ್‌ನ ಮಾಹಿತಿ
ಕಳೆದು ಕೊಳ್ಳುವ ಭೀತಿ ಇದೆ. ವಿಂಡೋಸ್
7ರಲ್ಲಿ ಹಲವು ತಂತ್ರಾಂಶಗಳು
ಕೆಲಸ ಮಾಡದಿರುವ ಅಪಾಯ ಬೇರೆ ಇದೆ.

-----------------------------------------------

ವೈಫೈ ಪ್ರೀ?

ನಿಸ್ತಂತು ಅಂತರ್ಜಾಲ ಸೌಲಭ್ಯವು ಹಲವೆಡೆ ಉಚಿತವಾಗಿ ಲಭ್ಯವಿರುವುದು ಈಗ ಸಾಮಾನ್ಯ. ಹೋಟೆಲುಗಳಲ್ಲಿ, ಪೆಟ್ರ‍ೋಲ್ ಬಂಕುಗಳಲ್ಲಿ
ನಿಸ್ತಂತು ಅಂತರ್ಜಾಲವನ್ನು ಲಭ್ಯವಾಗಿಸಿ
, ಲ್ಯಾಪ್‌ಟಾಪ್ ಬಳಕೆದಾರರು ಉಚಿತವಾಗಿ ಅಂತರ್ಜಾಲ ಜಾಲಾಟಕ್ಕೆ ಅವಕಾಶ ಕಲ್ಪಿಸುವುದು ವ್ಯವಹಾರ
ತಂತ್ರ. ಹೊಟೆಲುಗಳ ಕೊಠಡಿಗಳಲ್ಲೂ ಈ ಸೌಲಭ್ಯ ಒದಗಿಸುವುದು ಸಾಮಾನ್ಯವಾಗಿತ್ತು. ಆದರೆ ಈಗ ಈ ಪ್ರವೃತ್ತಿ
ಬದಲಾಗುತ್ತಿರುವುದು ಕಂಡು ಬಂದಿದೆ. ಆರ್ಥಿಕ ಹಿನ್ನಡೆಯಿಂದ ವ್ಯವಹಾರ ಕುಸಿದಿರುವ ಈ ಹೊತ್ತಿನಲ್ಲಿ
ತಮ್ಮ ಆದಾಯ ಮೂಲ ಹೆಚ್ಚಿಸಿಕೊಳ್ಳಲು
, ವೈಫೈ ಸೇವೆಯನ್ನು ಪಾವತಿ
ಸೇವೆಯಾಗಿ ಬದಲಾಯಿಸುವ ಹೆಜ್ಜೆಯನ್ನು ಹಲವೆಡೆ ಕೈಗೊಳ್ಳಲಾಗಿದೆ. ಅದರಲ್ಲೂ ಪಂಚತಾರಾ ಹೋಟೆಲುಗಳಲ್ಲಿ
ಕೊಠಡಿಯೊಳಗೆ ಈ ಸೇವೆ ಬೇಕಾದರೆ ಇಪ್ಪತ್ತು ಡಾಲರುಗಳಷ್ಟು ಅಧಿಕ ಬಾಡಿಗೆ ತೆರಬೇಕಾದೀತು. ಅದೇ ಅಗ್ಗದ
ಹೊಟೆಲುಗಳು ಈ ಸೇವೆಯನ್ನಿನ್ನೂ ಉಚಿತವಾಗಿಯೇ ನೀಡುತ್ತಿರುವ ಪ್ರವೃತ್ತಿ ವಿಶ್ವದ ಅನೇಕ ಕಡೆ ಇದೆ.
ಪಂಚತಾರಾ ಹೋಟೆಲಿನ ಕೆಲವು ಆಯ್ದ ಜಾಗಗಳಲ್ಲಿ ವೈಫೈ ಉಚಿತವಾಗಿ ಲಭ್ಯವಾಗಬಹುದು. ಆದರೆ ಕೊಠಡಿಯೊಳಗೆ
ಇಂತಹ ಸೇವೆಗೆ ದರ ನಿಗದಿ ಮಾಡಲಾಗಿದೆ.

------------------------------------------------------------

ಕಾಕ ಲಿಪಿ ಯಾವ ಭಾಷೆಯದ್ದು?

ವೆಬ್ ಪುಟ ಯಾವುದಾದರೂ ಭಾಷೆಯ ಲಿಪಿಯಲ್ಲಿದ್ದು,ಭಾಷೆ ಯಾವುದೆಂದು ಗೊತ್ತಾಗಲಿಲ್ಲವೇ? ಲಿಪಿಯ ಭಾಷೆಯನ್ನು blogಗುರುತಿಸುವ ಸೇವೆಯು http://www.whatlanguageisthis.com/ ಅಂತರ್ಜಾಲದ ತಾಣದಲ್ಲಿ
ಲಭ್ಯ. ಹಾಗೆಂದು ಇದು ಎಲ್ಲಾ ಭಾಷೆಯ ಲಿಪಿಗಳನ್ನೂ ಗುರುತು ಹಿಡಿಯಲು ಸಮರ್ಥವಾಗಿಲ್ಲ. ಆಯ್ದ ಭಾಷೆಗಳ
ಲಿಪಿಗಳ ಪೈಕಿ ಯಾವುದಾದರೂ ಭಾಷೆಯ ಲಿಪಿ ಆಗಿದ್ದರೆ ಮಾತ್ರಾ ಸೇವೆ ಸಮರ್ಪಕವಾಗಿ ಕೆಲಸ ಮಾಡುತ್ತದೆ.
ಹಾಗೆಯೇ ಗೂಗಲ್ ಕೂಡಾ ಲಿಪಿಯನ್ನು ಗುರುತಿಸುವ ಸೇವೆ ನೀಡುತ್ತದೆ.
http://www.google.com/uds/samples/language/detect.html ಪುಟದ ಲಿಪಿ ಪೆಟ್ಟಿಗೆಯೊಳಗೆ
ನೀವು ಗುರುತಿಸಬೇಕಾದ ಲಿಪಿಯ ಸಣ್ಣ ತುಣುಕನ್ನು ನಕಲು ಮಾಡಿ
, ಬಟನ್ ಅದುಮಿದರೆ ಸರಿ, ಗೂಗಲ್ ತನ್ನ ಭಾಷಾ ಭಂಡಾರದ ಯಾವ ಭಾಷೆಯ ಮಾಹಿತಿಯದು ಎಂದು ಪತ್ತೆ ಮಾಡಿ ಪ್ರದರ್ಶಿಸುತ್ತದೆ.


 

udayavani

*ಅಶೋಕ್‌ಕುಮಾರ್ ಎ