ಇದೇನಾ ಪತ್ರಿಕೋದ್ಯಮ? -2
ಜಾಗತೀಕರಣದ ಪ್ರಭಾವ (ಮುಂದುವರಿದ ಭಾಗ) ಜಾಗತೀಕರಣದ ಪ್ರಭಾವ ಮಾಧ್ಯಮದ ಮೇಲೂ ಗಾಢವಾಗಿದೆ. ಪರದೇಶಗಳ ಪತ್ರಿಕೆ/ಟಿವಿ ಚಾನೆಲ್‌ಗಳೇ ನಮ್ಮ ದೇಶದ ಪತ್ರಿಕೆ/ಟಿವಿ ಚಾನೆಲ್‌ಗಳಿಗೆ ಮಾದರಿ. ಅಲ್ಲಿ ಪ್ರಕಟವಾಗಿದ್ದೇ ಇಲ್ಲೂ ಪ್ರಕಟವಾಗಬೇಕು ಎಂಬ ಹಂಬಲ. ದಿನನಿತ್ಯ ನಡೆಯುವ ಅಪಘಾತಗಳ ಭೀಕರ ಘಟನೆಗಳನ್ನು ಲೈವ್ ಟೆಲಿಕಾಸ್ಟ್ ಮಾಡಲೆಂದೇ ಅಮೆರಿಕದಲ್ಲಿ ಕೆಲವು ಚಾನೆಲ್‌ಗಳಿವೆ, ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚಿಸಲು ಆಡ್ ಚಾನೆಲ್‌ಗಳು, ಇನ್ನೂ ಇಂಥವೇ ಹಲವು. ನಮ್ಮ ದೇಶದಲ್ಲೂ ಇವುಗಳ ಡಿಟ್ಟೊ. ಭಾರತದ ಪತ್ರಿಕೋದ್ಯಮಕ್ಕೆ ಅಮೆರಿಕ-ಇಂಗ್ಲೆಂಡ್ ಏಕೆ ಆದರ್ಶವಾಗಬೇಕು ಎಂಬುದು ನನ್ನ ಪ್ರಶ್ನೆ. ಅಲ್ಲಿನ ಸ್ಥಿತಿಗತಿಯೇ ಬೇರೆ. ಇಲ್ಲಿನದೇ ಬೇರೆ. ಇಂಗ್ಲೆಂಡಿನ ಪತ್ರಿಕೆಗಳಿಗೆ ಬರೆಯಲು ಬೇರೆ ಸುದ್ದಿಗಳಿಲ್ಲದೇ, ಅಲ್ಲಿನ ರಾಣಿ ಹೊಸ ಬೆಕ್ಕು ಸಾಕಿದ್ದು, ಖ್ಯಾತ ನಟಿಯೊಬ್ಬಳು 10 ಬಾರಿ ವಿಚ್ಛೇದನ ನೀಡಿದ್ದು, ರಾಜಕುಮಾರ ಚಾರ್ಲ್ಸ್ ಟೂತ್ ಪೇಸ್ಟಿನ ಕೊನೆಯ ಹುಂಡು ಇರುವವರೆಗೂ ಅದನ್ನು ಹಿಸುಕುತ್ತಲೇ ಇರುತ್ತಾನೆ ಎಂಬ ಬಗ್ಗೆಯೇ ಒಂದು ವರದಿ, ಹರೆಯದ ಹುಡುಗಿಯರು ತಮ್ಮ ಸ್ತನಗಳನ್ನು ದೊಡ್ಡದಾಗಿಸಿಕೊಳ್ಳಲು ಡಾಕ್ಟರ ಎದುರು ಸಾಲುಗಟ್ಟಿ ನಿಂತಿರುವುದರ ಬಗ್ಗೆಯೇ ಪುಟಗಟ್ಟಲೆ ಬರೆಯುತ್ತವೆ. ಈಚೆಗೆ ನಮ್ಮ ಪತ್ರಿಕೆ-ಟಿವಿ ಗಳು ಇದಕ್ಕಿಂತ ಭಿನ್ನವಾಗೇನೂ ವರದಿ ಮಾಡುತ್ತಿಲ್ಲ. ಹಾಗಿದ್ದರೆ ನಮ್ಮ ದೇಶದಲ್ಲಿ ಸಮಸ್ಯೆಗಳೇ ಇಲ್ಲವೇ? ಬರೀ ಸಮಸ್ಯೆಗಳಲ್ಲ, ಜ್ವಲಂತ ಸಮಸ್ಯೆಗಳಿವೆ, ಮೊಗೆದಷ್ಟೂ ಸಿಗುತ್ತವೆ. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತದೆ. ನಮ್ಮ ಹಳ್ಳಿಯ ಯುವಕರು ಅವರದ್ದೇ ಆದ ಕಲೆಯಲ್ಲಿ ಕೌಶಲ್ಯ ಪಡೆದಿದ್ದರೂ ಅದನ್ನು ಹೇಗೆ ಕ್ಯಾಶ್ ಮಾಡಿಕೊಳ್ಳಬೇಕು ಎಂದು ಗೊತ್ತಾಗದೇ ತೊಳಲಾಡುತ್ತಿದ್ದಾರೆ. ಗ್ರಾಮೀಣ ಯುವಕನೊಬ್ಬ ಅಂತರ್ಜಲವನ್ನು ಅಭಿವೃದ್ಧಿಪಡಿಸಿದ್ದು, ಕಾಡು ಬೆಳೆಸಿದ್ದು, ತನ್ನ ಅಲ್ಪ ಸಂಪನ್ಮೂಲದಿಂದಲೇ ಹೊಸತೊಂದು ವಸ್ತುವನ್ನು ಆವಿಷ್ಕಾರಗೊಳಿಸಿದ ಸುದ್ದಿಗಳಿಗೆ ಪತ್ರಿಕೆಗಳಲ್ಲಿ ಸೂಕ್ತ ಸ್ಥಾನವೇ ಸಿಗುತ್ತಿಲ್ಲ. ದಿನಕ್ಕೆ 10 ರೂಪಾಯಿ ದುಡಿಯಲು ನಮ್ಮ ಜನ ಪರದಾಡುತ್ತಿರುವಾಗ ಐಐಎಂ, ಐಐಟಿ ಪದವೀಧರರು ತಿಂಗಳೊಂದಕ್ಕೆ 25 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿರುವುದನ್ನು ನಮ್ಮ ಮಾಧ್ಯಮಗಳು ಮುಖಪುಟದಲ್ಲಿ ವರದಿ ಮಾಡುತ್ತವೆ. ಇಂಥ ಪ್ರತಿಷ್ಠಿತ ಸಂಸ್ಥೆಗಳಿಂದ ಕಲಿತು ಬಂದ ಪದವೀಧರರಲ್ಲಿ ಎಷ್ಟು ಜನ ನಮ್ಮ ದೇಶದ ಗ್ರಾಮೀಣ ಜನಜೀವನ ಹಸನುಗೊಳಿಸುವಲ್ಲಿ ಪ್ರಯತ್ನಿಸಿದ್ದಾರೆ ಎಂಬ ಬಗ್ಗೆ ಉತ್ತರ ಹುಡುಕಿದರೆ ನಿರಾಶಾದಾಯಕ ಫಲಿತಾಂಶ ದೊರಕುತ್ತದೆ. ತಿಂಗಳಿಗೆ 25 ಲಕ್ಷ ರೂಪಾಯಿ ಸಂಬಳ ಪಡೆಯುವಂಥ ಪದವೀಧರರನ್ನು ಉತ್ಪಾದಿಸುವ, ಪದವಿ ಪಡೆದ ಮೇಲೆ ಅಮೆರಿಕಕ್ಕೊ ಇನ್ನಾವುದೋ ದೇಶಕ್ಕೆ "ತಲೆ ಮಾರಿಕೊಳ್ಳುವ" ಇಂಥ ಪದವೀಧರರು ಕಲಿಯುವ ಸಂಸ್ಥೆಗಳಿಗೆ ನಮ್ಮ ಚಿದಂಬರಂ, ಮನಮೋಹನ್ ಸಿಂಗ್ ರಂಥ ಆಕ್ಸ್‌ಫರ್ಡ್ ರಿಟರ್ನ್ಡ್ ರಾಜಕಾರಣಿಗಳು ನೂರಾರು ಕೋಟಿ ರೂಪಾಯಿ ಅನುದಾನ ನೀಡುತ್ತಾರೆ. ಈ ಸಂಸ್ಥೆಗಳಿಗೆ ತೋರುವ ಮಮತೆಯ ಶೇಕಡಾ ಹತ್ತರಷ್ಟರನ್ನಾದರೂ ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸಿದ್ದರೆ ಲಕ್ಷಾಂತರ ಮಕ್ಕಳು ಇದರಿಂದ ಲಾಭ ಪಡೆಯುತ್ತಿದ್ದವು. ಗ್ರಾಮೀಣ ಪ್ರದೇಶಕ್ಕೆ, ಗ್ರಾಮೀಣಾಭಿವೃದ್ಧಿಗೆ ಗಾಂಧೀಜಿ ಕಂಡ ಕನಸಿಗೆ ಇದೇನಾ ಇವರು ಕೊಟ್ಟ ಮರ್ಯಾದೆ? ಇದನ್ನೆಲ್ಲ ಕಂಡು ಗಾಂಧಿಯಜ್ಜನ ಆತ್ಮ ಮಮ್ಮಲ ಮರಗುತ್ತಿರಬಹುದು. ಸತತ 25 ವರ್ಷಗಳಿಂದ ಆರಿಸಿ ಬರುತ್ತಿರುವ ಸೋಲಿಲ್ಲದ ಸರದಾರ, ನಮ್ಮ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ಗುಲ್ಬರ್ಗ ಜಿಲ್ಲೆಯ ಜೇವರ್ಗಿ ಕ್ಷೇತ್ರದ ಅನೇಕ ಶಾಲೆಗಳು ಇನ್ನೂ ಏಕೋಪಾಧ್ಯಾಯ ಶಾಲೆಗಳೇ ಆಗಿವೆ (ನಮ್ಮ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಾರ ಏಕೋಪಾಧ್ಯಾಯ ಶಾಲೆಗಳಲ್ಲಿ ಕನಿಷ್ಠ ಇಬ್ಬರು ಶಿಕ್ಷಕರ ನೇಮಕವಾಗಬೇಕು). ಇನ್ನು ಅಲ್ಲಿನ ರಸ್ತೆಗಳು ದೇವರಿಗೇ ಪ್ರೀತಿ. ರಾಜ್ಯದಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಇದೇ ಜಿಲ್ಲೆಯಲ್ಲಿ. ಇಂತಿಪ್ಪ ಧರಂ ಈಚೆಗೆ ಬೆಂಗಳೂರಿನಲ್ಲಿ ತಮ್ಮ ಮಗನ ಮದುವೆ ಸಂದರ್ಭದಲ್ಲಿ ಇಂದ್ರನ ಅರಮನೆಯನ್ನೇ ಭೂಮಿಗಿಳಿಸಿದ್ದರು. ಇವರು ಮದುವೆಗೆ ಮಾಡಿದ ಖರ್ಚು 50 ಕೋಟಿ ರೂಪಾಯಿಗಳಂತೆ. ಒಂದು ದಿನದ ಮದುವೆಗೆ ವ್ಯಯಿಸುವ ಹಣದಲ್ಲಿ ಎಷ್ಟು ನೂರು ಶಾಲೆಗಳನ್ನು ತೆರೆಯಬಹುದಾಗಿತ್ತು. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ! "ಆಮ್ ಆದ್ಮಿ" ತತ್ವ ಪಾಲಿಸುವ, ಸರಳ ಜೀವನ ನಡೆಸಿದ ಗಾಂಧೀಜಿಯನ್ನು ಗುತ್ತಿಗೆ ತೆಗೆದುಕೊಂಡಂತೆ ಮಾತನಾಡುವ ದೇಶದ ಅತ್ಯಂತ ಪುರಾತನ ಪಕ್ಷದ ಮುಖಂಡ ಧರಂ ಜಿ ಮೆರೆದ ಸರಳತನವಿದು. ಎಷ್ಟು ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟವಾಗಿದೆ? ಮುಂದುವರಿಯುತ್ತದೆ... ನಾಳೆ, ಅಭಿವೃದ್ಧಿ ಪತ್ರಿಕೋದ್ಯಮ.