ಸಪ್ತಗಿರಿ ಸಂಪದ (ಪೌರಾಣಿಕ ಕಥಾನಕ) - ಸಂಚಿಕೆ-2

ಸಪ್ತಗಿರಿ ಸಂಪದ (ಪೌರಾಣಿಕ ಕಥಾನಕ) - ಸಂಚಿಕೆ-2

ಬರಹ

ಸಂಚಿಕೆ-2 (ಮೊದಲ ಸಂಚಿಕೆಗೆ ನನ್ನ ಬ್ಕಾಗ್ ನೋಡಿ)

ಜಗತ್ತಿನಲ್ಲಿ ತನ್ನ ಕಥೆಯಿಂದಲೆ ಸುಪ್ರಸಿದ್ಧನಾಗಿರುವ ದೇವರೆಂದರೆ ಶ್ರೀರಾಮ. ಹಾಗೆಯೆ ಜಗತ್ತಿನಲ್ಲಿ ತನ್ನ ದರ್ಶನವಾಗುತ್ತಿದ್ದಂತೆಯೆ ಅತಿ ಹೆಚ್ಚು ಜನರಿಂದ ಕೈಮುಗಿಸಿಕೊಳ್ಳುತ್ತಿರುವ ಸುಪ್ರಸಿದ್ಧ ದೇವರೆಂದರೆ ತಿರುಮಲೇಶ ಶ್ರೀ ವೆಂಕಟೇಶ್ವರನೇ. ದಶವತಾರಗಳಲ್ಲಿ ಶ್ರೀರಾಮನದೂ ಒಂದು ಅವತಾರವೆ. ಶ್ರೀನಿವಾಸ, ವೆಂಕಟೇಶ್ವರನೆಂದು ಕರೆಸಿಕೊಳ್ಳುವ ಈ ಕಲಿಯುಗದ ಸಪ್ತಗಿರಿಯೊಡೆಯ ಜನರಿಗೆ ಅವತಾರ ಸ್ವರೂಪಿಯೆ. ಈ ಸಪ್ತಗಿರಿಯಲ್ಲಿ ಪ್ರತಿದಿನವೂ ಹಲವು ಹತ್ತು ಸಹಸ್ರ ಜನರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ ಈ ಸ್ವಾಮಿಯು ಸಾತ್ವಿಕ ಸುಖ ಭಂಗಿಯಲ್ಲಿ ನಿಂತಿರುವನು. ತನ್ನ ಸನ್ನಿಧಿಗೆ “ದೇಹಿ” ಎಂದು ಬಂದವರನ್ನು ಆದರಿಸುವೆನೆಂದೇ ತನ್ನೆರಡೂ ಕೈಗಳನ್ನು ಕಟಿಬಂಧದ ಮೇಲೆ ಇರಿಸಿ ಬಲಗೈ ವರದ ಹಸ್ತವನ್ನು ಕೆಳಗಿಳಿಸಿ ಮುಂದೆ ಚಾಚಿ ಅಭಯ ಪ್ರದಾನ ಮಾಡುತ್ತಿರುವನು. ಹಾಗೆ ಬಳಿ ಬಂದವರ ಕಷ್ಟಕಾರ್ಪಣ್ಯಗಳನ್ನೆಲ್ಲ ತನ್ನ ಪದತಲದಲ್ಲೆ ಹಾಕಿಕೊಂಡು ಕೈ ಬಿಡದೆ ಕಾಪಾಡುವೆನೆಂದೇ ಎಡದ ಕಟಿ ಹಸ್ತವನ್ನು ತನ್ನ ಪಾದ ಪದ್ಮಗಳೆಡೆಗೆ ಬಾಗಿಸಿರುವನು. ಇದನ್ನೇ “ಕಟ್ಯವಲಂಬಿತ ಮುದ್ರೆ” ಎನ್ನುವರು. ಹೀಗೆ ದಿನವೂ ಶ್ರೀ ಸ್ವಾಮಿಯ ಸನ್ನಿಧಾನಕ್ಕೆ ಬರವ ಭಕ್ತ ಜನರು, ಕೆಲ ವಿಶೇಷ ಸಂದರ್ಭಗಳಲ್ಲಿ ಲಕ್ಷಕ್ಕೂ ಹೆಚ್ಚು ಜನರು ಬರಿಗೈಲಿ ಬರದೆ ತಮ್ಮ ಹರಕೆ-ಕಾಣಿಕೆಗಳನ್ನು ತಂದು ಒಪ್ಪಿಸುವರು. ಜಗತ್ತಿನಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ಚರಣ ಕಮಲಗಳೆಡೆಯಲ್ಲಿ ಬಂದು ಬೀಳುವಷ್ಟು ದ್ರವ್ಯವೂ ಹಾಗೂ ಭಕ್ತರು ಹಿಂದಿರುಗುವಾಗ ತಮ್ಮ ಜೀವನೋಪಾಯಕ್ಕಾಗಿ ಆತ್ಮವಿಶ್ವಾಸದಿಂದ ಹೊತ್ತುಕೊಂಡು ಹೋಗುವಷ್ಟು ತುಂಬು ಭರವಸೆಯು ಬೇರೆಲ್ಲೂ ಕಾಣಸಿಗಲಾರದು.

ಮೊದಲ ಬಾರಿಗೆ ಶ್ರೀವೆಂಕಟೇಶ್ವರನ ದರ್ಶನ ಮಾಡುವ ಮುನ್ನವೇ ನನ್ನ ಮನಸ್ಸಿನಲ್ಲಿ ಈಗಾಗಲೆ ಹೇಳಿದಂತೆ ರಾಮಾಯಣ, ಮಹಾಭಾರತವನ್ನು ಹೊರತು ಪಡಿಸಿ ಬೇರೆ ಯಾವುದಾದರೂ ಪುರಾಣವನ್ನಾಧರಿಸಿ ನಾನೂ ಒಂದು ಹೊಸ ಪುರಾಣ ಕೃತಿಯನ್ನು ಬರೆಯಬೇಕೆಂದು ನಿರ್ಧರಿಸಿದ್ದೆನಲ್ಲವೇ? ಆದರೆ, ಅದು ವೆಂಕಟೇಶ ಪುರಾಣ ಕಥೆಯಾಗಿರುತ್ತದೆಂದು ಎಂದಿಗೂ ಭಾವಿಸಿರಲಿಲ್ಲ. ನಮ್ಮ ಕುಟುಂಬದ ಆರಾಧ್ಯ ದೈವ ಅವನೇ ಆಗಿದ್ದರೂ ಆ ಯೋಚನೆ ಎಂದೂ ನನಗೆ ಬಂದಿರಲಿಲ್ಲ... ಟೆಲಿಕಾಂ ಇಲಾಖೆ (ಇಂದಿನ ಬಿಎಸ್ ಎನ್ ಎಲ್) ಯಲ್ಲಿ ನೌಕರಿಯಲ್ಲಿದ್ದ ನಾನು ಪ್ರತಿ ಶನಿವಾರ ನಮ್ಮ ಪದ್ಧತಿಯಂತೆ ಪೂಜೆ ಮಾಡಬೇಕಾದವನು, “ಜಗತ್ತಿನಲ್ಲಿ ಕಳ್ಳಕಾಕರ ದುಡ್ಡೂ ಸೇರಿದಂತೆ, ಹೆಚ್ಚಿನ ದುಡ್ಡೆಲ್ಲ ಈ ಗೋವಿಂದನ ಪಾದಕ್ಕೇ ಹೋಗಿ ಬೀಳುತ್ತದೆ, ನನ್ನಂಥ ಸಾಮಾನ್ಯನು ಪೂಜೆ ಮಾಡಿದರೇನು ಬಿಟ್ಟರೇನು! ಕಛೇರಿಗೆ ಹೊತ್ತಾಯಿತು” ಎಂದು ಹೆಂಡತಿಗೆ ಹೇಳಿ ಹೊರಟು ಹೋಗಿ ಬಿಡುತ್ತಿದ್ದವನು ನಾನು. ಈಗ ಸಪ್ತಗಿರಿ ಸಂಪದದಂಥ ಪೌರಾಣಿಕ ಕೃತಿ ನಾನು ಬರೆಯುವುದೆಂದರೇನು ಎಂದೇ ಮೊದಲ ಬಾರಿಗೆ ಆ ದೇವನ ದರ್ಶನವಾದಂದಿನಿಂದ ಅವನೇ ಪ್ರೇರಣೆ ಮಾಡಿದ್ದರೂ, ವರ್ಷಗಳಿಂದಲೂ ಬರೆಯಲು ಹಿಂದೇಟು ಹಾಕುತ್ತಿದ್ದವನಿಂದ, ಆ ದೇವನೇ “ನಾ ನಿನ್ನಿಂದ ಬರೆಸಿಕೊಳ್ಳದೇ ಬಿಡೆನು” ಎಂದೇ ಈ ಕೃತಿಯನ್ನು ಬರೆಸಿಕೊಂಡಿದ್ದಾನೆಂದೇ ಇಂದಿಗೂ ಖಂಡಿತವಾಗಿ ಹೇಳುತ್ತಿದ್ದೇನೆ. ಇದೀಗ ಪ್ರತಿ ಶನಿವಾರ ಹಣೆಗೆ ಒಂದು ಕೆಂಪು ನಾಮ ಹಚ್ಚಿಕೊಂಡು ಪೂಜೆ ಮಾಡಿದನಂತರವೇ ಮನಸ್ಸಿಗೆ ನೆಮ್ಮದಿ. ಆನಂತರ,ಮನೆಯಿಂದ ಹೊರ ಬಿದ್ದರೆ ಹಣೆಯಲ್ಲಿ ನಾಮ ತಂತಾನೆ ಕಾಣೆಯಾಗಬೇಕಷ್ಟೇ. ನನ್ನ ಸ್ನೇಹಿತರ ವಲಯದಲ್ಲಿ ನನ್ನ ಹಣೆಯಲ್ಲಿ ನಾಮವಿದೆಯೆಂದರೆ, ಅದು ಶನಿವಾರವೆಂಬದು ಅವರಿಗೆ ಖಂಡಿತ ನೆನಪಾಗುತ್ತದೆ.

ಭಾರತದಲ್ಲಿ ಹಣವೆ ಮಾತನಡುವುದು ಎನ್ನುವವರಿದ್ದಾರೆ. ಆದರೂ ಇಲ್ಲಿ ಭಗವಂತನೊಡನೆ ಮಾತನಾಡುವವರಿಗೇನೂ ಕಡಿಮೆಯಿಲ್ಲ. ಕಡಿಮೆಯಾಗುವುದೂ ಇಲ್ಲ. ಇಲ್ಲಿ ದೇವರ ಹೆಸರಿನಲ್ಲಿ ಬೆದರಿಗೆ ಪತ್ರಗಳೂ ಹಾಗೂ ಸುಳ್ಳು ಸೃಷ್ಟಿಗಳಿಗೆ ಲೆಕ್ಕವಿಲ್ಲ. ಭಕ್ತರಿಗೆ ಸುಲಿಗೆಗಳೂ ನಿಲ್ಲುವುದಿಲ್ಲ. ದೇವರ ಹೆಸರಿನಲ್ಲೇ ಹಣ ಮಾಡುವವರೂ ಇರುವರಲ್ಲ! ಆದರೇನು! ಜಗತ್ತಿನಲ್ಲಿ ಮಾನವತ್ವದ ಭದ್ರ ಬುನಾದಿ ದೈವತ್ವವೇ ಆಗಿರುವುದು. ಆದುದರಿಂದ ದೇವರ ಪರಿಕಲ್ಪನೆ ಹುಸಿಯಲ್ಲ;ಅದೆಂದಿಗೂ ಅಳಿಯುವುದಿಲ್ಲ. ಮತ್ತೆ ಮತ್ತೆ ಈ ನೆಲದ ಮೇಲಿನ ಮನುಷ್ಯರ ಬದುಕಿನ ಜಂಜಡದ ಮಧ್ಯೆಯೆ ಆ ದೈವತ್ವವೆಂಬುದು ಸಾಕಾರ ತಳೆಯುತ್ತಲೇ ಇರುತ್ತದೆ. ಹೌದು, ಭಾರತೀಯರಿಗೆಂದಿಗೂ ಭಗವಂತನನ್ನು ಕಾಣುವ ಬಗೆ ಅನೇಕಾನೇಕ. ಭಗವಂತನಿಲ್ಲದ ಕೋಟ್ಯಂತರ ಭಾರತೀಯರ ಬದುಕನ್ನು ನಾವು ಊಹಿಸಿಕೊಳ್ಳಲಾರೆವು. ಆವರ ಬಹಳಷ್ಟು ಭವರೋಗಗಳಿಗೆ ಆತನಲ್ಲೇ ದಿವ್ಯೌಷಧ ದೊರಕುವುದೂ ಕೂಡ. ಈ ದೈವ ಶ್ರದ್ಧೆ , ನಂಬಿಕೆ ನಮ್ಮ ಸನಾತನ ಪರಂಪರೆಯಲ್ಲಿ ವಿಶ್ವವನ್ನೇ ಬೆರಗುಗೊಳಿದೆಯಲ್ಲ...!

ಸಾಮಾನ್ಯವಾಗಿ ನಮ್ಮ ಪುರಾಣ ಕಥೆಗಳಲ್ಲಿ ಭಕ್ತಿ ರಸವೇ ಪ್ರಧಾನವಾಗಿ ಎದ್ದು ತೋರುತ್ತದೆ. ಭಗವಂತನ ಲೀಲೆಗಳ ಸ್ವಾರಸ್ಯ, ರಹಸ್ಯ ಗ್ರಹಿಸುವುದೂ ಅಷ್ಟೇ ಅತ್ಯಗತ್ಯ. ಪೂರ್ವ ಜನ್ಮ ಸಿದ್ಧಾಂತದೊಂದಿಗೆ ನಮ್ಮ ಕರ್ಮಫಲಗಳ ಅವಲೋಕನ. ಬುದ್ಧನಿಗೆ ತನ್ನ ಹಿಂದಿನ ಐದು ನೂರು ಜನ್ಮಗಳ ನೆನಪಿತ್ತು ಎನ್ನುತ್ತಾರೆ. ಇಂದಿನ ವೈಜ್ಞಾನಿಕ ಜಗತ್ತಿನಲ್ಲೂ ಪೂರ್ವಜನ್ಮ ಸ್ಮರಣೆಯಂಟಾದವರ ಉದಾಹರಣೆಗಳೆಷ್ಟಿಲ್ಲ...! ಯಾಕೆಂದರೆ, ಶ್ರೀವೆಂಕಟೇಶ ಪುರಾಣದಲ್ಲಿ ಪೂರ್ವ ಜನ್ಮ ಸ್ಮರಣೆಯ ಸಂಗತಿಗಳು ಬರುತ್ತವೆ. ಶ್ರೀ ಕೃಷ್ಣಾವತಾರದಲ್ಲಿ ತಾಯಿ, ಯಶೋಧೆ “ಕೃಷ್ಣಾ ಈ ಜನ್ಮದಲ್ಲಿ ನಿನ್ನ ಕಲ್ಯಾಣ ನೋಡುವ ಭಾಗ್ಯವೊದಗಲಿಲ್ಲ ನನಗೆ” ಎನ್ನುತ್ತಾಳೆ. “ಮುಂದೆ ಕಲಿಯುಗದಲ್ಲಿ ಶ್ರೀನಿವಾಸನಾಗಿ ಬರುವೆನಮ್ಮಾ.. ಆಗ ಈ ಶ್ರೀನಿವಾಸನ ಕಲ್ಯಾಣವನ್ನು ಕಣ್ತುಂಬ ನೋಡುವಿಯಂತೆ” ಎಂಬುದಾಗಿ ತಾಯಿಯಾಸೆ ಪೂರೈಸುವ ವಾಗ್ದಾನ ಮಾಡುತ್ತಾನೆ ಕೃಷ್ಣ. ಆದರೇನು! ಶ್ರೀನಿವಾಸನ ಕಲ್ಯಾಣವನ್ನು ತಾನು ಬಕುಳಾದೇವಿಯಾಗಿ ಬಂದು ನೋಡಲು ಯಶೋಧೆ ಒಂದು ಯುಗವನ್ನೇ ಕಾಯಬೇಕಾಗುತ್ತದೆ. ಇನ್ನು ದೇವರನ್ನೇ ಗಂಡನಾಗಿ ಪಡೆಯಲು ವೇದವತಿ ಎರಡು ಯುಗಗಳನ್ನೇ ಕಳೆಯಬೇಕಾಗುತ್ತದೆ.

ಇನ್ನು ಕಲಿಯುಗದಲ್ಲಿ ದೇವರಂಥ ಗಂಡ ಸಿಗಬೇಕೆಂದರೆ ಸುಲಭವೇನು? ದೇವರೇ ಗಂಡನಾಗಿ ಬರುವುದೆಂದರೆ ಎರಡು ಯುಗಗಳೇ ಕಾಯಬೇಕಾಗಿ ಬಂದರೂ ಆಶ್ಚರ್ಯವೇನಿಲ್ಲ. ಹೌದು,ದೇವರಂಥ ಗಂಡ, ದೇವರಂಥ ಅಳಿಯ, ಮಹಾಲಕ್ಮ್ಷಿಯಂಥ ಗೃಹ ಲಕ್ಮ್ಷಿಯೆ ಸಿಗಬೇಕಾದರೆ ಜನ್ಮ ಜನ್ಮಗಳ ಪುಣ್ಯ ಫಲವೇ ಸರಿ.

ಸಪ್ತಗಿರಿಯೊಡೆಯನ ಸಂದೇಶ ಸತ್ವಗುಣದ ಹಿರಿಮೆಯೆ... ಆ ದೇವನ ಪುಣ್ಯ ದರ್ಶನದಿಂದ ಪ್ರೇರಿತನಾಗಿ ನಾನು ಬರೆದ ಭಕ್ತಿಗೀತೆ :-
ಮಹಾವಿಷ್ಣು ಧರೆಗೆ ಬಂದ ಮಹಾ ಪುಣ್ಯ ನಮಗೆ ತಂದ.
ಬನ್ನಿ ಬನ್ನಿ ಭಕ್ತರೆ ಇಲ್ಲೇ ಇದೆ ಸ್ವರ್ಗವು|
ಪಾಪ ಕರ್ಮ ಕಳೆಯುವ ಭೂವೈಕುಂಠವು ||ಪ||

ಋಷಿ ಪುಂಗವರಿಚ್ಛೆಯಂತೆ ಯಜ್ಞಫಲವನರ್ಪಿಸಲು
ಬ್ರಹ್ಮ ವಿಷ್ಣು ಮಹೇಶ್ವರಗೆ ಸತ್ವ ಪರೀಕ್ಷೆಯಾಗಲು
ಸ್ವಾಮಿಗೆ ಅಪಚಾರವಾಗೆ ಮಹಾಲಕ್ಮ್ಷಿ ಮುನಿದಳು
ಭಗವಂತನ ತೊರೆದಳು ಕೊಲ್ಹಾಪುರ ಸೇರಿದಳು ||1||

ಗೃಹಲಕ್ಮ್ಷಯೆ ತಾಮುನಿಯೆ ಸಂತನಂತೆ ಶ್ರೀಹರಿಯು
ಶೇಷಗಿರಿಗೆ ಬಂದನು ವಲ್ಮೀಕದಿ ಕುಳಿತನು
ಜಗದ ಚಿಂತೆ ಹೊತ್ತನು ಘೋರ ತಪವಗೈದನು
ಧರ್ಮ ಸಂರಕ್ಷಣೆಗೆ ಶ್ರೀನಿವಾಸನಾದನು ||2||

ಶ್ರೀಲಕ್ಮ್ಷಿಯ ಅಂಶಜಳೆ ಪದ್ಮಾವತಿ ಬಂದಳು
ಶ್ರೀಕಾಂತನ ವರಿಸುತಲಿ ಶ್ರೀನಿಧಿಯೆ ಆದಳು
ಜಗದ ಜನರ ಕಲ್ಯಾಣಿ ನೇಮ ನಿಷ್ಠೆಗೊಲಿವಳು
ಸಾತ್ವಿಕ ಸಂಪ್ರೀತೆ ನಿತ್ಯವಂದೆಯಾದಳು ||3||

ಸತ್ವಗುಣದ ಹಿರಿಮೆಗೆ ರಜೋಗುಣದ ಹಿಡಿತಕೆ
ತಮೋಗುಣದ ಅಳಿವಿಗೆ ವೈವಾಹಿಕ ಜೀವನಕೆ
ಆದರ್ಶದ ಉಳಿವಿಗೆ ಸಾರುತಿಹನು ಸಂದೇಶ
ಇಂದ್ರಿಯ ಕಲ್ಯಾಣದಲಿ ಲೋಕ ಕಲ್ಯಾಣಕೆ ||4||

ಸಂಕಟಗಳ ಕಳೆಯುವ ಶ್ರೀ ವೆಂಕಟೇಶನು
ನಂಬಿಕೆಯ ನಾಕದಲಿ ಸರ್ವರನು ಕಾಯವನು
ಕಲ್ಕಿರೂಪಿ ಕಾರಣನು ಸಪ್ತಗಿರಿಯ ಒಡೆಯನು
ಸಂಪದವ ಕರುಣಿಸುವ ಸಾತ್ವಿಕ ಸಂಪನ್ನನು ||5||

-ಎಚ್.ಶಿವರಾಂ, ಜುಲೈ26, 2006