ಇದೇನಾ ಪತ್ರಿಕೋದ್ಯಮ? - 3

ಇದೇನಾ ಪತ್ರಿಕೋದ್ಯಮ? - 3

ಅಭಿವೃದ್ಧಿ ಪತ್ರಿಕೋದ್ಯಮ

(ಮುಂದುವರಿದ ಭಾಗ)

ನಮ್ಮ ಮಾಧ್ಯಮದಲ್ಲಿನ ವರದಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇವು ನಗರದ ಗಡಿ ಬಿಟ್ಟು ಆಚೆಗೆ ಹೋಗುತ್ತಿರುವಂತೆ ಕಾಣುವುದಿಲ್ಲ.

ಈಗಾಗಲೇ ಪ್ರಶಸ್ತಿ ಪಡೆದವರನ್ನೇ, ಹಣವಿದ್ದವರನ್ನೇ ಮತ್ತೆ ಮತ್ತೆ ಪ್ರಶಸ್ತಿಗೆ ಆಯ್ಕೆ ಮಾಡುವುದು ರೂಢಿ. ವರ್ಷ ವರ್ಷವೂ ಹನುಮನ ಬಾಲದಂತೆ ಬೆಳೆಯುವ ನಮ್ಮ ರಾಜ್ಯೋತ್ಸವ ಪ್ರಶಸ್ತಿಯೇ ಇದಕ್ಕೆ ಉತ್ತಮ ಉದಾಹರಣೆ.

ಅದರೆ ಗ್ರಾಮೀಣ ಪ್ರದೇಶದಲ್ಲಿ ಎಲೆ ಮರೆಯ ಕಾಯಿಯಂತೆ ಇದ್ದು, ತಮ್ಮ ನಿಯಮಿತ ಸಂಪನ್ಮೂಲದಲ್ಲೇ ಸಮಾಜದಲ್ಲಿ ಬದಲಾವಣೆ ತರುವಂಥ ಸಾಧನೆ ಮಾಡಿದ ನಿಸ್ಪೃಹ ವ್ಯಕ್ತಿಗಳನ್ನು ಗುರುತಿಸುವ ಶ್ಲಾಘನೀಯ ಕಾರ್ಯವನ್ನು ಕನ್ನಡಪ್ರಭ ಕಳೆದೆರಡು ವರ್ಷಗಳಿಂದ ಮಾಡುತ್ತಿರುವುದು ಇದ್ದುದರಲ್ಲೇ ಸ್ವಲ್ಪ ನೆಮ್ಮದಿ ತಂದಿದೆ.

ಮಂಗಳೂರು ಬಳಿ ಗ್ರಾಮದಲ್ಲಿ ಕಿತ್ತಳೆ ಹಣ್ಣು ಮಾರಿಯೇ ಜೀವನ ಸಾಗಿಸುವ ನಿರಕ್ಷರಿ ಹಾಜಬ್ಬ ಸ್ಥಳೀಯ ಶಾಲೆಯೊಂದನ್ನು ಅಭಿವೃದ್ಧಿಗೊಳಿಸಿದ್ದೊಂದು ಯಶೋಗಾಥೆ. ಅದೇ ರೀತಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಕಾಕೋಳು ಗ್ರಾಮದ ಚೆನ್ನಬಸಪ್ಪ ಕೊಂಬಳಿ ಜಲಕೊಯ್ಲು ಮಾಡಿ ನೀರಿನ ಸೆಲೆಯ ಬತ್ತಿ ಹೋಗಿದ್ದ ಗ್ರಾಮದಲ್ಲಿ ಹೊಸ ಭರವಸೆ ತಂದ ಭಗೀರಥ. ಇಂಥವರನ್ನು ಗುರುತಿಸಿದ ಕನ್ನಡಪ್ರಭದ ಸಾಧನೆ ಕಡಿಮೆಯೇನಲ್ಲ. ಇತರರಿಗೆ ಸ್ವಾವಲಂಬನೆಯ ಸ್ಫೂರ್ತಿ ಕೊಡುವ ಇಂಥ ವರದಿಗಳು ಇಂದು ತೀರಾ ಅಗತ್ಯ.

80 ರ ದಶಕದಲ್ಲೂ ಇಂಥದೇ ರೀತಿಯ ಪ್ರಯತ್ನವನ್ನು ಉದಯವಾಣಿಯೂ ಮಾಡಿತ್ತು. ಆಗ ಶ್ರೀ ಈಶ್ವರ ದೈತೋಟರ ನೇತೃತ್ವದಲ್ಲಿ ನಡೆದ "ಕುಗ್ರಾಮ ಗುರುತಿಸಿ" ಯೋಜನೆಯಡಿ, ಪ್ರತೀ ವಾರವೂ ಈ ವರೆಗೆ ಬೆಳಕಿಗೆ ಬಾರದ ದಕ್ಷಿಣ ಕನ್ನಡದ ಕುಗ್ರಾಮಗಳನ್ನು ಗುರುತಿಸಿ, ಅಲ್ಲಿನ ಸಮಸ್ಯೆ-ಸಾಮರ್ಥ್ಯಗಳನ್ನು ಪಟ್ಟಿ ಮಾಡಿ ವರದಿ ಮಾಡುತ್ತಿದ್ದುದು ಕನ್ನಡ ಪತ್ರಿಕೋದ್ಯಮದಲ್ಲೇ ಒಂದು ಮೈಲಿಗಲ್ಲು. "ಕುಗ್ರಾಮ ಗುರುತಿಸಿ" ಲೇಖನ ಮಾಲೆ ಭಾರಿ ಜನಪ್ರಿಯತೆ ಕಂಡಿತು. ಬಸ್ಸು ಕಾಣದ ಊರುಗಳಲ್ಲಿ ಬಸ್ಸಿನ ಸಂಚಾರವಾಯಿತು, ಶಾಲೆಯಿದ್ದೂ ಶಿಕ್ಷಕರು ಹೋಗದ ಊರಿಗೆ ಅವರು ದೌಡಾಯಿಸಿದರು, ಇನ್ನೂ ಎಷ್ಟೋ ಊರುಗಳು ಆಸ್ಪತ್ರೆಗಳನ್ನು ಕಂಡವು, ಕುಂಭಕರ್ಣ ನಿದ್ರೆಯಲ್ಲಿದ್ದ ಜನಪ್ರತಿನಿಧಿಗಳು ಎಚ್ಚೆತ್ತರು, ಕಂದಾಯವನ್ನು ಮಾತ್ರ ವಸೂಲಿ ಮಾಡಿ ಅಭಿವೃದ್ಧಿಯ ಕಡತ ಮುಚ್ಚಿಟ್ಟಿದ್ದ ಸರಕಾರಿ ಬಾಬುಗಳು ತಡಬಡಾಯಿಸಿ ಹುಡುಕಾಡಿದರು... ಹೀಗೆ ಆ ಲೇಖನ ಸರಣಿ ಮಾಡಿದ ಪ್ರಭಾವ ಒಂದೆರಡಲ್ಲ. ಪತ್ರಿಕೆಯೊಂದರ ತಾಕತ್ತು-ಉದ್ದೇಶ ಇದೇ ಅಲ್ಲವೇ?

ಆದರೆ ನಮ್ಮ ಮಾಧ್ಯಮಗಳಲ್ಲಿ ಇಂಥ ಎಷ್ಟು ಸುದ್ದಿಗಳು ಈಗ ಪ್ರಕಟವಾಗುತ್ತವೆ. ವಾರಕ್ಕೆ ಶೇಕಡಾ ಒಂದರಷ್ಟೂ ಅಲ್ಲ ಅನ್ನೋದೇ ಬೇಜಾರಿನ ವಿಷಯ.

ಭಾರತದಂಥ ಸಮಸ್ಯೆಗಳ ಆಗರವಾಗಿರುವ ದೇಶದಲ್ಲಿ ಕುಗ್ರಾಮ ಗುರುತಿಸಿಯಂಥ ವರದಿ/ಲೇಖನ ಸರಣಿಗಳು ಪ್ರಕಟವಾದರೆ ನಮ್ಮ ಎಷ್ಟೊಂದು ಗ್ರಾಮೀಣ ಜನರ ಬದುಕು ಹಸನವಾಗುತ್ತದೆ. ನಮ್ಮ ಗಾಂಧಿತಾತ ಕಂಡ ಕನಸಿನ ಭಾರತ ಕೂಡ ಇದೇ. ಆ ಕನಸಿನ ಭಾರತ ಬೇಗ ನಿರ್ಮಾಣವಾಗಲಿ, ಇದರಲ್ಲಿ ಮಾಧ್ಯಮ ತನ್ನ ಮಹತ್ವದ ಪಾತ್ರ ನಿರ್ವಹಿಸಲಿ ಎಂಬುದೇ ಆಶಯ.

Rating
No votes yet