ಕಲ್ಲುಸಕ್ಕರೆ ಸವಿ ಬಲ್ಲವರೇ ಬಲ್ಲರು ?

ಕಲ್ಲುಸಕ್ಕರೆ ಸವಿ ಬಲ್ಲವರೇ ಬಲ್ಲರು ?

ನಮ್ಮ ಓದು ಹೆಚ್ಚಿದಂತೆ , ನಮ್ಮ ತಿಳಿವಳಿಕೆಯೂ , ಅದರಿಂದ ಸಿಗುವ ಸಂತೋಷವೂ ಹೆಚ್ಚುತ್ತದೆ. ಇಲ್ಲದಿದ್ದರೆ ನಮಗೆ ಎಷ್ಟೋ ವಿಷಯಗಳು ತಿಳಿಯದೇ ಹೋಗುವವು.
ಒಂದು ನನ್ನ ಕಾಲೇಜಿನ ದಿನಗಳ ಉದಾಹರಣೆ . ಆಗ ಕಾನೂನು ಕಲಿಯುತ್ತಿದ್ದೆ. ಕಮರ್ಶಿಯಲ್ ಲಾ ದ ಕ್ಲಾಸು ನಡೆಯುತ್ತಿತ್ತು . ಹುಂಡಿ , ಚೆಕ್ಕು ಮುಂತಾದವುಗಳ ಸಂಬಂಧ ಸ್ಯಾನ್ಸ್ ರಿಕೋರ್ಸ್ ಎಂಬ ಪದ ಬಂದಿತು. ಕಾನೂನಿನಲ್ಲಿ ನಿಮಗೆ ಗೊತ್ತಿರುವ ಹಾಗೆ ಲ್ಯಾಟಿನ್ , ಗ್ರೀಕ್ ಶಬ್ದಗಳು ಬಹಳ. ಕಲಿಸುವವರಿಗೆ ಅದೇನು ನೆನಪಾಯಿತೋ ಒಂದು ಗಳಿಗೆ ನಿಂತು 'ಲಾ ಬೆಲ್ಲಾ ಡೇಮ್ ' ಎಂದುಬಿಟ್ಟು ಮೌನವಹಿಸಿ ಸುತ್ತಲೂ ನೋಡಿದರು. ಕ್ಲಾಸಿನಲ್ಲಿ ನಿಶ್ಶಬ್ದ .
ಒಂದು ಗಳಿಗೆ ನನ್ನ ಎದೆಬಡಿತ ಹೆಚ್ಚಿತು . ಏಕೆಂದರೆ ಅದು ಏನೆಂದು ನನಗೆ ಗೊತ್ತಿತ್ತು . ಅವರ ಕಣ್ಣೋಟ ನನ್ನ ದಿಕ್ಕಿನಲ್ಲಿ ಬಂದ ಕ್ಷಣ ' ಸ್ಯಾನ್ಸ್ ಮರ್ಸಿ' ಎಂದು ಬಿಟ್ಟೆ. ಅವರಿಗೆ ಒಂದು ಭಾಗ ( ತಮ್ಮ ಮನಸ್ಸಿನಲ್ಲಿನ ವಿಷಯ ಇನ್ನೊಬ್ಬರಿಗೂ ಗೊತ್ತೆಂಬ) ಸಂತೋಷವೂ , ಒಂದು ಭಾಗ ( ಅಯ್ಯೋ ನನಗಷ್ಟೇ ಅಲ್ಲ , ಬೇರೆ ಯಾರಿಗೋ ಗೊತ್ತು ಎಂಬ) ನಿರಾಶೆಯೂ ಆಯಿತು ಎಂದು ಕಾಣುತ್ತದೆ .
'ಲಾ ಬೆಲ್ಲಾ ಡೇಮ್ ಸ್ಯಾನ್ಸ್ ಮರ್ಸಿ' ಅನ್ನುವದು ಒಂದು ಹಳೇಯ ಇಂಗ್ಲಿಷ್ ಪದ್ಯ . ಮನೆಯಲ್ಲಿ ಇದ್ದ ಹಳೆಯ ' ಗೋಲ್ಡನ್ ಟ್ರೆಶರಿ' ಎಂಬ ಪುಸ್ತಕದಲ್ಲೆಲ್ಲೋ ಓದಿದ ನೆನಪು . ಕೀಟ್ಸ್ ನದಿರಬಹುದು . ಈ ಬಗ್ಗೆ ಇತ್ತೀಚೆಗೆ ಮಯೂರದಲ್ಲಿ ವಿವರಣೆಯೂ ಬಂದಿತ್ತು. ಕರುಣೆ ಇಲ್ಲದ ಸುಂದರಿ ಎಂದರ್ಥ.
--
ಇದೇ ರೀತಿಯ ಒಂದು ಘಟನೆ ಕೈಲಾಸಂ ಕುರಿತು ಇದೆ. ಕೈಲಾಸಂ ಒಂದು ಕಡೆ ಮಹಾಭಾರತದಲ್ಲಿ ಯಾರು ಯಾರು ಚಿಕ್ಕಂದಿನಲ್ಲಿ ಏನು ಪಾನೀಯ ಕುಡಿಯುತ್ತಿದ್ದರು ಎಂದು ಸ್ವಾರಸ್ಯಕರವಾಗಿ ಹೇಳುತ್ತಿದ್ದರು. ಜನರೂ ಆನಂದಿಸುತ್ತಿದ್ದರು . (ವಿವರಗಳು ನೆನಪಿಲ್ಲ . ಕೈಲಾಸಂ ಕುರಿತಾದ ಪುಸ್ತಕಗಳಲ್ಲಿ ಈ ವಿವರ ಸಿಗುತ್ತದೆ) ಯಾರೋ 'ಶಕುನಿ ಏನು ಕುಡಿಯುತ್ತಿದ್ದ?' ಎಂದು ಕೇಳಿದರು . ತಕ್ಷಣ ಕೈಲಾಸಂ ' ಬಕುಳದ ಹೂವಿನ ರಸ' ಎಂದರು . ಎಲ್ಲರೂ ಸುಮ್ಮನಿದ್ದರು. ಆಗ ಆಗ ಕುಳಿತಿದ್ದ ಸಂಸ್ಕೃತ ಪಂಡಿತರು ಬಿದ್ದು ಬಿದ್ದು ನಗಹತ್ತಿದರು . ' ಬಕುಳ'ದ ಹೂವಿಗೆ ಕನ್ನಡದಲ್ಲಿ ಪಗಡೆ ಹೂವು ಎನ್ನುತ್ತಾರೆ ಎಂಬುದು ಗೊತ್ತಿದ್ದ ಅವರೊಬ್ಬರು ಮಾತ್ರ ಈ punಡಿತರ punಅನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದರು.

ಅದಕ್ಕೆ ಹೇಳಿದ್ದು ಕಲ್ಲುಸಕ್ಕರೆ ಸವಿ ಬಲ್ಲವರೇ ಬಲ್ಲರು ಎಂದು .

Rating
No votes yet