ಇಲ್ಲೊಂದು ಕಲ್ಲುಸಕ್ಕರೆ -
ನಮ್ಮ ಓದು ಹೆಚ್ಚಿದಂತೆ , ನಮ್ಮ ತಿಳಿವಳಿಕೆಯೂ , ಅದರಿಂದ ಸಿಗುವ ಸಂತೋಷವೂ ಹೆಚ್ಚುತ್ತದೆ. ಬಹುಶ್ರುತರಾಗುವುದರ ಲಾಭ ಅದು . ( ನಾನು ಈ ಭಾಷೆಯ ಚಿತ್ರ ನೋಡುವದಿಲ್ಲ , ಈ ಕುರಿತು ತಿಳಿದುಕೊಳ್ಳಲೊಲ್ಲೆ ಎಂದರೆ ನಷ್ಟ ಯಾರಿಗೆ ? ನಮಗೇ ತಾನೆ?)
ಇತ್ತೀಚೆಗೆ ಒಂದು ಲೇಖನ ನೋಡಿದೆ . ಬಹಳ ಚೆನ್ನಾಗಿದೆ. ಮತ್ತು ಈ ವಿಷಯವನ್ನು ಸ್ಪಷ್ಟಪಡಿಸುತ್ತದೆ. ಅದರ ಕೆಲ ಭಾಗ ಇಲ್ಲಿದೆ.
" ನಮ್ಮೂರ ಜನ ಬಹಿರ್ದೆಸೆಗಾಗಿಹೊಳೆಯ ತೀರದಲ್ಲಿ ದಾಂಗುಡಿ ಇಡಲು ನಡುಹಾದಿಯಲ್ಲೇ ಪಂಚೆ ಎತ್ತಿಕಟ್ಟುವದು ದೇವದೇವತೆಗಳು ಅಂಬರದಲ್ಲಿ ನಿಂತು ನೋಡಬಯಸುವ ನಯನಮನೋಹರ ದೃಶ್ಯ. ( ದೃಶ್ಯತೇ ವ್ಯೋಮ್ನಿ ದೇವೈಃ ಎನ್ನುವುದು ಇದೇಯೇ) ಒಂದೂರ ಮಲವನ್ನು ಮತ್ತೊಂದೂರಿನ ಸರಹದ್ದಿನಲ್ಲಿ ಗುಡ್ಡೆ ಹಾಕುವುದೇ ತಾನೇ ನಗರ ನೈರ್ಮಲ್ಯ ಎಂದರೆ. ) ....
.... ಸರ್ಕಾರಿ ನಿಗಮಗಳಲ್ಲಿ ಅಧ್ಯಕ್ಷ್ಯಪೀಠದಿಂದ ವಂಚಿತರಾದ ಹತಾಶ ಎಮ್ಮೆಲ್ಲೆಗಳಿಗೆ ಬೇಲಿ ಹಾರುವದನ್ನು ಕಲಿಸಲಿಕ್ಕೆಂದೇ ಬೊಮ್ಮ ಕಡೆದ ನೋಟ ಇದು . .. ತೋಟದ ಮಾಲೀಕರು ಬ್ರಿಟಿಷರ ಕಾಲದಲ್ಲೊಂದು ಫಲಕವನ್ನು ಪ್ರಾಕೃತದಲ್ಲಿ ಬರೆಯಿಸಿ ಭರ್ಜರಿ ಮರವೊಂದರ ಕಾಂಡಕ್ಕೆ ನೇತು ಹಾಕಿದ್ದರು. " ಹಿಲ್ಲಿ ಅಣ್ಣು ಕದಿಯೋ ಅಲಾಲ್ಕೋರರ ಮ್ಯಾಲೆ ನಮ್ಮ ಸಿವಾ ಮುಡಿಗುಂಡೇಸನಾಣೆ" ಆ ಫಲಕ ನೆಲ ಕಚ್ಚಿದ್ದೂ ಸಿವನಿಚ್ಚೆಯೇ. ... ಅಕೋ ಮಾಗಿದ ಹಣ್ಣಿನ ಘಮಘಮ ಮಂದಿಯ ಮೂಗರಳಿಸುತ್ತಿತ್ತು. ಏನೇ ಹೇಳಿ ತೋಟದಿಂದ ಕದ್ದು ತಂದ ಮಾವು . ತೋಟದೊಳಗೆ ಕದ್ದೊಯ್ದು ಮುದ್ದಿಸಿದ ಹುಡುಗಿ ( ತೋಟವಿಲ್ಲದೆಡೆ ರಿಸಾರ್ಟ್ ಆದರೂ ನಡೆದೀತು) ಮುಡಿಯಿಂದ ನಡುವಿನವರೆಗೂ ಸಿಹಿಯೇ ಸಿಹಿ. ... "ರಸೋವೈಸಃ" ಎನ್ನುವುದು ಇದೇನೇ? ಆದರೆ ಇಲ್ಲಿ "ಸಃ" ಎನ್ನುವ ಪುಲ್ಲಿಂಗ ಪ್ರಯೋಗವೇಕೆ? ಇದು ಸ್ತ್ರೀವಾದಿ ಮಹಿಳಾಲೇಖಕಿಯರು ಚರ್ಚಿಸಬೇಕಾದ ವಿಷಯ.
"ಏನು ತಡಕ್ತೀರಿ ಯಜಮಾನ್ರೇ?" ಹಣ್ಣಿನ ವ್ಯಾಪಾರಿ ಕೇಳಿದ.
" ತಡಕ್ತಿಲ್ಲ ಹುಡುಕ್ತಿದೀನಿ" ( ಎರಡಕ್ಕೂ ಸೂಕ್ಷ್ಮ ಅಂತರವಿದೆ. ಬಿಗ್‍ಬಜಾರಿನಲ್ಲಿ ಕಳೆದು ಹೋದ ಹೆಂಡತಿಯನ್ನು ಹುಡುಕುವದೇ ಬೇರೆ. ಬೇಕೆಂತಲೇ ಮ್ಯಾಟಿನಿಗೆ ತಡವಾಗಿ ಬಂದು ಕತ್ತಲಲ್ಲಿ ಸೀಟು ಹುಡುಕುವ ನೆಪಮಾಡಿ ಕಂಡವರ ಮೈ ತಡವಿದರೆ ಅದು ತಡಕೋದು. )
"ಓ ತಿಳೀತು ಬುಡಿ. .ರಸಪೂರಿ! ಅದು ನಮ್ಮಪ್ಪನ ಕಾಲಕ್ಕೇ ಓಯಿತು. ಈಗ ಬೇನಿಶಾ ಐತೆ ಬೇಕಾ?"
ಬರೇ ಬೇನಿಶಾ ಏನು ... ಬೇಡದ್ದು ಸಾವಿರ ಇದೆ ' ಇರುವುದೆಲ್ಲವ ಬಿಟ್ಟು ಇರದಿರುವುದೆಡೆಗೆ ನಡೆವುದೇ ಬದುಕು'. ಅಡಿಗರು ಎಂದು ಮಾವಿನ ಮಂಡಿಗೆ ಕಾಲಿಟ್ಟರು?
.... ಬೆಳೆಯುವ ನಗರಕ್ಕೆ ಇದೆಲ್ಲ ಬೇಕು - ಹೃದ್ರೋಗಿ ಆಸ್ಪತ್ರೆ , ಹುಚ್ಚಾಸ್ಪತ್ರೆ , ಜೈಲು, ರೇಸ್‍ಕೋರ್ಸು , ವಿಧಾನಸೌಧ ..ಅದರೆ ಇವು ಒಂದು ಸೀಕ್ವೆನ್ಸ್‍ನಲ್ಲಿ ಇಲ್ಲವೆಂಬುದೇ ಒಂದು ಕೊರತೆ. ... ಹಿರೇಮಗಳೂರು ಕಣ್ಣನ್‍ಗೂ ಇದೇ ಚಿಂತೆ. ಇತ್ತ ದತ್ತ , ಅತ್ತ ಹುತ್ತ , ನಡುವೆ ಚಿತ್ತ , ಹೋಗಲೆತ್ತ ?
"ಹತ್ರೀ ಸರ , ನಿಮ್ ಸಲುವಾಗಿ ಬಸ್ ನಿಂತು ತಾಸಾತು. " ಬೆಳಗಾವಿ ಮೂಲದ , ಬಸ್ ನಿರ್ವಾಹಕ ಉಗ್ರಪ್ಪ ಶಾಣಪ್ಪ ಉಳ್ಳಾಗಡ್ಡಿ ತಡೆರಹಿತವಾಗಿ ಬಡಬಡಿಸಿದ.
... ಈ ಬಸ್ಸಿನ ಸ್ವಯಂಚಾಲಿತ ಬಾಗಿಲಿಗೆ ಗುರಪ್ಪನಪಾಳ್ಯದಲ್ಲಿ ಸ್ವಿಚ್ ಒತ್ತಿದರೆ ಬಳ್ಳೇಕಹಳ್ಳಿಯಲ್ಲಿ ಬೇಡವಾದಾಗ ತೆರೆದುಕೊಳ್ಳುತ್ತದೆ , ಒಲ್ಲದ ಮಡದಿ ಅಪರಾತ್ರಿಯಲ್ಲಿ ಒಲಿವಂತೆ.
" ಸರ , ಈ ಜೋಕು ಕೇಳೀರೇನು ? ತಾಜಮಹಲ ಬನಾನೇಕಾ ಶೌಕ್ ಹೈ ಮಗರ್ ಮಮ್ತಾಜ್ ಅಭೀ ತಕ ನಹೀ ಮಿಲಿ ' ಉಳ್ಳಾಗಡ್ಡಿ ಉಸುರಿದ. " ಅದು ಕ್ರೌರ್ಯ . ಮಡದಿ ಮುರ್ದಾ ಆಗಿ ಮಲಗಿದ ಮೇಲೆ ಮಹಲ್ ಕಟ್ಟಿದರೇನು . ಮಲ್ಲಿಗೆ ಗಿಡ ಹಾಕಿದರೇನು. ಪ್ರೇತವನದೊಳು ಬೆಳೆದ ಹೂ ಆರ ಮುಡಿಹಕ್ಕೆ ಯೋಗ್ಯಂ? ( ನಾನು ರಾಘವಾಂಕನನ್ನು ಓದಿಕೊಂಡಿದ್ದೇನೆಂದು ತೋರ್ಪಡಿಸಲು ಇದಕ್ಕಿಂತ ಬೇರೆ ತಾಣ ಬೇಕೆ?)
ಹೀಗೆ ಶ್ರೀ ಸಿ. ಎನ್, ಕೃಷ್ಣಮಾಚಾರ್ ಅವರು ಬರೆದ ಹಾಸ್ಯ ಲೇಖನ ಮುಂದುವರೆಯುತ್ತದೆ. ಅಲ್ಲಿ ಹಳೆಗನ್ನಡವೂ ಸಂಸ್ಕೃತವೂ ಇನ್ನಿತರ ಭಾಷೆಗಳೂ ಅನೇಕ ವಿಷಯಗಳೂ ಸೇರಿಕೊಂಡಿವೆ. ತುಂಬ ಚೆನ್ನಾಗಿ ಬರೆದಿದ್ದಾರೆ . ನನಗೆ ಬಹಳ ಮೆಚ್ಚಿಕೆಯಾದ ಲೇಖನ ಇದು . ಕತ್ತರಿಸಿ ಇಟ್ಟುಕೊಂಡಿದ್ದೇನೆ. ನೀವು ಇದನ್ನು ಓದಿದ್ದೀರಾ ? ಮುಂದೆ ಓದಬೇಕೆನ್ನಿಸುವದೇ ತಿಳಿಸಿ . ಅಂದರೆ ಅದನ್ನೂ ನಿಮಗಾಗಿ ಅಚ್ಚಿಸುವೆ.
ಶ್ರೀ ಅ. ರಾ. ಸೇ ಅವರೂ ಹೀಗೆಯೇ ಬಹಳ ಚೆನ್ನಾಗಿ ಬರೆಯುತ್ತಿದ್ದರು ಅವರ ಸಂಕಲನಗಳು ಬಂದ ಹಾಗಿಲ್ಲ . ಅವರ ಬಿಡಿ ಲೇಖನಗಳನ್ನೂ ಕತ್ತರಿಸಿ ಇಟ್ಟುಕೊಂಡು ಆಗಾಗ್ಗೆ ಓದಿ ಸಂತೋಷಪಡುವದಿದೆ.
ಶ್ರೀ ಸಿ. ಎನ್, ಕೃಷ್ಣಮಾಚಾರ್ ಅವರು ಮತ್ತೆ ಏನು ಎಲ್ಲಿ ಬರೆದಿದ್ದಾರೆ? ನನಗೆ ಗೊತ್ತಿಲ್ಲ . ನಿಮಗೆ ಗೊತ್ತಿದ್ದರೆ ದಯಮಾಡಿ ತಿಳಿಸಿ.