ಅನುವಾದಕ ಜೋಡಿ

ಅನುವಾದಕ ಜೋಡಿ

ಇದು ನಾನು ಕೇಳಿದ್ದು. ಪೂನಾದಲ್ಲಿ ಒಂದು ದಂಪತಿ. ಮೂಲ ಊರು ಬೆಳಗಾಂವ. ಪೂನಾದಲ್ಲಿ ಬಹಳ ವರ್ಷಗಳಿಂದ ವಸತಿ. ಇಬ್ಬರೂ ಕನ್ನಡ ಹಾಗೂ ಮರಾಠಿ ಮಾತಾಡುತ್ತಾರೆ. ಆದರೆ, ಗಂಡನಿಗೆ ಮರಾಠಿ ಓದಲು, ಬರೆಯಲು ಅಷ್ಟೇನೂ ಚೆನ್ನಾಗಿ ಬರದು. ಹೆಂಡತಿಗೆ ಕನ್ನಡ ಓದಲು, ಬರೆಯಲು ಅಷ್ಟಾಗಿ ಬರದು. ಗಂಡ ಕನ್ನಡ ಓದಿ ಅವಳಿಗೂ, ಹೆಂಡತಿ ಮರಾಠಿ ಓದಿ ಅವನಿಗೂ ಹೇಳುತ್ತಾರೆ. ಹೀಗೆ ಇಬ್ಬರೂ ಎರಡೂ ಭಾಷೆಯ ಸಾಹಿತ್ಯವನ್ನು ಬಲುವಾಗಿ ಓದಿಕೊಂಡಿದ್ದಾರೆ.
ಆಷ್ಟೇ ಅಲ್ಲ. ಗಂಡ ಮರಾಠಿಯಿಂದ ಕನ್ನಡಕ್ಕೆ, ಹೆಂಡತಿ ಕನ್ನಡದಿಂದ ಮರಾಠಿಗೆ ಹಲವಾರು ಅನುವಾದ ಮಾಡಿದ್ದಾರೆ. ಕಾರಂತ, ಭೈರಪ್ಪ, ತೇಜಸ್ವಿ ಹೀಗೆ ಎಷ್ಟೆಲ್ಲ ಕಾದಂಬರಿಗಳನ್ನು ಮರಾಠಿಗೆ ಅನುವಾದಿಸಿದ್ದಾರೆ. ಭೈರಪ್ಪನವರ ಸುಮಾರು ಎಲ್ಲ ಕಾದಂಬರಿಗಳೂ ಇವರಿಬ್ಬರ ಸಹಕಾರಿ ಅನುವಾದದಿಂದ ಮರಾಠಿ ಭಾಷಿಕರಿಗೆ ದೊರೆತಿವೆ. ಅಂತೆಯೇ, ಮರಾಠಿಯ ದೊಡ್ಡ ಹೆಸರುಗಳು ಕನ್ನಡಕ್ಕೆ ಬಂದಾಗಿದೆ.
ನನ್ನ ಬೆರಗಿಗೆ ಕಾರಣ: ಎಷ್ಟು ಕಷ್ಟ ಪಟ್ಟು ಇವೆಲ್ಲ ಮಾಡುತ್ತಾರೆ. ಒಬ್ಬರು ಓದಿ ಹೇಳುವುದು, ಮತ್ತೊಬ್ಬರು ಅನುವಾದಿಸುವುದು. ಹೀಗೆ ಎರಡು ಭಾಷೆಯ ನಡುವೆ ಸಂವಹನ ಏರ್ಪಡಿಸುವುದು.
ಇದಕ್ಕೆ ಬೇಕಾದ ಭಕ್ತಿ, ಸಂಯಮ, ಶಿಸ್ತು ಇದೆಯಲ್ಲ ಅದಕ್ಕೆ ನಾನು ತಲೆಬಾಗುತ್ತೇನೆ. ಕಳೆದ ದೀಪಾವಲಿಯಲ್ಲಿ ಇವರ ಪರಿಶ್ರಮದಿಂದಾಗಿ ಮರಾಠಿಯ ಒಂದು ದಿವಾಲಿ ಅಂಕ ಕನ್ನಡ ಸಾಹಿತ್ಯಕ್ಕೆ ಮುಡಿಪಾಗಿತ್ತು. ಅದರಲ್ಲಿ, ಸಮೀಕ್ಷಾ ಲೇಖನಗಳೂ, ಕಥೆ ಕವನಗಳೂ ಇದ್ದವು. ಇಂಥವರ ಪಡೆ ಬೆಳೆಯಲಿ. ಭಾಷೆ ಭಾಷೆಗಳ ನಡುವೆ ಕೊಡುಕೊಳುವ ವ್ಯವಹಾರ ಹೆಚ್ಚಲಿ.

Rating
No votes yet