ವೂಲ್ಫಾರ್ಮ್ ಆಲ್ಫಾ:ಸುಧಾರಿಸ ಬೇಕಿದೆ

ವೂಲ್ಫಾರ್ಮ್ ಆಲ್ಫಾ:ಸುಧಾರಿಸ ಬೇಕಿದೆ

ಬರಹ



ವೂಲ್ಫಾರ್ಮ್ ಆಲ್ಫಾ:ಸುಧಾರಿಸ ಬೇಕಿದೆ
ಗೂಗಲ್ ಶೋಧ ಸೇವೆಗೆ ಹೊಸ ತೆರನ ಪ್ರತಿಸ್ಪರ್ಧಿ ಎಂದು ಬಿಂಬಿತವಾಗಿರುವ ವೂಲ್ಫಾರ್ಮ್ ಆಲ್ಫಾ http://www.wolframalpha.com
ಸೇವೆ ಇದೀಗ ಲಭ್ಯ.ಈ ಸೇವೆ ’ಇಂಡಿಯಾ"ದಂತಹ ಪದಗಳಿಗೆ ಅತ್ಯಂತ ಉಪಯುಕ್ತ ವರದಿ ತಯಾರಿಸಿ
ಕೊಡುತ್ತದಾದರೂ, ಮಣಿಪಾಲ, ನಿಟ್ಟೆ,ಉದಯವಾಣಿ ಇಂತಹ ಪದಗಳಿಗೆ ಅನಿರೀಕ್ಷಿತ,ಅಪ್ರಸ್ತುತ
ಫಲಿತಾಂಶ ನೀಡಿ ನಿರಾಸೆ ಹುಟ್ಟಿಸುತ್ತದೆ. ಈಗಿನ್ನೂ ಪ್ರಾಯೋಗಿಕ ಹಂತದಲ್ಲಿರುವ ಸೇವೆ
ಇದಾದ್ದರಿಂದ ಮುಂಬರುವ ದಿನಗಳಲ್ಲಿ ಸುಧಾರಣೆ ನಿರೀಕ್ಷಿತ.
ಇತ್ತ ಗೂಗಲ್ ಕೂಡಾ ತನ್ನ
ಶೋಧ ಸೇವೆಗೆ ಹೊಸ ಮೆರುಗು ನೀಡಲು ಪ್ರಯತ್ನಿಸುತ್ತಿರುವ ಸುದ್ದಿ ಬಂದಿದೆ.ಇಂತಹ ಒಂದು
ಪ್ರಯತ್ನವೆಂದರೆ ಶೋಧದ ಫಲಿತಾಂಶವನ್ನು ಹಲವು ಬಗೆಯಲ್ಲಿ ವರ್ಗೀಕರಿಸಿ ನೀಡುವುದಾಗಿದೆ.
ಉದಾಹರಣೆಗೆ ಹೋಟೆಲ್‌ಗಾಗಿ ಶೋಧ ನಡೆಸಿದಾಗ, ಬಾಡಿಗೆಯ ಆಧಾರದ ಫಲಿತಾಂಶ,ಗ್ರಾಹಕರು
ಹೋಟೆಲ್ ಬಗ್ಗೆ ಬರೆದ ಪ್ರತಿಕ್ರಿಯೆಗಳ ಸಂಖ್ಯೆಯ ಮೇಲೆ ವರ್ಗೀಕರಿಸಿದ ಫಲಿತಾಂಶ ಹೀಗೆ
ವೈವಿಧ್ಯಮಯ ಫಲಿತಾಂಶಗಳನ್ನು ಒದಗಿಸುವುದು. ಗೂಗಲ್ ಸ್ಕ್ವೇರ್ಡ್ ಎನ್ನುವ ಇನ್ನೊಂದು
ವಿಧದ ಶೋಧ ಸೇವೆಯ ಮೂಲಕ ಫಲಿತಾಂಶವನ್ನು ಸ್ಪ್ರೆಡ್‍ಶೀಟ್ ಹಾಳೆಯ ರೂಪದಲ್ಲಿ ನೀಡುವ
ಪ್ರಯತ್ನವನ್ನೂ ಮಾಡಲು ಗೂಗಲ್ ಪ್ರಯತ್ನಿಸಿದೆ.ಇದರಂತೆ ನಾಯಿ ಎನ್ನುವ ಪದವನ್ನು
ಶೋಧಿಸಿದಾಗ ವಿವಿಧ ನಾಯಿಗಳ ಚಿತ್ರಸಮೇತ ಅವುಗಳ ತಳಿ,ಅವುಗಳ ಗಾತ್ರ ಇತ್ಯಾದಿ ವಿವರಗಳು
ಲಭ್ಯವಾಗುತ್ತದೆ.ಶೋಧದ ಫಲಿತಾಂಶದಲ್ಲಿ ನಮಗೆ ಬೇಕಾದ ವರ್ಗದ ಫಲಿತಾಂಶವನ್ನು ಆಯಲು
ಅನುವು ಮಾಡಿಕೊಟ್ಟು, ಶೋಧ ಫಲಿತಾಂಶದ ಕಣಜದಿಂದ ಕಾಳನ್ನಾರಿಸಲು ಸುಲಭವಾಗಿಸಲೂ ಗೂಗಲ್
ಪ್ರಯತ್ನಿಸುತ್ತಿದೆ.
-------------------------------------------------------------------
ಫಲಿತಾಂಶ ತಿಳಿಯಲು ಅಂತರ್ಜಾಲಕ್ಕೆ ಮೊರೆ!

ಚುನಾವಣಾ
ಫಲಿತಾಂಶಕ್ಕೆ ಚಾತಕ ಪಕ್ಷಿಯಂತೆ ಕಾದು, ಫಲಿತಾಂಶದ ದಿನ ಟಿವಿಯ ಮುಂದೆ ಪವಡಿಸಲು
ಸಾಧ್ಯವಾಗದವರು ಅಂತರ್ಜಾಲಕ್ಕೆ ಮೊರೆ ಹೋಗುವುದೇ ಹೆಚ್ಚು.ಭಾರತದ ಲೋಕಸಭಾ ಚುನಾವಣಾ
ಫಲಿತಾಂಶ ತಿಳಿಯಲು ಆಸಕ್ತ ಜನರು ಅದೇ ಮಾರ್ಗ ಹಿಡಿದದ್ದು ಸ್ಪಷ್ಟ. ಚುನಾವಣೆಯ
ಸಮಯದಲ್ಲೇ ಆರಂಭವಾದ www.ibnpolitics.com ಫಲಿತಾಂಶದ ದಿನ ಏಳೂವರೆ ದಶಲಕ್ಷ ವೀಕ್ಷಣೆ
ಪಡೆದು ಕೊಂಡು ದಾಖಲೆ ನಿರ್ಮಿಸಿತು.ದೇವೇಗೌಡರ ಬ್ಲಾಗ್ ಕೂಡಾ ಈ ತಾಣದಲ್ಲಿ ಓದಲು
ಸಿಕ್ಕಿದ್ದು ವಿಶೇಷ.ಇತ್ತೀಚಿನ ದಿನಗಳಲ್ಲಿ ಪರೀಕ್ಷ ಫಲಿತಾಂಶ ತಿಳಿಯಲೂ ಜನರು
ಮುಗಿಬೀಳುವುದು ಅಂತರ್ಜಾಲ ತಾಣಗಳಿಗೆ. ಫಲಿತಾಂಶ ಬಂದ ಆರಂಭಿಕ ಅವಧಿಯಲ್ಲಿ ಫಲಿತಾಂಶ
ಪ್ರಕಟಿಸುವ ತಾಣಗಳು ಅಧಿಕ ಸಂದರ್ಶಕರ ಹಾವಳಿ ತಡೆದುಕೊಳ್ಳಲು ವಿಫಲವಾಗಿ ಕುಸಿಯುವುದೇ
ಹೆಚ್ಚು.ಪರೀಕ್ಷಾರ್ಥಿಗಳಿಗೆ ಫಲಿತಾಂಶವನ್ನು ಮೊಬೈಲ್ ಸಂದೇಶದ ಅಥವಾ ಮಿಂಚಂಚೆ ಮೂಲಕ
ತಿಳಿಸುವ ಪ್ರಯೋಗ ಆರಂಭವಾಗ ಬಾರದೇ?
ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷದ
ಸ್ಥಾನಕ್ಕೇ ತೃಪ್ತಿ ಪಟ್ಟುಕೊಳ್ಳಬೇಕಾಗಿರುವ ಬಿಜೆಪಿಯ ನಾಯಕ ಅಡ್ವಾಣಿಯವರು ತಮ್ಮ
ಬ್ಲಾಗಿನಲ್ಲಿ "ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಅದನ್ನು ನಾವು ಸ್ವೀಕರಿಸುತ್ತೆವೆ.ಈ
ಪ್ರಚಾರದ ಅವಧಿಯಲ್ಲಿ ನಮ್ಮ ಜತೆಗಿದ್ದು ಸಹಕರಿಸಿದ ನಮ್ಮ-ನಿಮ್ಮ ಪಯಣ ಮುಂದುವರಿಯಲಿದೆ.
ದೇಶ ಮತ್ತು ಪಕ್ಷದ ಅಭಿವೃದ್ಧಿಗಾಗಿ ಕೆಲಸ ಮಾಡುವ ಪಣ ತೊಡೋಣ" ಎಂದಷ್ಟೇ ಬರೆದಿದ್ದಾರೆ.
--------------------------------------------------------------------------
ಕೈಕೊಟ್ಟ ಗೂಗಲ್ ಸೇವೆ: ಜನರು ತಲ್ಲಣ

ಗೂಗಲ್
ಮಿಂಚಂಚೆ,ಶೋಧ,ಅರ್ಕುಟ್,ಮ್ಯಾಪ್ ಹೀಗೆ ತರಹೇವಾರಿ ಸೇವೆಗಳನ್ನು ನೀಡಿ ಜನ ಸಮುದಾಯಕ್ಕೆ
ಅತ್ಯಂತ ಅವಶ್ಯಕ ಸೇವೆಯಾಗಿ ಬಿಟ್ಟಿದೆ. ಕಳೆದವಾರ ಗೂಗಲ್‌ನ ತಾಂತ್ರಿಕ ಸಮಸ್ಯೆಯ
ಕಾರಣ,ಶೇಕಡಾ ಹದಿನೈದಷ್ಟು ಬಳಕೆದಾರರು ಗೂಗಲ್ ಸೇವೆಗಳಿಂದ ತುಸು ಹೊತ್ತು ವಂಚಿತರಾದರು
ಇಲ್ಲವೆ ನಿಧನಗತಿಯ ಸೇವೆ ಪಡೆದರು. ಇದು ಭಾರೀ ಸುದ್ದಿಯಾಯಿತು. ಅಂತರ್ಜಾಲದ ತಾಣಗಳಲ್ಲಿ
ಗೂಗಲ್ ಸೇವೆಯಂತಹ ಸೇವೆಗಳ ಮೇಲೆ ಅವಲಂಬಿಸುವುದರಲ್ಲಿರುವ ಅಪಾಯಗಳ ಬಗ್ಗೆ ಎಚ್ಚರಿಕೆಯ
ಕರೆ ಗಂಟೆಗಳು ಮೊಳಗಿದುವು.ಅತ್ಯಂತ ಕಡಿಮೆ ಸಾಮರ್ಥ್ಯದ ಕಂಪ್ಯೂಟರುಗಳ ಮೂಲಕ
ಅಂತರ್ಜಾಲಕ್ಕೆ ಸಂಪರ್ಕಿಸಿ,ಅಲ್ಲಿಂದ ಗೂಗಲ್ ಅಂತಹ ಸೇವೆಯ ಮೂಲಕ
ಸ್ಮರಣಕೋಶವನ್ನು,ತಂತ್ರಾಂಶಗಳನ್ನು ಪಡೆದುಕೊಂಡು ಕೆಲಸ ಮಾಡುವ ತೆರನ ಶೈಲಿಯನ್ನು
ತಮ್ಮದಾಗಿಸಿಕೊಂಡವರು, ಗೂಗಲ್ ಕೈಕೊಟ್ಟಾಗ ಕೆಲಸ ಮಾಡಲಾಗದೆ ಕಂಗೆಟ್ಟರು.ನಮ್ಮ
ಕಡತಗಳನ್ನು ನಮ್ಮ ಕಂಪ್ಯೂಟರಿನಲ್ಲಿ ಇರಿಸಿಕೊಳ್ಳುವುದೇ ಕ್ಷೇಮ, ಗೂಗಲ್ ಅಂತಹ
ಸೇವೆಯನ್ನು ಪಡೆದುಕೊಳ್ಳುವುದು ಸುರಕ್ಷಿತವಲ್ಲ ಎನ್ನುವುದು ಹೆಚ್ಚಿನವರು
ಕಲಿತುಕೊಂಡಂತಾಯಿತು.
---------------------------------------------------
ಸೈನಿಕರ ತರಬೇತಿಗೆ ಕಂಪ್ಯೂಟರ್
ಅಮೆರಿಕಾದ
ಸೈನಿಕರು ಇರಾಕ್,ಅಫಘಾನಿಸ್ತಾನದಂತಹ ಕಡೆಗಳಲ್ಲಿ ಕೆಲಸ ಮಾಡಬೇಕಾಗುತ್ತಿದೆ. ಎಳೆಯ
ಸೈನಿಕರು ಹೊಸ ಪ್ರದೇಶಗಳ ಸಾಂಸ್ಕೃತಿಕ ಹಿನ್ನೆಲೆಯನ್ನು ಅರಿತಿರುವ ಸಂಭವ ಕಡಿಮೆ.
ಪರಸ್ಥಳಗಳಲ್ಲಿ ಕೆಲಸ ಮಾಡುವಾಗ ಎದುರಾಗುವ ಪ್ರಸಂಗಗಳಲ್ಲಿ ಹೇಗೆ ವ್ಯವಹರಿಸ ಬೇಕೆಂಬುದು
ಇವರಿಗೆ ತಿಳಿದಿರುವುದಿಲ್ಲ. ಅಲ್ಲಿನ ನಾಗರಿಕರು ಕುಡಿಯಲು ಯಾವುದಾದರೂ ಪಾನೀಯದ ಬಾಟಲ್
ನೀಡಿದರೆ ಅವನ್ನು ಸ್ವೀಕರಿಸಬೇಕೋ ಅಲ್ಲ ತಿರಸ್ಕರಿಸ ಬೇಕೋ ಎನ್ನುವುದು ಸೈನಿಕರಿಗೆ
ತಿಳಿಯದು. ಇಂತಹ ಪ್ರಸಂಗಗಳಲ್ಲಿ ತಮ್ಮ ಖುಷಿ ಬಂದಂತೆ ನಡೆದು ಕೊಂಡರೆ ಕೆಲವೊಮ್ಮೆ
ಜಗತ್ತಿನಲ್ಲೆಲ್ಲ ಸುದ್ದಿಯಾಗುವುದಿದೆ. ಅವರ ನಡವಳಿಕೆಗಳ ವಿಡಿಯೊ ಯುಟ್ಯೂಬಿನಂತಹ
ತಾಣದಲ್ಲೋ, ಸಮುದಾಯ ತಾಣಗಳಲ್ಲೋ ಪ್ರದರ್ಶಿತವಾಗಿ ಟೀಕೆಗೊಳಗಾಗುವುದು
ನಡೆಯುತ್ತಿರುತ್ತದೆ. ಅದಕ್ಕಾಗಿಯೇ ಅಮೆರಿಕಾದ ಮಿಲಿಟರಿಯು ಹೊಸಬರಿಗೆ ತರಬೇತಿ ನೀಡಲು
ಕಂಪ್ಯೂಟರ್ ಶಿಕ್ಷಣ ನೀಡುತ್ತದೆ. ಪರಸ್ಠಳಗಳಲ್ಲಿ ಸೆರೆ ಹಿಡಿದ ದೃಶ್ಯಗಳು ಮತ್ತು
ಸ್ಟುಡಿಯೋದಲ್ಲಿ ಅನೆಮೇಶನ್ ಮೂಲಕ ಚಿತ್ರೀಕರಿಸಿದ ದೃಶ್ಯಗಳನ್ನು ಜತೆಗೂಡಿಸಿ, ಇಂತಹ
ಸನ್ನಿವೇಶಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ತರಬೇತಿ ಕೊಡಲಾಗುತ್ತಿದೆ.ನೈಜ ಅನುಭವವೋ
ಎನ್ನುವ ಭ್ರಮೆ ಹುಟ್ಟಿಸುವ ದೃಶ್ಯಗಳನ್ನು ಡಿವಿಡಿ ಮೂಲಕ ತೆರೆಯಲ್ಲಿ ಮೂಡಿಸಿ,ಆ
ಸನ್ನಿವೇಶದಲ್ಲಿ ಸೈನಿಕನ ಪ್ರತಿಕ್ರಿಯೆ ಹೇಗಿರಬಹುದು ಎಂದು ತಿಳಿದುಕೊಂಡು,ಅದು ಸರಿಯೇ
ಎನ್ನುವುದನ್ನು ತಿಳಿಸುವ ಮೂಲಕ ಸೈನಿಕರನ್ನು ತಯಾರು ಮಾಡಲಾಗುತ್ತದೆ.

udayavani
*ಅಶೋಕ್‌ಕುಮಾರ್ ಎ