ಜಾನಪದ ಗಾರುಡಿಗ ಕರೀಂಖಾನ್‌ ಇನ್ನಿಲ್ಲ

ಜಾನಪದ ಗಾರುಡಿಗ ಕರೀಂಖಾನ್‌ ಇನ್ನಿಲ್ಲ

ಬರಹ

ಎಸ್ ಕೆ ಕರೀಂಖಾನ್ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾನಪದ ಗಾರುಡಿಗ, ನಾಡೋಜ, ಕಲಾ ತಪಸ್ವಿ, ಹಿರಿಯ ಗಾಂಧೀವಾದಿ ಡಾ ಎಸ್‌.ಕೆ. ಕರೀಂಖಾನ್‌ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ನಾಡಿನ ಹಳೆಯ ತಲೆಮಾರಿನ ಜಾನಪದ ಮತ್ತು ಸಾಂಸ್ಕೃತಿಕ ಪರಂಪರೆಯ ಕೊಂಡಿಯೊಂದು ಕಳಚಿಕೊಂಡಂತಾಗಿದೆ. ತೊಂಬತ್ತೆಂಟು ವರ್ಷಗಳ ಸಾರ್ಥಕ ಬಾಳುವೆ ನಡೆಸಿದ ಈ ಬ್ರಹ್ಮಚಾರಿ ಇಂದು(ಜುಲೈ 29) ಬೆಳಿಗ್ಗೆ 11.50 ರ ಸುಮಾರಿಗೆ ಚಿರನಿದ್ರೆಗೆ ಜಾರಿದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜೂನ್ 10ರಂದು ಬೌರಿಂಗ್ ಆಸ್ಪತ್ರೆಯಿಂದ ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯೂಮೋನಿಯಾಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಗಂಟಲಲ್ಲಿ ಉಂಟಾದ ಸೋಂಕಿನಿಂದಾಗಿ ಉಸಿರಾಟದ ತೊಂದರೆಗೆ ಒಳಗಾದರು. ಕೂಡಲೇ ಅವರನ್ನು ತುರ್ತು ನಿಗಾ ಘಟಕಕ್ಕೆ ವರ್ಗಾಹಿಸಿ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಮೃತರ ಅಂತ್ಯಕ್ರಿಯೆ ನಗರದ ಹಲಸೂರು ಸ್ಮಶಾನದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ನೆರವೇರಿತು. ಇದಕ್ಕೆ ಮುನ್ನ ಕರೀಂಖಾನ್‌ ಕಿರಿಯ ಸಹೋದರನ ನಿವಾಸದಲ್ಲಿ ಮೃತರಿಗೆ ರಾಜ್ಯವು ಸಕಲ ಸರ್ಕಾರಿ ಗೌರವ ನೀಡಿತು.

ಕಾಲ್ನಡಿಗೆಯಲ್ಲಿಯೇ ಹಳ್ಳಿಹಳ್ಳಿ ತಿರುಗಿ ನೂರಾರು ಜಾನಪದ ಗೀತೆಗಳನ್ನು ಸಂಗ್ರಹಿಸಿದ ಕರೀಮಜ್ಜ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸುಮಾರು 8 ಸಾವಿರ ಕಿ.ಮೀ. ದೂರವನ್ನು ಸುತ್ತಿ ಜಾನಪದ ಪ್ರದರ್ಶನ ಕಲೆಗಳ ಕುರಿತು 240 ಗಂಟೆಗಳ ಅವಧಿಯ ಅತ್ಯಮೂಲ್ಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.

ಬೇರೆಯವರಿಗೆ ಕೆಡುಕು ಬಯಸದಿರುವುದು, ಕೆಟ್ಟ ಯೋಚನೆ ಮಾಡದಿರುವುದೇ ತಮ್ಮ ಆರೋಗ್ಯದ ಗುಟ್ಟೆಂದು ನಂಬಿಕೊಂಡು, ಪ್ರತಿಪಾದಿಸುತ್ತಿದ್ದ ಕರೀಂಖಾನ್‌ ಅವರಿಗೆ ಬದುಕಿನ ಕೊನೆಯ ದಿನಗಳಲ್ಲಿ ದೀರ್ಘಕಾಲೀನ ಅನಾರೋಗ್ಯ ಬೆನ್ನುಬಿದ್ದು ಕಾಡಿತು. ಸ್ವಾತಂತ್ರ್ಯ ಯೋಧರ ಪಿಂಚಣಿಯನ್ನೂ ತಿರಸ್ಕರಿಸಿದ್ದ ಕರೀಂಖಾನ್‌ ಅವರು ತಮ್ಮ ಬದುಕಿನುದ್ದಕ್ಕೂ ಎಷ್ಟೇ ಕಷ್ಟ ಎದುರಾದರೂ ಯಾರೊಬ್ಬರ ಮುಂದೆಯೂ ಕೈಚಾಚದೆ ಆತ್ಮಗೌರವ ಕಾಯ್ದುಕೊಂಡರು.

ಕರೀಂಖಾನ್‌ ಅವರ ಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿ, ಪುರಸ್ಕಾರಗಳು ಹುಡುಕಿಕೊಂಡು ಬಂದವು. 1989 ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿತು. 2004ರಲ್ಲಿ ರಾಜ್ಯ ಸರ್ಕಾರ `ರಾಜ್ಯೋತ್ಸವ' ಪ್ರಶಸ್ತಿ ನೀಡಿತು. ಅಲ್ಲದೆ, 1997ರಲ್ಲಿ ನಾಡೋಜ, 1995ರಲ್ಲಿ ಜಾನಪದಶ್ರೀ, ಜೀಶಂಪ ಪ್ರಶಸ್ತಿ, 2000 ದಲ್ಲಿ ಟಿ. ಉದಯಶಂಕರ್‌ ಚಿತ್ರ ಸಾಹಿತ್ಯ ಪ್ರಶಸ್ತಿ, 1989 ರಲ್ಲಿ ಜಾನಪದ ಅಕಾಡೆಮಿ ಗೌರವ, ಹಂಸರತ್ನ, ಜಾನಪದ ಜಂಗಮ ಹಾಗೂ ಚಲನಚಿತ್ರ ರಂಗದ ಜೀವಮಾನದ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

ಶರೀಫಜ್ಜ' ಖ್ಯಾತಿಯ ಕರೀಂ ಖಾನ್‌ ಅವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರ. ತಂದೆ ಆಫ್ಘಾನಿಸ್ಥಾನದ ಕಾಬೂಲ್‌ನ ವೀರಯೋಧ ರೆಹಮಾನ್‌ ಖಾನ್‌ ಹಾಗೂ ತಾಯಿ ಸೌದಿ ಅರೇಬಿಯಾ ಮೂಲದ ಜೈನಬಿ. ಈ ದಂಪತಿಯ ಕನ್ನಡ ಪುತ್ರರಾದ ಕರೀಂಖಾನ್‌ ಅವರು ಓದಿದ್ದು ಮಾತ್ರ ಕೇವಲ 8ನೇ ತರಗತಿವರೆಗೆ. ಆದರೆ, ಗಳಿಸಿದ ಅನುಭವ, ಪಾಂಡಿತ್ಯ ಎಲ್ಲ ಔಪಚಾರಿಕ ಶಿಕ್ಷಣದ ಮಿತಿಯನ್ನು ದಾಟಿದ್ದು. ಆಚಂಗಿ ನಾರಾಯಣಶಾಸ್ತ್ರಿಗಳ ಶಿಷ್ಯರಾಗಿ ಕನ್ನಡ ಭಾಷೆ, ನಾಡು-ನುಡಿ, ಸಂಸ್ಕೃತಿ ಬಗ್ಗೆ ಪಾಂಡಿತ್ಯ ಸಿದ್ದಿಸಿಕೊಂಡರು. ಇಲ್ಲಿಂದ ಆರಂಭವಾದ ಅವರ ಜಾನಪದ ಸಾಹಿತ್ಯ ಕೃಷಿ ಅವರ ಹೆಸರನ್ನು ಮೇರು ಎತ್ತರಕ್ಕೆ ಕೊಂಡೊಯ್ದಿತು.

ಚಿತ್ರಗೀತೆಗಳಲ್ಲಿ ಆಧ್ಯಾತ್ಮಿಕತೆ ಬಿಂಬಿಸುವ ತಮ್ಮ ಅದ್ಭುತ ಗೀತೆಗಳ ಮೂಲಕ ಕಪ್ಪು- ಬಿಳುಪಿನ ಕನ್ನಡ ಚಿತ್ರರಂಗದ ಸುವರ್ಣ ಯುಗದಲ್ಲಿ ತಮ್ಮ ಕೊಡುಗೆಯನ್ನು ದಾಖಲಿಸಿದ್ದರು. ಕರೀಂಖಾನ್‌ ಅವರಿಗೆ ಯಾವತ್ತೂ ಕ್ಷೇತ್ರಗಳ ಗಡಿ ಅಡ್ಡಿಯಾಗಲಿಲ್ಲ. ಪತ್ರಿಕೋದ್ಯಮದಲ್ಲೂ ತಮ್ಮ ಹೆಜ್ಜೆ ಗುರುತು ದಾಖಲಿಸಿದರು. ಧಾರವಾಡದ ಲೋಕಮಿತ್ರ, ಉಡುಪಿಯ ಅಂತರಂಗ ಪತ್ರಿಕೆಗಳ ಸಂಪಾದಕರಾಗಿ ದುಡಿದರು. ಇದಕ್ಕೆ ಮುನ್ನ ರಾಯಲ್‌ ಇಂಡಿಯನ್‌ ನೇವಿಯಲ್ಲಿ ನೌಕರಿ ಮಾಡಿದ ಅನುಭವವೂ ಅವರಿಗಿತ್ತು. ಅಜ್ಞಾತ ಕವಿಗಳ ನೂರಾರು ಹಾಡುಗಳು ಕಳೆದು ಹೋಗಬಹುದೆಂದು ಅವುಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಅದಕ್ಕಾಗಿ ಅವರು ಸಾಕಷ್ಟು ಕಷ್ಟಪಟ್ಟರು. ದುರದೃಷ್ಟವೆಂದರೆ, ಕರೀಂಖಾನ್‌ ಅವರ ನೂರಾರು ಹಸ್ತಪ್ರತಿಗಳು ಪ್ರಕಟವಾಗಲಿಲ್ಲ. ಅವರ ಅಲೆಮಾರಿ ಬದುಕಿನಲ್ಲಿ ಅವು ಕಳೆದುಹೋದವು.