ಪ್ರೇಮ-ಪ್ರೀತಿ

ಪ್ರೇಮ-ಪ್ರೀತಿ

ಬರಹ

ಪ್ರೇಮ ಮತ್ತು ಪ್ರೀತಿ ಎರಡೂ ಒಂದೇ ಎಂದು ತಪ್ಪಾಗಿ ಭಾವಿಸಿರುವವರಿದ್ದಾರೆ. ಒಂದೇ ಮಾತಿನಲ್ಲಿ ಹೇಳ ಬೇಕೆಂದರೆ,ಹೆಂಡತಿ ಸತ್ತರೆ ಮರಳಿ ತರಬಹುದು. ಜನ್ಮಕೊಟ್ಟ ತಾಯಿಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆಕೆಯ ಮನಸ್ಸನ್ನು ನೋಯಿಸಿ ಜಗತ್ತನ್ನೇ ಜಯಿಸಿದರೇನು ಫಲ?... ಒಂಭತ್ತು ತಿಂಗಳು ಹೆತ್ತು ಹೊತ್ತು ಕೈತುತ್ತ ತಿನಿಸಿ ಸಾಕಿದ ಮಮತೆಯ ತಾಯಿ, ಕೈಹಿಡಿದು ನಡೆಸಿ, ವಿದ್ಯೆ ಕಲಿಸಿ, ಬದುಕಿಗೆ ಮಾರ್ಗದರ್ಶನ ಮಾಡಿದ ಪ್ರೇಮದ ತಂದೆ, ಕೆಲವರೇ ಆದರೂ ಪ್ರೀತಿಯ ತೋರುವ ಬಂಧುಗಳು, ಇವರೆಲ್ಲರನ್ನೂ ಬಿಟ್ಟು ದೂರ ಹೋಗಿ ಬದುಕಲಾದೀತೆ; ಅಂತಹ ಬದುಕಿನಲ್ಲಿ ನೆಮ್ಮದಿ ಸಿಕ್ಕೀತೇ... ಇಲ್ಲ, ತಾಯಿ-ತಂದೆಯ ಋಣ ಒಂದೇ ಜನ್ಮದಲ್ಲಿ ತೀರಿಸಲಶ್ಯಕ್ಯವೆನ್ನುತ್ತಾರೆ. ಅವರನ್ನೇ ಕಸಕ್ಕಿಂತ ಕಡೆಯಾಗಿಸಿ ಹೊರಟು ಹೋಗಲುಂಟೇ...? ಅಥವಾ ಅವರನ್ನು ಕೇವಲ ಕರುಣೆಯಿಂದ ನೋಡಿಕೊಳ್ಳುವುದಷ್ಟೇ ತನ್ನ ಕರ್ತವ್ಯವೆಂದು ಭಾವಿಸದೇ, ಅವರೊಂದಿಗೇ ಸಭ್ಯ ಗೃಹಸ್ಥನಾಗಿದ್ದು ತನ್ನ ಹೆಂಡತಿಯೊಡನೆ ಸಂಸಾರ ಸುಖ ಅನುಭವಿಸುತ್ತಲೆ, ಭಾವನಾತ್ಮಕ ಸಂಬಂಧವಿರಿಸಿಕೊಂಡಿರುವುದರಲ್ಲಿಯೆ ಈ ಜಗದ ಪ್ರೇಮ ಜೀವನದ ವೈಶಿಷ್ಟ್ಯವಿದಯೆಲ್ಲವೇ..? ಅದನ್ನು ಬಿಟ್ಟು ಹೆಂಡತಿಕೊಡುವ ದೈಹಿಕ ಸುಖಕ್ಕೆ, ಅವಳ ಮರುಳು ಮಾತಿಗೆ ವಶನಾಗಿ ತನ್ನ ತನ ಕಳೆದು ಕೊಳ್ಳುವುದೇನು?

ಪ್ರೀತಿಯ ಮುಂದೆ ಸದಾ ಗೆಲ್ಲುವುದು ಪ್ರೇಮವೇ. ಆದರೆ, ಪ್ರೀತಿಯನ್ನು (ಹೆಂಡತಿಯನ್ನು)ಅದರ ಸ್ಥಾನದಲ್ಲಿರಿಸಿಬೇಕು. ತಾಯಿಯ ಸ್ಥಾನ ದಿವ್ಯವಾದದ್ದು; ದೊಡ್ಡದು. ಅಷ್ಟಕ್ಕೂ ಪ್ರೇಮವಾಗಲಿ, ಪ್ರೀತಿಯಾಗಲಿ ಕುರುಡಾಗಬಾರದು ಮೌಢ್ಯವಾಗಬಾರದಲ್ಲ. ತಾಯಿ ಮಾತಿಗೇ ಬೆಲೆ ಕೊಡುತ್ತ ಪೂರ್ವಾಪರ ಆಲೋಚಿಸದೇ ಹೆಂಡತಿಯನ್ನೆ ಕಡೆಗಣಿಸುವುದು, ಹೆಂಡತಿಯೆ ತಿಳಿದವಳು ತಾಯಿ ಮುದಿ ಗೊಡ್ಡು ಹಳೆಯ ಕಾಲದವಳೆಂದು ಹಳಿಯುವುದೂ ಸರಿಯೇನು? ಪ್ರೇಮ-ಪುರುಷಾರ್ಥಗಳ ನಡುವೆ ದೊಡ್ಡ ರಣರಂಗವೇ ನಡೆದಿರುತ್ತದೆ;ಗಂಡಿನ ಹೃದಯದಲ್ಲಿ.. ಅಲ್ಲಿ ನಡೆಯುವುದು ದೇವ ದಾನವ ಯುದ್ದವೇ ಸರಿ. ಅದರಲ್ಲಿ ಮೊದಲು ಜಯಶೀಲನಾಗುವವನೇ ಜಗತ್ತನ್ನು ಜಯಿಸಬಲ್ಲವನಲ್ಲವೇ...ಯಾವಾಗಲೂ ದಾನವರ ದಿಗ್ವಿಜಯ ಮೇಲ್ನೋಟಕ್ಕೆ ಸರಿಯೆನಿಸೀತು. ಅವರೇ ಸುಖಿಗಳೆನಿಸೀತು. ದೇವತೆಗಳಿಗೆ ಮಾತ್ರ ಅಮೃತ ಪಾನ ಲಭಿಸುವುದು, ಅಮರತ್ವ ಸಿಗುವುದು. ಅವರಿಂದಲೇ ಜಗಕೆ ಬೆಳಕು ನೀಡುವ ನಿತ್ಯ ತತ್ವ ಜೀವನ ಸಿದ್ಧಾಂತಗಳು. ಎಲ್ಲರೂ ದೇವತೆಗಳಾಗಲು ಸಾಧ್ಯವೇ ಎನ್ನದಿರಿ. ದಾನವರಾಗದಿದ್ದರೆ ಸಾಕು, ದೈವತ್ವಕ್ಕೆ ಹತ್ತಿರವಂತೂ ಆಗಿರುತ್ತೀರಲ್ಲವೆ...
-ಎಚ್.ಶಿವರಾಂ, 29 ಜುಲೈ,2006