ಎಂದರೋ ಮಹಾನುಭಾವುಲು !!

ಎಂದರೋ ಮಹಾನುಭಾವುಲು !!

ಬರಹ

ಪುಷ್ಯ ಬಹುಳ ಪಂಚಮಿಯ ದಿನ ತ್ಯಾಗರಾಜರ ಆರಾಧನೆ
ತಂಜಾವೂರಿನಿಂದ ಸುಮಾರು ಹದಿನೈದು ಕಿ.ಮಿ ತಿರುವಯ್ಯಾರಿನಲ್ಲಿ ನಡೆಯುತ್ತದೆ.  ಅದು
ತ್ಯಾಗರಾಜರ ಪುಣ್ಯತಿಥಿ. ಇಂಗ್ಲೀಶ್ ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳ
ಪೂರ್ವಾರ್ಧದಲ್ಲಿ ಈ ದಿನಾಂಕ ಬರುತ್ತದೆ.

ಕರ್ನಾಟಕ ಸಂಗೀತದಲ್ಲಿ
ತ್ಯಾಗರಾಜರದು ದೊಡ್ಡ ಹೆಸರು. ತ್ಯಾಗರಾಜರು ರಚಿಸಿದ ಪಂಚರತ್ನ ಕೃತಿಗಳನ್ನು ಆರಾಧನೆಯ
ದಿನ ಹಾಡಲಾಗುತ್ತದೆ. ಸುಮಾರು ಎರಡು ಸಾವಿರ ಜನರು ಒಂದೇ ಬಾರಿಗೆ ಹಾಡುವುದನ್ನು
ಕೇಳುವುದೇ ಒಂದು ಸೊಗಸು. ನಿತ್ಯಶ್ರೀ ಮಹದೇವನ್, ಸುಧಾ ರಘುರಾಮನ್ ರಂತಹ ಖ್ಯಾತನಾಮರು
ಎರಡು ಸಾವಿರ ಜನರ ನಡುವೆ ಅವರ ಜೊತೆಯೇ ಹಾಡುತ್ತಾರೆ. ಇಷ್ಟು ದಿನ ಕುನ್ನುಕ್ಕುಡಿ
ವೈದ್ಯನಾಥನ್ ಆರಾಧನೆಯ ನೇತೃತ್ವ ವಹಿಸುತ್ತಿದ್ದರು.

ತಂಜಾವೂರಿಗೆ ಮೈಸೂರಿನಿಂದ
ಬೆಂಗಳೂರಿನ ಮೂಲಕ ಹಾದು ಹೋಗುವ ಮಯಿಲಾಡುತುರೈ ಎಕ್ಸ್‍ಪ್ರೆಸ್‍ನಲ್ಲಿ ತೆರಳಬಹುದು.
ಸಂಜೆ ಏಳಕ್ಕೆ ಬೆಂಗಳೂರಿನಿಂದ ಹೊರಟ ರೈಲು ಬೆಳಿಗ್ಗೆ ಐದುವರೆಯ ಹೊತ್ತಿಗೆ
ತಂಜಾವೂರಿನಲ್ಲಿ ಇರುತ್ತದೆ. ತಂಜಾವೂರಿನ ರೈಲ್ವೆ ನಿಲ್ದಾಣದಲ್ಲಿ ಶೌಚಕಾರ್ಯ
ಮುಗಿಸಬಹುದು. ಶೌಚಾಲಯಗಳು ಶುಚಿಯಾಗಿವೆ. ತಂಜಾವೂರು ಬಸ್ ನಿಲ್ದಾಣದಿಂದ
ತಿರುವಯ್ಯಾರಿಗೆ ನೇರ ಬಸ್‍ಗಳಿವೆ. ರೇಶ್ಮೆ ಪಂಜೆ,ಜುಬ್ಬಾ ತೊಟ್ಟ ಗಂಡಸರು, ರೇಶ್ಮೆ
ಸೀರೆಯುಟ್ಟ ಹೆಣ್ಣುಮಕ್ಕಳು ಆರಾಧನೆಗೆ ಹೊರಟಿರುವುದನ್ನು ಕಾಣಬಹುದು. ಕೆಲವರ ಕೈಗಳಲ್ಲಿ
ವಾದ್ಯಗಳೂ ಇರುತ್ತವೆ. 

ತಿರುವಯ್ಯಾರ್‌ನಲ್ಲಿ ತ್ಯಾಗರಾಜರ
ಗುಡಿಯ ಹಿಂದೆಯೇ ಹರಿಯುವ ಕಾವೇರಿಯಲ್ಲಿ ಮಿಂದು ಬಟ್ಟೆ ಬದಲಿಸಿ ಆರಾಧನೆಗೆ ಹೊರಡಬಹುದು.
ಆರಾಧನೆ ಹನ್ನೊಂದು ಅಥವಾ ಹನ್ನೆರಡು ಗಂಟೆಗೆಲ್ಲಾ ಮುಗಿಯುತ್ತದೆ. ನಂತರ ಸಂಗೀತ
ಕಚೇರಿಗಳಿರುತ್ತವೆ. ನನ್ನಂತೆ ಕರ್ನಾಟಕ ಸಂಗೀತದಲ್ಲಿ ಅಭಿರುಚಿ ಇಲ್ಲದವರು ತಂಜಾವೂರಿಗೆ
ತೆರಳಿ ಬೃಹದೀಶ್ವರನ ದರ್ಶನ ಪಡೆದು ಅಲ್ಲಿಂದ ಅರವತ್ತು ಕಿಮೀ ದೂರದ ಕುಂಭಕೋಣಮ್ ಗೆ
ಹೋಗಬಹುದು. ಕುಂಭಕೋಣಮ್‍ನಲ್ಲಿ ಕುಂಭೇಶ್ವರ ಗುಡಿ, ಶ್ರೀರಾಮನ ಗುಡಿ ಬೃಂದಾವನ
ಇತ್ಯಾದಿಗಳಿವೆ. ಗಣಿತಜ್ಞ ರಾಮಾನುಜಂ‍ರ ಮನೆಯಿದೆ.

ಮಯಿಲಾಡುತುರೈ ಎಕ್ಸ್‍ಪ್ರೆಸ್
ಸಂಜೆ ಐದೂವರೆಗೆ ಕುಂಭಕೋಣಮ್‍ಗೆ ಬರುತ್ತದೆ. ಮರುದಿನ ಬೆಳಿಗ್ಗೆ ಆರೂವರೆಗೆ
ಬೆಂಗಳೂರಿನಲ್ಲಿರಬಹುದು. ಒಂದು ದಿನದ ರಜೆಯಲ್ಲಿ ತ್ಯಾಗರಾಜರ ಆರಾಧನೆ, ತಂಜಾವೂರು,
ಕುಂಭಕೋಣಂ ದರ್ಶನ ಮುಗಿಸಬಹುದು. ಸಂಗೀತದಲ್ಲಿ ಆಸಕ್ತಿ ಇಲ್ಲದವರೂ ಒಮ್ಮೆ ತ್ಯಾಗರಾಜರ
ಆರಾಧನೆಯಲ್ಲಿ ಪಾಲ್ಗೊಂಡು ಸಹಸ್ರಾರು ಜನ ಒಮ್ಮೆಲೆ ಗಾಯನದಲ್ಲಿ ತೊಡಗುವ ವೈಭವವನ್ನು
ಆಸ್ವಾದಿಸಬಹುದು.

ಒಂದು ದಿನದ ಈ ಪ್ರವಾಸ ಸುಗಮವಾಗಿ
ಸಾಗುತ್ತದೆ. ಎಷ್ಟೊ ಜನ ಆರಾಧನೆಯಲ್ಲಿ ಪಾಲ್ಗೊಳ್ಳಬಯಸುವವರು ರಜೆಯ ಮತ್ತು ಸೌಲಭ್ಯದ
ಲಭ್ಯತೆಯ ಬಗ್ಗೆ ಅರಿವಿಲ್ಲದೇ ಪಾಲ್ಗೊಳ್ಳಲು ಹಿಂಜರಿಯುತ್ತಾರೆ. ಯಾವುದೇ
ಕಷ್ಟಗಳಿಲ್ಲದೇ ಒಂದೇ ದಿನದ ರಜೆಯಲ್ಲಿ ತ್ಯಾಗರಾಜರ ಆರಾಧನೆಯಲ್ಲಿ ಪಾಲ್ಗೊಂಡು
ಬರಬಹುದು. ಅಷ್ಟೇ ಅಲ್ಲದೇ ತಂಜಾವೂರು ಕುಂಭಕೋಣಮ್ ಕ್ಷೇತ್ರದರ್ಶನವನ್ನೂ ಮಾಡಬಹುದು.ಆರ
ಟಿ ಎಫ್ ಏಕೋ ಕೆಲಸ ಮಾಡುತ್ತಿಲ್ಲ. ತ್ಯಾಗರಾಜರ ಮೂರ್ತಿ ಹಾಗೂ ತಂಜಾವೂರಿನ ದೇಗುಲದ
ಚಿತ್ರ ಚಿತ್ರಪುಟಗಳಲ್ಲಿದೆ. .