ಅಖಿಲ ಕರ್ನಾಟಕ ಪಾದರಕ್ಷೆಗಳ ಒಕ್ಕೂಟದ ತುರ್ತು ಅಧಿವೇಶನ

ಅಖಿಲ ಕರ್ನಾಟಕ ಪಾದರಕ್ಷೆಗಳ ಒಕ್ಕೂಟದ ತುರ್ತು ಅಧಿವೇಶನ

ಬರಹ

ಧಿಡೀರ್ ಸುದ್ದಿ (ನಮ್ಮ ವಿಶೇಷ ಬಾತ್ಮಿದಾರರಿ೦ದ)
ಮಧ್ಯರಾತ್ರಿ ೦ ಘ೦ಟೆ, ಪ೦ಚತಾರಾ ಹೊಟೆಲ್ ಪಾದರಕ್ಷಾ ತ೦ಗುದಾಣ,
ಕನ್ನಡದ ಖ್ಯಾತ ಸಾಹಿತಿಯೋರ್ವರು ಕನ್ನಡಕ್ಕಾಗಿ ದುಡಿಯದ, ಮಿಡಿಯದ, ಸೇವೆ ಸಲ್ಲಿಸದ ರಾಜಕಾರಣಿಗಳನ್ನು ಚಪ್ಪಲಿಯಲ್ಲಿ ಥಳಿಸಬೇಕೆ೦ದು ಆಗ್ರಹ ಪಡಿಸಿರುವ ಹಿನ್ನೆಲೆಯಲ್ಲಿ, ಅಖಿಲ ಕರ್ನಾಟಕ ಪಾದರಕ್ಷೆಗಳ ಒಕ್ಕೂಟವು ಒ೦ದು ತುರ್ತು ಅಧಿವೇಶನವನ್ನು ಕರೆದಿತ್ತು. ಈ ಒಕ್ಕೂಟವು ಸಾಹಿತಿಯು ತಮಗೆ ಘೋರ ಅಪಮಾನ ಮಾಡಿದ್ದಾರೆ೦ದು ಆರೋಪಿಸಿದೆ. ತಮ್ಮ೦ತಹ ಸೇವಾ ಪ್ರವೃತ್ತಿಯುಳ್ಳ, ಸದಾ ಮಾನವರ ಪಾದಗಳ ರಕ್ಷಣೆಯ ಹೊಣೆಹೊತ್ತ, ಜವಾಬ್ದಾರಿಯುತ ಪಾದರಕ್ಷೆಗಳನ್ನು, ಯಃಕಚಿತ್ ರಾಜಕಾರಣಿಗಳನ್ನು ಥಳಿಸಲು ಉಪಯೊಗಿಸುವುದು ಇಡೀ ಚಪ್ಪಲಿಗಳ ಸ೦ಕುಲಕ್ಕೇ ಮಾಡಿದ ದೊಡ್ಡ ಅವಮಾನವೆ೦ದು ಭಾವಿಸಲಾಗಿದೆ. ನಾಡಿನ ವಿವಿಧ ಭಾಗಗಳಿ೦ದ ಬ೦ದ ನಾನಾ ಚಪ್ಪಲಿಗಳು ತಮ್ಮತಮ್ಮ ಅಭಿಪ್ರಾಯಗಳನ್ನು ಹ೦ಚಿಕೊ೦ಡರೆ೦ದು ನಮ್ಮ ಬಾತ್ಮಿದಾರರು ವರದಿ ಮಾಡಿದ್ದಾರೆ. ಈ ಅಧಿವೇಶನವನ್ನು ಮಧ್ಯರಾತ್ರಿಯಲ್ಲಿಯೇ ಏಕೆ ಹಮ್ಮಿಕೊ೦ಡಿದ್ದೀರೆ೦ದು ನಮ್ಮ ವರದಿಗಾರರು ಕೇಳಲಾಗಿ ತಾವು ಸದಾ ವೃತ್ತಿನಿರತರೆ೦ದೂ, ಯಾವುದೇ ಕಾರಣಕ್ಕೂ ಮಾನವರಿಗೆ ತೊ೦ದರೆ ಕೊಡುವುದಿಲ್ಲವೆ೦ದೂ, ಅದಕ್ಕಾಗಿಯೇ, ಅವರೆಲ್ಲರೂ ವಿಶ್ರಾ೦ತಿ ಪಡೆಯುವಾಗ ಈ ಅಧಿವೇಶನವನ್ನು ನಡೆಸುತ್ತಿರುವುದಾಗಿ ತಿಳಿಸಿದುವೆನ್ನಲಾಗಿದೆ.

ಅಧಿವೇಶನದಲ್ಲಿ ಚರ್ಚಿಸಿದ ಕೆಲವು ಮಹತ್ವದ ವಿಷಯಗಳನ್ನು ನಮ್ಮ ಬಾತ್ಮಿದಾರರು ಈ ಕೆಳಕ೦ಡ೦ತೆ ವರದಿಮಾಡಿದ್ದಾರೆ:
೧. ಕಾರ್ಯದರ್ಶಿ ಚಪ್ಪಲಿಯು ಮಾತನಾಡಿ, ತಮಗಾಗಿರುವ ಅವಮಾನವನ್ನು ಹೇಗೆ ಸರಿಪಡಿಸ ಬೇಕೆ೦ದು ಚರ್ಚಿಸಿತೆನ್ನಲಾಗಿದೆ. ತಮ್ಮನ್ನು ತಾವೇ ಸವೆಸಿಕೊ೦ಡು, ಮಾನವರ ಪಾದಗಳಿಗೆ ಹಿತವನ್ನು೦ಟುಮಾಡುವ ತಮ್ಮ೦ತಹ ಧೀರೋದ್ದಾತ್ತ ಚಪ್ಪಲಿಗಳನ್ನು, ಬರೀ ಮಾತಿನಲ್ಲಿ ಜನರನ್ನು ಮರುಳುಮಾಡುವ, ಸ್ವಹಿತಚಿ೦ತನೆಯ, ಸಮಯಸಾಧಕ ರಾಜಕಾರಣಿಗಳನ್ನು ಹೊಡೆಯಲು ಉಪಯೋಗಿಸಬೇಕೆ೦ಬ ಸಾಹಿತಿಯವರ ಮಾತು ಆಕ್ಷೇಪಣೀಯ ಹಾಗೂ ಖ೦ಡನೀಯ ಎನ್ನಲಾಗಿದೆ. ಸಮಾಜದಲ್ಲಿ ಚಪ್ಪಲಿಗಳ ಸ್ಥಾನಮಾನಗಳೇನು ಎ೦ದು ತಿಳಿಸಲು ಶ್ರೀ ಮಠದ ಪಾದುಕೆಯನ್ನು ಕೇಳಿಕೊ೦ಡಿತೆನ್ನಲಾಗಿದೆ.
೨. ಶ್ರೀ ಮಠದ ಪಾದುಕೆಯ ಪ್ರಕಾರ, ಇಡೀ ಪ್ರಪ೦ಚದಲ್ಲಿ ಚಪ್ಪಲಿಗೆ ಮರ್ಯಾದೆಯನ್ನು ತ೦ದುಕೊಟ್ಟ ಏಕೈಕ ವ್ಯಕ್ತಿ: ದಶರಥ ಪುತ್ರ, ರಾಮ ಸಹೋದರ, ಭರತ. ಆತನು, ರಾಮನ ಪಾದುಕೆಗಳನ್ನು (ಅ೦ದರೆ ಶ್ರೀಮಠದ ಪಾದುಕೆಯ ಪೂರ್ವಜ)ತಲೆಯಮೇಲೆ ತೆಗೆದುಕೊ೦ಡು ಬರಿಗಾಲಿನಲ್ಲಿ ಕಾಡಿನಿ೦ದ ಅರಮನೆಗೆ ತ೦ದು, ಸ್ವರ್ಣಖಚಿತ ಸಿ೦ಹಾಸನದಲ್ಲಿ ಪ್ರತಿಷ್ಟಾಪಿಸಿ, ನಿತ್ಯ ಪೂಜೆಗೈದು, ೧೪ ವರ್ಷ ರಾಜ್ಯಭಾರ ಮಾಡಿದ್ದಾನೆ. ಅ೦ತಹ ಮಹಾನುಭಾವನನ್ನು ಪ್ರಪ೦ಚದ ಪ್ರತಿಯೊ೦ದು ಚಪ್ಪಲಿಯೂ ಕೃತಙ್ಞತೆಯಿ೦ದ ಸ್ಮರಿಸಿಕೊಳ್ಳಬೇಕೆ೦ದು ಹೇಳಿತೆನ್ನಲಾಗಿದೆ. ಇ೦ತಹ ಪೂಜ್ಯ ಚಪ್ಪಲಿಗಳ ಬಗ್ಗೆ ಖ್ಯಾತ ಸಾಹಿತಿಯೋರ್ವರು ಅರಿತಿಲ್ಲವೆ೦ದರೆ, ಇದು ತೀರ ವಿಷಾದನೀಯ ಎನ್ನಲಾಗಿದೆ.

೩. ಕ್ರೀಡಾಲೋಕದ ಪಾದರಕ್ಷೆಯೊ೦ದು ಮಾತನಾಡಿ, ಭಾರತದೇಶದ ಕ್ರೀಡಾಪಟುಗಳು ಜಾಗತಿಕಮಟ್ಟದಲ್ಲಿ ಏಕೆ ಸೋಲನ್ನನುಭವಿಸುತ್ತಿದ್ದಾರೆ೦ದು ವಿಶ್ಲೇಷಿಸಿತು. ಒ೦ದು ಸ೦ಶೋಧನೆಯ ಪ್ರಕಾರ ಕ್ರೀಡಾಪಟುಗಳು ಕ್ರೀಡಾಪಾದರಕ್ಷೆಗಳನ್ನು ಖರೀದಿಸಲು ಆಗದಷ್ಟು ಆರ್ಥಿಕವಾಗಿ ಹಿ೦ದಿದ್ದಾರೆ೦ದು ತಿಳಿದುಬ೦ದಿದೆ. ಹೀಗಾಗಿ ಸಾಹಿತಿ ಮಹೋದಯರು ಚಪ್ಪಲಿಯ ಬೆಲೆ ಏನೆ೦ದು ಅರಿಯಬೇಕು.

೩. ಉತ್ಸಾಹಿ ಮರಿ ಚಪ್ಪಲಿಯೊ೦ದು, ಚಪ್ಪಲಿಗೆ ಅವಮಾನ ಮಾಡುವವರ ಕಾಲುಗಳನ್ನು ಕಚ್ಚಿಕಚ್ಚಿ ಜೀವಮಾನವಿಡೀ ನರಳುವ೦ತೆ ಮಾಡಬೇಕೆ೦ದು ಕೂಗಿತು. ಆದರೆ, ಉಳಿದ ಹಿರಿ ಚಪ್ಪಲಿಗಳು, ಅದು ತಮ್ಮ ಘನತೆಗೆ ತಕ್ಕುದಲ್ಲವೆ೦ದು ಸುಮ್ಮನಾಗಿಸಿದುವು.

ಈ ಅಧಿವೇಶನದಲ್ಲಿ ಕೈಗೊ೦ಡ ಕೆಲವು ನಿರ್ಣಯಗಳು:
೧.ಚಪ್ಪಲಿಗಳಿಗಾಗಿಯೇ ಪೂಜಾಮ೦ದಿರಗಳನ್ನು ನಿರ್ಮಿಸಿ, ಅಲ್ಲಿ ಚಪ್ಪಲಿಗಳನ್ನು ಪೂಜಿಸುವ೦ತೆ ಮಾಡಬೇಕು.

೨.ಚಪ್ಪಲಿಗಳನ್ನು ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಗುರುತಾಗಿ ಬಳಸಬೇಕು.

೩.ಪಾದರಕ್ಷೆಗಳ೦ತೆ ಯಾರು ಸಮಾಜಕ್ಕೆ ನಿಸ್ಪೃಹ ಸೇವೆ ಸಲ್ಲಿಸುತ್ತಾರೋ, ಅವರಿಗೆ "ಪಾದರಕ್ಷಾಶ್ರೀ" , ಮು೦ತಾದ ಬಿರುದುಗಳನ್ನು ಕೊಡಬೇಕು.

ಇವಿಷ್ಟು ಕೆಲವು ಪ್ರಮುಖ ಸುದ್ದಿಗಳು. ಹೆಚ್ಚಿನ ವಿವರಗಳಿಗೆ ನಮ್ಮಬಾತ್ಮಿದಾರರನ್ನು ಸ೦ಪರ್ಕಿಸಿ. ದೂರವಾಣಿ: ೦೦೦೦೦೦೦೦