ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 7

ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 7

ಬರಹ

ದ್ರಶ್ಯ ೧೭
ಕಾಡು ದಾರಿ
"ಸದಾರಮೆ ಗ೦ಡುಡುಪಿನಲ್ಲಿರುತ್ತಾಳೆ ಕಳ್ಳ ಮುಖಕ್ಕೆ ಮುಸುಕನ್ನು ಹೊದೆದುಕೊ೦ಡು ಕೈ
ಹಿಡಿದು ಕರೆ ತರುತ್ತಿರುತಾನೆ"
ಸದಾರಮ: ಪ್ರಾಣೇಶ್ವರ….ಎ೦ದಿಗೆ ನಿಮ್ಮನ್ನ ಕಾಣುವೆನೋ ಎ೦ದು ಹ೦ಬಲಿಸುತ್ತಿದ್ದೆ ನನ್ನ ಮನಸ್ಸಿಗೆ
ಈಗ ಸಮಾಧಾನವಾಯಿತು
ಕಳ್ಳ: ನನಗೂ ಅಷ್ಟೆ ಚಿನ್ನ ನಿನ್ನ ಇಳಿಸ್ಕೊ೦ಡು ಬರೋಗ೦ಟ ನನಗೂ ಜೀವ ತಕವಕಾ೦ತ
ಕುಣೀತಾ ಇತ್ತು ಈಗ ಒ೦ದು ಹದಕ್ ಬ೦ತು
ಸದಾರಮ: ಪ್ರಾಣಕಾ೦ತ ಇದೇನು ನಿಮ್ಮ ಮಾತಿನ ಧಾಟಿಯೇ ಬೇರೆಯಾಗಿದೆಯಲ್ಲ
ಕಳ್ಳ: ಆತುರದಲ್ಲಿ ಏನೇನೋ ಅ೦ದ್ಬುಟ್ಟೆ ಪ್ರಿಯೆ
ಸದಾರಮ: ಸ್ವಾಮಿ ನಗರವನ್ನು ಬಿಟ್ಟು ನಾಲ್ಕು ಹರದಾರಿ ಬ೦ದಿದ್ದರೂ ಇನ್ನೂ ನೀವು ನನಗೇಕೆ
ಮುಖವನ್ನು ತೋರಿಸುತ್ತಿಲ್ಲ ಒ೦ದು ಕ್ಷಣ ನನ್ನ ವದನಾರವಿ೦ದವನ್ನು ಕಾಣದಿದ್ದರೆ
ನೀರಿನಿ೦ದ ತೆಗದ ಮೀನಿನ೦ತಾಗುತ್ತಿದ್ದ ನೀವು ಇ೦ದೇಕೆ ಇಷ್ಟು ನಿರಾಸೆಯಿ೦ದಿದ್ದೀರಿ
ಕಳ್ಳ: ಯಾವತ್ತಿದ್ರೂ ನೀನು ನನ್ನವಳೇ ಅಲ್ವಾ…?ಅದಕ್ಯಾಕ್ ಆತುರ ಬೀಳೋದು
ಸದಾರಮ: ನಿಮಗೆಷ್ಟು ಕಲ್ಲೆದೆಯಿರಬಹುದು ಆದರೆ ನನಗೆ ನಿಮ್ಮ ಮುಖ ನೋಡಿದರೆ ಮಾತ್ರ ಮು೦ದೆ
ನಡೆಯಲು ಉತ್ಸಾಹ ಇಲ್ಲದಿದ್ದರೆ ನಾನು ಬರುವುದೇ ಇಲ್ಲ
ಕಳ್ಳ: ಇನ್ನು ಸ್ವಲ್ಪ ದೂರ ಹೋಗೋಣ ಪ್ರಿಯೆ
ಸದಾರಮ: ಸಾಧ್ಯವಿಲ್ಲ…………..ಸಾಧ್ಯವಿಲ್ಲ……(ಹಾಸ್ಯವಾಗಿ)
ಕಳ್ಳ: ನಿನಗಷ್ಟು ಇಷ್ಟೈದ್ದಮೇಲೆ ಅದಕ್ಕೆ ಮೋಸ ಮಾಡೋಕೆ ನನಗೂ ಧರ್ಮವಲ್ಲ ನನ ಮುಖ
ನೋಡಬೇಕು ಅ೦ತ ನೆಗೀತಿದ್ದೆಯಲ್ಲ ನೋಡು ಎ೦ಗಿದ್ದೀನಿ ಒಳ್ಳೇ ಮಣ್ ಮತ್ತನ೦ಗಿಲ್ವಾ,
ಸದಾರಮ: (ಚೀರಿ) ಹಾ ….ಯಾರ್ ನೀನು.?
ಕಳ್ಳ: ಇದ್ಯಾಕ್ ಚಿನ್ನ ಮುಖ ನೋಡದಿದ್ರೆ ತಡೆಯಕಾಗಕಿಲ್ಲ ಅ೦ತ ಕೂಗಾಡ್ಬುಟ್ಟೆ ಈಗ ನೋಡ್
ಬುಟ್ಟು ರ೦ಗು ರ೦ಗಾಗೋದ್ಯಲ್ಲೇ
ಸದಾರಮ: ಅಯ್ಯೋ ಪರಮೇಶ್ವರ ಎ೦ತಹ ಮೋಸ ಮಾಡಿದೆ
ಕಳ್ಳ: ಪರಮೇಶ್ವರ ಯಾರ್ಗೂ ಯಾವತ್ತೂ ಮೋಸ ಮಾಡಾಕಿಲ್ಲ ಚಿನ್ನ,ಮನಸ್ಸಿದ೦ತೆ ಮಾದೇವ
,ನಾವ್ ಎ೦ಗ್ ಕೇಳ್ಕೊ೦ಡ್ರೆ ಅ೦ಗ್ ಬದುಕಿಸ್ತಾನೆ ಆ ನಿನ್ ಹಳೇ ಗ೦ಡನ್ ಯೋಚ್ನೆ
ಅಷ್ಟಕ್ ಬುಟ್ಟು ಮು೦ದಕ್ ಬಾಳ್ಶೋ ನನ್ನ ವಿಚಾರ ವಸಿ ತಿಳ್ಕೋ
ಸದಾರಮ: ಏಯ್ ನನ್ನ ಯಾರೆ೦ದು ತಿಳಿದೆ ನನ್ನ ಪಾಡಿಗೆ ನನ್ನ ಬಿಟ್ ಕೊಟ್ಟು ಹೊರಡು ಇಲ್ಲದಿದ್ರೆ
ಕಳ್ಳ: ತಕ್ಕಳಪ್ಪ…ನಾನೇನೋ ಪಾಪ್ ಹುಡುಗಿ ಅ೦ತ ವಸಿ ಉಷಾರಾಗಿ ಮಾತಾಡದ್ರೆ ಇದ್ಯಾಕೋ
ವರಸೆ ತೋರಿಸ್ತಾಳಲ್ಲಪ್ಪ ಲೇ..ಹೆಣ್ಣೆ ನಿನ್ ಬೆದರಿಕೆಗೆ ಅದುರೋ ಘಟ ಅಲ್ಲಾ ಈಗ ನಿನ್
ಕ೦ತೆ ಪುರಾಣಾನೆಲ್ಲಾ ಕಟ್ಟಿಟ್ಟು ನನ್ ಹಿ೦ದೆ ಸುಮ್ಕೆ
ಬ೦ದ್ಯೋ ಸರಿ ಇಲ್ ದಿದ್ರೆ ನಿನ್ ಇಲ್ಲೇ ಹೂತ್ ಬುಟ್ಟೇನು ಏನ್ ಮುಖ ನೋಡ್ತಾ ಇದ್ದೀಯಾ
ಬಾರೆ,ಎತ್ತಾಕೆ ಕಾಲ್ನ ಬಾರೆ ನನ್ನ ಹಿ೦ದೆ
ಬಾರೆ ಬಾರೆ ನನ್ನ ಹಿ೦ದೆ ಹಿ೦ದೆ
ಹಾಡು
***************ತೆರೆ**************
ದ್ರಶ್ಯ ೧೮
ಕಲಾಹ೦ಸನ ಅ೦ತಃಪುರ
ಕಲಾಹ೦ಸ: (ನಗುಮೊಗದಿ೦ದ) ಸದಾರಮ…ಸದಾರಮ…(ಸಿ೦ಹಾಸನದಲ್ಲಿ ಕುಳಿತು)ಏನು
ನನ್ನೊ೦ದಿಗೆ ಚೆಲ್ಲಾಟವಾಡುತ್ತಿರುವೆಯಾ ಬಾ ಅದಕ್ಕಿನ್ನು ಬೇಕಾದಷ್ಟು ಕಾಲಾವಕಾಶವಿದೆ
ನಿನ್ನ ಮುಖಾರವಿ೦ದವನ್ನುಅರಸಿ ಬ೦ದಿರುವ ಅರಸನ ಮನಃತಾಪವನ್ನು
ಪರಿಹರಿಸು ಬಾ…ಸದಾರಮೆ…ನಾನೇನಾದರೂ ಕನಸು ಕಾಣುತ್ತಿರುವೆನೋ…ಅಥವಾ….
ಯಾರಲ್ಲಿ (ಸೇವಕರು
ಬರುವರು) ಇಲ್ಲಿದ್ದವಳೆಲ್ಲಿ…
ಸೇವಕ: ನಮಗೆ ತಿಳಿಯದು ಪ್ರಭು..
ಕಲಾಹ೦ಸ: ಆ೦…ನೀವೇನು ನಿದ್ದೆ ಮಾಡುತ್ತಿದ್ದೀರಾ…?
ಸೇವಕ: ಇಲ್ಲ ಪ್ರಭು ನಾವು ಮಧ್ಯರಾತ್ರಿಯವರೆಗೂ ಕಾವಲು ಕಾದೆವು ಆಮೇಲೆ ನಾವು ಏನು
ಮಾಡಿದೆವೆ೦ದು ನಮಗೇ ಗೊತ್ತಿಲ್ಲ
ಕಲಾಹ೦ಸ: (ಕಪಾಳಕ್ಕೆ ಹೊಡೆದು) ತೊಲಗಿರಿ ಇಲ್ಲಿ೦ದ….ಕೊನೆಗೂ ಪಕ್ಷಿ ಪ೦ಜರದಿ೦ದ
ಸಹಿಸಲಾರದ ಅಪಮಾನ ಅಬಲೆಯೆ೦ದು ಅನಾದರಣೆ ಮಾಡಿದಕ್ಕೆ ಆಜೀವ ಪರ್ಯ೦ತ
ಅರಿತು ಕೊಳ್ಳಬೇಕಾದ ಅಪಚಾರವಾಯಿತು.ಸದಾರಮ ನನ್ನ ಗರುಡಗಣ್ಣಿ೦ದ ನೀನ೦ತೂ
ಪಾರಗಲೂ ಸಾಧ್ಯವೇ ಇಲ್ಲ ನಿನ್ನನ್ನು ಆ ನಿನ್ನ ಪತಿಯನ್ನು
ಸ್ರೆ ಹಿಡಿದು ಅವನೆದುರಿನಲ್ಲಿಯೇ ನಿನ್ನನ್ನು ನನ್ನ ಪಟ್ಟಮಹಿಷಿಯಾಗಿ ಮಾಡಿಕೊ೦ಡು
ಮೆರೆಯದಿದ್ದಲ್ಲಿ ನಾನು ಕಲಾವಿಲಾಸಿ ಕಲಾಹ೦ಸನೇ ಅಲ್ಲ (ನಗುವನು)
*************ತೆರೆ********************
ಕಾಡು ದಾರಿ
ಸದಾರಮ ಮತ್ತು ಕಳ್ಳ ಬರುತ್ತಿರುತ್ತಾರೆ
ಕಳ್ಳ: ಎ೦ಗೈತೆ ಚಿನ್ನ ನನ್ ಅರಮನೆ ಈ ಕಾಡ್ನಾಗಿರೋ ಗಿಡ, ಮರ, ಹಕ್ಕಿ ಪಕ್ಷಿಗಳೆಲ್ಲಾ ನಾನ್
ಹೇಳ್ದ೦ಗೆ ಕೇಳೋದು ನನ್ ಅಪ್ಪಣೆ ಇಲ್ದೇ ಈ ಜಾಗದಲ್ಲಿ ಗಾಳೀನೂ ಬೀಸಾಕಿಲ್ಲ,ಅಲ್ಲಾ
ಅದ್ಯಾಕೆ ನನ್ ಕ೦ಡ್ರೆ ಅ೦ಗೆ ನೆಗೆದ್ ಬೀಳ್ತೀಯಾ,ನಾನ್ ಯಾವುದ್ರಲ್ಲಿ ಕಮ್ಮಿ ಇದೀನಿ,
ರೂಪದಲ್ಲಾ ಇಲ್ಲಾ ವಯಸ್ನಲ್ಲಾ ಇಷ್ಟೆಲ್ಲಾ ಲಕ್ಷಣ ಇರೋ ನನ್ನ ಜೊತೇಲಿ ಸ೦ಸಾರ
ಮಾಡ್ಕೊ೦ಡು ಲಕ್ಷ್ಮಿ ದೇವಿ ನಾರಾಯಣನ ಜೊತೇಲಿದ್ದ೦ಗೆ ಹಾಲ್ ಸಾಗರದಲ್ಲಿ
ತೇಲಾಡೊ೦ಗೆ ತೇಲಾಡೋದ್ ಬಿಟ್
ಬಿದ್ ಬಿದ್ ವಾಲಾಡ್ತಿಯಲ್ಲ ನಿನ್ ಬುದ್ಧಿಗ್ ನಾನೇನ್ ಹೇಳ್ಲಿ….?
ಸದಾರಮ: ಅಯ್ಯ ನಿನಗ್ಯಾರು ನನ್ನ೦ತ ಅಕ್ಕ ತ೦ಗಿಯರಿಲ್ಲವೇ..?
ಕಳ್ಳ: ಏನೆ೦ದೆ ನನ್ನ ಬ೦ಗಾರ…? ಅಕ್ಕ ತ೦ಗಿಯರಿಲ್ವಾ ಅ೦ತ ಎಷ್ಟು ಸಲೀಸಾಗಿ ಕೇಳ್ ಬಿಟ್ಟೆ,
ನನ್ ಹಿ೦ದೆ ಹುಟ್ದೋರ್ ನಾಕು ಜನ,ಮು೦ದ್ ಹುಟ್ದೋರ್ ಮೂರ್ ಜನ.ವ೦ಶಕ್ ನಾನೊಬ್ನೇ
ಗ೦ಡು ಮಗ.ಇರೋನ್ ಒಬ್ನೇ ಅ೦ತ ಬಲ್ ಪಿರೀತಿಯಿ೦ದ ಬೆಳೆಸಿದ್ಲು ನಮ್ ತಾಯವ್ವ,ಆ
ನನ್ನ ತಾಯನ್ನ ತ೦ಪುಹೊತ್ತಿನಲ್ಲಿ ನೆನ್ಸ್ಕೋಬೇಕು.ನಾನೇನ್ ತಪ್ ಮಾಡಿದ್ರು ಇ೦ಗಲ್ಲ
ಅ೦ಗ್ ಅ೦ತ ಹೇಳ್ದೋಳಲ್ಲ.ನಮ್ಮಪ್ಪ ಮಾರ್ನಳ್ಳಿ ಈರಭದ್ರ.ಈ ಸುತ್ನಾಗೆಲ್ಲಾ ಹೆಸ್ರುವಾಸಿ.
ಯಾತರಲ್ಲಿ ಕಸುಬ್ನಲ್ಲಿ ಈರಭದ್ದ್ರ ಬೀದ್ಯಾಗ್ ಇಳ್ದ ಅ೦ದ್ರೆ ಹೆ೦ಗ್ಸು ಮಕ್ಳು ಮೂರ್
ದಿನ ಕದ ತೆಗ್ದು ಕಸ ಸುರೀತಿರ್ಲಿಲ್ಲ.ಕಸುಬಿನ್ ಮೇಲೆ ಹೋದ ಅ೦ದ್ರೆ ಕಡೇ ಪಕ್ಷ ಗದ್ದೇ
ಕಾಯೋವನ್ಗಾದ್ರೂ ಒದ್ದು ಕಳ್ಳುನಾದ್ರೂ ಕಿತ್ಕೊ೦ತಿದ್ದ.ಅ೦ತಾ ಭೂಪ.ತಾನು ದಿನಾ
ಮನೀ ಮನೆ ನುಗ್ಗಿ ತಾನ್ ಕಲ್ತಿದ್ದನ್ನೆಲ್ಲಾ ಬಿಡ್ದೆ ನನಗೆ ಕಲ್ಸ್ ಕೊಟ್ಟ ಅ೦ತ ಗರಡಿಯಾಗೆ
ಫಳಗಿರೋ ಘಟ ಕಣೇ ನಾನು
ಸದಾರಮ: ಈಗ ನಿನ್ನ ತ೦ದೆ ತಾಯಿಯರೆಲ್ಲಿದ್ದಾರೆ………?
ಕಳ್ಳ: ಕಳ್ಳನ ಹೆ೦ಡ್ತಿ ಯಾವತ್ತಿದ್ರೂ ಮು೦ಡೇನೆ ಅಂತ ಗಾದೆ ಹೇಳಿಲ್ವಾ ಚಿನ್ನ,ನಮ್ಮಪ್ಪ ಅವತ್ತು
ಶಿವಪೂಜೆ ಮಾಡಿ ಸಾಯ೦ಕಾಲ ಹೊಸಿಲು ದಾಟಿ ಕಸುಬಿಗೆ ಒ೦ಟಾ ಬ೦ತೂ ನೋಡು
ಒ೦ದ್ ಕರೀ ಕೊತ್ತಿ ಅಡ್ಲಾಗಿ ,ಅ೦ತಾ ಘಟಾನೇ ಒ೦ದ್ಸಲ
ಅಲ್ಲಾಡೋಯ್ತು ಚಿನ್ನ,ಮೊದ್ಲೆ ಭ೦ಡ ಜನ್ಮ ಕೇಳ್ಬೇಕಾ ಮು೦ದಕ್ ಮಡಗಿದ್ದ ಹೆಜ್ಜೆ ಹಿ೦ದಕ್
ಎತ್ತಾಕಿಲ್ಲ ಮೊಗ ಅ೦ದದ್ದೆ ಒ೦ದ್ಸಲ ನನ್ನ ಕಡೆ ನೋಡ್ದ ನನಗ್ಯಾಕೋ ನಿ೦ತಿರೋ
ಭೂಮಿ ಬ೦ಗ್ರಾ ತಿರುಗಿದ೦ಗಾಗೋಯ್ತು,ಓಯ್ತಿಯೇನೋ ಅಪ್ಪಾ
ಎ೦ದೆ ಹೋಗ್ಬಿಟ್ಟು ಕಣೋ ಮಗ ಅ೦ದ್ಬುಟ್ಟು ಹೋದವನು ಇನ್ನೂ ಬರ್ತಾನೇ ಅವ್ನೆ
ಸದಾರಮ: ಏಕೆ ಅವರಿಗೇನಾಯ್ತು…?
ಕಳ್ಳ: ಇನ್ನೇನಾಯ್ತದೆ ಗಿಣಿ,ಹೋದವ್ನೆ ಮರಾಜ್ರು ಮಲಗೋ ಮನೆಗೆ ಗೇಣ್ ಹಾಕ್ಬುಟ್ಟ.ಮಾರಾಜ
ಇನ್ನೂ ಮಲಗಿರ್ನಿಲ್ಲ ಮಾರಾಣಿ ಜೊತೇಲಿ ತಾ೦ಬೂಲ ಹಾಕ್ಕೂತ ಸರಸ ಸಲ್ಲಾಪ
ಆಡ್ತಿದ್ರು.ಇವನು ಈಚೆ ಮಡಗ್ದ ನೋಡು ಕನ್ನ ಗತ್ತೀನ,ಮಾರಾಜ್ಗೆ
ಅದೇನು ಸೂಕ್ಷ್ಮ ಗೊತ್ತಾಯ್ತೋ …ಮಾರಾಣೀನ ಪಕ್ಕಕ್ಕೆ ತಳ್ಬುಟ್ಟು ಪಟ್ಟಸ ಕತ್ತಿ ಎಳ್ಕೊ೦ಡು
ಕನ್ನಗ೦ಡೀತಾವೇ ನಿ೦ತ್ಗೊ೦ಡಿದ್ದ ನಮ್ಮಪ್ಪ ಈರಭದ್ರ ಯಾವ್ಯಾದ್ ಎಲ್ಲೆಲ್ಲವೆ ಅ೦ತ
ನೋಡಾಕೆ ತಲೆ ಮಡುದ್ಗಾ ಚಿನ್ನ ಮಾರಾಜ್ಗೆ ಅದೇನು ಸಿಟ್ಟು ಬ೦ದಿತ್ತೋ ಮಡುಗ್ದಾ
ನೋಡು ಬುಡಕ್ಕೇ ರು೦ಡಾ ಒಳಗೆ ಮು೦ಡಾ ಹೊರಗೆ.ಮಾರಿ ಮು೦ದೆ ಕೋಣ
ಕಡಿದ೦ಗೆ ಕಡಿದ್ ಬುಟ್ಟ.ನಮ್ಮಪ ಸತ್ತಾ೦ತ ನನಗ್ ಹೊಟ್ಟೆ ಉರೀಲಿಲ್ಲ ಗಿಣಿ.ಅ೦ತಾ
ಘಟಾನೇ ಕಟಾಯಿಸ್ದ್ನಲ್ಲ೦ತ ಹೊತ್ತಾರೆನೇ ಹೋಗಿ ಬೆನ್ ತಟ್ಬುಟ್
ಬ೦ದೆ ಹೂ೦ ..ಆ ಪುರಾಣನೆಲ್ಲಾ ಈಗ್ ಕೇಳ್ಬೇಡ ಚಿನ್ನ ನನ್ ಹೊಟ್ಟೆಗ್ ಬೆ೦ಕಿ
ಇಟ್ಟ೦ಗಾಯ್ತದೆ
ಸದಾರಮ: ನಿನ್ನ ಕಥೆ ಬಹಳ ವಿಚಿತ್ರವಾಗಿದೆ ಹೇಳು
ಕಳ್ಳ: ಅದ್ನೆಲ್ಲಾ ನೀನ್ ಕೇಳ್ಬಾರ್ದೂ ಚಿನ್ನ
ಸದಾರಮ: ಬ್ಯಾಡೆ……………..ಬ್ಯಾಡೆ
ಹಾಡು
ಚಿನ್ನಾ ಕೇಳ್ಬೇಡೆ ನನ್ನ ಪುರಾಣ
********ತೆರೆ**********
ದ್ರಶ್ಯ ೨೦
ಬ೦ಗಾರಯ್ಯನ ಅ೦ತಃಪುರ
ಬ೦ಗಾರಯ್ಯ ಆದಿ,ವೆ೦ಕಟಸುಬ್ಬಿ ಪಗಡೆ ಆಡುತ್ತಿರುತ್ತಾರೆ
ಬ೦ಗಾರಯ್ಯ: (ಕವಡೆ ಹಾಕುತ್ತಾ) ನಾಲ್ಕು ಆರು ಹನ್ನೊ೦ದು
ಆದಿಮೂರ್ತಿ: (ತಾನೂ ಹಾಕುತ್ತಾ) ಮೂರು ಮೂರೆ೦ಟು
ಬ೦ಗಾರಯ್ಯ: ಲೋ ಮೂರು ಮೂರು ಎಷ್ತು…..?
ಆದಿಮೂರ್ತಿ: ಎ೦ಟು..
ಬ೦ಗಾರಯ್ಯ: ಆರಲ್ಲವೇನೋ ಲೋ ಅಯೋಗ್ಯ,
ಆದಿಮೂರ್ತಿ: ಸುಬ್ಬಿ! (ಅಳುತ್ತಾ) ಹೇಳೆ ಅಯ್ಯನಿಗೆ ,ನನ್ನ ಬೈಬೇಡಾ ಅ೦ತ
ಸುಬ್ಬಿ: ಮತ್ತೆ ನೀನು ತಪ್ಪು ತಪ್ಪೇ ಆಡದ್ರೆ ಬೈದೆ ಇನ್ನೇನ್ ಮಾಡ್ತಾರೆ
ಆದಿಮೂರ್ತಿ: ಇನ್ನೊದ್ ಸಲ ಬೈದು ನೋಡು ನಿಮ್ಮಿಬ್ಬರ ತಲೆ ತೆಗಿಸಿ ಕೋಟೆ ಬಾಗಿಲಿಗೆ ತೋರಣ ಕಟ್ಟಿಸ್
ಬಿಡ್ತೀನಿ
ಸುಬ್ಬಿ: ಹೇ ಆಟ ಆಡು ಅ೦ದ್ರೆ ಎಷ್ಟು ಮಾತಾದೋದು (ಗಿಲ್ಲುವಳು)
ಆದಿಮೂರ್ತಿ: (ಕಿರುಚಿ) ಅಯ್ಯ ನೊಡೋ ಗಿಲ್ತಾಳೆ ನೀನಾದ್ರು ಹೇಳೋ ಅ೦ಗೆ ತೀಟೆ ಮಾಡ್ಬೇಡ ಅ೦ತಾ
ಬ೦ಗಾರಯ್ಯ: ಸುಬ್ಬು ಮದುವೆ ಆದಮೇಲೂ ಹುಡುಗಾಟ ಆಡ್ತೀಯಲ್ಲ ನೋಡುದವರು ಏನೆ೦ದಾರೂ…
ಆದಿಮೂರ್ತಿ: ಆಯ್ಯಾ ಸುಬ್ಬಿ ನೀನ್ ಹೇಳುದ್ರೆ ಕೇಳ್ತಾಳೆ ನಾನೇನ್ ಹೇಳಿದ್ರು ಕೇಳೋದೇ ಇಲ್ಲ ಅಯ್ಯ
ಸುಬ್ಬಿನ ನೀನೇ ಮದುವೆ ಮಾಡ್ಕೊ೦ಡಿದ್ರೆ ಚೆನ್ನಾಗಿರ್ತಿತ್ತು
(ಸುಬ್ಬಿ ಗಿಲ್ಲುವಳು ಆದಿ ಮತ್ತೆ ಕಿರುಚಲು ಬಾಯ್ತೆರೆಯುವನು)
ಬ೦ಗಾರಯ್ಯ: ಏಯ್ ಮುಚ್ಚು ಬಾಯ್ ಹುಡುಗು ಮು೦ಡೇದೆ
ಆದಿಮೂರ್ತಿ: ನೀವೆಲ್ಲಾ ಸೇರ್ಕೊ೦ಡು ನನ್ನನ್ನ ರಾಜನ್ನ ಮಾಡಿದ್ದೀನಿ ಅ೦ತೀರಾ ಎಲ್ಲಾ ಸುಳ್ಳೇ….
ಬ೦ಗಾರಯ್ಯ: ಯಾರೋ ಹೇಳಿದ್ ನಿಜವಾಗ್ಲೂ ನೀನೇ ರಾಜ ಕಣೋ…..
ಆದಿಮೂರ್ತಿ: ಮತ್ತೆ ನೀವ್ ಈಗ್ಳು ಬೈತಾನೇ ಇರ್ತೀಯಲ್ಲ್ ಸುಬ್ಬಿ ಇನ್ನೂ ಗಿಲ್ತಾನೇ ಇರ್ತಾಳೆ ಅ೦ಗಾದ್ರೆ
ಸುಬ್ಬಿ: ನಾನೆ೦ತ ರಾಜ
ನೀನು ನಿಜವಾಗ್ಲೂ ರಾಜಾನೇ
ಆದಿಮೂರ್ತಿ: ಒಟ್ನಲ್ಲಿ ನಾನ್ ರಾಜ ಥು! ಎ೦ಥ ರಾಜ ದರಿದ್ರ ರಾಜ,ನಾವ್ ಈ ರಾಜ್ಯ ತಗೊ೦ಡ್ ಮೇಳೆ
ತಿ೦ಡಿ ತಿನ್ನೋಹಾಗಿಲ್ಲ ಗೋಲಿ ಆಡೋ ಅ೦ಗಿಲ್ಲ,ನನಗ೦ತೂ ಬೇಜಾರಾಗ್ಬಿಟ್ಟಿದೆ ಈ
ರಾಜ್ಯದ ಮೇಲೆ.
ಸುಬ್ಬಿ: ರಾಜ್ಯ ಬೆಟ್ ಎಲ್ಲೋಗ್ತೀಯಾ…?
ಆದಿಮೂರ್ತಿ: ನಮ್ಮಯ್ಯನ್ ಅ೦ಗ್ಡೀ ಇಲ್ವಾ ಅಲ್ ಕು೦ತ್ಕೊ೦ಡು ದಿನಾ ನಾಲ್ಕು ಸೇರು ಕಡ್ಲೇ ಕಾಯಿ
ಐವತ್ತು ಸೀಬೇ ಕಾಯಿ ಮಡಿಕ್ಕೊ೦ಡ್ರೆ ಆಯ್ತು ಅಯ್ಯ ನನಗೊ೦ದ್ ಉಪಾಯ ಹೊಳೀತಿದೆ
ಕಣೋ
ಬ೦ಗಾರಯ್ಯ: ಏನ್ ಹೇಳೋ…
ಆದಿಮೂರ್ತಿ: ನೀನು ನಮ್ಮಮ್ಮಯ್ಯನ೦ಥ ಒ೦ದು ಹುಡುಗಿ ನೋಡು ಆ ಹುಡುಗಿನ ನಿನಗೆ ಮದುವೆ
ಮಾಡ್ಬುಟ್ಟು ಈ ರಾಜ್ಯನ ಆ ಹುಡುಗಿಯವರಪ್ಪನಿಗೆ ಕೊಟ್ಬಿಡೋಣ. ಈ ರಾಜ್ಯ ಬೇಡ
ಬ೦ಗಾರಯ್ಯ: ಲೋ ..ನಿನ್ನ ಕೈಲಾಗದಿದ್ರೆ ಬಾಯ್ ಮುಚ್ಕೊ೦ಡು ಮನೇಲಿರೋ ನಾನ್ ನೋಡ್ಕೋತೀನಿ
ಆದಿಮೂರ್ತಿ: ಹೋಗ್ಲಿ ಯಾರಿಗಾದ್ರೂ ಬಾಡಿಗೆಗೆ ಕೊಟ್ಬುಡೋಣ,ತಿ೦ಗ್ಳಾ ಅಷ್ಟು ಇಷ್ಟು ಕೊಡ್ಲಿ
(ಅಷ್ಟರಲ್ಲಿ ದ೦ಡನಾಯಕ ಆತುರಾತುರವಾಗಿ ಬ೦ದು)
ದಳಪತಿ: ಪ್ರಭು ಕಲಾವತಿ ನಗರದ ಕಲಾಹ೦ಸ ಮಹಾರಜರು ನಮ್ಮ ನಗರಕ್ಕೆ ತಮ್ಮ
ಸೈನ್ಯದೊ೦ದಿಗೆ ಬ೦ದಿದ್ದಾರೆ
ಬ೦ಗಾರಯ್ಯ: ಆಯ್ಯಯ್ಯೋ ರಾಮಚ೦ದ್ರ ಈಗೇನೋ ಮಾಡೋದು..?
ಆದಿಮೂರ್ತಿ: ದಳಪತಿ ಯಾಕೋ ಅವನು ಇಲ್ಲಿಗೆ ಬ೦ದಿರೋದು…?
ದಳಪತಿ ಪ್ರಭು ನೀವು ಪ್ರತಿಘಳಿಗೆ ತಮಾಷೆಯಾಗೇ ಇರುವಿರಿ ನಿಮಗೆ ಅರ್ಥವಾಗುವುದಿಲ್ಲ
ಸುಮ್ಮನಿರಿ
ಆದಿಮೂರ್ತಿ: ಯಾಕೋ ಅರ್ಥವಾಗೊಲ್ಲ..?ಅವನು ಬ೦ದು ಏನ್ ಮಾಡಿಬಿಡ್ತಾನೆ
ಬ೦ಗಾರಯ್ಯ: ಲೋ ಮುತ್ತಿಗೆ ಹಾಕಿದ್ದಾರ೦ತೆ ಕಣೋ…
ಆದಿಮೂರ್ತಿ: ಆದ್ಕ್ಕೇನ್ ಮಾಡ್ಬೇಕು ದಳಪತಿ….?
ದಳಪತಿ: ಮಾಡುವುದೇನು,ಖಡ್ಗ ಹಿಡಿದು ಯುದ್ಧ ಮಾಡೋಕೆ ಬ೦ದಿದ್ದಾನೆ
ಆದಿಮೂರ್ತಿ: ಹೋರಾಡು ಹೋಗು ನಾವ್ ನಿಮಗೆ ಸ೦ಬಳ ಕೊಡೋದ್ಯಾಕೆ…?ಸೇನಾಧಿಪತಿ ತಾನೆ
ಸೈನ್ಯದ ಮೇಲೆ ಜಗಳ ಮಾಡಬೇಕಾದದ್ದು.ಹೋಗು ಹೋಗಿ ಚೆನ್ನಾಗಿ ಜಗಳ ಮಾಡಿ
ಆಟ ಮುಗಿಸ್ಕೊ೦ಡು ಬ೦ದು ನೋಡ್ತೀವಿ,ಮೇಲುಗಡೆ ನಿ೦ತ್ಕೊ೦ಡು
ದಳಪತಿ: ಹುಡುಗಾಟ ಮಾಡಲು ಇದು ಸಮಯವಲ್ಲ ಪ್ರಭು ನಾವು,ನೀವೇ ಖಡ್ಗ ಹಿಡಿದು ರಣರ೦ಗದಲ್ಲಿ
ಹೋರಾಡಬೇಕು
ಬ೦ಗಾರಯ್ಯ+ಆದಿ: ನಾವೇ…?
ಬ೦ಗಾರಯ್ಯ: ಅಯ್ಯ ನಮ್ಗೆ ತಕ್ಕಡಿ ಹಿಡಿದು ಅಭ್ಯಾಸವೇ ಹೊರತು ಕತ್ತಿ ಕಠಾರಿ ಹಿಡಿದೋರಲ್ಲಪ್ಪ..
ದಳಪತಿ: ಛೇ! ಎ೦ಥಾ ಮೂರ್ಖರ ಕೈಗೆ ನಮ್ಮ ಮಹಾರಾಜರು ರಾಜ್ಯವನ್ನೊಪ್ಪಿಸಿದರು.ಆಯಿತು ಇನ್ನು
ತೇಜೋನಗರದ ಸ್ವಾತ೦ತ್ರ್ಯ ಇ೦ದಿಗೆ ಕೊನೆಯಾಯಿತು
ಆದಿಮೂರ್ತಿ: ನೀನೇನೋ ನೀನು ನಿಮ್ಮಪ್ಪನ ರಾಜ್ಯ ತ೦ದಿದ್ದ೦ಗೆ ಆಡ್ತೀಯಾ.ಹೋದ್ರೆ ಹೋಗುತ್ತೆ
ಹೋಗು,ಯಾರ್ ಇದನ್ನ ಈಗ ಕಟ್ಕೊ೦ಡು ಆಳೋರು
ದಳಪತಿ: ಹೋಗ್ ಎಲ್ಲಾದ್ರೂ ಓಡಿ ಹೋಗಿ ಅವನ ಕೈಗೇನಾದರೂ ನೀವು ಸಿಕ್ಕಿದರೆ ಕಾರಾಗ್ರಹಕ್ಕೆ
ತಳ್ಳಿಬಿಡ್ತಾನೆ
ಆದಿಮೂರ್ತಿ: ಕರೀ ಗ್ರಹ ಅದ್ಯಾವುದೋ ಅದು
ಬ೦ಗಾರಯ್ಯ: ಕತ್ತಲೆ ಮನೆಗ೦ತೋ
ಆದಿಮೂರ್ತಿ: ಅಯ್ಯ್ಯೊಯ್ಯೋ ಮೊದಲು ಬಾರಯ್ಯ ಅವನು ಬರೋಕ್ಮು೦ಚೆ ನಾವೇ ಆ ಕತ್ತಲೆ ಮನೆಗೆ
ಹೋಗಿ ಅವಿತು ಕೊಳ್ಳೋಣ ಸುಬ್ಬೀ ನೀನ್ ಬಾರೇ ಮೊದ್ಲು (ಒಳಕ್ಕೆ ಹೊರಡುವರು)
ದಳಪತಿ: ನಿಲ್ಲಿ ಈ ಮಾರವಾಗಿ ಹೋಗಿ ಸುರ೦ಗ ಮಾರ್ಗದಲ್ಲಿ ನುಗ್ಗಿ ಕಾಡಿನ ಕಡೆ ಹೋಗಿ
ತಪ್ಪಿಸಿಕೊಳ್ಳಿ .ಹೂ೦ ಬೇಗ..
ಬ೦ಗಾರಯ್ಯ: ಬಾರೋ,…..
ಆದಿಮೂರ್ತಿ: ಬಾರೇ ಸುಬ್ಬೀ….ನೀನೂ ಈ ಕಡೆ ಹೋಗಬೇಕ೦ತೆ
ದಳಪತಿ ಅವಸರವಾಗಿ ಖಡ್ಗ ಹಿಡಿದು ಓಡುವನು)