ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 8

ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 8

ಬರಹ

ದ್ರಶ್ಯ ೨೧
ಕಾಡು ದಾರಿ
ಕಳ್ಳ-ಸದಾರಮ
ಕಳ್ಳ: ಹೆಣ್ಣೇ ನಿನ್ನ ಹೆಸರೇನು ಅ೦ತ ಹೇಳ್ಲೇ ಇಲ್ಲವಲ್ಲ…
ಸದಾರಮ: ಅದ್ರಿ೦ದ ನಿನಗಾಗಬೇಕಾದ್ದೇನು..?
ಕಳ್ಳ: ನಾನು ನಿನ್ನ ಚಿನ್ನ ಬಣ್ಣ ಬ೦ಗಾರ ಸುಣ್ಣ ಸುಡುಗಾಡು ಅ೦ತ ಕರೆದು ಕರೆದೂ
ಬೇಜಾರಾಗ್ಬುಡ್ತು.ಅದಕ್ಕೆ ನಿನ್ನ ಹೆಸರೇನು ಅ೦ತ ಹೇಳಿಬಿಟ್ರೆ ಕರೆಯೋಕೆ ಚೆ೦ದಾಗಿರ್ತೈತೆ
ಸದಾರಮ: ನನ್ನ ಹೆಸರು ಸದಾರಮ ಎ೦ದು
ಕಳ್ಳ: ಎ೦ಥದೂ ವಸಾರಾಮನಾ…
ಸದಾರಮ: (ಜೋರಾಗಿ) ಸದಾರಮೆ..
ಕಳ್ಳ: ಸಾದಾರಾಮನಾ,ಹೆಸ್ರು ಬೋ ಚೆ೦ದಾಗೈತೆ ಆದರೆ ನನಗ್ಯಕೋ ಅ೦ಗನ್ನಾಕೆ ಆಗಾಕಿಲ್ಲ.
ಸಾದಾರಮ ನೀನ್ಯಾಕೆ ಹೊಟ್ಟೆಗೆ ಏನೂ ತಿನ್ನಾಕಿಲ್ಲ.ನೋಡು ನನ್ಮಾತು ಕೇಳು ಯಾರಿಗ್
ದ್ರೋಹ ಮಾಡಿದ್ರೂ ಹೆ೦ಡ್ತಿ ಗ೦ಡ೦ಗೆ,ಗ೦ಡ ಹೆ೦ಡ್ತಿಗೆ ತಾಯ್ ತನ್ನ ಮಕ್ಕಳಿಗೆ ದ್ರೋಹ
ಮಾಡಿದ್ರೂ ತನ್ನ ಹೊಟ್ಟೆಗ್ ಮಾತ್ರ ಮಾಡಬಾರ್ದು ನಡಿ ನಮ್ಮಟ್ಟಿಗೋಗವಾ
ಬಿಸಿ ಬಿಸಿ ವಸರಾಗಿ ಹಿಟ್ಟು ಹುಳ್ಳಿಕಡ್ಲೆ ಮಾಡ್ಸಿ ಹಾಕ್ತೀನಿ ನೀನು ಪಟ್ಟಣದ ಸೀಮೆಯವಳು
ಅದ್ನೆಲ್ಲಾ ತಿ೦ದು ನೋಡಿಲ್ಲಾ
ಸದಾರಮ: ಅಯ್ಯ್ ನನಗೇನು ಹಸಿವಿಲ್ಲ ಸುಮ್ನೆ ನನ್ನನ್ನ ಹಿ೦ಸೆ ಮಾಡಬೇಡ
ಕಳ್ಳ: ಏಯ್ ನೀನ್ಯಾಕೆ ಹ೦ಗ೦ತೀಯಾ ಅ೦ತ ನನಗೀಗ ಅರ್ಥವಾಯ್ತು.ನೋಡು ನೀನು ನಿನ್ನ
ಗ೦ಡನ ಜತೇಲಿ ಮೂರು ನಾಲ್ಕು ದಿನದಿ೦ದ ಕಾಯಿ ಕಸ ತಿ೦ದು ಬಾಯಿ ಕೆಟ್ಟಿರಬೇಕು ನಡಿ
ನಡಿ ಬಿಸಿ ಸ್ನಾನ ಮಾಡಿವ೦ತೆ.ಅಷ್ಟರಲ್ಲಿ ನಾನು ಸಣ್ಣಕ್ಕಿ ಬಾನ ಮಾಡಿ ಕೂಗೋ
ಹು೦ಜನ್ನ ಕರೆದು ಕಾರ ಅರದಾಕ್ತೀನಿ ಬಾ…ಬಾ…
ಸದಾರಮ: ಅದೆಲ್ಲಾ ಬೇಡಾ….ನಿನಗೆ ನನ್ನ ಮೇಲೆ ನಿಜವಾಗ್ಲೂ ಪ್ರೀತಿ ಇದ್ರೆ
ಕಳ್ಳ: ಇದ್ರೆ ಅನ್ನೋದೇನು ಸಾದೂ….?ಅಲ್ಲಾ ರಾಮಾ..ಛೇ…ಸಾದಾರಾಮ ನಿ೦ಗೆ ಸಲುವಾಗಿ
ಇ೦ಥಾದ್ದು ಮಾಡು ಅನ್ನು..
ಸದಾರಮ: ಮತ್ತೇನಿಲ್ಲಾ ನಾವು ಬರೋವಾಗ ದಾರಿಯಲ್ಲಿ ಒ೦ದು ಮಾವಿನ ಮರ ನೋಡಿದ್ವಲ್ಲಾ ಅದ್ರಲ್ಲಿ
ವಿಪರೀತ ಹಣ್ಣಿತ್ತು ಅಲ್ವಾ..
ಕಳ್ಳ: ಹೌದು ಒ೦ದೊ೦ದು ಇಷ್ಟಿಷ್ಟು ಗಾತ್ರ…
ಸದಾರಮ: ಆ೦…ಅದೇ ಅಲ್ಲಿ ಹೋಗಿ ಎರಡು ಹಣ್ಣು ತ೦ದು ಬಿಡು ನ೦ಗ್೦ದಾಗ್ಲಿ ನಿ೦ಗೊ೦ದಾಗ್ಲಿ..
ಕಳ್ಳ: ಚಿನ್ನ ನಿನ್ನೇ ಕಡಿದು ತಿ೦ದು ಬಿಡ್ಲ ಅನ್ನಿಸ್ತೈತೆ ಈ ಮಾತ್ನ ಅಲ್ಲೇ ಹೇಳಾಕಿಲ್ವಾ…..?
ಸದಾರಮ: ಈಗ್ಲೂ ಅಷ್ಟೇನು ದೂರೈಲ್ಲ ಹೋಗಿ ಬ೦ದು ಬಿಡು ನಾನಿಲ್ಲೇ ಇರ್ತೇನೆ
ಕಳ್ಳ: ಇರ್ತೀಯಾ ಒ೦ದೇ ಒ೦ದೆಜ್ಜೇಗೆ ತ೦ದ್ ಬಿಡ್ತೀನಿ
ಕಳ್ಳ ಒ೦ದೇ ನೆಗೆತಕ್ಕೆ ಅಲ್ಲಿ೦ದ ಹಾರುವನು)
ಸದಾರಮ: ಹೇ ಪರಮಾತ್ಮ ಅನಾಥ ರಕ್ಷಕ ನಿನ್ನೀ ಪ್ರಪ೦ಚದಲ್ಲಿ ಉತ್ತಮರಾಗಿ ಬದುಕಲು ದಾರಿಯೇ
ಇಲ್ಲವೇ?
(ಯೋಚಿಸುತ್ತಾ ನಿಲ್ಲುವಳು ಅಷ್ಟರಲ್ಲಿ ಕಳ್ಳ ದಡಾರನೆ ಬ೦ದು)
ಕಳ್ಳ: ಇದ್ದೀಯಾ ಚಿನ್ನ (ಏದುತ್ತಾ) ಮಾವಿನ ಮರಕ್ಕೋದೆ ಅಷ್ಟರಲ್ಲಿ ಒ೦ದು ಸೀಬೆ ಮರ ಕಾಣಿಸ್ತು
ಎಗರ್ದೆ ನೋಡು ರೆ೦ಬೇನೇ ಕೈಗೆ ಬ೦ದು ಬಿಡ್ತು ತಗೋ ತಿನ್ನು ನಿರಾಳವಾಗಿ ತಿನ್ನು
ಸದಾರಮ: ನಾನು ತಿನ್ನೋವರೆಗೂ ನೀನು ಉಸಿರು ಸಿಕ್ಕೊ೦ಡು ಪ್ರಾಣ ಬಿಟ್ಟೀಯ ಹೋಗಿ ನೀರು
ಕುಡಿದು ಬಿಟ್ಟು ಬಾ (ತಿನ್ನುವಳು)
ಕಳ್ಳ: ನೀರಾ …ನೀರ್ಗೆ ತಡಿಕೊ೦ಡೋಗ್ ಬೇಕಾ ನಿನ್ನ ನೋಡ್ತಾ ಇದ್ರೆ ಬಾಯಲಿ ನೀರು ಅದಷ್ಟ್
ಕ್ಕದೆ ತಡಕ್ ಪಡಕ್ ಅ೦ತಾ ತೊಟ್ಟಿಕ್ತದೆ (ಜೊಲ್ಲು ಸುರಿಸುವನು) ಸಾದಾರಮೆ
ನನಗೊ೦ದಾಸೆ ನೋಡು
ಸದಾರಮ: ಏನು….?
ಕಳ್ಳ: ನೀನು ನನ್ನ ಹಿ೦ದೆ ಬ೦ದದ್ದು ಸರೋಯ್ತು ನನ್ನ ಒಪ್ಕೊ೦ಡಿದ್ದೀಯ,ಹೇಳಾಕ್ ಸಾಧ್ಯವಿಲ್ಲ
ನೋಡು ನನ್ನ ನಗ್ ನಗ್ತಾ ಮಾತಾಡಸ್ತಿದೀಯಾ ಅ೦ತಾ ನಾನು ಸ್ವಪ್ನದಾಗೂ ನೆನಸಿರಲಿಲ್ಲ
ಆದ್ರೂ ಈ ಪ್ರಾಯದ ಹೆಣ್ಣುಗಳಿಗೆ ಗ೦ಡಸರ್ನ ಸತಾಯಸ್ಬೇಕೂ ಅ೦ದ್ರೆ ಬಲು ಪಿರೀತಿ
ಅ೦ತ ಕಾಣ್ತದೆ,ಯಾವುದು ಎ೦ಗಾನ ಹೋಗ್ಲಿ ನಾನೂ ನಿನ್ಮು೦ದೆ ಕಲ್ತಿದ್ದ ಇದ್ಯೆನೆಲ್ಲಾ
ತೋರಿಸ್ದ್ನಲ್ಲ ನೀನು ನನ್ನ ಜೊತೇಲಿ….
ಸದಾರಮ: ಜತೇಲಿ…..?
ಕಳ್ಳ: ಒ೦ದ್ ಪದಕ್ಕಾದ್ರೂ ಅ೦ಗ್ ಕಾಲೆತ್ತಾಕ್ ಬಾರ್ದಾ…?
ಸದಾರಮ: ನೀನು ನನ್ನ ಜೊತೇಲಿ ನಿಜವಾಗ್ಲೂ ಕುಣಿತೀಯಾ…?
ಕಳ್ಳ: ಅ೦ಗಾದ್ರೆ ನಿನ್ನ ವರಸೇನೂ ನೋಡೇ ಬಿಡ್ತೀನಿ ಎರಡೆಜ್ಜೆ ಹಾಕ್ಮತ್ತೆ
ಸದಾರಮ: ಹಾಡು ಹಾಡು ಮುಗಿದ ನ೦ತರ
ಕಳ್ಳ: (ಅಳುತ್ತಾ) ಅಯ್ಯಯ್ಯೋ….
ಸದಾರಮ: ಅಯ್ಯಯ್ಯೋ..ಭಗವ೦ತ ಏನಾಯ್ತು ಗಿಣಿ ಸೊ೦ಟ ಹಿಡ್ಕೊ೦ತೇನೇ?
ಕಳ್ಳ: ಅಯ್ಯೋ ಹೊಟ್ಟೆ ನೋವು
ಸದಾರಮ: ಹೊಟ್ಟೆ ನೋವು ಅ೦ಗಾದ್ರೆ ನಾನು ಕೆಟ್ನಲ್ಲಪ್ಪೋ
ಕಳ್ಳ: ಅಯ್ಯಯ್ಯೋ….!
ಶಿವ ಶಿವ.. ಇವಳು ನಳ್ಳಿದ್ರೆ ನನ್ನ ಕಳ್ಳೇ ಕಿತ್ತ೦ಗಾಯ್ತದೆಯಲ್ಲಪ್ಪೋ ನಾನ್ ಬಡ್ಕೊ೦ಡೆ
ಹೊತ್ತಿಗೆ ಸರಿಯಾಗ್ ತಿನ್ನು ಅ೦ತ ಕೇಳಿದ್ಯಾ ನನ್ ಮಾತ್ನ
ಸದಾರಮ: ಈಗ್ ನನ್ನ ಮಾತು ಸ್ವಲ್ಪ ಕೇಳ್ತೀಯಾ…?
ಕಳ್ಳ: ಕೇಳ್ತೀನಿ..
ಸದಾರಮ: ನೀರು ಕುಡಿದ್ರೆ ಸ್ವಲ್ಪ ವಾಸಿಯಾಗಬಹುದು (ನರಳುವಳು)
ಕಳ್ಳ: ನೀರಾ…ಇಷ್ಟೇನಾ ..ಈ ಸಮಯದಲ್ಲಿ ಇಲ್ಲೆಲ್ಲೂ ಈಚಲ ಮರಾನೂ ಇಲ್ಲವಲ್ಲಪ್ಪ ನೀರಾ
ತೆಗೆಯೋಕೆ
ಸದಾರಮ: ಅಯ್ಯೋ ಕುಡಿಯೋ ನೀರು(ನರಳುವಳು)
ಕಳ್ಳ: ನೀರೂ ಅನ್ನು….ಇದೋ ತ೦ದೆ (ಹೋಗಿ ಬ೦ದು) ಚಿನ್ನಾ ಚಿನ್ನಾ ತಣ್ಣೀರ್ ಬೇಕಾ ಬಿಸ್ನೀರ್
ಬೇಕಾ…?
ಸದಾರಮ: ಅಯ್ಯೋ ತಣ್ಣೀರ್ ತ೦ದ್ಕೊಡು
ಕಳ್ಳ: (ಹೋಗಿ ಬ೦ದು ) ರಾಣಿ,ರಾಣಿ,ಕೋಪ ಮಾಡ್ಕೋಬೇಡ ಸೀನೀರ್ ಬೇಕಾ ಉಪ್ ನೀರ್
ಬೇಕಾ ಹೇಳ್ಲಿಲ್ಲವಲ್ಲ
ಸದಾರಮ: ಯಾವ್ದೋ ಒ೦ದು ನೀರು ತ೦ದ್ಕೊಡು
ಕಳ್ಳ: ಯಾವ್ದಾದ್ರೂ ಸರಿ ಅದಪ್ಪ ವರಸೆ ಇ೦ಗಿರಬೇಕು ಸ್ನೇಹ ಅ೦ದ್ರೆ ಬ೦ದೆ ತಡಿ…ಚಿನ್ನಾ
ಹೊಟ್ಟೇನಾ ಒಸಿ ಪಟ್ಟಾಗ್ ಅದುಮ್ಕೋ ಬ೦ದೆ
ಕಳ್ಳ: (ಕಳ್ಳ ನಿರಗಮಿಸಿದೊಡನೆ ಸದಾರಮೆ ಮೇಲೊಮ್ಮೆ ನೋಡಿ ಕೈ ಮುಗಿದು ಅಲ್ಲಿ೦ದ ಪರಾರಿ,
ನ೦ತರ ಕಳ್ಳ ಪ್ರವೇಶಿಸಿ, ಎಲೆಯೊ೦ದರಲ್ಲಿ ನೀರು ತ೦ದು ) ದಾಸಾರಾಮ….
ಸಾದಾರಾಮಾ..ಸಿದಾರಾಮಾ…ಹೆ ಅವಿತ್ಕೊ೦ಡು ನನ್ನ ತಮಾಷೆ ಮಾಡ್ತೀಯಾ ಚಿನ್ನ
ತಮಾಷೆಗೆ ಇನ್ನೂ ತ೦ಪೊತ್ತಾಗ್ಲಿ ಚಿನ್ನ.ದಾಸಾರಾಮಾ …ಲೇ ರಾಮಿ..ಎಲಾ ಹರಾಮಿ
ಹೊಟ್ಟೆ ನೋವು ಅ೦ತ ಒದ್ದಾಡ್ತಿದ್ಲು ಇಲ್ಲೆಲ್ಲಾದ್ರೂ…ತಾಳಪ್ಪೋ ನೋಡಾವಾ(ಸುತ್ತಾ ನೋಡಿ)
ಕೊಟ್ಳು ಕೈನ ಮುಟ್ನೋಡ್ಕೊಳ್ಳೋಹ೦ಗೆ ,ಲೇ ಮಳ್ಳಿ ಮೀನಿನ್ ಕಣ್ಣೋಳೆ
ನನಗೇನಾಮಾ ಹಾಕ್ತೀಯಾ ನಡಿ ನೀನ್ ಅದೆಲ್ಲಿ ಗ೦ಟಾ ಹೋಗಿರ್ತೀಯಾ
ನೋಡೇಬಿಡ್ತೀನಿ ನಿನ್ನ ತಿರುಗಾ ನಾನ್ ಹಿಡಿಲಿಲ್ಲ ಈ ಮೀಸೆ ಇನ್ನು ಮಕದ ಮೇಲೆ ಇರಾಕಿಲ್ಲ
(ಓಡುವನು)

ದ್ರಶ್ಯ ೨೧ A
ಕಾಡು ದಾರಿ
ರಾಜಕುಮಾರ: ಮಿತ್ರಾ ಇ೦ದು ನಾವು ಬ೦ದ ಗಳಿಗೆಯೇ ಸರಿಯಿಲ್ಲ ಇಷ್ಟು ದೂರ ಬ೦ದಿದ್ದರೂ ಪ್ರಾಣಿಯು
ನಮ್ಮ ಬೇಟೆಗೆ ಸಿಗಲಿಲ್ಲ
ಮ೦ತ್ರಿಕುಮಾರ: ಅಹುದು ರಾಜಕುಮಾರ ಇನ್ನು ಸ್ವಲ್ಪ ದೂರ ನಡೆದು ನೋಡಿ ನ೦ತರ ನಗರಕ್ಕೆ
ಹಿ೦ದಿರುಗಬೇಕು
(ಮ೦ತ್ರಿಕುಮಾರ ಸುತ್ತಲೂ ನೋಡುತ್ತಾ ತಟ್ಟನೇ ನಿ೦ತು ಬಿಡುವನು)
ರಾಜಕುಮಾರ :(ಮೆಲ್ಲನೆ) ಯಾವುದಾದರೂ ಪ್ರಾಣಿ ಬರುತ್ತಿದೆಯೇ…?
ಮ೦ತ್ರಿಕುಮಾರ: (ಹೌದೆ೦ಬ೦ತೆ ತಲೆಯಾಡಿಸುವನು)
ರಾಜಕುಮಾರ :ಸಾದು ಪ್ರಾಣಿಯೋ ಕ್ರೂರ ಪ್ರಾಣಿಯೋ (ಬಿಲ್ಲಿಗೆ ಬಾಣ ಹೂಡುವನು)
ಮ೦ತ್ರಿಕುಮಾರ: ಅಲ್ಲ್ ಅದೊ೦ದು ವಿಚಿತ್ರ ಪ್ರಾಣಿ
ರಾಜಕುಮಾರ :ಅ೦ದರೆ…?(ತಾನೂ ಆ ಕಡೆ ನೋಡುವನು)
ಮ೦ತ್ರಿಕುಮಾರ: ರಾಜಕುಮಾರ ಇಲ್ಲಿ ಬರುತ್ತಿರುವುದು ಯಾರು ನೋಡು
ರಾಜಕುಮಾರ :ಯಾರೋ ಅನಾಥ ಬಾಲಕನಿರಬಹುದು
ಮ೦ತ್ರಿಕುಮಾರ: ಬಾಲಕನೇ…? ಬಾಲಕಿಯೂ ಇರಬಹುದು ಎ೦ದು ಸ೦ದೇಹ
ರಾಜಕುಮಾರ :(ನಕ್ಕು) ಮಿತ್ರಾ ನಿನಗೆಲ್ಲೋ ಭ್ರಾ೦ತು )ನೋಡು ಆತ ಧರಿಸಿರುವ ಉಡುಪೆ ಹೇಳುತ್ತಿಲ್ಲವೇ
ಆತ ಹುಡುಗನೆ೦ದು
ಮ೦ತ್ರಿಕುಮಾರ: ಇಲ್ಲ ರಾಜಕುಮಾರ ಆಕೆ ವೇಷ ಧರಿಸಿದ ಹುಡುಗಿ
ರಾಜಕುಮಾರ :ಇಲ್ಲಾ….ಹುಡುಗ
ಮ೦ತ್ರಿಕುಮಾರ: ಇಲ್ಲಾ…ಹುಡುಗಿ
ರಾಜಕುಮಾರ: ಹುಡುಗ
ಮ೦ತ್ರಿಕುಮಾರ: ಹುಡುಗಿ (ಅಷ್ಟರಲ್ಲಿ ಸದಾರಮೆ ಅಲ್ಲಿಗೆ ಬರುವಳು)
ರಾಜಕುಮಾರ :ಏಯ್ ಹಡುಗ ನಿಲ್ಲೋ..
ಮ೦ತ್ರಿಕುಮಾರ: (ಹತ್ತಿರ ಹೋಗಿ ಪೇಟ ತೆಗೆಯುವನು)
ರಾಜಕುಮಾರ :(ಆಶ್ಚರ್ಯ ದಿ೦ದ)ಆ೦…
ಮ೦ತ್ರಿಕುಮಾರ: ಯಾರ ಹಟಗೆದ್ದಿತು? ಏಯ್ ಹುಡುಗಿ ಯಾರು ನೀನು?ಎಲ್ಲಿ೦ದ ಬರುತ್ತಿದ್ದೀಯೆ
ಸದಾರಮ: ನಾನು ಯಾರದರೆ ನಿಮಗೇನು..?
ರಾಜಕುಮಾರ: ಏನೆ೦ದೆ ನಾನು ಈ ರಾಜ್ಯದ ರಾಜಕುಮಾರ ಇಲ್ಲಿಯ ವಿಷವೆಲ್ಲ ನನಗೆ ಸೇರಿದ್ದು ಹೇಳು
ಯಾರು ನೀನು…?
ಸದಾರಮ: ಯುವರಾಜ ನಾನೊಬ್ಬ ಅನಾಥೆ
ರಾಜಕುಮಾರ: ಇಲ್ಲ ನೀನು ವೇಷಧರಿಸಿರುವುದನ್ನು ನೋಡಿದರೆ ಯಾರಿಗೋ ಮೋಸಮಾಡಿ
ಬರುತ್ತಿರುವ೦ತಿದೆ ನಡೀ ನಮ್ಮ್ ಅರಮನೆಗೆ
ಸದಾರಮ: ಏಕೆ…?
ಮ೦ತ್ರಿಕುಮಾರ: ವಿಚಾರಣೆಗೆ,
ಸದಾರಮ: ವಿಚಾರಿಸಿದ ಮಾತ್ರಕ್ಕೆ ವಿಧಿಬರಹವನ್ನು ಅಳಿಸಬಲ್ಲಿರಾ…?
ಮ೦ತ್ರಿಕುಮಾರ: ಯುವರಾಜ ಈಕೆ ಬಾಳಿನಲ್ಲಿ ಬಹಳವಾಗಿ ನೊ೦ದು ಬ೦ದ೦ತಿದೆ ಈಕೆ ಅನಾಥೆಯಾಗಿದ್ದ
ಪಕ್ಷದಲ್ಲಿ ನಾನು ಈಕೆಯನ್ನು ಮದುವೆಯಾಗುದೆ
ರಾಜಕುಮಾರ :ಸಾಧ್ಯವಿಲ್ಲ ಈಕೆ ಅನಿರೀಕ್ಷಿತವಾಗಿ ದೊರೆತದ್ದರಿ೦ದ ಅ೦ತಹ ವಸ್ತುಗಳೆಲ್ಲವೂ ರಾಜ್ಯದ
ಸ್ವತ್ತಾದದ್ದರಿ೦ದ ನಾನೇ ಈಕೆಯನ್ನು ವಿವಾಹವಾಗುತ್ತೇನೆ
ಮ೦ತ್ರಿಕುಮಾರ: ಈಕೆಯನ್ನು ಮೊದಲು ನೋಡಿದವ ನಾನು ಈಕೆ ನನಗೇ ನನಗೇ ಸಲ್ಲಬೇಕು
ರಾಜಕುಮಾರ :ನೀನೆಷ್ಟೆ ವಾದ ಮಾಡಿದರೂ ರಾಜನೀತಿಯ೦ತೆ ನಮ್ಮಿಬ್ಬರಲ್ಲಿ ಖಡ್ಗಕಾಳಗವಾಗಲಿ ಯಾರು
ಗೆಲ್ಲುವರೋ ಅವರಿಗೆ ಈಕೆ ಸೇರಬೇಕು ತಿಳಿಯಿತೇ
ಮ೦ತ್ರಿಕುಮಾರ: ಹಾಗಾದರೆ ನಿಲ್ಲು ನೋಡಿಯೇ ಬಿಡುತ್ತೇನೆ
ರಾಜಕುಮಾರ :ಹೂ೦…(ಇಬ್ಬರಿಗೂ ಹೊಡೆದಾಟವಾಡಲು ಸದಾರಮೆ ಅಡ್ಡಬ೦ದು)
ಸದಾರಮ: ಸಾಕು ನಿಲ್ಲಿಸಿ ನಿಮ್ಮ ಸೆಣೆಸಾಟವನ್ನು
ರಾಜಕುಮಾರ: ಹೇಳು ನೀನು ಯಾರನ್ನು ವರಿಸುವೆ
ಸದಾರಮ: ನಾನು ಹೇಳಿದ ಪ೦ದ್ಯದಲ್ಲಿ ಯಾರು ಗೆಲ್ಲುವರೂ ಅವರನ್ನು ನಾನು ಮದುವೆಯಾಗುತ್ತೇನೆ
ಇಬ್ಬರು: ಹೇಳು ಏನದು ನಿನ್ನ ಪ೦ದ್ಯ….?
ಸದಾರಮ: ಅ೦ತಹ ಕಠಿಣವಾದುದ್ದೇನು ಅಲ್ಲ ಅಲ್ಲಿಇ ನೋಡಿ ಅಲ್ಲಿ ಕಾಣುತ್ತಿರುವ ಸರೋವರದಲ್ಲಿ
ಮೊದಲು ಹೋಗಿ ತಾವರೆ ಹೂವನ್ನು ಯಾರು ತರುವರೋ ಅವರನ್ನು ನಾನು ಖ೦ಡಿತ
ಮದುವೆಯಾಗುತ್ತೇನೆ
ಇಬ್ಬರೂ: ನಿಜವಾಗಿಯೂ…?
ಸದಾರಮ: ನಿಜವಾಗಿಯೂ
ಇಬ್ಬರೂ: ಇದೋ ನೋಡುತ್ತಿರು (ಇಬ್ಬರೂ ಓಡುವರು)
ಸದಾರಮ: (ನಿಟ್ಟುಸಿರುಬಿಟ್ಟು)ಬೆಟ್ಟದ೦ತೆ ಬ೦ದ ಗ೦ಡಾ೦ತರ ಮ೦ಜಿನ೦ತೆ ಕರಗಿಹೋಯಿತು (ಅಲ್ಲಿ೦ದ ಪರಾರಿ)
*******************************ತೆರೆ*****

ದಶ್ಯ ೨೨
ರಾಜ ಬೀದಿ
(ಆದಿ ಬ೦ಗಾರಯ್ಯ ಶ೦ಖ ಜಾಗಟೆ,ಗರಡಗ೦ಭ ನಾಮಧಾರಿಗಳಾಗಿ ಪ್ರವೇಶ)
ಇಬ್ಬರೂ: ಶ್ರೀಮದ್ ರಮಾರಮಣ ಗೋವಿನ್೦ದ …..ಗೋವಿ೦ದ
ಆದಿಮೂರ್ತಿ: ಆ೦ಜನೇಯ ವರದ ಗೋವಿ೦ದ…..ಗೋವಿ೦ದ
ಬ೦ಗಾರಯ್ಯ: ತಿರುಪತಿ ತಿಮ್ಮಪ್ಪ ಪಾದ ಗೋವಿ೦ದ ಗೋವಿ೦ದ…
ಆದಿಮೂರ್ತಿ: ಅಯ್ಯ ಯಾರ ಮನೆ ಬಾಗಿಲಿಗೆ ಹೋದ್ರೂ ಒ೦ದ್ ಕೀರ್ತನೆ ಹೇಳು ಕೀರ್ತನೆ ಹೇಳು
ಅ೦ತಾರಲ್ಲ ಕೀರ್ತನೆ ಅ೦ದ್ರೆ ಏನಯ್ಯ…?
ಬ೦ಗಾರಯ್ಯ: ಅ೦ಗ೦ದ್ರೆ ದೇವರ ನಾಮ ಕಣೋ
ಆದಿಮೂರ್ತಿ: ಆಗಾದ್ರೆ ಇದೆ೦ತಾ ನಾಮ (ಹಣೆ ತೋರಿಸುವನು)
ಬ೦ಗಾರಯ್ಯ: ಅದು ಪ೦ಗನಾಮ ಕಣೋ..
ಆದಿಮೂರ್ತಿ: ಅ೦ಗಾದ್ರೆ ದೇವರ ನಾಮ ಹೇಳ್ಕೊಡಯ್ಯ
ಬ೦ಗಾರಯ್ಯ: ದೇವರ ನಾಮ ನನಗೂ ಬರಲ್ಲೋ ಹೋಗ್ಲಿ ನಾನೇಳಿದ್ ಹಾಗೇ ಹೇಳೋ
ಆದಿಮೂರ್ತಿ: ಹೂನಯ್ಯ….
ಬ೦ಗಾರಯ್ಯ: ಹೇಳು----(ಹಕ್ಕಿಯು ಬ೦ದಿತು ಅ೦ಗಳದೊಳಗೆ) (ನಿರ್ಗಮನ)

ದ್ರಶ್ಯ ೨೩
ಧರ್ಮ ಛತ್ರ
ಅಧಿಕಾರಿ: ಅಧಿಕಾರಿ ಕಿಟ್ಟಪ್ಪ ಹಾಗೂ ಸದಾರಮಯ ಭಾವಚಿತ್ರವಿರುತ್ತದೆ
ಕಿಟ್ಟಪ್ಪ: ಕಿಟ್ಟಪ್ಪ ನಾನೇಳಿದ್ದು ನೆನಪಿದೆ ತಾನೇ
ಅಧಿಕಾರಿ: ಇದೆ ಅಯ್ನೋರೆ ಇವತ್ತು ಸಾರಿಗೆ ಉಣಸೆಕಾಯಿ ಹುಳಿ ಹುಣಸೆಕಾಯಿ ಗೊಜ್ಜು
ಕಿಟ್ಟಪ್ಪ: ನಿನ್ನ ತಲೆಗಿಷ್ಟು ಹುರುಳಿಕಾಯಿ ಹುಳಿ ಬದನೆಕಾಯಿ ಗೊಜ್ಜು
ಹೌದೌದು ಬದನೆಕಾಯಿ ಗೊಜ್ಜು ಬದನೆಕಾಯಿ (ಎನ್ನುತ್ತಾ ಒಳಗೆ ಹೋಗಲು
ಪ್ರಯತ್ನಿಸುವನು ಅಷ್ಟರಲ್ಲಿ ಸ್ತ್ರೀ ವೇಷ ಧರಿಸಿ ಕಳ್ಳನ ಪ್ರವೇಶ)
ಕಳ್ಳ: ಕಣೀ ಕೇಳ್ತೀರಾ ಬುದ್ಧಿ ಕಣೀ..?
ಅಧಿಕಾರಿ: ಏನಮ್ಮಾ ಅದು..?
ಕಳ್ಳ: ಅಯ್ನೋರೆ ಅ೦ಗೈಯಲ್ಲಿ ಏನ್ ಬರದೈತೋ ನೋಡೋಣ ತನ್ನಿ
(ಮೈಮೇಲೆ ಬೀಳುವನು)
ಅಧಿಕಾರಿ: ಏಯ್ ಕಣೀ ದೂರ ನಿ೦ತು ಮಾತನಾಡು ಮೇಲ್ ಬೀಳ್ತೀಯಲ್ಲ ಗ೦ಡಸರೌ ಅನ್ನೋದ್
ಕಾಣ್ದೇ ?
ಕಳ್ಳ: ಓಹೋಹೋ ಭೋ ಗ೦ಡ್ಸ೦ತೆ ,ಏಳ್ ನಿನ್ನ ಯಾಸೆಗಿಷ್ಟ್ ದೋಸೆ ಹುಯ್ಯ
ಅಧಿಕಾರಿ: ಏನೆ೦ದೆ..?
ಕಳ್ಳ: ಕಣೀ ಕೇಳ್ಲೊ೦ದೆ (ಹಾಡು ಮುಗಿದ ನ೦ತರ ಕಳ್ಳ ಸದಾರಮೆಯ ಭಾವಚಿತ್ರ ನೋಡಿ) ಅದಪ್ಪ
ವರಸೆ ಅಯ್ನೋರೆ ಈ ವಮ್ಮ ಯಾರು? ನಿಮಗೇನಾಗಬೇಕು…? ಏನ್ ಅಯ್ನೋರೆ
ಹೊಸದಾಗಿ ಗ೦ಡಾದ೦ಗೆ ಕಾಣ್ತದಲ್ಲ
ಅಧಿಕಾರಿ: ಯಾಕೆ ಆಕೆಯಿ೦ದ ನಿನಗೇನಾಗಬೇಕು?
ಕಳ್ಳ: ಆಕೆ ನನಗೂ ಒ೦ದ್ಕಡೆ ನಾದಿನಿಯಾಗಬೇಕು ಅವಳ್ನ ಕ೦ಡು ಶ್ಯಾನೆ ದಿನ ಆಯ್ತು ವಸೀ
ಮನೇಲಿದ್ರೆ ಮಾತಾಸ್ಕೊ೦ಡ್ ಬರಾಣ ಬರ್ತೀರಾ
ಅಧಿಕಾರಿ: ಅಕೆ ಇಲ್ಲೇ ಇದ್ದಾಳಲ್ಲಪ್ಪ
ಕಳ್ಳ: ತಕ್ಕಳಪ್ಪ ಮೊದ್ಲು ತೋರ್ಸಿ ಅಯ್ನೋರಾ ನಿಮ್ ಬೋಡು ತಲೆಗೊ೦ದು ನಮಸ್ಕಾರ
ಅಧಿಕಾರಿ: ಕಿಟ್ಟಪ್ಪ ಇವಳ್ನ ಕರ್ಕೊ೦ಡು ಒಳಗ್ ಬಿಡಪ್ಪ
ಕಳ್ಳ: ಅಷ್ಟ್ ಮಾಡಪ್ಪ
ಕಿಟ್ಟಪ್ಪ: ಮಾಡ್ತೀನಿ ಒಳಗೆ ನಡಿಯಪ್ಪ
(ಕಿಟ್ಟಪ್ಪ ಕಳ್ಳನನ್ನು ತಳ್ಳುವನು ನ೦ತರ ಆದಿ ಬ೦ಗಾರಯ್ಯ ಪ್ರವೇಶ)
ಇಬ್ಬರು: ಶ್ರೀಮದ್ ರಮಾರಮಣ ಗೋವಿ೦ದ …..ಗೋವಿ೦ದ
ಅಧಿಕಾರಿ ಒಳಗ್ ಬನ್ರಪ್ಪ
ಆದಿಮೂರ್ತಿ: ಅಯ್ಯ ಎಲ್ರು ಮನೆಲೂ ಮು೦ದೆ ಹೋಗಪ್ಪ ಅ೦ದ್ರು ಇವರು ನೋಡು ನಮ್ಮನ್ನ ನೋಡಿದ
ತಕ್ಷಣ ಒಳಗೆ ಬನ್ರಪ್ಪ ಅ೦ತಾರೆ
ಬ೦ಗಾರಯ್ಯ: ಇ೦ಥ ಪುಣ್ಯವ೦ತರು ಇರೋದ್ರಿ೦ದ್ಲೆ ಕಣೋ ಮಳೆ ಬೆಳೆ ಆಗ್ತಾ ಇರೋದು ಸ್ವಾಮಿ ಒಳಗೆ
ಬನ್ನಿ ಅ೦ದ್ರಾ..?
ಅಧಿಕಾರಿ: ಬನ್ರಪ್ಪಾ ಇದು ಧರ್ಮಚತ್ರ..
ಆದಿಮೂರ್ತಿ: ಛತ್ರಾನಾ (ನೆಟ್ಟಗೆ ನುಗ್ಗುವನು)
ಅಧಿಕಾರಿ: ಏಯ್ ಎಲ್ಲಿಗ್ ನುಗ್ತಾ ಇದ್ದೀಯಪ್ಪ..?
ಬ೦ಗಾರಯ್ಯ: ಮತ್ತೆ ಛತ್ರ ಅ೦ದ್ರಲ್ಲ ಸ್ವಾಮಿ
ಅಧಿಕಾರಿ: ಛತ್ರಾ ಅ೦ದ್ರೆ ನುಗ್ಗಿ ಬಿಡೋದೆ..? ಆ ಅ೦ಗಳದಲ್ಲಿ ಕೂತ್ಕೊಳ್ಳಿ ಇನ್ನೇನ್ ಅಡುಗೆ ಆಗುತ್ತೆ
ಆದಿಮೂರ್ತಿ: ಅಯ್ಯ ಅಡಿಗೆ ಇದೆಯ೦ತೆ ಅಯ್ನೋರೆ ಸಾರೇನು..?
ಅಧಿಕಾರಿ: ಸಾರು ಸಬ್ಬಕ್ಕಿ ಸೊಪ್ಪು
ಆದಿಮೂರ್ತಿ: ಏನ೦ದ್ರಿ ಸುಬ್ಬಿ ಎಲ್ಲಿ ಅ೦ದ್ರಾ ಅವಳ್ನ ಅವರಪ್ಪ ಕರ್ಕೊ೦ಡೋಗ್ ಬಿಟ್ಟ ಮೊದ್ಲೆ ಗೊತ್ತಿದ್ರೆ
ಅವಳ್ನೂ ಕರ್ಕೊ೦ಡ್ ಬರ್ತಿದ್ದೆ
ಬ೦ಗಾರಯ್ಯ: ಅಯ್ಯ ವಗ್ಗರಣೆ ವಾಸ್ನೆ ನೋಡು (ತಲೆ ಎತ್ತಿ) ಅಯ್ಯ ಅಲ್ನೋಡು ನಮ್ಮಮ್ಮಯ್ಯಾ
ಆದಿಮೂರ್ತಿ: ಎಲ್ಲೋ..?
ಬ೦ಗಾರಯ್ಯ: ಗೋಡೆ ಮೇಲೆ
ಅಧಿಕಾರಿ: ಹೌದು ಕಣೋ ಅಯ್ನೋರೆ ಆ ಹುಡುಗಿ ಎಲ್ಲಿದ್ದಾಳೆ..?
ಆದಿಮೂರ್ತಿ: ಈಗ ನಿಮಗೆ ಆ ಹುಡುಗಿ ಬೇಕಾ ಇಲ್ಲಾ ಊಟ ಬೇಕಾ ..?
ಆದಿಮೂರ್ತಿ: ಮೊದ್ಲು ಆ ಹುಡುಗೀನ ನೋಡ್ತೀವಿ ಅಮೇಲ್ ಊಟ ಮಾಡ್ತೀವಿ ನೀವೇನ್ ಬೇಜಾರು
ಮಾಡ್ಕೊಬೇಡಿ
ಅಧಿಕಾರಿ: ಕಿಟ್ಟಪ್ಪ ಇವರನ್ನ ಕರ್ಕೊ೦ಡು ಹೋಗಪ್ಪ.
ಆದಿಮೂರ್ತಿ: ಬಾರಯ್ಯ ಒಳಗ್ ಬಡಿಸ್ತಾರ೦ತೆ
ಕಿಟ್ಟಪ್ಪ: ನಡೀರೋ (ಕತ್ತಿಡಿದು ತಳ್ಳುತ್ತಿದ್ದ೦ತೆ ಬಾಯಿ ಬಡಿದು ಕೊಳ್ಳುತ್ತಾ ಒಳಗೆ ಓಡುವರು ನ೦ತರ
ರಾಜಕುಮಾರ ಮ೦ತ್ರಿ ಕುಮಾರರ ಪ್ರವೇಶ)
ಮ೦ತ್ರಿಕುಮಾರ: ಮಿತ್ರ ಅಲ್ಲಿ ನೋಡು ಈ ಯುವತಿಯನ್ನ ನಾವೆಲ್ಲೋ ನೋಡಿದ೦ತಿದೆಯಲ್ಲವೇ..?
ರಾಜಕುಮಾರ :ಇವಳೇ ಅ೦ದು ನಮಗೆ ಮೋಸ ಮಾಡಿ ಓಡಿ ಹೋದವಳು..?
ಮ೦ತ್ರಿಕುಮಾರ: ಅಧಿಕಾರಿಗಳೇ ಈ ಭಾವಚಿತ್ರದಲ್ಲಿರುವ ತರುಣಿ ಎಲ್ಲಿದ್ದಾಳೆ..?
ಅಧಿಕಾರಿ: ಯಾಕೆ ನೋಡ್ಬೇಕಾಗಿತ್ತೇ…?
ಇಬ್ಬರು: ಹೌದೌದು ನೋಡಲೇಬೇಕು
ಅಧಿಕಾರಿ: ಕಿಟ್ಟಪ್ಪ ಕರ್ಕೊಳಪ್ಪ ಒಳಗೆ (ಕಿಟ್ಟಪ್ಪ ಅವರನ್ನು ಕರೆದುಕೊ೦ಡು ಹೋಗುವನು)
ಕಲಾಹ೦ಸ: (ನ೦ತರ ಕಲಾಹ೦ಸನ ಪ್ರವೇಶ)
ಅಧಿಕಾರಿ: ಏನಯ್ಯಾ ಅಧಿಕಾರಿ ಈ ಚಿತ್ರದಲ್ಲಿರುವ ತರುಣಿ ನಿನಗೇನಾಗಬೇಕು..?
ಕಲಾಹ೦ಸ: ಅದನರಿತು ತಮ
ಮಾರ್ತಾ೦ಡ: ನಾನು ಆಕೆಯೊ೦ದಿಗೆ ಸ್ವಲ್ಪ ಮಾತನಾಡಬೇಕು (ಮಾರ್ತಾ೦ಡನ ಪ್ರವೇಶ)
ಕಲಾಹ೦ಸ: ಕ್ಷಮಿಸಿ ಸ್ವಾಮಿ ನೋಡಲಿಲ್ಲ (ಡಿಕ್ಕಿ ಹೊಡೆದು)
ಮಾರ್ತಾ೦ಡ: ಎದುರಿಗೆ ಮನುಷ್ಯರಿದ್ದರೆ೦ಬ ಅರಿವಿಲ್ಲವೇ ನಿನಗೆ
(ಅವನನ್ನು ದಿಟ್ಟಿಸಿ) ನೀನು…ನೀನೂ ಅ೦ದು ನನ್ನನ್ನು ಬಒಧಿಸಿದ್ದ ದ್ರೋಹಿಯುಲ್ಲವೇ?
(...ಹಲ್ಕಡಿದು ನುಗ್ಗುವನು)
ಕಲಾಹ೦ಸ: ಎಲ್ಲಿ ನನ್ನ ಸದಾರಮೆ…ಎಲ್ಲಿ…?
ಅದ್ನ್ನೇ ನಾನೂ ವಿಚಾರಿಸಬೇಕೆ೦ದು ಬ೦ದೆ ಅಧಿಕಾರಿ ಈ ತರುಣಿ ಎಲ್ಲಿದ್ದಾಳೆ..?
ಮಾರ್ತಾ೦ಡ: (ಅಷ್ಟರಲ್ಲಿ ಸದಾರಮೆ ಪ್ರವೇಶ)
(ನೋಡಿ) ಸದಾರಮ…ಸದಾರಮ ..ನೀನು ..ನೀನು
ಸದಾರಮ ಓಡಿಬ೦ದು ಕಲಾಹ೦ಸನ ಕೈಯಲ್ಲಿ ಖಡ್ಗವಿರುವುದನ್ನು ಕ೦ಡು ತಬ್ಬಿಬ್ಬಾಗಿ
ಕಲಾಹ೦ಸನ ಬಳಿ ನಿಲ್ಲುವಳು)
ಮಾರ್ತಾ೦ಡ: ಸದಾರಮಾ ನಾನು ಕನಸು ಕಾಣುತ್ತಿಲ್ಲ ತಾನೇ (ಕಣ್ಣುಜ್ಜಿಕೊಳ್ಳುವನು)
ಕಲಾಹ೦ಸ: ನಿಲ್ಲ ಅವಳನ್ನು ಸಮೀಪಿಸಿದೆಯಾದರೆ ರು೦ಡ ಮು೦ಡದಿ೦ದ ಉರುಳೀತು ಎಚ್ಚರಿಕೆ
ಸದಾರಮ: ಪ್ರಾಣೇಶ್ವರ ..(ಕೈ ಬಿಡುವಳು)
(ಕಿಟ್ಟಪ್ಪ ಒಳಗಿನಿನ್೦ದ ಕತ್ತಿಯೊ೦ದನ್ನು ತ೦ದು ಮಾರ್ತಾ೦ಡನ ಮು೦ದೆ ಎಸೆಯುವನು
ಕಲಾಹ೦ಸ ಮಾರ್ತಾ೦ಡನಿಗೆ ಕಾಳಗನಡೆದು ಕಲಾಹ೦ಸ ಸಾಯುವನು)
ಮಾರ್ತಾ೦ಡ: ಸದಾರಮೆ ನೀನು ಇಲ್ಲಿಗೆ ಹೇಗೆ ಬ೦ದೆ..?
ಸದಾರಮ: ಈ ಅಧಿಕಾರಿಗಳಿಗೆ ನನ್ನ ಕತೆಯೆಲ್ಲಾ ಹೇಳಿಕೊ೦ಡೆನು ಅವರು ಅಲ್ಲರನ್ನು
ಕ೦ಡುಹಿಡಿಯು ವುದಾಗಿ ಮಾತುಕೊಟ್ಟು ನನ್ನ ಭಾವ ಚಿತ್ರವನ್ನು ಇಲ್ಲಿ ಕಟ್ಟೀದರು ನೀವೇ
ಮೊದಲು ದೊರೆತಿರಿ….
ಅಧಿಕಾರಿ: ಇನ್ನೂ ಸ್ವಲ್ಪ ಜನ ಒಳಗಿದ್ದಾರೆ ತಾಯಿ,ಕಿಟ್ಟಪ್ಪಾ ಈಗ ಅವರ್ನೆಲ್ಲಾ ಕರೆದುಕೊ೦ಡು ಬಾಪ್ಪ
(ಎಲ್ಲರೂ ಬರುವರು)
ಕಳ್ಳ: (ಮೊದಲು ಬ೦ದು) ಶಿವಾ ನನ್ನನ್ನ ಕ್ಷಮಿಸಿ ಬಿಡು ಶಿವಾ,ನಿನ್ನ ಹೆಸರು ಹೇಳ್ಕೊ೦ಡು
ಬದುಕ್ಕೊತೀನಿ,(ಕಾಲೊಗೆ ಬೀಳುವನು)
ಮಾರ್ತಾ೦ಡ: ಅಯ್ಯ ನಿನ್ನನ್ನು ಕ್ಷಮಿಸಿದ್ದೀನೀ,ಏಳು ಇನ್ನೆ೦ದೂ ಇ೦ಥ ಕೆಲಸ ಮಾಡಬೇಡ ಜೋಕೆ
ಕಳ್ಳ: ನಿಮ್ ಗ೦ಡ ಹೆ೦ಡ್ತೀರ್ ಪಾದದಾಣೆ ಇ೦ಥ ಕೆಲ್ಸ ಮಾಡಾಕಿಲ್ಲ ದೊರೆ
(ಇಬ್ಬರಿಗೂ ಅಡ್ಡ ಬೀಳುವನು)
(ಆದಿಮೂರ್ತಿ ಮತ್ತು ಬ೦ಗಾರಯ್ಯ ಬ೦ದು)
ಬ೦ಗಾರಯ್ಯ: ಅಮ್ಮಯ್ಯಾ ಎಲ್ಲಮ್ಮಾ ನಿನ್ಗ೦ಡ..?
ಆದಿಮೂರ್ತಿ: ವಡವೆ ವಸ್ತ್ರ ಕೊಡ್ಲಿಲ್ಲ ಅ೦ತ ಓಡಿಸ್ಬಿಟ್ರಾ..?
ಸದಾರಮ: ಅಣ್ಣಯ್ಯಾ ಯಾವ ಕೈಯಿ೦ದ ತೋರಿಸಲಿ ನನ್ನ ಸ್ವಾಮಿಯನ್ನ ಇಗೋ ಇಲ್ಲಿಯೇ ಇದ್ದಾರೆ
ನೋಡಿ
ಇಬ್ಬರೂ: ಯುವರಾಜ ಯಾಕಪ್ಪಾ ಹೀಗಾಗೋದೆ…?
ರಾಜಕುಮಾರ: ಏನ್ ಯುವರಾಜರೇ…?ಯಾವ ದೇಶದ ಯುವರಾಜರು….?
ಸದಾರಮ: ಇವರು ತೇಜೋ ನಗರದ ಯುವರಾಜ ಮಾರ್ತಾ೦ಡರವರು.ಈ ಭಾಗ್ಯ ದೇವರು
ರಾಜಕುಮಾರ: ನಿಜವೇ ತಾವು ವಿವಾಹಿತರೇ..? ತಮ್ಮನ್ನು ಯಾರೆ೦ದು ತಿಳಿಯದೆ ಆಡಿದ ಮಾತುಗಳನ್ನು
ನಡೆದುಕೊ೦ಡ ರೀತಿಯನ್ನು ಕ್ಷಮಿಸು ಸೋದರಿ
ಮ೦ತ್ರಿಕುಮಾರ: ಯುವರಾಜ ಮಾರ್ತಾ೦ಡರನ್ನು ಈ ಸೋದರಿಯನ್ನು ನಮ್ಮ ನಗರಕ್ಕೆ ಕರೆದುಕೊ೦ಡು
ಹೋಗಿ ಕೆಲವು ದಿನ ನಮ್ಮ ಅಥಿತಿಗಳನ್ನಾಗಿಸಿಕೊ೦ಡು ಕಳುಹಿಸೋಣ
ರಾಜಕುಮಾರ :ಹೌದು ಯುವರಾಜ ನೀವು ನಮ್ಮ ಚ೦ದ್ರಾನಗರಿಗೆ ಅಥಿತಿಗಳಾಗಿ ಆಗಮಿಸಬೇಕು
ಮಾರ್ತಾ೦ಡ: ಸದಾರಮ…ಚ೦ದ್ರಾನಗರಿಯಿ೦ದ ತೇಜೋನಗರಕ್ಕೆ ಹತ್ತಿರವಲ್ಲವೆ.ಬಾ.. ಇವರ
ಸತ್ಕಾರವನ್ನು ಸ್ವೀಕರಿಸಿ ನ೦ತರ ನಮ್ಮ ನಗರಕ್ಕೆ ಪ್ರಯಾಣ ಬೆಳೆಸೋಣ
ಆದಿ ಮತ್ತು ಬ೦ಗಾರಯ್ಯ: (ಬೇಡುತ್ತಾ) ಅಮ್ಮಯಾ…..
ರಾಜಕುಮಾರ :ನೀವ್ಯಾರು…?
ಆದಿಮೂರ್ತಿ: ಅಮ್ಮಯ್ಯಾ ನನ್ನ ತ೦ಗಿ ಹೂ೦….
ಮ೦ತ್ರಿಕುಮಾರ: ಹಾಗದರೆ ನೀವು ನಮ್ಮೊಡನೆ ಬನ್ನಿ ತೇಜೋನಗರಕ್ಕೆ ನಾವೇ ಬ೦ದು ಕಳುಹಿಸಿ
ಕೊಡುತ್ತೇವೆ..
*****************************ತೆರೆ************************************

******************************ಶುಭಂ****************************