ವಾಸ್ತವವೆಂದರೆ ವಾಸ್ತವವೇ?

ವಾಸ್ತವವೆಂದರೆ ವಾಸ್ತವವೇ?

ವಾಸ್ತವ ಎನ್ನುವುದು ಮಾಯೆ ಎಂದು ನಂಬುವುದಿದೆ. ಅದೊಂದು ಆದಿಭೌತಿಕ ನಿಲುವು. ಆದರೆ ಭೌತಿಕ ನೆಲೆಯಲ್ಲೂ ಕೂಡ ಈ ಕುರಿತು ಅದೇ ತರಹದ ನೋಟ ನಾವು ಕಾಣುತ್ತೇವೆ. ಅಂದರೆ, ವಾಸ್ತವವಾಗಿ ವಾಸ್ತವವೆಂದರೆ ಕಥನಗಳ ಮೂಲಕ ನಾವು ಕಟ್ಟಿಕೊಳ್ಳುವ ನಂಬಿಕೆಗಳು ಎಂಬರ್ಥದಲ್ಲಿ. ನಾವು ಕಾಣುವುದೆಲ್ಲ ಇರುವಹಾಗೇ ನಮಗೆ ಅರಿವಿಗೆ ಬರುತ್ತದೆ ಎನ್ನುವುದು ಕಲ್ಪನೆಯೇ ಸರಿ. ಸಮಾಜ ಜೀವಿಗಳಾದ ನಮಗೆ, ಸಾಮಾಜಿಕ ಕಥನಗಳು ಕಟ್ಟಿಕೊಟ್ಟಿರುವ ತಿಳಿವಿನ ಪ್ರಕಾರಗಳ ಹೊರತು ಇನ್ನೇನೂ ಅರಿವಿನ ಸಾಧ್ಯತೆ ಇಲ್ಲ. ಹಾಗಾಗಿಯೇ ಭಾಷೆಯ ಹೊರಗೆ ಏನೂ ಇಲ್ಲ ಎಂದು ಕೆಲವರ ಅಂಬೋಣ.
ಇದನ್ನು ನಿಧಾನವಾಗಿ ನೋಡೋಣ. ನನ್ನ ಕಣ್ಣ ಮುಂದೆ ಬಾಳೆಹಣ್ಣಿದೆ. ಆ ಬಾಳೆ ಹಣ್ಣು ವಾಸ್ತವವೋ, ಕಥನವೋ? ಭೌತಿಕವಾಗಿ ಬಾಳೆಹಣ್ಣಿರುವುದು ಪ್ರಶ್ನಾತೀತ. ಆದರೆ ಅದು ಬಾಳೆ ಹಣ್ಣು ಎಂಬ ನನ್ನೊಳಗಿನ ಅರಿವು ಹಾಗು ಆ ಭೌತಿಕ ವಸ್ತುವಿನ ನಡುವೆ ಸಾಮ್ಯವಿದ್ದರೆ ಅದಕ್ಕೆ ಆ ವಸ್ತುವಿನ ಬಗ್ಗೆ ನಾನು ಆಂತರಿಸಿಕೊಂಡ ಸಾಮಾಜಿಕ ಕಥನಗಳೇ ಕಾರಣ. ಯಾಕೆಂದರೆ ಆ ಭೌತಿಕ ವಸ್ತು ನನಗೆ ಒಂದು ವಿಶಿಷ್ಟ ಬಗೆಯ ಹಣ್ಣಾಗಿ, ವಿಶಿಷ್ಟ ಗುಣಗಳೊಂದಿಗೆ, ವಿಶಿಷ್ಟ ಉಪಯೋಗಗಳಿರುವ ವಸ್ತುವಾಗಿ ಅರಿವಾಗುತ್ತಿದೆ. ಈ ಎಲ್ಲ (ಇಂತಹ ಎಲ್ಲ) ತಿಳಿವು ಇರದಿದ್ದರೆ ಆ ವಸ್ತು ಏನೊಂದೂ ಆಗಲಾರದು. (ಅದು ವಸ್ತು ಎಂದು ತಿಳಿವುದರ ಪ್ರಕ್ರಿಯೆಯೂ ಹೀಗೆಯೇ ಇರುತ್ತದೆಯಾಗಿ). ಅಂದರೆ, ಬಾಳೆ ಹಣ್ಣು ಬಾಳೆ ಹಣ್ಣಾಗಿರುವುದು ಅದರದ್ದೇ ಆದ ಗುಣಲಕ್ಷಣಗಳಿಂದಾದರೂ, ಅದು ನನಗೆ ಬಾಳೆಹಣ್ಣಾಗುವುದು ಅದರ ಹೊರತಾದ ನನ್ನ ಸಾಮಾಜಿಕ/ಸಾಂಸ್ಕೃತಿಕ ಪ್ರಜ್ನಾವಲಯದ ಮೂಲಕವೇ.
ಹೀಗೆ ಶುರುಮಾಡಿದರೆ ಕಥನಗಳು ಹೇಗೆ ನಮ್ಮ ನಿತ್ಯ ವ್ಯವಹಾರಗಳನ್ನು ನಿರ್ಮಿಸುತ್ತವೆ ಎಂದು ಅರಿವಿಗೆ ಬರುತ್ತದೆ. Social Text ಎಂಬ ಪತ್ರಿಕೆಯಲ್ಲಿ ನಡೆದ ಗಫಲಾ ಒಂದರಲ್ಲಿ ಸೋಕಲ್ ಎಂಬ ಭೌತ ಶಾಸ್ತ್ರಜ್ನನು ಈ ಥರಹದ ವಿಚಾರಗಳನ್ನು ಸುಳ್ಳು ಎಂದು ಸಾಧಿಸಲು ಆ ಪತ್ರಿಕೆಯನ್ನೇ ವಿಡಂಬಿಸುವ ಒಂದು ಪ್ರಯೋಗ ಮಾಡಿದ. (http://www.physics.nyu.edu/faculty/sokal/). ವಾಸ್ತವ ಎನ್ನುವುದು ಸಾಮಾಜಿಕ ಕಥನ ಎನ್ನುವವರು ತನ್ನ ಹತ್ತನೇ ಮಹಡಿಯ ಮನೆಯ ಬಾಲ್ಕನಿಯಿಂದ ಹೊರ ಜಿಗಿದು ವಾಸ್ತವದ ಸತ್ಯತೆಯನ್ನು ಪರೀಕ್ಷಿಸಬಹುದು ಎಂದು ವ್ಯಂಗವಾಗಿ ಈ ವಿಚಾರವನ್ನು ಟೀಕಿಸಿದ. ಅವನು ಹೇಳುವುದು ಸರಿ. ಸೃಷ್ಟಿಯ ಆಗುಹೋಗುಗಳನ್ನು ಸಮಾಜ ಸೃಷ್ಟಿಸಿದೆ ಎನ್ನುವುದು ಸರಿ ಅಲ್ಲ. ಆದರೆ ಅವನು ಮುಗ್ಗರಿಸುವುದು ಇಲ್ಲಿಯೇ. ಸಾಮಾಜಿಕ ಕಥನಾವಾದ ಎನ್ನುವುದೆಂದರೆ, ಸ್ಥಿತಿಯ ಕುರಿತಾದ ನಮ್ಮ ಜ್ನಾನ ಕಥನವೆಂದೇ ಹೊರತೂ, ಸ್ಥಿತಿಯೇ ಕಥನವೆಂದಲ್ಲ. ಗುರುತ್ವಾಕರ್ಷಣ ಬಲದ ಕುರಿತು ನಮ್ಮ ಜ್ನಾನ ಕಥನವೆಂದೇ ಹೊರತೂ, ಆ ಬಲವೇ ಕಥನವೆಂದಲ್ಲ.
ಜ್ನಾನದ ಕಟ್ಟುಕೊಳ್ಳುವಿಕೆಯ ಈ ನಮ್ಮ ವ್ಯವಹಾರವನ್ನು ನಾವು ಸಾಮಾನ್ಯವಾಗಿ ನಿರ್ಲಕ್ಷಿಸಿ ಅದನ್ನು ನಿತ್ಯಸತ್ಯವೆಂದು ಸ್ವೀಕರಿಸಿಬಿಡುವುದು ಹಲವು ಬಗೆಯ ಗೊಂದಲಗಳನ್ನು ಹಾಗೂ ತೊಂದರೆಗಳನ್ನು ಹುಟ್ಟಿಸುತ್ತದೆ. ಇದು ಮಾನವ, ಮಾನವನ ಕುರಿತಾಗಿ ಕಟ್ಟಿಕೊಳ್ಳುವ ಜ್ನಾನಗಳಲ್ಲಿ ತನ್ನ ವಿಪರೀತಗಳನ್ನು ಪ್ರದರ್ಶಿಸುತ್ತದೆ. ಉದಾಹರಣೆಯಾಗಿ ಭಾರತದಲ್ಲಿ ಪಾಕಿಸ್ತಾನದ ಬಗ್ಗೆ ಇರುವ ನಂಬಿಕೆಗಳನ್ನೇ ನೋಡಬಹುದು. ಸಾಮನ್ಯವಾಗಿ ಇದು ನೆಗೆಟಿವ್ ಆದ ನಂಬಿಕೆ. ಅಂದರೆ ಪಾಕಿಸ್ತಾನಿಗಳು ಹಾಗೆ ಹೀಗೆ ಎಂಬಲ್ಲಿ, ಯಾರು ಯಾರು ಹಾಗೆ, ಎಲ್ಲರೂ ಹಾಗಿರುತ್ತಾರೆಯೇ ಎಂದೆಲ್ಲ ಯೋಚಿಸದೇ ಒಂದು ತರದ ಸಾರ್ವತ್ರಿಕ ರೂಪಿನಲ್ಲಿ ನಾವು ಪಾಕಿಸ್ತಾನ ಹಾಗೂ ಅಲ್ಲಿಯ ಜನರನ್ನು ಕಲ್ಪಿಸಿಕೊಂಡು ಬಿಡುತ್ತೇವೆ. ಹಾಗೆಯೇ, ವಸಾಹತುಶಾಹಿಯ ಸಮಯದಲ್ಲಿ ಭಾರತೀಯರ ಬಗ್ಗೆ ಬ್ರಿಟೀಷರಿಗಿದ್ದ ಕೆಲವು ನಂಬಿಕೆಗಳು. ಎಡ್ವರ್ಡ ಸಾಯಿದ್ ಅನ್ನುವಂತೇ ಹೀಗೆ ಮಾಡುವಾಗ ಆಗುವುದೇನೆಂದರೆ, ಮೊದಲು ಸಿಂಹ ಹೀಗಿರುತ್ತದೆ ಎಂಬ ವಿವರಣೆ ಯಾವುದೋ ಒಂದು ಅನುಭವದ ಮೇಲೆ ಹುಟ್ಟಿ ಆಮೇಲೆ, ಹೀಗಿರುವುದೆಲ್ಲ ಸಿಂಹವೇ, ಸಿಂಹ ಹೀಗೇ ಇರಬೇಕು, ನಮಗೆ ಗೊತ್ತಿರುವುದೋಂದೇ ಸಿಂಹ, ಇಲ್ಲದಿದ್ದರೆ ಅದು ಸಿಂಹವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಬರುತ್ತದೆ.
ದಿನದಿನದ ವ್ಯವಹಾರಗಳಲ್ಲಿ ಕೂಡ ನಾವು ಕಥಿತ ಜ್ನಾನವನ್ನು ಇತ್ಯಾತ್ಮಕ ಜ್ನಾನವೆಂದು ಸ್ವೀಕರಿಸಿ ಗೊಂದಲದೊಳಗಿರುತ್ತೇವೆ. ಅಂದರೆ, ನಮ್ಮ ನಂಬಿಕೆಗಳು ಮೇಲ್ನೋಟಕ್ಕೆ ಸತ್ಯ ಅನ್ನಿಸಿದರೂ, ಅವು ಸಾಂದರ್ಭಿಕ ಸಾಮಾಜಿಕ ಅಧಿಕಾರಗಳ ಜಾಲದಲ್ಲಿ ಹುಟ್ಟುಕೊಂಡ ಐಡಿಯಾಲಜಿಗಳನ್ನವಲಂಬಿಸಿರುತ್ತವೆ.

ಕಮಲಾಕರ,
30, ಜುಲೈ, 2006

Rating
No votes yet