ಉಚ್ಛಾರದ ಅವಾಂತರ

ಉಚ್ಛಾರದ ಅವಾಂತರ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವರಿದ್ದಾರೆ, ಜೀವನದಲ್ಲಿ ೮೦ ಶೇಕಡದಷ್ಟು ಸಮಯ ತುಳು ಭಾಷೆಯನ್ನು ಮಾತ್ರ ಮಾತನಾಡಿ ಗೊತ್ತಿದ್ದವರು. ಇವರಿಗೆ ಕನ್ನಡದ 'ಳ' ಉಚ್ಛಾರ ಯಾವತ್ತಿಗೂ ಮರೀಚಿಕೆಯೇ. 'ಳ' ಇದ್ದಲ್ಲಿ 'ಲ' ಹಾಕಿಯೇ ಇವರುಗಳು ಮಾತನಾಡುವುದು. ಇದರರ್ಥ ಎಲ್ಲಾ ತುಳುವರಿಗೆ 'ಳ' ಉಚ್ಛಾರ ಬರುದಿಲ್ಲವೆಂದೇನಿಲ್ಲ. ಅತಿ ಕಡಿಮೆ ಕನ್ನಡ ಬಳಸುವವರಲ್ಲಿ ಕನ್ನಡ ಮಾತನಾಡಿದರೆ 'ಳ' ಎಂಬಲ್ಲಿ 'ಲ' ಬಂದು ಮನೋರಂಜನೆ ಗ್ಯಾರಂಟೀಡ್. ಎಂತಹ ವಿಪರ್ಯಾಸ ನೋಡಿ, 'ತುಳು' ಎಂಬ ಶಬ್ದದಲ್ಲೇ 'ಳ' ಉಚ್ಛಾರ ಇದೆ, ಆದರೂ....

ವಾಹನಕ್ಕೆ ಇಂಧನ ತುಂಬಿಸಿ 'ಬ್ಲೋ' ಚೆಕ್ ಮಾಡಲು ಹೋದರೆ, ಅಲ್ಲಿನ ಹುಡುಗ 'ಗಾಲಿ ಇಲ್ಲ. ಹಾಲಾಗಿದೆ. ಮುಂದಿನ ಪೆಟ್ರೋಲ್ ಬಂಕಿನಲ್ಲಿ ಹಾಕಿಕೊಲ್ಲಿ' ಎನ್ನುತ್ತಾನೆ. ಬಸ್ಸಿನಿಂದ ಇಳಿಯುವವರಿಗೆ 'ಬೇಗ ಇಲೀರಿ, ಬೇಗ ಇಲೀರಿ' ಎಂದು, ಮೊಬೈಲಿನಲ್ಲಿ ಮಾತನಾಡಲು ತಡವರಿಸಿದರೆ 'ಬೇಗ ಹೇಲಿ(?), ಕಾಲ್ ಚಾರ್ಜೆ ಆಗ್ತಾ ಇದೆ' ಎಂದು ಹೀಗೆ ವಿವಿಧ ಕಡೆ ಈ 'ಳ' ಬದಲು 'ಲ' ಅವಾಂತರ ಕೇಳಬಹುದು. ಇವರಿಗೆ ಈ ಕೆಳಗಿನ ಡೈಲಾಗ್ ಓದಲು ಹೇಳಿದರೆ ಏನಾಗಬಹುದು?

'ಎಷ್ಟು ಸಲ ಹೇಳುವುದು ಮಾರಾಯ ನಿನಗೆ? ನಂಗಂತೂ ಹೇಳಿ ಹೇಳಿ ಸಾಕಾಯ್ತು. ಬೇರೆಯವರಿಂದ ಕೂಡಾ ಹೇಳಿಸಿ ಆಯ್ತು. ಆದರೂ ನಿಂಗೆ ಅರ್ಥವಾಗ್ತಾ ಇಲ್ಲ. ಮುಖದ ಮೇಲೆ ಹೇಳಿದರೂ ನೀನು ಕೇಳ್ತಾ ಇಲ್ಲ. ನನ್ನನ್ನು ಬಿಡು, ನಿನ್ನ ಆಪ್ತರು ಹೇಳಿದ್ರೂ ಕೇಳುದಿಲ್ಲ ನೀನು! ಇನ್ನು ಹೇಗೆ ಹೇಳುವುದು ನಿನಗೆ? ಊರಿನ ಎಲ್ಲರಿಂದ ಹೇಳಿಸುವುದು ಒಂದು ಬಾಕಿ ಇದೆ ಇನ್ನು'.

ಇವರಿಗೆ ತದ್ವಿರುದ್ಧವಾದ ಇನ್ನೊಂದು 'ಸೆಟ್ ಆಫ್ ಪೀಪಲ್' ಇದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡದ ಬ್ರಾಹ್ಮಣರಿವರು. ಇವರಿಗೆ ತಿಪ್ಪರಲಾಗ ಹಾಕಿದರೂ 'ಲ' ಹೇಳಲು ಬರುವುದಿಲ್ಲ. 'ಲ' ಇದ್ದಲ್ಲಿ 'ಳ' ಹಾಕಿ ಮಾತನಾಡುವುದು ಇವರ 'ಹವ್ಯಾಸ'! ಹೆಚ್ಚಾಗಿ ಮಠಗಳಲ್ಲಿ ಓದುವವರು, ಬಹಳ ಮಡಿವಂತರು, ತಮ್ಮ ಬ್ರಾಹ್ಮಣ ಜಾತಿಯನ್ನು ಬಿಟ್ಟು ಬೇರೆ ಜಾತಿಯ ಸಂಪರ್ಕವಿಲ್ಲದವರು ಮತ್ತು ಮಠಗಳನ್ನು ಬಿಟ್ಟು ಹೊರಜಗತ್ತು ನೋಡದವರು 'ಲ' ಇದ್ದಲ್ಲಿ 'ಳ' ಬಳಸುತ್ತಾರೆ. ಎಷ್ಟೇ ತಲೆ ಬಡಿದುಕೊಂಡರೂ ಇವರೆನ್ನುವುದು 'ಗುಳಾಬಿ ಹೂವು' ಎಂದೇ. ಎಷ್ಟೇ ತಿದ್ದಿದರೂ ಇವರೆನ್ನುವುದು 'ಹುಳಿ ಗರ್ಜಿಸಿತು' ಎಂದೇ.

ನಗಬಾರದು...ಆದರೆ ನಗದೇ ಇರಲು ಸಾಧ್ಯವೇ?

Rating
No votes yet

Comments