ಚಿಕೂನ್‌ಗುನ್ಯಾ ಮತ್ತು ಕೋಳಿ ಮಾಂಸ

ಚಿಕೂನ್‌ಗುನ್ಯಾ ಮತ್ತು ಕೋಳಿ ಮಾಂಸ

ಬರಹ

ನನಗೆ ಎರಡು ವಿಷಯಗಳ ಬಗ್ಗೆ ಅತೀವ ದುಖಃವಿದೆ. ಮೊದಲನೆಯದು, ನಾನು ಉತ್ತಮ ಹಾಡುಗಾರನಲ್ಲನಾದ್ದರಿಂದ ಕಾಲೇಜಿನಲ್ಲಿ ಹುಡುಗಿಯರಿಂದ "He sings too good ಕಣೇ, so cute na" ಎಂದು ಹೇಳಿಸಿಕೊಳ್ಳಲು ಸಾಧ್ಯವಾಗದೇ ಇದ್ದಿದ್ದು ಮತ್ತು ಎರಡನೆಯದು ನಾನು ಸಸ್ಯಾಹಾರಿಯಾದ್ದರಿಂದ ಜಗತ್ತಿನ ನಾನಾ ಬಗೆಯ ಮಾಂಸಾಹಾರದ ರುಚಿಯನ್ನು ಸವಿಯುವ ಅವಕಾಶವನ್ನ ಕಳೆದುಕೊಂಡಿದ್ದು. ಇದರಲ್ಲಿ ಮೊದಲನೆಯ ವಿಷಯವನ್ನ ಸರಿಪಡಿಸುವುದು "ಸಂಗೀತಾಭ್ಯಾಸ" ಮುಂತಾದ ಕಷ್ಟಪಡಬೇಕಾದ ಮಾರ್ಗವನ್ನ ಒಳಗೊಂಡಿದೆ!

"ಕಷ್ಟಪಡಬೇಕಾದ ಯಾವುದನ್ನೂ ಪ್ರಯತ್ನಿಸುವುದಿಲ್ಲ" ಅಂತ ನಾನು ಮತ್ತೆ ನನ್ನ ಸ್ನೇಹಿತ ಒಟ್ಟಿಗೆ ಪ್ರತಿಙ್ಞೆ ಮಾಡಿರುವುದರಿಂದ, ಮಾತಿಗೆ ತಪ್ಪಿ ಆತನಿಗೆ ನೋವುಂಟು ಮಾಡುವ ದುರುದ್ದೇಶ ನನಗಿಲ್ಲ. ಹಾಗಾಗಿ ಬಾತ್‌ರೂಮ್‌ನಲ್ಲಿ, ಸ್ನೇಹಿತರ ಮುಂದೆ(ಅವರು ಎಷ್ಟು ಬೈದರೂ), ಮನೆಯಲ್ಲಿ ನನ್ನ ಮನಸೋ ಇಚ್ಚೆ ಹಾಡಿ ನನ್ನ ಮನಸ್ಸಿನ ನೋವನ್ನ ಕೊಂಚ ಮಟ್ಟಿಗೆ ಕಡಿಮೆ ಮಾಡಿಕೊಳ್ಳುತ್ತೇನೆ.

ನಾನು ತುಂಬಾ ಚಿಕ್ಕವನಿದ್ದಾಗ "ಪಾಪ ಕೋಳಿ,ಒಳ್ಳೇದು, ಸಾಯಿಸಬಾರದು ಅದನ್ನ" ಎಂದು ಚಿಕನ್‌ ತಿನ್ನುತ್ತಿರಲಿಲ್ಲ. ಸ್ವಲ್ಪ ದೊಡ್ಡವನಾದ ಮೇಲೆ "ಮನುಷ್ಯ ಕೋಳಿಗಳನ್ನು ತಿನ್ನುತ್ತಾ ಹೋದರೆ ಅವುಗಳ ಸಂತತಿಯೇ ಭೂಮಿಯ ಮೇಲೆ ಉಳಿಯುವುದಿಲ್ಲ" ಎಂದು ಚಿಕನ್‌ ತಿನ್ನುತಿರಲಿಲ್ಲ. ಸ್ವಲ್ಪ ದಿನ "Be Vegan, Buy Vegan" ಸಂಸ್ಥೆಯ ಸದಸ್ಯನಾಗಿದ್ದರಿಂದ ಕೋಳಿಗಳಿಗೆ ನನ್ನ ಹೊಟ್ಟೆಯಲ್ಲಿ ಸ್ವರ್ಗ ಕಾಣುವ ಅವಕಾಶ ತಪ್ಪಿ ಹೋಯಿತು. ತಿನ್ನಲು ಟ್ರೈ ಮಾಡಿದ ಒಂದೆರಡು ಸಲ "ರಬ್ಬರ್‌ನಂತೆ ಅಗಿಯುವುದು ನನ್ನ ಕೈಯಲ್ಲಿ ಆಗುವುದಿಲ್ಲ" ಎಂದು ತೀರ್ಮಾನವಾದ್ದರಿಂದ ಶಿವಾಜಿನಗರದ ಹೋಟೆಲ್‌ಗಳಲ್ಲಿ ತೂಗುಹಾಕುವ ಚಿಕನ್‌ ತಂದೂರಿ(?)ಯನ್ನು ತಿನ್ನುವ ಕನಸು ಕನಸಾಗಿಯೇ ಉಳಿದುಬಿಟ್ಟಿತು. ಆದರೆ ಚಿಕೂನ್‌ಗುನ್ಯದ ಜೊತೆ ನನ್ನ ಮುಖಾಮುಖಿಯಾಗಬೇಕಾಗಿ ಬಂದದ್ದು ಮಾತ್ರ ನಾನು ಡೆಟ್ರಾಯಿಟ್‌ಗೆ ಬಂದ ಮೇಲೆ.

ಇಲ್ಲಿ ನನ್ನ ರೂಮ್‌ಮೇಟ್‌ ಆಗಾಗ ಹೇಳುತ್ತಿರುತ್ತಾನೆ. ನಾಲ್ಕು ಕಾಲಿನದರಲ್ಲಿ ಕುರ್ಚಿ ಟೇಬಲನ್ನು ಹೊರತುಪಡಿಸಿ ಉಳಿದಲ್ಲವನ್ನೂ ಆತ ತಿನ್ನುತ್ತಾನಂತೆ! ಇದನ್ನು ಆತ ತಮಾಷೆಗೆ ಹೇಳಿದರೂ ಆತನ ಮಾಂಸದ ಮೇಲಿನ ಪ್ರೀತಿಯನ್ನು ನೋಡಿರುವ ನಾನು ಈ ಮಾತು ಪರಮಸತ್ಯ ಎಂದೇ ನಂಬುತ್ತೇನೆ. ಆತ ನನ್ನ ಮತ್ತೊಬ್ಬ ರೂಮ್‌ಮೇಟ್‌ನ ಬಗ್ಗೆ ಹೇಳಿದ ಮಾತು ಇಂದಿಗೂ ನನ್ನನ್ನ ಜಾಗರೂಕನಾಗಿ ಇರುವಂತೆ ಮಾಡಿದೆ. ರಾತ್ರಿ ಮಲಗಿದ್ದಾಗ ಸ್ವಲ್ಪ ಎಚ್ಚರ ತಪ್ಪಿದರೂ ನನ್ನನ್ನೇ ಕಡಿದುಕೊಂಡು ತಿಂದುಬಿಡುತ್ತಾನಂತೆ! ನಾನು ಸಿಹಿಯನ್ನು ಜಾಸ್ತಿ ತಿನ್ನುವುದರಿಂದ ನನ್ನ ಮಾಂಸ ಕೂಡ ಸಿಹಿಯಾಗೇ ಇರುತ್ತದಂತೆ! ಇಂತಿಪ್ಪ ನನ್ನ ರೂಮ್‌ಮೇಟ್‌ಗಳಿಗೆ ಬರೇ ಪುಳಿಚಾರು ತಿಂದುಕೊಂಡು ಬದುಕುವ ನನ್ನ "ದಯನೀಯ" ಸ್ಥಿತಿಯ ಬಗ್ಗೆ ಕಾಲಕ್ರಮೇಣ ಕರುಣೆ ಉಕ್ಕಿ ಬಂತು. ಹಾಗಾಗಿ ಚಿಕನ್‌ನ ರುಚಿಯ ಪರಿಚಯ ಮಾಡಿಸಿ ನನ್ನ ಜೀವನದಲ್ಲಿ revolution ಉಂಟು ಮಾಡಬೇಕೆಂಬ ಅಭಿಲಾಷೆಯನ್ನ ಒಮ್ಮೆ ನನ್ನ ರೂಮಿ ಚಹ ಕುಡಿಯುವಾಗ ವ್ಯಕ್ತಪಡಿಸಿದ. ನಮ್ಮ ಮನೆಯ ಪಕ್ಕದಲ್ಲೇ ಇದ್ದ "Cass Cafe"ಯಲ್ಲಿ ಅಮೆರಿಕದ ನ್ಯಾಷನಲ್‌ ಫುಡ್ ಆದ ಬಫೆಲೋ ವಿಂಗ್ಸ್‌ ತಿನ್ನುವ ಮೂಲಕ ನನ್ನ ಚಿಕನ್‌ career ಶುರು ಮಾಡಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಮಾಂಸಾಹಾರದ ವಿಚಾರದಲ್ಲಿ ಭಾರತೀಯರಷ್ಟು confused ಗಿರಾಕಿಗಳು ಬಹುಶಃ ಜಗತ್ತಿನ ಮತ್ಯಾವ ದೇಶದವರೂ ಇಲ್ಲ. ಬೇರೆ ದೇಶದಲ್ಲಿ ಮಾಂಸ ತಿನ್ನುವ ವಿಚಾರದಲ್ಲಿ ಕೇವಲ ಎರಡೇ possibility ಇರಲು ಸಾಧ್ಯ. ಒಂದೇ ತಿನ್ನುತ್ತಾರೆ, ಅಥವಾ ತಿನ್ನುವುದಿಲ್ಲ. ಅದೇ ಭಾರತೀಯರನ್ನು ನೋಡಿ. ಯಾರನ್ನೇ ನೀವು ಸರಿಯಾಗಿ ತಿಳಿಯದೆ ವೆಜ್ಜೋ ಅಥವಾ ನಾನ್‌ವೆಜ್ಜೋ ಎಂದು decide ಮಾಡುವ ಹಾಗಿಲ್ಲ. ಎಷ್ಟೋ ಸಾರಿ "ನಾನ್‌ ವೆಜ್ಜು" ಅಂದಿದ್ದನ್ನ ಕೇಳಿಸಿಕೊಳ್ಳುವವರು ಸರಿಯಾಗಿ ಅರ್ಥ ಮಾಡಿಕೊಳ್ಳದೆ "ನಾನ್‌ವೆಜ್ಜು" ಎಂದು ತಿಳಿದು ಅಪಾರ್ಥಗಳಾಗಿದ್ದೂ ಇದೆ! ನಾನ್‌ವೆಜ್ಜು ಎಂದು ತಿಳಿದ ಮೇಲೂ ಯಾವ್ಯಾವ ಪ್ರಾಣಿಗಳು ಅವರ Nonveg ಲಿಸ್ಟ್‌ನಲ್ಲಿ ಸೇರಲು ಅನರ್ಹ ಎಂಬುದನ್ನು ಕೇಳಿ ಖಚಿತ ಮಾಡಿಕೊಳ್ಳಬೇಕು. ಸಾಲದ್ದಕ್ಕೆ ಒಂದೊಂದು ಜಾತಿ, ಒಳಜಾತಿ, ಪಂಗಡಗಳದ್ದು ಒಂದೊಂದು ನಿಯಮ.

ಆಹಾರಾಭ್ಯಾಸದ ಬಗ್ಗೆಯ ಪ್ರತಿಯೊಂದು ಚರ್ಚೆಯೂ ಕೊನೆಯಲ್ಲಿ ಜಾತಿ ಒಳಜಾತಿಗಳಲ್ಲೇ ಮುಕ್ತಾಯವಾಗುವುದರಿಂದ ಇದು ತುಂಬಾ ರಿಸ್ಕಿ ಬಿಸಿನೆಸ್‌! ಈ ವಿಚಾರದಲ್ಲಿ ಚೀನೀಯರ ನಿಯಮ ತುಂಬಾ ಸರಳವಾಗಿದೆ. ಸೂರ್ಯನಿಗೆ ಬೆನ್ನು ತೋರಿಸುತ್ತಾ ಓಡಾಡುವ ಯಾವುದೇ ಜೀವಿಯೂ ತಿನ್ನಲು ಅರ್ಹ ಅಂತೆ! ಅಂದರೆ ಮನುಷ್ಯನನ್ನು ಬಿಟ್ಟು ಇನ್ಯಾವ ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳನ್ನಾದರೂ ತಿನ್ನಬಹುದು, ಯಾವುದೇ partiality ಇಲ್ಲ! ಗೂನು ಬೆನ್ನಾಗಿರುವ ವಯಸ್ಸಾದ ಮುದುಕ ಮುದುಕಿಯರು ಕೂಡ ಹುಷಾರಾಗಿ ಓಡಾಡಬೇಕೇನೋ. ಪರಿಸ್ಥಿತಿ ಹೀಗಿರುವಾಗ ಡಾರ್ವಿನ್ನನ ವಿಕಾಸವಾದ "survival of the fittest" ಇಲ್ಲಿ ನಿಜ ಏಕೆ ಆಗಲಿಲ್ಲವೋ. ಎಲ್ಲೆಂದರಲ್ಲಿ ಅಟ್ಟಾಡಿಸಿಕೊಂಡು ತಿನ್ನುವ ಚಿಂಕಿಗಳಿಂದ ತಪ್ಪಿಸಿಕೊಳ್ಳಲು ಬೆನ್ನಿನ ಮೇಲೇ ಕಾಲು ಬೆಳೆಸಿಕೊಂಡು ಸೂರ್ಯನಿಗೆ ಹೊಟ್ಟೆ ತೋರಿಸಿಕೊಂಡು ಓಡಾಡುವ ಪ್ರಾಣಿ ಸಂತತಿಯೊಂದರ ವಿಕಾಸ ಚೀನಾದಲ್ಲಿ ಆಗಬೇಕಿತ್ತು!

ವಿಕಾಸವಾದ ಇಂಗ್ಲಿಷ್‌ನಲ್ಲಿ ಇರುವುದರಿಂದ ಚೀನೀ ಪ್ರಾಣಿಗಳಿಗೆ ಓದಿ ಅರ್ಥ ಮಾಡಿಕೊಳ್ಳಲು ಕಷ್ಟವಾಗಿ ಹೀಗೆ ವಿಕಾಸವಾಗುವುದನ್ನೇ ಬಹುಶಃ ಮರೆತುಬಿಟ್ಟಿವೆ. ಸರಿ, ಎರಡು ದಿನಗಳ ನಂತರ ನನ್ನ ಮತ್ತು ನನ್ನಿಬ್ಬರು ರೂಮೀಗಳ ದೇಹಗಳು "cass cafe"ಯ 'Rock Music'ಗೆ ತಾಳ ಹಾಕುತ್ತಾ ಮೂಲೆಯ ಟೇಬಲ್ಲೊಂದರಲ್ಲಿ ವಿರಾಜಮಾನವಾಗಿದ್ದವು. ಅವರಿಬ್ಬರ ಪ್ರಯೋಗದ ಬಲಿಪಶುವಾದ ನಾನು ಶೋಯಬ್‌ ಅಖ್ತರ್‌ ಬೌನ್ಸರ್‌ ಎದುರಿಸಲಿರುವ ಗಂಗೂಲಿಯಂತೆ ಸ್ವಲ್ಪ ನರ್ವಸ್‌ಗೆ ಒಳಗಾಗಿದ್ದೆ. ನನ್ನ ಸ್ನೇಹಿತರು ಮಾತ್ರ ಯಾವುದೋ ದೀರ್ಘವಾದ ಆಲೋಚನೆಯಲ್ಲಿದ್ದಂತೆ ಒಬ್ಬರ ಮುಖವನ್ನೊಬ್ಬರು ನೋಡುತ್ತಾ ಕುಳಿತಿದ್ದರು.

"How are you guys doing today?" ಎಂದು ಉಲಿದ ಹೆಣ್ಣು ಧ್ವನಿಗೆ ಮೂವರೂ ತಿರುಗಿ ನೋಡಿದೆವು.

ನಮ್ಮ ಆರ್ಡರ್‌ ತೆಗೆದುಕೊಳ್ಳುವುದೇ ಜೀವನದ ಪರಮ ಉದ್ದೇಶವೇನೋ ಎನ್ನುವಂತೆ ನಮ್ಮೆಡೆಗೇ ಕಾತರದಿಂದ ನೋಡುತ್ತಾ ನಿಂತಿದ್ದಳು ಆಕೆ. ಅವರಿಬ್ಬರೂ ಮಾತೇ ಆಡದ್ದರಿಂದ ನಾನೇ ಮುಂದಾಗಿ ಎರಡು ಆರ್ಡರ್‌ ಚಿಕನ್ ವಿಂಗ್ಸ್ ಮತ್ತು ನೆಂಚಿಕೊಳ್ಳಲು ರ್ಯಾಂಚ್‌ ಡ್ರೆಸ್ಸಿಂಗ್‌ ಹೇಳಿ ಸ್ನೇಹಿತರ ಒಪ್ಪಿಗೆಗೆ ಅವರ ಮುಖ ನೋಡಿದೆ. ನನ್ನ ರೂಮಿ ಬೇಡವೆನ್ನುವಂತೆ ತಲೆ ಆಡಿಸುತ್ತಾ ಕೇವಲ ಒಂದು ಚಿಕನ್‌ ವಿಂಗ್ಸ್‌ ಮತ್ತು ಜೊತೆಗೆ ಒಂದು ಆನಿಯನ್‌ ರಿಂಗ್ಸ್‌ ಕೊಡಲು ಹೇಳಿದ. ನನಗೆ ಆಶ್ಚರ್ಯ. ಚಿಕನ್‌ ತಿನ್ನಿಸುತ್ತೇವೆ ಎಂದು ಕರೆದುಕೊಂಡು ಬಂದು ಈರುಳ್ಳಿ ತಿನ್ನಿಸುತ್ತಿದ್ದಾರಲ್ಲ, ಎಂದು. "ಯಾಕ್ರೋ ಮಕ್ಕಳ್ರಾ, ನಾನೂ ಚಿಕನ್‌ ತಿನ್ನುತ್ತೇನೆ ಕಣ್ರೋ" ಎಂದು ಅವರ ಮೇಲೆ ರೇಗಿದೆ. ಒಮ್ಮೆಲೇ ನನಗೆ ಶಾಕ್‌ ಆಗುವಂತೆ "ನೀನು ಚಿಕನ್‌ ತಿನ್ನು, ಆನಿಯನ್‌ ರಿಂಗ್ಸ್‌ ನಮ್ಮಿಬ್ಬರಿಗೆ, ನಾವು ಚಿಕನ್‌ ತಿನ್ನಬಾರದು ಎಂದು ತೀರ್ಮಾನಿಸಿದ್ದೇವೆ" ಎನ್ನುವುದೇ? ಅವರನ್ನೇ ನಂಬಿಕೊಂಡು ಹೊಸದೊಂದು ಕೆಲನ ಸಾಧಿಸಲು ಬಂದಿದ್ದ ನನಗೆ ಹೇಗಾಗಿರಬೇಡ? ಕಷ್ಟಪಟ್ಟು ಚೇತರಿಸಿಕೊಂಡು ನಮ್ಮ ನಾಟಕ ನೋಡುತ್ತಾ ಅಲ್ಲೇ ನಿಂತಿದ್ದ "ಕಾಯಮ್ಮ"ಳಿಗೆ ಸ್ವಲ್ಪ ಹೊತ್ತು ಬಿಟ್ಟು ಬರಲು ಕೇಳಿಕೊಂಡು ದುರುಗುಟ್ಟಿಕೊಂಡು ಸ್ನೇಹಿತರ ಕಡೆ ನೋಡಿದೆ. "ನೀವು ಕೋಳಿ ತಿಂದ ಪಾಪ ಎಲ್ಲಾ ನನ್ನ ತಲೆ ಮೇಲೆ ಕಟ್ಟಬೇಕು ಅಂತ ನನ್ನ ಇಲ್ಲಿ ತನಕ ಕರ್ಕೊಂಡು ಬಂದ್ರಾ?", ನೀರು ಕುಡಿಯುತ್ತಾ ದಬಾಯಿಸಿದೆ.

ಅದಕ್ಕೆ ನನ್ನ ಸ್ನೇಹಿತ, "ಹಂಗೇನಲ್ಲ ಲೇ, ಇಂಡಿಯಾದಲ್ಲಿ ಕೋಳಿಗಳಿಗೆ ಗುನ್ಯಾ ಅಂತ ಹೊಸ ತರದ ರೋಗ ಬಂದಿದೆ ಅಂತೆ. ಈ ಕೋಳಿ ಜ್ವರ ಅಂತಾರಲ್ಲ, ಅದೇ ತರ ಅಂತ ಇಟ್ಟುಕೋ. ಆ ಕೋಳಿಗಳನ್ನ ತಿಂದ್ರೆ ಮನುಷ್ಯರಿಗೂ ಬರುತ್ತಂತೆ ಗುನ್ಯಾ. ಹಾಗಾಗಿ ರಿಸ್ಕ್‌ ಯಾಕೆ ಅಂತ ಇನ್ನೊಂದು ತಿಂಗಳು ಚಿಕನ್‌ ತಿನ್ನಬಾರ್ದು ಅಂದ್ಕೊಂಡಿದ್ದೀವಿ." "ಇದ್ಯಾವುದ್ರೋ ಹೊಸ ರೋಗ? ನಾನು ಕೇಳೇ ಇಲ್ಲ....." "ಹೂ ಕಣೋ ನಿನ್ನೆ ಇನ್ನೂ ಕನ್ನಡಪ್ರಭದಲ್ಲಿ ನೋಡಿದೆ. ತುಂಬಾ ಜನ ಚಿಕನ್‌ ತಿಂದು ಸಾಯ್ತಾ ಇದ್ದಾರಂತೆ." ನನ್ನ ಮನಸ್ಸಿನಲ್ಲಿ ಸಣ್ಣ ಅನುಮಾನಗಳಿದ್ದರೂ, ಕೋಳಿಗಳ ಪುಕ್ಕವನ್ನೂ ಬಿಡದೆ ತಿನ್ನಬೇಕು ಎಂದು ನಂಬಿರುವ ಇವರಿಬ್ಬರು ಇನ್ನೊಂದು ತಿಂಗಳು ಕೋಳಿ ತಿನ್ನುವುದಿಲ್ಲ ಎಂದು ಹೇಳುತ್ತಿರುವುದರಿಂದ, ಕೋಳಿಗಳಿಗೆ ಗುನ್ಯಾ ಬಂದಿರುವುದು ನಿಜವೇ ಇರಬೇಕು ಅಂದುಕೊಂಡೆ. "ರೋಗ ಬಂದರೂ ಕ್ರಮ ಕೈಗೊಳ್ಳುವುದಿಲ್ಲ" ಎಂದು ವಿನಾಕಾರಣ ಸರ್ಕಾರಕ್ಕೆ ಬೈದು ನನ್ನ ಸಿಟ್ಟು ಸರ್ಕಾರದ ಮೇಲೆ ತೀರಿಸಿಕೊಂಡೆ.

ಗುನ್ಯಾ ಬಂದ ಕೋಳಿ ತಿನ್ನಿಸಿ ನನ್ನ ಜೀವ ತೆಗೆದು ನನ್ನ ಇನ್ಶೂರೆನ್ಸ್ ಹೊಡೆಯುವ ಅವರಿಬ್ಬರ ಸಂಚಿನ ಬಗ್ಗೆಯೂ ರೇಗಿದೆ. ಯಥಾಪ್ರಕಾರ ಆನಿಯನ್‌ ರಿಂಗ್ಸ್‌ಗೆ ಜೀವ ತೃಪ್ತವಾಗಬೇಕಾಯ್ತು. ಮನೆಗೆ ಬಂದು ಗೂಗಲ್‌ ಮಹಾಶಯರಲ್ಲಿ ಕೋಳಿಗಳಿಗೆ ಬಂದಿರುವ ಗುನ್ಯಾದ ವಿಚಾರ ಹೆಚ್ಚಿನ ಮಾಹಿತಿ ಒದಗಿಸುವಂತೆ ಕೇಳಿಕೊಂಡೆ. ಎಷ್ಟು ವಿಧದಲ್ಲಿ ಕೇಳಿದರೂ ಕೋಳಿಗೂ ಗುನ್ಯಕ್ಕೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ ಗೂಗಲ್‌ ಮಹಾಶಯರು! ಕನ್ನಡಪ್ರಭದಲ್ಲಿಯೇ ನೋಡೋಣ ಎಂದುಕೊಂಡು ಪತ್ರಿಕೆಯ ವೆಬ್‌ಸೈಟ್ ತೆರೆದಾಗ ಮೊದಲ ಸುದ್ದಿಯೇ ಗುನ್ಯಾದ ಬಗ್ಗೆ ಕಣ್ಣಿಗೆ ಬಿತ್ತು. ಒಡನೆಯೇ ನನ್ನ ಸ್ನೇಹಿತರು ಕೋಳಿಗಳಿಗೆ ಗುನ್ಯಾ ಬಂದಿದೆ ಎಂದು ಏಕೆ ಅರ್ಥಮಾಡಿಕೊಂಡರು ಎಂಬುದೂ ತಿಳಿಯಿತು. 'ಚಿಕೂನ್‌ಗುನ್ಯಾ'ವನ್ನು ಚಿಕನ್ ಗುನ್ಯಾ ಮಾಡಿ ಓದಿ ವಿನಾಕಾರಣ ಕೋಳಿಗಳ ಮೇಲೆ ಅಪವಾದ ಹೊರಿಸಿದ ಅವರ ಬುದ್ಧಿವಂತಿಕೆಯ ಬಗ್ಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಈ ವಿಷಯ ಅಮೆರಿಕದ ಕೋಳಿಗಳಿಗೇನಾದರೂ ತಿಳಿದರೆ ಖಂಡಿತ ಅವರಿಬ್ಬರನ್ನು ಕ್ಷಮಿಸುವುದಿಲ್ಲ ಕೋಳಿಗಳು.

ನನಗಂತೂ ಈ ಘಟನೆ ನಡೆದ ನಂತರ ಚಿಕನ್‌ ನೋಡಿದಾಗಲೆಲ್ಲಾ ಯಾವುದೇ ಸಂಬಂಧ ಇಲ್ಲದಿದ್ದರೂ 'ಗುನ್ಯಾ' ರೋಗದ ನೆನಪೇ ಬಂದು ನಾನು ಚಿಕನ್‌ ತಿನ್ನದೇ ಇರುವುದಕ್ಕೆ ಮತ್ತೊಂದು ಕಾರಣದ ಸೇರ್ಪಡೆಯಾಗಿ, ನಾನು ಚಿಕನ್‌ ತಿನ್ನಲು ಪ್ರಾರಂಭಿಸುವ ಕಾರ್ಯಕ್ರಮ ಕನಿಷ್ಟ ಒಂದು ವರ್ಷ ಮುಂದಕ್ಕೆ ಹೋಗಿದೆ!