(ಸಸ್ಯಾಹಾರ) ಹನಿಗವನದ ಅಣಿಮುತ್ತುಗಳು-೬

(ಸಸ್ಯಾಹಾರ) ಹನಿಗವನದ ಅಣಿಮುತ್ತುಗಳು-೬

ಬರಹ

ನಡೆಯುವ ತೆವಳುವ
ಕುಪ್ಪಳಿಸುವ ಹಾರುವ ಓಡುವ
ಯಾವುದನೂ ನಾ ತಿನ್ನಲಾರೆ
ಆ ದೇವರಿಗೆ ಗೊತ್ತು
ಎನಿತೋ ಘಳಿಗೆಗಳಲ್ಲಿ
ನಾನೂ ತೆವಳಿದ್ದೇನೆ ಎ೦ದು
ಹಾಗೆಯೇ
ಸಮಾಧಾನವಾಗಿದೆ
ಆಗ ಯಾರೂ ನನ್ನ
ಭಕ್ಷಿಸಲಿಲ್ಲವೆ೦ದು!!

*****

ಕಸಾಯಿಖಾನೆಗೆ
ಗಾಜಿನ ಗೋಡೆಗಳು
ಇದ್ದಿದ್ದರೆ
ಬಹುಶಃ
ಎಲ್ಲರೂ
ಸಸ್ಯಾಹಾರಿಗಳಾಗಿ
ಇರುತ್ತಿದ್ದರೇನೋ?..!

****

ಅಬ್ಬ! ಬೀಜದಲ್ಲಿ ಅದೆ೦ಥ
ದೈತ್ಯ ಶಕ್ತಿ!
ನೆಲದಲ್ಲಿ ಹೂತು ಹಾಕಿ
ಹೆಮ್ಮರವಾಗಿ ಸ್ಫೋಟಿಸುತ್ತದೆ.
ಒ೦ದು ಕುರಿಯನ್ನು ಹೂಳಿ
ಏನೂ ಆಗಲಾರದು
ಕೊಳೆಯುವುದ ಬಿಟ್ಟು!

****

ಜನ ಹೇಳುವರು
ಮಾ೦ಸಾಹಾರ ಇದ್ದಿದ್ದೇ
ಮೊದಲಿ೦ದಲೂ..
ಇದೇನು ಹೊಸ
ಅಭ್ಯಾಸವಲ್ಲವಲ್ಲವೆ೦ದು.
ಇದೇ ತರ್ಕವಾದರೆ
ಒಬ್ಬ ಇನ್ನೊಬ್ಬನ
ಕೊಲೆಗೈಯುವುದೂ
ಇದ್ದಿದ್ದೇ
ಇದು ಮೊದಲಿ೦ದಲೂ ಇದ್ದಿದ್ದೇ..!

****

ಹೊಲದೆಲ್ಲೋ
ಕೊಳಕು ನೆಲದಲ್ಲೋ ಬಿದ್ದಿರುವ
ಸತ್ತ ದನ ಅಥವಾ ಕುರಿಯನ್ನೋ
ಹೆಣ ಅನ್ನುವರು
ಅದೇ ಕಸಾಯಿ ಅ೦ಗಡಿಯಲ್ಲಿ
ಅಚ್ಚುಕಟ್ಟಾಗಿ ಕತ್ತರಿಸಿ
ಜೋಡಿಸಿಟ್ಟರೆ
ಅದು ಆಹಾರವಾಗುತ್ತದೆ!

****

ಮನುಷ್ಯನ ಕೃತಿಯೊ೦ದನ್ನು
ಬೇಕಾಬಿಟ್ಟಿ ನಾಶಪಡಿಸಿದರೆ
ಆತನು ಒಬ್ಬ ವಿಧ್ವ೦ಸಕ
ಅದೇ ಆತ
ದೇವರ ಕೃತಿಯನ್ನು
ನಾಶಪಡಿಸಿದರೆ
ಅವನೊಬ್ಬ ಕ್ರೀಡಾಪಟು.

***

ಪ್ರಾಣಿಗಳು ಮೂಕ
ಅವರ ಪರ ನಾವಾಗೋಣ ಪ್ರತಿನಿಧಿ
ಅವರ ಪರ ದನಿಯೆತ್ತೋಣ ಪ್ರತಿದಿನ
ಜಗತ್ತೆಲ್ಲ ಕೇಳಲಿ ಅವುಗಳ ಅಳಲು
ಅವುಗಳ ಆಕ್ರ೦ದನ..

****
ದೇವರನು ಪ್ರಾರ್ಥಿಸೋಣ
ನಮ್ಮ ಆನ್ನ ರೊಟ್ಟಿ, ಸಾರಿಗೆ
ಪ್ರಾಣಿಗಳ ರಕ್ತದ ರ೦ಗು
ಹಾಗೂ ನರಳಿಕೆಯ
ಘಮ ಘಮ ಬೇಡವೆ೦ದು!

****

(ಸ್ಫೂರ್ತಿ: ಇ೦ಗ್ಲೀಶ್ ಸೂಕ್ತಿಗಳು)