ಒಂದು ಬುಡುಬುಡಿಕೆ ಪ್ರಸಂಗ

ಒಂದು ಬುಡುಬುಡಿಕೆ ಪ್ರಸಂಗ

ನಿನ್ನೆ ರಂಗಾಯಣದ ಭೂಮಿಗೀತದಲ್ಲಿ ನಾಟಕ ನೋಡಿ ಸುಖಿಸಿದ ಶಶಿಯವರ ಬ್ಲಾಗ್ ಓದಿ ನನಗೆ ಹೊಟ್ಟೆಕಿಚ್ಚಾಯಿತು. ಮೈಸೂರಿನ ಸಾಂಸ್ಕೃತಿಕ ವಾತಾವರಣದಲ್ಲಿ ಸುಖಿಸುವ ನನ್ನ ಹಳೆಯ ಗೆಳೆಯರನ್ನು ಕಂಡರೆ ನನಗೆ ಸ್ವಲ್ಪ ಹೊಟ್ಟೆಕಿಚ್ಚೇ..! ಆದರೆ ಈ ಬ್ಲಾಗ್ ನನ್ನ ಹಳೆಯ ನೆನಪುಗಳ ಕದ ತೆರೆದು ಮುಗುಳುನಗೆ ಮೆರೆಸಿದಾಗ, ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.

ಮೈಸೂರಿನಲ್ಲೇ ನನ್ನ ಪೂರ್ತಿ ವಿದ್ಯಾಭ್ಯಾಸ ನಡೆದದ್ದು. ಶಾಲಾ ಕಾಲೇಜುಗಳಿಂದ ನಾಟಕ ಗಳಿಗೆ ಭಾಗವಹಿಸುತ್ತಿದ್ದ ನಾನು, ಆಗ ಮೈಸೂರಿನ ಪ್ರಸಿದ್ದ ರಂಗಸ್ಥಳಗಳೆಲ್ಲದರ ಮೇಲೂ ನಾಟಕ ಮಾಡಿದ್ದೇನೆಂದು ಹೇಳಿಕೊಳ್ಳಲು ಹೆಮ್ಮೆ. ಟೌನ್ ಹಾಲ್, ವಸ್ತುಪ್ರದರ್ಶನ, ಶಾರದಾವಿಲಾಸ ಕಾಲೇಜು , ಮರಿಮಲ್ಲಪ್ಪ, ಬನುಮಯ್ಯ, ಕಲಾಮಂದಿರ, ಜಗನ್ಮೋಹನ ಸಭಾಂಗಣ, ಜೆ.ಸಿ.ಇ. ಇನ್ನೂ ಹಲವು ನೆನಪಿಲ್ಲ. ಜೊತೆಗೆ ಗಣಪತಿ ಪೆಂಡಾಲ್ ಗಳ ಬಳಿಯೂ ನನ್ನ ಅಭಿನಯ ನಡೆದಿತ್ತು. ಇದರಲ್ಲಿ ಎರಡು ಘಟನೆಗಳು ಮರೆಯಲಾಗದಂತಹವುಗಳು.

ಅದು ಅಂತರ ಕಾಲೇಜು ನಾಟಕ ಸ್ಪರ್ಧೆ. ನೆಳಲು ಬೆಳಕು ಎಂದೇನೋ ಹೆಸರು ಇರಬೇಕು. ಮಹಾಜನ ಕಾಲೇಜಿನ ವಿಧಾರ್ಥಿಯಾಗಿ ನಾವು ಒಂದು ತಂಡ ಕಟ್ಟಿ ಆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆವು. ನಾಟಕದ ಹೆಸರು ನೆನಪಿಲ್ಲ. ಆದರೆ ಶಂಕರ್ ಮುಂದಾಳತ್ವ ವಹಿಸಿದ್ದ. ಪಡುವಾರಹಳ್ಳಿಯ ಗೆಳೆಯ ವಿಜಿ ನಿರ್ದೇಶಕನಾಗಿದ್ದ. ಭೌತಶಾಸ್ತ್ರ ಅಧ್ಯಾಪಕರಾದ ನಂದಕುಮಾರರವರ್ ಒತ್ತಾಸೆ. ಒಂದು ಹುಡುಗಿಯನ್ನು ಮದುವೆಯಾಗಲು ಬರುವ ಮೂವರು ತರುಣರ ಕಥೆ. ಗೆಳೆಯ ಕೃಷ್ಣಕುಮಾರ್ ಕಾಲೇಜು ವಿಧ್ಯಾರ್ಥಿ. ನಾಟಕದ ಹುಚ್ಚಿನ ಅಡಿಗೆಯವನ ಪಾತ್ರದಲ್ಲಿದ್ದ ಗೆಳೆಯನ ಹೆಸರು ನೆನಪಿಲ್ಲ. ಮುಂದೆ ಅವನನ್ನು ಹೆಸರಿಸಬೇಕಾದರೆ ಭೀಮ ಎನ್ನುತ್ತೇನೆ. ನನ್ನದು ಬುಡುಬುಡುಕೆಯವನ ಪಾತ್ರ.

ಈ ನಾಟಕಕ್ಕಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾಗ, ಗೆಳೆಯನ ಬಳಿಯಿಂದ ಕೇಳಿ ತೆಗೆದುಕೊಂಡು ಬಂದ ಸೈಕಲ್ ಕಾಲೇಜಿನ ಬಳಿ ಕಳುವಾಯಿತು . ಅದಕ್ಕಿಂತಲೂ ರೋಚಕ ಸಂಗತಿ ಎಂದರೆ, ನಾಟಕ ದ ಎರಡನೇ ದೃಶ್ಯದಲ್ಲಿ ನನ್ನ ರಂಗ ಪ್ರವೇಶ. ಬುಡುಬುಡುಕಿಯವನಾಗಿ ಅವರದೇ ಶೈಲಿಯಲ್ಲಿ ಏನೋ ಡೈಲಾಗ್ ಹೇಳಿಕೊಂಡು ಸ್ಟೇಜ್ ಮೇಲೆ ಬರಬೇಕು. ಬುಡುಬುಡುಕೆಯವರಂತೆಯೇ ಬುಡುಬುಡುಕೆ ಬಾರಿಸಬೇಕು. ಸಾಕಷ್ಟು ಅಭ್ಯಾಸ ಮಾಡಿದ್ದೆನಾದರೂ, ಶೈಲಿ ಇನ್ನೂ ಸಿದ್ದಿಸಿರಲಿಲ್ಲ. ಅದರಲ್ಲೂ ಅಷ್ಟು ದೊಡ್ಡ ವೇದಿಕೆಯ ಮೇಲೆ ... ಸ್ವಲ್ಪ ಎನೋ ಎಡವಟ್ಟಾಯಿತು. ಜೋರಾಗಿ ಬಾರಿಸಿದ ನನ್ನ ಕೈಯಿಂದ ಬುಡುಬುಡುಕೆ ಹಾರಿ ಹೋಗಿ ಕೆಳಗೆ ಬಿದ್ದುಬಿಟ್ಟಿತು...! ನನಗೆ ರಸಾವೇಷ ಭಂಗ.

ನನಗೆ ನಾಟಕ ಆಡಲು ಕಲಿಸಿದ್ದವರೆಲ್ಲಾ ಸಾಮಾನ್ಯವಾಗಿ ಒಂದೆರಡು ನಿಯಮಗಳನ್ನು ಹೇಳಿರುತ್ತಾರೆ. ಅದರಲ್ಲಿ ಒಂದು ತೀವ್ರವಾದ ಅವಶ್ಯಕತೆ ನಾಟಕದ ಸನ್ನಿವೇಶಗಳಲ್ಲಿ ಒಂದಾಗಿ ಬರದಿದ್ದರೆ ಪ್ರೇಕ್ಷಕರಿಗೆ ಎಂದೂ ಬೆನ್ನು ತೋರಿಸಬಾರದು ಎಂದು ನೆನಪು. ಬುಡುಬುಡುಕೆ ಹಾರಿ ನನ್ನ ಬೆನ್ನ ಹಿಂದೆ ಬಿದ್ದಿದೆ. ನನಗೆ ಒಂದು ಕ್ಷಣ ಏನೂ ತೋಚಲಿಲ್ಲ. ತಕ್ಷಣವೇ ಸಾವರಿಸಿಕೊಂಡೆ. ಮುಂದಿನ ಡೈಲಾಗುಗಳು ಸ್ವಲ್ಪ ಹೆಚ್ಚು ಕಮ್ಮಿ ಕೆಳಗಿನಂತೆ.

"ಜೈ.. ಮಹಾಕಾಳ . ಏನೋ ಬುಡುಬುಡಿಕೆ ನಿನಗೂ ಸ್ವಾತಂತ್ರ ಬೇಕೆಂದು ನನ್ನಿಂದ ದೂರ ಹೋದೆಯಾ..? ನನ್ನ ಶಕ್ತಿ ನಿನಗಿನ್ನೂ ಗೊತ್ತಿಲ್ಲ. ನೋಡೀಗ, ಎಲ್ಲಾ ನೋಡಿ .. ನನ್ನಿಂದ ತಪ್ಪಿಸಿಕೊಳ್ಳುವ ಈ ಬುಡುಬುಡಿಕೆ ತಾನಾಗಿ ನನ್ನ ಕೈ ಸೇರಬೇಕು ಹಾಗೆ ಮಾಡುತ್ತೇನೆ."
(ಏನೋ ಮಂತ್ರ ಹೇಳಿದಂತೆ ನಟಿಸಿ...) ಬಾ ಬಾ .
ಹಾ.. ಬರೋದಿಲ್ಲವಾ ತಾಳು.. ಮಾಡ್ತೀನಿ..
(ಇನ್ನೂ ಜೋರಾಗಿ ಮಂತ್ರ ಹೇಳುತ್ತಾ .. ತಾರಕ ಸ್ವರದಲ್ಲಿ... ) ಬಾ..ಬಾ..ಬಾ...

ಅಯ್ಯೊ .. ಇವತ್ತು ನನ್ನ ಮಂತ್ರ ಯಾಕೆ ಕೆಲಸ ಮಾಡುತ್ತಾ ಇಲ್ಲ. ಹೋ ... ಗೊತ್ತಾಯ್ತು. ಇವತ್ತು ಭಾನುವಾರ.. ನನ್ನ ಮಂತ್ರಶಕ್ತಿಗೆ ಇವತ್ತು ರಜೆ. ನಾನೇ ಹೋಗಿ ಎತ್ಕೋಬೇಕು."

ಹೀಗೆ ಹೇಳುತ್ತಾ ನಾನು ಬುಡುಬುಡುಕೆಯನ್ನೆತ್ತುಕೊಂಡರೆ ಪ್ರೇಕ್ಷಕರಲ್ಲಿ ನಗೆ ಬುಗ್ಗೆ. ಹಾಸ್ಯ ನಾಟಕದಲ್ಲಿ ನನ್ನ ಅಭಾಸ ತನ್ನಂತೆಯೇ ಮರೆಯಾಯ್ತೆಂದೂ ನನಗೂ ಖುಷಿ. ಮುಂದೆ ಭೀಮ ದೊಡ್ಡ ವೇದಿಕೆಯ ಮೇಲೆ ಮರೆತ ಡೈಲಾಗುಗಳನ್ನು ನಾಟಕದಲ್ಲಿ ಸಹಜವೆಂಬಂತೆ ನೆನಪಿಸಿಕೊಡುತ್ತಾ.. ನಾಟಕವನ್ನು ತೇಲಿಸಿದ್ದು. ಮರೆಯದ ಅನುಭವ. ಅದಕ್ಕಿಂತಲೂ ದೊಡ್ಡದೆಂದರೆ ಡೈಲಾಗು ಮರೆತ ಭೀಮನಿಗೆ ಉತ್ತಮನಟ ಪ್ರಶಸ್ತಿ ಬಂದದ್ದು. ಮರುದಿನದ ವಿಮರ್ಶೆಗಳಲ್ಲಿ ನನ್ನ ಪಾತ್ರವನ್ನೂ ಮೆಚ್ಚಿಕೊಂಡು ಬರೆದಿದ್ದರೆನ್ನಿ,

ಈ ನಾಟಕದ ಕತೆ ಇಲ್ಲಿಗೇ ಮುಗಿಯಲಿಲ್ಲ. ಕಾಲೇಜ್ ಡೇ ಗೆ ಇದೇ ನಾಟಕ ಆಡಿಸಲು ನಂದಕುಮಾರ್ ಸರ್ ನಿರ್ಧರಿಸಿ, ಕಾಲೇಜು ರಜೆ ಇದ್ದರಿಂದ ನನ್ನ ಮನೆಗೆ ಶಂಕರ್ ಕೈಯಲ್ಲಿ ಹೇಳಿಕಳಿಸಿದರು. ಅವನು ಮನೆಯ ಪಕ್ಕದ (ಪಡುವಾರಹಳ್ಳಿಯ) ಗೆಳೆಯನೊಬ್ಬನ ಜೊತೆ ನಮ್ಮ ಮನೆಗೆ ಬಂದ. ಅವನೊಂದಿಗೆ ಮಾತಾಡುತ್ತಾ.. "ಅಯ್ಯೋ ಈ ನಾಟಕ ಮಾಡಕ್ಕೆ ಹೋಗಿ ಸೈಕಲ್ ಕಳೆದೋಯ್ತು, ಇನ್ನೇನು ನಾಟಕ ಮಾಡುವುದು " ಅಂದೆ. ಜೊತೆಯಲ್ಲಿದ್ದ ಗೆಳೆಯ " ಯಾವ ಥರಾ ಸೈಕಲ್ಲು.. ಎಲ್ಲಿ ಕಳೆದದ್ದು ?" ಅಂದ. ಅದೇ ಕೆಂಪು ಬೆಂಡ್ ಹ್ಯಾಂಡಲ್ ಸೈಕಲ್. ನಮ್ಮ ರಮೇಶನದು . ಕಾಲೇಜಿನ ಹತ್ತಿರ " ಅಂದೆ . " ಆದೇ ಹೋದ ಭಾನುವಾರ ಕಾಲೇಜಿನ ಫೀಲ್ಡಲ್ಲೇ ನಿಂತಿತ್ತಲ್ಲಾ ಅದಾ ?" ಅಂದ."ಹೂಂ" ಅಂದೆ. "ನಾವೇ ಯಾರೋ ಮರೆತುಹೋಗಿದ್ದಾರೆ ಅಂತ ಎತ್ತಿಟ್ಟಿದ್ದೀವಿ. ನಾಳೆ ಬನ್ನಿ ಕೊಡ್ತೀವಿ" ಅಂದ.

ಈ ಸಂತಸದಲ್ಲಿ ಕಾಲೇಜಿನ ವೇದಿಕೆಯಲ್ಲಿ ನಾಟಕ ಮಾಡಿದೆ. ಅದೇ ಕೊನೆ ಬಾರಿ ನಾನು ನಾಟಕ ಮಾಡಲು ವೇದಿಕೆ ಹತ್ತಿದ್ದು.
(ಇನ್ನೊಂದು ಘಟನೆಯನ್ನು ಮತ್ತೊಮ್ಮೆ ಹೇಳುತ್ತೇನೆ)

Rating
No votes yet

Comments