ಕಲ್ಲುಸಕ್ಕರೆ- ಭಾಗ ಎರಡು

ಕಲ್ಲುಸಕ್ಕರೆ- ಭಾಗ ಎರಡು

ಶ್ರೀ ಕೃಷ್ಣಮಾಚಾರ್ ಅವರ ಲೇಖನದ ಮೊದಲನೇ ಭಾಗವನ್ನು ಸುಮಾರು ಜನ ಓದಿದ್ದೀರಿ . ಮುಂದಲ ಭಾಗ ನಿಮಗೆ ಓದಬೇಕೆನಿಸಿದ್ದರೆ ಇಲ್ಲಿದೆ ......
....ಯಾರೋ ಅಬ್ಬರಿಸಿದಂತಾಯ್ತು . ಹಿಂದೆ ನೋಡಿದೆ. ಓ , ಹೂವಮ್ಮ! ಯಾವನೋ ಎಂಭತ್ತರ ಹರೆಯದ ತರುಣ ತನ್ನ ತೊಡೆಯನ್ನ ಅವಳ ತೋಳಿಗೆ ಉಜ್ಜಿದನಂತೆ. ಘಾಸಿಗೊಂಡ ಹೂವಮ್ಮ ' ಒಸಿ ಇಂದ್ಕೆ ಓಗಲೇ ಓತಿಕ್ಯಾತ ' ಎಂದು ಸುದ್ದಗನ್ನಡದಲ್ಲಿ ಮುತ್ತುದುರಿಸಿದಳು ನೆರೆಯ ಮುದಿ ಹೂವಾಡಗಿತ್ತಿ ದುರದುರನೇ ನೋಡುತ್ತ - 'ಐ , ಅದ್ಯಾಕೆ , ಗಂಡಸ್ರ ಮೈ ತಾಕಾಕಿಲ್ಲ , ಅಂಗ್ ಮುನಿಸ್ಕಂತೀಯಾ ..ಓಹೋಹೋ ನಾ ಕಾಣದ ಗರ್ತಿ ನೀನು '. ಉಷ್ಣಂ ಉಷ್ಣೇನ ಶಾಮ್ಯತೇ , ವಜ್ರಂ ವಜ್ರೇನ ಛಿದ್ಯತೇ.
..... ಬಸ್ಸು ಕಚಕ್ಕನೆ ನಿಂತಿತು. ಮುಂಬದಿಯ ಮುಗುದೆಯರ ಮೂಗು ಜಜ್ಜಿತು. ಚೂಡಿಧಾರಿಣಿಯರ ದಂತಪಂಕ್ತಿ ಕಂಬಕ್ಕೆ ತಾಕಿ ಲಟಲಟ ಎಂದಿತು.
.....ಹಿಂಬದಿಯಲ್ಲಿ 'ಧ್ಯಾನಾವಸ್ಥಿತ ತದ್ಗತೇನ ಮನಸಾ' ಅಗೋಚರದತ್ತ ದಿಟ್ಟಿಸಿ ನೋಡುತ್ತಿದ್ದ ಪ್ರೊಬೇಶನರಿ ಫಾದರ್ ಪಕ್ಕದಲ್ಲಿ ಕುಳ್ಳಿರಿಸಿಕೊಂಡಿದ್ದ ಪರ್ಮನೆಂಟ್ ಸಿಸ್ಟರ್‍‍ಳ ಸುಪುಷ್ಟ ವಕ್ಷಸ್ಥಳಕ್ಕೆ ಗುರಿಯಿಟ್ಟು "ಡೋಂಟ್ ವರಿ .. ಇಟ್ ಈಸ್ ಆಳ್ ಇನ್ ದ ಗೇಮ್ " ಎಂದು ಬಿಸಿಉಸಿರ್ಗರೆದ . ಕಂಬಕ್ಕೆ ಒರಗಿ ನಿಂತ ಮದರ್ ಸೀನಿಯರ್ " ಓ ಕರ್ತನೇ ! forgive them , for they know not what they do' ಎಂದು ತುಟಿಯುದುರಿಸಿದಳು . ಭರ್ತೃಹರಿಯ ನೆನಪಾಯಿತು - ಶಾಲ್ಯನ್ನಂ ...... ವಿಶ್ವಾಮಿತ್ರ ಪರಾಶರಾದಿಗಳಿಗೆ ಮೇನಕೆ ಮತ್ಸ್ಯಗಂಧಿಯರು ಎಡತಾಡಿದಾಗ ಅವರೂ ಹೀಗೇ ಚಡಪಡಿಸಲಿಲ್ಲವೇ ? ಕಾಮ ಒಂದು ಜಾತ್ಯತೀತ ದೌರ್ಬಲ್ಯ. ಕತೆ ಹೀಗೆ ಕಾಡಿಗೋಡುತ್ತಿರಲು ಖಾಲಿ ಸೀಟು ಕಂಡು ಅತ್ತ ಜಿಂಕೆಯಂತೆ ಜಿಗಿದು ಇನ್ನೇನು ನನ್ನ ವಿಪ್ರಪ್ರಷ್ಠವನ್ನು ಪ್ರತಿಷ್ಠಾಪಿಸಬೇಕು ಎನ್ನುವಷ್ಟರಲ್ಲಿ - ಅದು ಲೇಡೀಸ್ ಸೀಟು ಸ್ವಾಮಿ ' ಎಂದೊಬ್ಬರು ಅಸಹನೆಯಿಂದ ಭೋಂಕರಿಸಿದರು. ತನಗೆ ಸಿಗದ ಸವಲತ್ತು ಮತ್ತೊಬ್ಬರಿಗೂ ಸಿಗಬಾರದು.

...ತಲೆಯೆತ್ತಿ ನೋಡಿದರೆ - ಆಹಾ ! ಮಹಾಶ್ವೇತೆ! ಅಪ್ಪಟ ಬಿಳಿ ನೈಲಾನ್ ಬಿಗಿಯುಡುಪಿನಲ್ಲಿ ? ಇವಳು ಮಾತಂಗಿಯಲ್ಲವೆ? ! ಮಹಾಶ್ವೇತೆ ಹೇಗಾದಳು ? ಕವಿ ನಾಗವರ್ಮ ಬರೆದದ್ದೇನು , ಇಲ್ಲಿ ಕಾಣುತ್ತಿರುವದೇನು? - ಸಿದನರಿವೆಂ ಕಮಲಭವಮ್ / ಮೊದಲೊಳ್ ಮಾತಂಗಿಯೆಂದು ತಾ ಮುಟ್ಟದೆ ಮಾಡಿದನಕ್ಕುಂ........( ಒಂದು ಹಳೆಗನ್ನಡ ಪದ್ಯ ಇದೆ ).... ಮಹಾಶ್ವೇತೆ ಮಂದಹಾಸದ ತಿಂಗಳು ಬೆಳಕಿನಲ್ಲಿ ಸುಮನೋಹರ ನೋಟ ಬೀರಿ - ಓಣಂ ಶುಭಾಸನ್ಗಳ್ ಸೋರ್ ಯಾನ್ ಅರಿಯೋ? ಸ್ವರ್ಣಮಾಲ್ಯ ' ಎಂದು ಸುಪರಿಚಿತಳಂತೆ ಉಭಯಕುಶಲೋಪರಿಗೆ ಓನಾಮ ಹಾಡಿದಳು .
ಸ್ವರ್ಣಮಾಲ್ಯ ! ಏನಿದಚ್ಚರಿ ! ಎಲ್ಲೋ ನೋಡಿದ ನೆನಪು . ಓಣಂ ಶುಭ ಕೋರಿದಳೆಂದರೆ ಇವಳು ಮಾತಂಗಿಯಲ್ಲ , ಕೈರಳಿ . ಅವಳು ಕೃಷ್ಣಕನ್ಯೆ. ಇವಳೋ ಪಾರ್ಕಡಲ್ ಕನ್ಯೆ . ರತ್ನನ ಪುಟ್ನಂಜಿಯಂತೆ - ಅಲ್ನಲ್ಕಮಲದ ಊತೇಲ್ಬುಟ್ಟಂಗ್ ಮೇಲೊಂದ್ ತೆಳ್ನೆ ಲೇಪ' ಹಚ್ಚಿದ ಕುಟಿಕುರಾ ಕುಟ್ಟಿ ! ಎಲ್ಲಿ ಕಂಡಿದ್ದೆ ಇವಳ ! ಯಾವ ಜನ್ಮದ ಅನುಬಂಧ! ಭಾವಸ್ಥಿರಾಣಿ ಜನನಾಂತರ ಸೌಹೃದಾನಿ! ಹಗಿದ್ದರೆ ದುಷ್ಯಂತ ಕೈ ಕೊಟ್ಟ ಹಂಸಪದಿಕೆಯೇ ? ಇರಲಾರದು . ಅಥವಾ ಶಕುಂತಲೆಯೇ ? ಇವಳೊಬ್ಬ ಅನಾಘ್ರಾತಪುಷ್ಪವೋ ಅನಾವಿದ್ಧ ರತ್ನವೋ ಇರಬೇಕು. ಅದೂ ಇರಲಾರದೆಂಬ ಗುಮಾನಿ ನನಗೆ . ಪೊರೆ ಬಿಟ್ಟ ಹಾವಿನಂತೆ ಮಿರಮಿರನೆ ಮಿನುಗುತ್ತಿದ್ದಾಳೆ . ಬದುಕಿನ ಎಲ್ಲ ರಂಗುಗಳ ರುಚಿ ಕಂಡವಳಂತೆ ತೋರುತ್ತಿದ್ದಾಳೆ .
'ಸೋರ್ ನೀವು ನಮ್ಮ ನರ್ಸಿಂಗ್ ಹೋಮ್‍ಗೆ ಬಂದದ್ದು ನೆನಪುಂಡೋ ? ಪಕ್ಷೇ ಅದ್ ಒಣ್ ಇಯರ್ ಬ್ಯಾಕ್ .. ಡೆಲಿವರಿಗೆ ... ಎಂದ ಮೌಣಂ?'
'ಹೌದಲ್ಲ! ನರ್ಸಿಂಗ್ ಹೋಮ್‍ಗೆ ಬಂದದ್ದು ಸರಿ ಆದರೆ ಡೆಲಿವರಿ ನನ್ನದಲ್ಲ . ನೆರೆಮನೆ ಎನ್ನಾರೈನ ಮೂರನೇ ಹೆಂಡತಿಯ ನಾಲ್ಕನೇ ಮಗೂದು '.
'ಓಹೋಹೋ ಸೋರ್ ಭಯಂಕರ humorous ಅಕ್ಕುಂ ' ಎಂದು ಆತುರಾತುರವಾಗಿ 'ಸೋರ್ ನೋಕ್ಕೆ .. ಯಾನ್ pregnant.. ಅರಿಯೋ ... 'ಎಂದು ಒಂದು ಪೊಟ್ಟಣ RDX ಸಿಡಿಸಿದಳು.
'ಅರಿಯೋ' ಎಂದರೆ ನಾನೇನು ಅರಿಯಲಿ ? ಮತ್ತೆ 'you should help me' ಎಂದು ನನಗೆ ಮುಗಿಬಿದ್ದಿದ್ದಾಳೆ . ನರ್ಸಿಂಗ್ ಹೋಮ್‍ನಲ್ಲಿ ತರಬೇತಿ ಪಡೆದವಳಿಗೆ ನಾನು ಹೇಳಿಕೊಡಬೇಕೆ? ಆರು ಹೆತ್ತವಳಿಗೆ ಮೂರು ಹೆತ್ತವಳು ಮುಲುಕೋಕ್ಕೆ ಹೇಳಿಕೊಡುವದೆ?
' ಇದು ಅಂದ ಕೇಸು ಅಲ್ಲೆ?'
' ಮತ್ತಾವ ಕೇಸು? ಯಾರ ಮೇಲೆ ಗುಮಾನಿ ಇದೆಯೋ ಅವನ್ನ ಹಿಡಿದು DNA Test ಮಾಡಿಸು ನಾನಂತೂ ಅಲ್ಲ ಈ ಕೇಸು ನನ್ನ ಹತ್ರ ತರಬೇಡ . '
ಮಹಾಶ್ವೇತೆ ನಿಡುಸುಯ್ದಳು. 'ಇದು ರೇಪು ಅಂದ್ರೆ ಪರ್ಫೆಕ್ಟ್ ರೇಪಲ್ಲ, ಸೋರ್ ರೇಪ್ ಕದೇಮಿ ? ಐತೆ ನೇನು ರೇಪು ಸೂಸ್ಕೊಂಟಾನು ಮೀನಾಕ್ಷಿ ವಚ್ಚುಂದಿ , ದಿಗಿತ್ನಾ' ಅಂದೆನ್ನುತ್ತ ಎದ್ದವನನ್ನು ತನ್ನ ಭದ್ರ ಭಾಹುಗಳಿಂದ ಸುಭದ್ರವಾಗಿ ಕೂಡಿಸಿ ಬಿಟ್ಟ ಬಾಯಿಗೆ ಬಿಸಲೇರಿ ಹೊಯ್ದು , ಮುಖ್ಯ ಪ್ರಾಣ ದೇವರಂತೆ ಅವಿಲಂಬಿತವಾಗಿಯೂ ಅದ್ರುತವಾಗಿಯೂ ಚಿತ್ತಾಪಹರಕ ದನಿಯಲಿ ಮೋಹಕ ಮಲೆಯಾಳಂನಲ್ಲಿ ಬಿನ್ನವಿಸಿದ್ದನ್ನು ನಾನು ಕರಾವಳಿಯ ನೀರಿನಂತಹ ತಿಳಿಗನ್ನಡದಲ್ಲಿ ತಿಳಿಯಪಡಿಸುವದು ಏನೆಂದರೆ ....

... ಇಂತಪ್ಪ ಸಮಯದೋಳ್ ಗತ ಆಷಾಢ ಶುಕ್ಲ ತೃತೀಯ ( ಅಥವಾ ಪೌರ್ಣಮಿಯೋ ನೆನಪಿಲ್ಲ , ಯಾಕೆಂದರೆ ಇಂಥ ಅಕೃತ್ಯಗಳು ನಡೆಯುವದು ಅಮಾವಾಸ್ಯೆ ಪೌರ್ಣಮಿಗಳಲ್ಲಿ ) ಗಡ್ಡಧಾರೀ ಸ್ವಾಮೀಜಿಯೊಬ್ಬರು - ಯಾರೋ ಮದನ ಕಾಮೇಶ್ವರ ಭಾರತಿಯಂತೆ ( ಭಾರತಿಯೋ ಸರಸ್ವತಿಯೋ ನೆನಪಿಲ್ಲ . ಒಟ್ಟು ಉಪ್ಪು ಹುಳಿ ಖಾರ ತಿಂಬ ಯತಿ) ನರ್ಸಿಂಗ್ ಹೋಮ್ ನ ಬಾಗಿಲನ್ನು ಬಡೆದರು .ಜತೆಯಲ್ಲಿ ಅವಕುಂಠನ ಧರಿಸಿದ್ದ ಸುರಾಂಗನೆಯೊಬ್ಬಳನ್ನು ಕರೆತಂದಿದ್ದರು . ' ಮುಸುಕು ತೆರೆಯೇ ಮಾಯಾಂಗನೆ' ಎಂದು ಸ್ವಾಮೀಜಿ ಅಪ್ಪಣೆ ಕೊಡಿಸಲು ಅಕೆ ಅವರ ಆಂತರಂಗಿಕ ವಲಯಕ್ಕೆ ಸೇರಿದ ಮಾಜಿ ಅಭಿನೇತ್ರಿಯಾಗಿದ್ದಳು . ಅವಳು ತಂಗಿದ್ದ ಅವಧಿಯಲ್ಲಿ ಸ್ವರ್ಣಮಾಲೆ ಸ್ವಾಮೀಜಿಯ ಬೌದ್ಧಿಕ ಪ್ರಭಾವಲಯಕ್ಕೆ ಸಿಕ್ಕು ತತ್ತರಿಸ್ದಳು . ತನಗೆ 'Art of living' ನಲ್ಲಿ ಆಸಕ್ತಿ ಇದೆ ಎಂದುದನ್ನು ಸ್ವಾಮೀಜಿ 'Art of loving' ಎಂದು ತಪ್ಪಾಗಿ ಕೇಳಿಸಿಕೊಂಡು ' ನಕುರು ನಿತಂಬಿನಿ ಶಯನ ವಿಲಂಬನಂ' ಎಂದು ಬರಸೆಳೆದರಂತೆ.
ಅದ್ವೈತಿಗಳ ನಾಡಿನಿಂದ ಬಂದವಳಲ್ಲವೇ ? ದ್ವೈತಕ್ಕೆ ಎಡೆಯೆಲ್ಲಿ ? ' ಗೀತಾಚಾರ್ಯಂಗೆ ಸೋತು ಅದ್ವೈತಮಂ ಸಾಧಿಸಿರ್ದಳ್ '
ಸ್ವಾಮೀಜಿ ಬಂದಾಗಲೆಲ್ಲ ಕಾಳಿದಾಸ , ಜಗನ್ನಾಥ ಪಂಡಿತ , ಜಯದೇವ ,ಜನ್ನ ಎಂದೆಲ್ಲ ಶಸ್ತ್ರಾಸ್ತ್ರಗಳನ್ನು ಪುಂಖಾನುಪುಂಖವಾಗಿ ಪ್ರಯೋಗಿಸುವ ಯತಿವರ್ಯರ ಕೈಚಳಕವನ್ನೇನೆಂದು ಹೇಳಲಿ ? ಭಾಷೆ ಭಾವನೆಗಳ ಸಂವಹನ ಮಾಧ್ಯಮ ಖರೆ. ಆದರೆ ಅದು ಸಜ್ಜೆ ಮನೆಗೆ ದಾರಿಯೂ ಹೌದೆ ?
ಯತಿವರ್ಯರು ಇರುವಲ್ಲಿಗೆ ಕರೆದೊಯ್ದು ಅವರಿಗೆ ಗ್ರಹಸ್ಥಾಶ್ರಮ ದೀಕ್ಷೆ ಕೊಡಿಸಿರೆಂದು ನನಗೆ ಸ್ವರ್ಣಮಾಲ್ಯ ದುಂಬಾಲು ಬಿದ್ದಿದ್ದಾಳೆ . ನಾನು ಕಣ್ವ ಋಷಿ , ಶಾರ್ಙರವನೆಂತಾದೇನು!

--- ಉಶ್ಶಪ್ಪಾ ಸುಸ್ತಾಯಿತು , ಇಷ್ಟೆಲ್ಲ ಟಾಯಿಪು ಮಾಡಲಿಕ್ಕೆ . ಇಲ್ಲಿವರೆಗೆ ಒಬ್ಬರಾದರೂ ಓದಿ , ಸಂತೋಷಪಟ್ಟಿದ್ದರೆ ನನ್ನ ಶ್ರಮ ಸಾರ್ಥಕವಾಯಿತು .
ಎಷ್ಟೊಂದು ಶ್ರೀಮಂತವಾಗಿ ಬರೆದಿದ್ದಾರಲ್ಲವೆ ? ಹಳೆಗನ್ನಡ ,ಸುದ್ದಗನ್ನಡ(!),ಪ್ರಾಕೃತ(!) , ಸಂಸ್ಕೃತ ,ಇಂಗ್ಲೀಷು , ಉರ್ದು ಭಾಷೆಯನ್ನು ಉಪಯೋಗಿಸಿ , ಕಣ್ಣನ್, ಅಡಿಗ, ಜಯದೇವ , ರಾಘವಾಂಕ , ಕಣ್ವ ,ಶಾರ್ಙರವರನ್ನು ಒಟ್ಟುಮಾಡಿ ತುಂಬ ಸುಂದರವಾಗಿ ಬರೆದಿದ್ದಾರೆ . ಶ್ರೀ ಕೃಷ್ಣಮಾಚಾರ್ ಅವರಿಗೆ ನಮೋನ್ನಮ: ಅವರ ಇನ್ನಷ್ಟು ಬರಹಗಳನ್ನು ಓದುವ ಭಾಗ್ಯ ನಮಗಿರಲಿ.( ಹಿಂದೆ ಅರಾಸೇ ಅವರೂ ಈ ತರಹ ಬರೆಯುತ್ತಿದ್ದರು ಎಂದು ಇಲ್ಲಿ ಮತ್ತೆ ಹೇಳದೆ ಇರಲಾರೆ. ಅವರ ಲೇಖನಗಳನ್ನು ಓದಿದವರೇ ಭಾಗ್ಯವಂತರು. )

ಈಗ ನಾನು ಒಂದು ವಿಷಯವನ್ನು ತಮ್ಮ ಗಮನಕ್ಕೆ ತರಬಯಸುವದೇನೆಂದರೆ . ಇಲ್ಲಿ ಎಷ್ಟೋ ಬಾಹ್ಯ ವಿಷಯಗಳಿವೆ . ಕಣ್ಣನ್, ಅಡಿಗ, ಜಯದೇವ , ರಾಘವಾಂಕ , ಕಣ್ವ ,ಶಾರ್ಙರವರನ್ನುಅರಿಯದವರು ' 'ಮುಸುಕು ತೆಗೆಯೇ ಮಾಯಾಂಗನೆ'ಯನ್ನು ಅರಿಯದವರು ಇದನ್ನೆಲ್ಲ ಸಂಪೂರ್ಣವಾಗಿ ಅರ್ಥೈಸಿಕೊಂಡು ಸುಖಿಸಲಾರರಲ್ಲವೆ? ಅದಕ್ಕೆ ನಾನು ಹಿಂದಿನ ಬ್ಲಾಗಿನಲ್ಲಿ ಬರೆದೆ . ಹೆಚ್ಚಿನ ಓದಿನಿಂದ ಬರುವ ತಿಳಿವಿನ ವಿಸ್ತಾರ ಹೆಚ್ಚಿನ ಸುಖ ನೀಡುವುದೆಂದು.

ಕಲ್ಲು ಸಕ್ಕರೆ ಸವಿ 'ಬಲ್ಲವರೇ' ಬಲ್ಲರು!

Rating
No votes yet