ಬೇಂದ್ರೆಯವರ ಸಖೀಗೀತ

ಬೇಂದ್ರೆಯವರ ಸಖೀಗೀತ

ಬೇಂದ್ರೆಯವರ ಸಖೀ ಗೀತ ಕನ್ನಡದ ಅತ್ಯುತ್ತಮ ಕವಿತೆಗಳಲ್ಲಿ ಒಂದು. ಇದರಲ್ಲಿ ನಲವತ್ತು ಭಾಗಗಳಿವೆ. ಒಂದೊಂದು ಭಾಗದಲ್ಲೂ ಆರು ಸ್ಟಾಂಜಾಗಳಿವೆ. ಗಂಭೀರವಾದ ಕಾವ್ಯಾಸಕ್ತರಿಗೆ ಇಷ್ಟವಾಗಬಹುದೆಂದು ಇತ್ತೀಚೆಗೆ ಅದನ್ನು ನಾನು ಓದಿಕೊಂಡ ರೀತಿಯನ್ನು ವಿವರಿಸುವ ಪ್ರಯತ್ನ ಮಾಡಿದ್ದೇನೆ. ಇಲ್ಲಿ ಮೊದಲನೆಯ ಭಾಗ ಕುರಿತ ವ್ಯಾಖ್ಯಾನ ಇದೆ. ನಿಮ್ಮ ಮನಸ್ಸಿನ ನುಡಿಗಳು ಉಳಿದ ಭಾಗವನ್ನೂ ಹೀಗೇ ಬರೆಯುವುದಕ್ಕೆ ಅವಕಾಶ ಮಾಡಿಕೊಟ್ಟಾವು.

೧೯೩೬
ಸಖಿ! ನಮ್ಮ ಸಖ್ಯದ ಆಖ್ಯಾನ ಕಟು-ಮಧುರ
ವ್ಯಾಖ್ಯಾನದೊಡಗೂಡಿ ವಿವರಿಸಲೇ
ಕರುಳಿನ ತೊಡಕನು ಕುಸುರಾಗಿ ಬಿಡಿಸಿಟ್ಟು
ತೊಡವಾಗಿ ತಿರುಗೊಮ್ಮೆ ನಾ ಧರಿಸಲೇ

ಸಖಿಯನ್ನು ಉದ್ದೇಶಿಸಿ ಹೇಳುವ ಮಾತು. ತಾನು ಹೇಳುತ್ತಿರುವ, ಹೇಳಲಿರುವ ಮಾತುಗಳಿಗೆ ಅನುಮತಿ ಕೋರುವ ದನಿಯೂ ಇದೆ. ಕವಿಯ ಸಖಿಯ ಗೆಳೆತನವಿದೆಯಲ್ಲ ಅದು ಕೇವಲ ಸಿಹಿಯಾದದ್ದೂ ಅಲ್ಲ, ಕಟುವಾದದ್ದೂ ಅಲ್ಲ. ಕಟು-ಮಧುರ ಎರಡೂ ರುಚಿ ಬೇರ್ಪಡದಂತೆ ಬೆರೆತು ಬೇರೆಯದೇ ರುಚಿ ಆಗಿರುವಂಥದ್ದು. ಆ ಸಖ್ಯವನ್ನು ಕುರಿತು ಹೇಳಿಕೊಳ್ಳುವುದೆಂದರೆ ಸಖ್ಯಕ್ಕೆ ಅರ್ಥವನ್ನು ನೀಡುವ ಕೆಲಸ, ವ್ಯಾಖ್ಯಾನವನ್ನು ರೂಪಿಸುವ, ವಿವರಿಸುವ ಕೆಲಸ. ಹೇಳಿಕೊಳ್ಳುತ್ತಿರುವುದು ಸಖಿಗೇ ಆದರೂ, ಆಕೆಯೂ ಸಖ್ಯದ ಒಂದಂಶವೇ ಆದರೂ ನಾನು ವ್ಯಾಖ್ಯಾನಿಸಿ ವಿವರಿಸಿಕೊಂಡಂತೆ ಆಕೆ ಮಾಡಿಕೊಂಡಿರಲಾರಳೋ ಏನೋ. ನಾನು ಕಂಡದ್ದು ಹೀಗೆ, ನಾನು ಅರ್ಥಮಾಡಿಕೊಂಡದ್ದು ಹೀಗೆ. ಅವಳ ವ್ಯಾಖ್ಯಾನ ಬೇರೆಯೇ ಇದ್ದೀತು. ಸಖಿ ಈಗ ನನ್ನ ಕತೆಯ ಕೇಳುಗಳು. ಅಥವಾ ಹೀಗೆ ವ್ಯಾಖ್ಯಾನ ಮಾಡಿ ಬರೆದುಕೊಳ್ಳುವುದೆಂದರೆ ಅದನ್ನು ಬೇರೆಯವರೂ ಓದಿಯಾರಲ್ಲ. ನಮ್ಮ ಕತೆಯನ್ನು ಲೋಕಕ್ಕೆ ಹೇಳಲು ನನ್ನ ಇನ್ನೊಂದು ಭಾಗವಾಗಿರುವ ಸಖಿಯ ಅನುಮತಿಯೂ ಬೇಕು. ಅಥವಾ ಇವೆರಡೂ ಕಾರಣವಲ್ಲ. ಸಖ್ಯದ ಆಖ್ಯಾನವನ್ನು ನಿರೂಪಿಸುತ್ತಿರುವುದು ನಮ್ಮಿಬ್ಬರ ಕರುಳಿನ ತೊಡಕನ್ನು (ತೊಡಕು ಎಂದರೆ ತೊಡಗಿಕೊಳ್ಳುವ ಸಂಬಂಧ, ಮತ್ತು ಸಮಸ್ಯೆಯಾಗುವಂಥ ಬಂಧನ ಎರಡೂ ಆದೀತು) ಕುಸುರಾಗಿ, ಕೌಶಲಪೂರ್ಣವಾಗಿ ಬಿಡಿಸಿದುವುದು ನನಗೇ ತೊಡುಗೆ ಮಾಡಿಕೊಳ್ಳುವುದಕ್ಕೆ. ನಾನು ಹೇಳುವ, ಹೇಳಿಕೊಳ್ಳುವ ಕತೆಯ ಮೂಲಕ ನಾನೇ ನನ್ನನ್ನು ರೂಪಿಸಿಕೊಳ್ಳುತ್ತೇನೆ ಅನ್ನುವ ಭಾವವೂ ಇದೆ.

ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿವೆ

ಕತೆ ಮತ್ತು ವ್ಯಾಖ್ಯಾನ ಎರಡೂ ನೆನಪಿನಲ್ಲಿ ಬೇರು ಬಿಟ್ಟ ಸಂಗತಿಗಳಲ್ಲವೆ? ಆ ನೆನಪು ಸಾವಿರ, ಲಕ್ಷ ಇದ್ದರೂ ಇರುಳು-ರೆಗಳಂತೆ, ನೆನಪಿನ ಬೆಳಕು ಮಾತ್ರ ಒಂದೇ, ಲಕ್ಷ ನಕ್ಷತ್ರಗಳ ಮಬ್ಬು ಬೆಳಕೆಲ್ಲ ಒಂದೇ ಇರುವಂತೆ. ದುಃಖ ಈಗ ಕಳೆದುಹೋಗಿದೆ. ಆದರೂ ಈಗ ಅವನ್ನೆಲ್ಲ ನೆನೆದಂತೆಯೇ ಪಟ್ಟ ಪಾಡು, ದುಃಖದ ಸ್ಥಿತಿ, ಇದೇ ಈಗ ಹುಟ್ಟಿದ ಹೊಸ ಕೂಸಿನಂಥ, ಹುಟ್ಟು-ಹಾಡಾಗಿ, (ಹುಟ್ಟುವ ಹಾಡು, ನನ್ನನ್ನು ಹುಟ್ಟಿಸುವ ಹಾಡು, ನೆನಪಿನಲ್ಲಿ ದುಃಖ ರಸವಾಗಿ ಹುಟ್ಟುವ ಹಾಡು, ಹಳೆಯದೆಲ್ಲ ಹೊಸದಾಗುವ ಹಾಡು...) ರಸವಾಗಿ ಹರಿಯುತಿದೆ.


ಗಂಗೆ ಸಾಗರಬಿದ್ದು ಸಾಗರವನಪ್ಪುತ
ಅರೆಬೆರೆತ ನೆರೆಬೆರೆತ ತಾಣದೊಲು
ಸುಖದುಃಖ ಸಂಗಮವಾದ ಹೃದ್ರಂಗವು
ಪಾವನವೆಂಬೆನು ಯಾವಾಗಲು

ಹಿಂದಿನ ಸ್ಟಾಂಜಾದ “ಹರಿ” ಎಂಬ ಮಾತು ನದಿ ಮತ್ತು ಸಮುದ್ರಗಳ ಸಂಗಮದ ರೂಪಕವನ್ನು ಹುಟ್ಟಿಸಿದೆ. ನೆನಪು ನದಿ ಜೀವನ ಸಮುದ್ರವನ್ನು ಬೆರೆಯುವ ಚಿತ್ರ ಮೂಡಿದೆ. ನೆನಪು ವ್ಯಕ್ತಿಯದು, ಸಮುದ್ರ ಅಸಂಖ್ಯ ಜೀವರಾಶಿಯ, ಬಿಡಿನೆನಪುಗಳೆಲ್ಲ ಇಲ್ಲವಾಗಿರುವ, ಹಾಗೆಯೇ ನದಿಯಮೂಲವೂ ಅಗಿರುವ ಕಲ್ಪನೆ. ನದಿ ಕಡಲುಗಳ ಸಂಗಮ ವಾಸ್ತವವಾಗಿರುವಂತೆಯೇ ನೆನಪುಗಳೆಲ್ಲ ಹುಟ್ಟಿ ಲಯವಾಗುವ ಹೃದಯದ ರೂಪಕವೂ ಆಗಿದೆ. ಸುಖ ದುಃಖಗಳ ಸಂಗಮವಾಗಿರುವ ಹೃದಯ-ರಂಗ ಸದಾ ಪಾವನ, ಸದಾ ಪವಿತ್ರ. ಸಮುದ್ರ ನದಿಗಳ ಮಿಲನವಾದ್ದರಿಂದಲೇ ಕಟು-ಮಧುರ. ನದಿಗೆ ಕಡಲನ್ನು ಸೇರುವ ತವಕ. ಅದಕ್ಕೇ ಸಾಗರಬೀಳುತ್ತಿದೆ. ಸಾಗರಕ್ಕೆ ಬೀಳುತ್ತಿದೆ, ಆರ್ಭಟಿಸಿ, ಮೊರೆದು, ಧಾವಂತಪಟ್ಟು, ಸೇರುತ್ತಿದೆ. ನದಿ ಕಡಲು ಸೇರುವ ಜಾಗವಿದೆಯಲ್ಲ ಅಲ್ಲಿ ಅಷ್ಟಿಷ್ಟು ಬೆರೆತು, ಎರಡು ಪ್ರವಾಹದಾತುರಗಳೂ ಸೇರಿ, ಸಮುದ್ರ ನದಿಯನ್ನು ಹಿಂದೆ ನೂಕುತ್ತ, ನದಿ ಕಡಲೊಳಕ್ಕೆ ಧುಮ್ಮಿಕ್ಕುತ್ತ, ಪ್ರವಾಹ (ನೆರೆ) ಸಂಧಿ ಇದೆಯಲ್ಲ, ಅದು ಇರುವುದು ಹೃದಯದಲ್ಲೆ. ಹಿರಿದು ಕಿರಿದು, ಸುಖ ದುಃಖಗಳು ಕೂಡುವ ಈ ತಾಣ ಸದಾ ಪವಿತ್ರವೇ


ಬಾ ಅಲ್ಲಿ ಕಡಲಲ್ಲಿ ತೆರೆ ತೆರೆಯನೊಡೆವಲ್ಲಿ
ನೀರ್ ಬುರುಗು ಬಿಡುವಲ್ಲಿ ಮೀಯೋಣ ಬಾ
ತೆಪ್ಪವೊ ತಾರಿಯೊ ಹರಗೋಲೊ ಹಡಗವೊ
ತೆರೆ-ತೊಡೆ-ತೊಟ್ಟಿಲನೇರೋಣ ಬಾ

ಕಡಲ ತೆರೆ ನದಿಯ ತೆರೆಯನ್ನು, ನದಿಯ ತೆರೆ ಕಡಲ ತೆರೆಯನ್ನು ಒಡೆಯುತ್ತ, ಸೇರುತ್ತ, ನೊರೆಗರೆಯುತ್ತ ಇರುವಲ್ಲಿ ಮೀಯೋಣ. ಆದರೆ ನದಿ ಕಡಲು ಸೇರುವ ಬಿಂದು ಮುಟ್ಟುವುದಕ್ಕೆ ಸಹಾಯವೊಂದು ಬೇಕು. ತೆಪ್ಪವೊ, ದೋಣಿಯೊ, ಹಡಗೋ ಏನಾದರೊಂದು. ವ್ಯಕ್ತಿ ಎಂಬ ನದಿ, ಬಾಳು ಎಂಬ ಕಡಲು ಸಂಧಿಸುವ ಹೃದ್ರಂಗದ ಸ್ಥಾನಕ್ಕೆ ತಲುಪಲು ಕರುಳ ತೊಡಕನ್ನೆ ಕುಸುರಿಯಾಗಿ, ಕಲೆಯಾಗಿ, ಕಥೆಯಾಗಿ ಬಿಡಿಸಿಟ್ಟ ವ್ಯಾಖ್ಯಾನವೇ ಅಂಥ ತೆಪ್ಪ. ಈ ತಾಣವೋ ತೆರೆ ಎಂಬ ತೊಡೆ ತೊಟ್ಟಿಲು. ಕರುಳ ತೊಡಕನ್ನು ಕಥೆ ಮಾಡಿಕೊಳ್ಳುವುದು ಸುಲಭವೇ? ತೆರೆದುಕೊಳ್ಳಬೇಕು, ಸಂಕೋಚ ನಾಚಿಕೆಗಳು ಇಲ್ಲದಂತೆ. ಆಗ ಹೃದ್ರಂಗದ ತರಂಗ ತೊಡೆಯಾಗಿ ಕಾಪಾಡೀತು, ತೊಟ್ಟಿಲಾಗಿ ಸಲಹೀತು. ತೆರೆಯಲ್ಲೂ ತೊಟ್ಟಿಲಲ್ಲೂ ಒಂದಿಷ್ಟಾದರೂ ತೊನೆದಾಟ ಇದ್ದೇ ಇರುತ್ತದಲ್ಲ! ಆದರೆ ಅದು ಸಹನೀಯ. ಪಟ್ಟಪಾಡೆಲ್ಲ ಹೊಸ ಹಾಡಾಗಿ ಹುಟ್ಟು ಪಡೆಯುವುದೆಂದರೆ ಹೇಳಿಕೊಳ್ಳುವ ಮೂಲಕವೇ ಮತ್ತೆ ಮಗುವಾಗುವುದೂ ಇದ್ದೀತು. ಕಥೆ ಅಥವ ಹಾಡಿನ ಕಲೆ ಮತ್ತೆ ಮಗುವಾಗುವುದನ್ನು ಕಲಿಸಬೇಕಲ್ಲವೆ. ಹೃದ್ರಂಗದಲ್ಲಿ ಮಕ್ಕಳಾಗಿ ಮತ್ತೆ ಶಕ್ತಿ ಪಡೆಯಬೇಕು. ಯಾಕೆಂದು ಮುಂದಿನ ಪದ್ಯ.


ಸಪ್ಪೆ ಬಾಳುವೆಗಿಂತ ಉಪ್ಪು ನೀರೂ ಲೇಸು
ಬಿಚ್ಚು ಸ್ಮೃತಿಗಳ ಹಾಯಿ ಬೀಸೋಣ ಬಾ
ಬೀಸೋಣ ಈಸೋಣ ತೇಲೋಣ ಮುತ್ತಿನ
ತವರ್ಮನೆ ಮುಟ್ಟನು ಮುಳುಗೋಣ ಬಾ

ಆತಂಕಗಳಿಲ್ಲದ, ಸುರಕ್ಷಿತ, ಸುಭದ್ರ ಬಾಳುವೆಗಿಂತ ರಿಸ್ಕು ತೆಗೆದುಕೊಳ್ಳುವ, ಆ ರಿಸ್ಕು ಉಪ್ಪುನೀರಿನಷ್ಟು ಅರುಚಿಯಾಗಿದ್ದರೂ, ಬಾಳು ವಾಸಿ ಅನ್ನಿಸುತ್ತಿದೆ. ಹೇಗಿದ್ದರೂ ಎಲ್ಲ ಆಗಿ ಹೋಗಿದೆಯಲ್ಲ. ಈಗ ನೆನಪುಗಳನ್ನು ಬಿಚ್ಚಿಕೊಳ್ಳಬೇಕು. ಬಿಚ್ಚಿಕೊಂಡ ನೆನಪುಗಳೇ ದೋಣಿಯನ್ನು ಮುಂದೆಸಾಗಿಸುವ ಹಾಯಿಪಟ. ಬಿಚ್ಚುವುದೆಂದರೆ ಎಷ್ಟೋ ಅಷ್ಟೂ ಹರಡಿಕೊಳ್ಳುವುದು. ಹಾಯಿಯನ್ನು ಬಿಚ್ಚುವುದು ನಾವಿಕರಿಗೆ ಸುಲಭವಿರುವಹಾಗೆ ನೆನಪುಗಳನ್ನು ಬಿಚ್ಚಿಕೊಳ್ಳುವುದು ವ್ಯಕ್ತಿ ಮನಸಿಗೆ ಸುಲಭವಲ್ಲ. ಮನಸಿನ ತುಂಬ ಬಿಗಿಯಾಗಿ ಕಟ್ಟಿಟ್ಟ ನೆನಪುಗಳೇ. ಧೈರ್ಯಮಾಡಿ ಕಟ್ಟುಗಳನ್ನೆಲ್ಲ ಬಿಚ್ಚಿದರೆ ಹಾಯಿ, ಹಾಯಿಸುವ ಹಾಯಿ, ಹಾಯ್ ಅನ್ನಿಸುವ ನಿರಾಳ. ಹಾಗೆ ಇನ್ನಷ್ಟು ಆಳದ ತಾವಿಗೆ ಹೋಗಿ ಮುತ್ತಿನ ತವರ್ಮನೆಯನ್ನು ಮುಟ್ಟಲು ಸಾಗರ ತಳಕ್ಕೆ ಮುಳುಗಿ ನೋಡಬೇಕು.
(ಹೀಗೆ ಬರೆಯುತ್ತಿರುವಾಗ ಸಮುದ್ರ ಮೈದೆರೆದರೆ ಮುತ್ತು ರತ್ನಗಳು ಕಾಣಬಹುದು ಎಂಬ ವಚನ ಮತ್ತು “ಒಂದೊಂದು ಕವನವೂ ಭರವಸೆಯ ವ್ಯವಸಾಯ, ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ” ಎಂಬ ಸಾಲುಗಳು, ರಾಮಚಂದ್ರ ಶರ್ಮರದು, ನೆನಪಾಗುತ್ತಿವೆ. )


ತಾಂಡವ ನಡೆಸಿದ ಝಂಝಾವಾತದ
ಕಾಲಿನ ಹುಲುಗೆಜ್ಜೆ ನಾವಾಗಿರೆ
ನನಗೂ ನಿನಗೂ ಅಂಟಿದ ನಂಟಿನ
ಕೊನೆ ಬಲ್ಲವರಾರು ಕಾಮಾಕ್ಷಿಯೇ!

ವ್ಯಕ್ತಿಯಾಗಿ ನನ್ನ ಬಾಳು ಎಷ್ಟೇ ಸಮೃದ್ಧವೆಂದುಕೊಂಡರೂ, ನೆನಪುಗಳು ಎಷ್ಟೇ ಶ್ರೀಮಂತವೆಂದುಕೊಂಡರೂ, ಮನುಷ್ಯರಾಗಿ ನಾವು ಕಾಲನ ಕಾಲ ಗೆಜ್ಜೆಯ ಯಃಕಶ್ಚಿತ್ ಮಣಿಗಳು. ಕಾಲ ನಡೆಸಿರುವುದು ಬರಿಯ ಲಾಸ್ಯ ಭರಿತ ನರ್ತನವಲ್ಲ ತಾಂಡವ. ಅದೋ ಝಂಝಾವಾತದ ಆರ್ಭಟ. ಈ ಕಾಲ ತಾಂಡವದ ಆರ್ಭಟದಲ್ಲಿ ಗೆಜ್ಜೆಯ ಸದ್ದು ಕೇಳಿತು ಹೇಗೆ? ಅದಕ್ಕೇ ಅದು ಹುಲು ಗೆಜ್ಜೆ. (ಕೊಂಚ ತಪ್ಪಾಗಿ ಓದಿಕೊಂಡರೂ ಝಂಝಾವಾತಕ್ಕೆ ಸಿಕ್ಕಿ ಹಾರಿ ಹೋಗುವ ಹುಲ್ಲು ಗೆಜ್ಜೆ ಆದರೂ ಆದೀತು!) ಆದರೂ ಕಾಲಪುರುಷನಿಗೆ ಕುಣಿಯಲು ಗೆಜ್ಜೆ ಬೇಕು. ವ್ಯಕ್ತಿ ಇಲ್ಲದೆ ಕಾಲಕ್ಕೆಲ್ಲಿ ಅಸ್ತಿತ್ವ? ವ್ಯಕ್ತಿಯ, ಸಮೂಹದ ನೆನಪುಗಳಿಲ್ಲದೆ ಕಾಲ ಎಂಬುದಕ್ಕೇನು ಅರ್ಥ? ಹೇಗೊ ಒಂದಾದೆವು. ಅಂಟಿನ ನಂಟು. ನೀನು ಕಾಮಾಕ್ಷಿ. ಕಾಮನೆ ಹುಟ್ಟಿಸುವಂಥ ಕಣ್ಣವಳು. ಕಾಮನೆಯ ನೋಟ ಕೊಟ್ಟವಳು. ಕಾಮಾಕ್ಷಿ ದೇವಿ. ಒಟ್ಟಿಗೆ ಒಂದಷ್ಟು ದೂರ ಸಾಗಿ, ಸಾಗುವಾಗ ಆಗಿದ್ದೆಲ್ಲ ಹೇಳಿಕೊಂಡರೂ ಹಾಗೆ ಹೇಳಿಕೊಂಡಷ್ಟಕ್ಕೇ ಈ ನಂಟು ಮುಗಿಯದು. ಕಡಲ ಆಳಕ್ಕೆ ಧುಮುಕಿ ಮುತ್ತು ಅಕಸ್ಮಾತ್ ಸಿಕ್ಕರೂ ಮತ್ತೆ ನೆಲ ಮುಟ್ಟಿ ದಿನ ದಿನದ ಬದುಕು ಸಾಗಿಸಬೇಕಲ್ಲ. ಅಂಟಿದ ನಂಟು ಹೇಗೆ ಕೊನೆಗಂಡೀತೋ ಬಲ್ಲವರು ಯಾರು? ನಾನಗೂ ತಿಳಿಯದು, ನಿನಗೂ ತಿಳಿಯದು. ಕಾಲ ಎಂಬಾತನಿದ್ದರೆ ಅವನಿಗೆ ತಿಳಿದಿರಬಹುದೊ? ಗೆಜ್ಜೆ ಬಿಚ್ಚಿ ಎಸೆದಾನೋ ಎಂದು?
ಈ ಇಡೀ ಭಾಗ ಓದುವಾಗ ಗಂಗಾಧರ ಚಿತ್ತಾಲರ ಹರಿವ ನೀರಿದು ಕೂಡ ನೆನಪಾಯಿತು. ಅದು ಇನ್ನೊಂದೇ ಬರಹದ ವಸ್ತುವಾಗುತ್ತದೆ.

Rating
Average: 5 (2 votes)