ಕಾಣದ ಕ್ಯೆ

ಕಾಣದ ಕ್ಯೆ

ಬರಹ

ಎಲ್ಲವೂ ನನ್ನಿಂದಲೇ - ನನ್ನಿಂದಲೇ ಎಲ್ಲವೂ ಎಂದು ಭಾವಿಸಿರುವ ನಾವುಗಳು ಕೆಲವು ಸ್ವಂತ ಅನುಭವಗಳನ್ನು ತೆರೆದ ಕಣ್ಣಿನಿಂದ ನೋಡಿದಾಗ ನಮ್ಮ ಕುಬ್ಜತನದ ಅರಿವಾದೀತು. ಕಷ್ಟಗಳು, ಸಮಸ್ಯೆಗಳು ಎಲ್ಲರಿಗೂ ಬಂದೇ ಬರುತ್ತದೆ. ಅಂತಹ ಕ್ಐ ಮೀರಿದ ಅನೇಕ ಸಂದರ್ಭಗಳಲ್ಲಿ ನಮಗೆ ಅನಿರೀಕ್ಷಿತವಾದ ಜಾಗದಿಂದ, ಅಪರಿಚಿತ ವ್ಯಕ್ತಿಯಿಂದ ಇಲ್ಲವೇ ಕಾಣದ ಒಂದು ಶಕ್ತಿಯಿಂದ ಸಹಾಯ ಒದಗಿ ಬಂದಿರುತ್ತದೆ. ಅಂತಹ ಸಂದರ್ಭಗಳನ್ನು ನಾವೆಂದೂ ಮರೆಯಬಾರದು. ಆ ಉಪಕಾರ ಸ್ಮರಣೆ ಕಾಣುವ ಮತ್ತು ಕಾಣದಿರುವ ಶಕ್ತಿಗಳಿಗೂ ನಮ್ಮಿಂದ ಸಲ್ಲಿಕೆಯಾಗಬೇಕು. ತೆಗೆದುಕೊಂಡ ಸಹಾಯವನ್ನು ಮತ್ತು ಉಪಕಾರವನ್ನು ನೆನೆಯದಿರುವವನು8 ಮಹಾ ದ್ರೋಹಿಯೇ ಸರಿ. ಇಂತಹ ಒಂದು ನನ್ನ ಸ್ವಂತ ಅನುಭವವನ್ನು ಇಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳಬಯಸುತ್ತೇನೆ.

ಸುಮಾರು 20 ವರ್ಷಗಳ ಹಿಂದಿನ ಮಾತು. ಚೊಚ್ಚಲ ಹೆರಿಗೆಗಾಗಿ ನನ್ನ ಮಡದಿಯನ್ನು ಸರ್ಕಾರೀ ಆಸ್ಪತ್ರೆಗೆ ದಾಖಲಿಸಿದ್ದವು. ಸಿಸೇರಿಯನ್ ಆಪರೇಷನ್ ಆಗಿದ್ದರಿಂದ ಒಂದು ವಾರ ಕಾಲ ಅಲ್ಲಿಯೇ ಇರಬೇಕಾಯಿತು. ಹೊಲಿಗೆ ಬಿಚ್ಚಿ ವ್ಯೆದ್ಯರು ಮನೆಗೆ ಹೋಗಲು ಅನುಮತಿ ಇತ್ತರು. ಆಗ ಸುಮಾರು ಬೆಳಿಗ್ಗೆ 9 ಗಂಟೆ. ನಾವುಗಳು 10.30ರ ವೇಳೆಗೆ ಮನೆಗೆ ಹೋಗುವುದೆಂದು ತೀರ್ಮಾನಿಸಿದೆವು. ಆದರೆ, ಹೊರಡುವ ಸ್ವಲ್ಪ ಮುಂಚೆ ನನ್ನ ಶ್ರೀಮತಿ ಈಗ ಬೇಡ, ಸಂಜೆ ಹೋಗೋಣ ಎಂದಾಗ ನಾನೂ ತಲೆಯಾಡಿಸಿದ್ದೆ. ಆದರೆ ಸ್ವಲ್ಪ ಸಮಯದಲ್ಲಿಯೇ ನನ್ನ ಶ್ರೀಮತಿ ಪುನ: ಮನಸ್ಸು ಬದಲಾಯಿಸಿ ತಕ್ಷಣ ಹೊರಡಲು ಒತ್ತಾಯಿಸಿದಾಗ ನಾವು ಮನೆಗೆ ಹೊರಟೆವು. ನಾವು ಮನೆ ಸೇರಿ ಇನ್ನೂ 10 ನಿಮಿಷ ಕೂಡ ಆಗಿರಲಿಲ್ಲ. ನನ್ನ ಮಡದಿಯನ್ನು ಮತ್ತು ಮಗುವನ್ನು ಉಪಚರಿಸುತ್ತಿದ್ದ ನರ್ಸ್ ಓಡುತ್ತಾ ನಮ್ಮ ಮನೆಗೆ ಬಂದಾಗ ನಮಗೆ ಗಾಬರಿ. ವಿಷಯ ಏನೆಂದರೆ, ಯಾವ ಹಾಸಿಗೆಯ ಮೇಲೆ ನನ್ನ ಶ್ರೀಮತಿ ಮತ್ತು ಮಗು ಒಂದು ವಾರ ಕಳೆದಿದ್ದರೋ ಮತ್ತು ಮಗು ಯಾವ ಸ್ಥಳದಲ್ಲಿ ಮಲಗುತ್ತಿತ್ತೋ ಅದರ ಮೇಲೆ ಹಳೆ ಸರ್ಕಾರೀ ಆಸ್ಪತ್ರೆ ಕಟ್ಟಡದ ಒಳ ಛಾವಣಿಯ ಗಾರೆಯ ಒಂಡು ದೊಡ್ಡ ತುಂಡು ಬಿದ್ದಿತ್ತು! ಸಾಯಂಕಾಲ ಹೊರಡೋಣವೆಂದುಕೊಂಡಿದ್ದ ವಿಚಾರವನ್ನು ನೆನೆಸಿಕೊಂಡ ನಾವೆಲ್ಲಾ ನಿಜವಾಗಿ ಆಗ ನಡುಗಿಬಿಟ್ಟೆವು. ತಕ್ಷಣ ಹೊರಡಲು ನನ್ನ ಶ್ರೀಮತಿಯನ್ನು ಪ್ರೇರೇಪಿಸಿದ ಆ (ದಿವ್ಯ) ಶಕ್ತಿಗೆ ಶರಣೆಂದೆವು. ಆ ನನ್ನ ಮಗನೇ ಇಂದು ರಾಜ್ಯ ಮಟ್ಟದ ಓರ್ವ ಪ್ರತಿಭಾನ್ವಿತ ವಯೋಲಿನ್ ವಾದಕ ಎಂಬುದನ್ನು ಈ ಘಟನೆಯ ಹಿನ್ನೆಲೆಯಲ್ಲಿ ನೆನೆಸಿಕೊಂಡಾಗಲೆಲ್ಲಾ ಮ್ಯೆ-ಮನಸ್ಸು ಝುಮ್ ಎನುತ್ತದೆ. ಆ ದಿವ್ಯ ಪ್ರೇರಣೆಗೆ ತಲೆಬಾಗುತ್ತದೆ.

ಅರ್ಥವಾಗದ್ದಕ್ಕೆ, ಅರಗಿಸಿಕೊಳ್ಳಲಾಗದ್ದಕ್ಕೆ ಮತ್ತು ವಿವರಣಾತೀತವಾದಂತಹ ಮೇಲಿನಂತಹ ಶಕ್ತಿಗಳಿಗೆ ಸದಾ ಶರಣು ಶರಣು ಎನ್ನಲಷ್ಟೇ ನಮಗೆ ಸಾಧ್ಯ.... ಏನಂತೀರಿ?