ನನ್ನ ತಂಗಿ

ನನ್ನ ತಂಗಿ

ಬರಹ

"ಸಂತೋಷವನ್ನು ಎಲ್ಲರ ಜೊತೆ ಹಂಚಿಕೋ ದುಃಖವನ್ನು ಒಬ್ಬನೇ ಅನುಭವಿಸು" ಎಂದು ಹೇಳುತ್ತಾರೆ. ಆದ್ರೆ ನನ್ನ ದುಃಖವನ್ನು ಸಂಪದ ಬಳಗದ ಜೊತೆ ಹಂಚಿಕೊಳ್ಳುವ ಮನಸ್ಸಾಗಿದೆ.

ರಾತ್ರಿ ಅಮ್ಮ ಫೋನ್ ಮಾಡಿ 'ಸೋನಿ'ಗೆ ತುಂಬಾ ಹುಷಾರಿಲ್ಲ ನಿನ್ನೆಯಿಂದ ನನಗೆ ತುಂಬಾ ಬೇಜಾರಾಗಿದೆ ಎಂದು ಅಳುತ್ತಾ ಫೋನ್ ಮಾಡಿದರು. ಅಮ್ಮನಿಗೆ ನಾನು ಅತ್ತೆನೆಂದರೆ ಮತ್ತೂ ಅಳಲು ತೊಡಗುತ್ತಾರೆ. ಆದ್ದರಿಂದ ನಾನು ನನ್ನ ದುಃಖವನ್ನು ಅದುಮಿಟ್ಟುಕೊಂಡು ಹೋಗಲಿ ಬಿಡು ಅವಳಿಗೆ ವಯಸ್ಸಾಯ್ತಲ್ವಾ ಎಂದು ಸಮಾಧಾನ ಮಾಡಿದೆ. ಆದರೆ ರಾತ್ರಿಯೆಲ್ಲಾ ಅವಳನ್ನು ನೆನೆ ನೆನೆದು ಅತ್ತೆ. ಅವಳು ನಮ್ಮ ಮನೆಯಲ್ಲಿಯೇ ಹುಟ್ಟಿ ಬೆಳೆದ ನನ್ನ ಮುದ್ದಿನ ತಂಗಿ, ನಮ್ಮ ಮುದ್ದಿನ ಬೆಕ್ಕು.

ಸಾಮಾನ್ಯವಾಗಿ ಬೆಕ್ಕುಗಳು ನಾಯಿಗಳಂತೆ ಮನುಷ್ಯರ ಜೊತೆ ಹೆಚ್ಚು ಬೆರೆಯುವ ಪ್ರಾಣಿಗಳಲ್ಲ ಎಂದು ಕೇಳಿದ್ದೇನೆ. ಆದರೆ ಸೋನಿ ಅದಕ್ಕೆ ವ್ಯತಿರಿಕ್ತವಾಗಿದ್ದಳು. ಅಮ್ಮ ನನ್ನನ್ನು ಅಥವಾ ಸೋನಿಯನ್ನು ಬಯ್ಯುವಾಗೆಲ್ಲಾ ನಿನ್ನಂತೆ ಅದಕ್ಕೂ ಬುದ್ದಿ ಕಲಿಸಿಬಿಟ್ಟಿದ್ದೀಯಾ ಎಂದು ಸೇರಿಸಿಯೇ ಬಯ್ಯುವುದು ರೂಢಿ. ಅವಳ ಅಮ್ಮ ತುಂಬಾ ಸುಂದರವಾಗಿದ್ದವಳು. ಅವಳ ಮೈ ನಾಲ್ಕು ಬಣ್ಣಗಳಿಂದ ಕೂಡಿದ್ದು ಇಡಿ ಬೀದಿಯ ಜನರಿಗೆಲ್ಲಾ ಅಚ್ಚು ಮೆಚ್ಚಿನವಳು. ಅವಳು ನಮ್ಮ ಮನೆಯ ಬೆಕ್ಕಾಗಿರದೇ ಬೇರೆಯ ಮನೆಯ ಬೆಕ್ಕಾದರೂ ಒಮ್ಮೆಯಾದರೂ ಅವಳನ್ನು ಮುಟ್ಟಬೇಕೆನ್ನುವ ನನ್ನ ಆಸೆ ತುಂಬಾ ದಿನಗಳವರೆಗೆ ಈಡೇರಿಯೇ ಇರಲಿಲ್ಲ. ಅವಳಿಗೆ ವಯಸ್ಸಾಯಿತೆಂತಲೋ ಏನೋ ಅವರ ಮನೆಯವರು ಅವಳನ್ನು ಆಚೆ ಹಾಕಿದ್ದರು. ಆಗ ನಾನವಳ ಪ್ರೀತಿಯನ್ನು ಹೇಗೋ ಗಳಿಸಿಕೊಂಡು ನನ್ನ ಮನೆಯಲ್ಲಿರಿಸಿಕೊಂಡಿದ್ದೆ. ನಮ್ಮ ಮನೆಯವಳೇ ಆಗಿಹೋದ ಸೀಬಿ(ನಾವಿಟ್ಟ ಹೆಸರು) ನಮ್ಮ ಮನೆಯಲ್ಲಿ ಮೂರು ಮರಿಗಳನ್ನು ಹಾಕಿದಳು. ಅವುಗಳಲ್ಲಿ ಕುರೂಪಿಯಲ್ಲದಿದ್ದರೂ ಸುಂದರಿಯೂ ಅಲ್ಲದವಳೇ ನಮ್ಮ ಸೋನಿ. ಉಳಿದಿಬ್ಬರು ಮೋನಿ ಮತ್ತು ಶಿಬಾನಿಯರು ನಮ್ಮ ಪ್ರೀತಿಯ ಮಕ್ಕಳು. ಸೋನಿ ಅಷ್ಟಕ್ಕಷ್ಟೆ. ಮೋನಿ ಮತ್ತು ಶಿಬಾನಿಯರನ್ನು ತುಂಬಾ ಪ್ರೀತಿಯಿಂದ ತೆಗೆದುಕೊಂಡುಹೋದವರು ಅವುಗಳನ್ನು ಸ್ವಲ್ಪದಿನಗಳಲ್ಲಿಯೇ ಕೊನೆಗಾಣಿಸಿಯೂ ಬಿಟ್ಟಿದ್ದರು. ಯಾರಿಗೂ ಬೇಡದವಳಾಗುಳಿದ ಸೋನಿ ಹೇಗೋ ನಮ್ಮ ಪ್ರೀತಿಪಾತ್ರಳಾಗಿದ್ದಳು. ಆದರೂ ಅವಳನ್ನು ನಮ್ಮ ಮುಂದಿನ ಬೀದಿಯ ಮನೆಯವರಿಗೆ ಕೊಟ್ಟುಬಿಟ್ಟಿದ್ದೆವು. ಅಲ್ಲಿಂದ ಶುರುವಾಯಿತು ಅವಳ ಆಟಾಟೋಪಗಳು ಅವರಾರಿಗೂ ಕಾಣದಂತೆ ನಮ್ಮ ಮನೆಯಲ್ಲಿ ಹಾಜರ್. ಎರಡು ದಿನ ನೋಡಿ ತೆಗೆದುಕೊಂಡುಹೋಗಿ ಕಟ್ಟಿಹಾಕಿದರು. ಅದೇ ದಿನ ದಾರದ ಸಮೇತವಾಗಿ ಸೋನಿ ಮನೆಯಲ್ಲಿದ್ದಳು. ಸರಿ ದೂರದಲ್ಲಿದ್ದ ಪರಿಚಯದವರ ಮನೆಗೆ ಸಾಗಿಸಿದೆವು. ಅವರಿಗೆ ಕಟ್ಟಿಹಾಕಿರೆಂದು ಹೇಳಿದೆವು. ಸರಿ, ಎರಡು ದಿನ ಕಳೆದ ಮೇಲೆ ಅಮ್ಮ ಸೋನಿಯನ್ನು ನೋಡಿಬರುವ ಆಸೆಯಿಂದ ಅವರ ಮನೆಗೆ ನೋಡಲು ಹೋದರೆ,ನೋಡುವುದೇನು ಸೋನಿಯನ್ನು ಅವರು ಉಪಯೋಗಿಸದ ಟಾಯ್ಲೆಟ್ ನಲ್ಲಿ ಕೂಡಿಹಾಕಿ ಅದು ಏನೂ ತಿನ್ನದೇ ಬಿದ್ದಿದ್ದನ್ನು ನೋಡಿ ಅಮ್ಮನಿಗೆ ಏನೆನ್ನಿಸಿತೋ ತಕ್ಷಣ ಸೋನಿಯನ್ನು ಮನೆಗೆ ಕರೆತಂದು ಆ ಮನೆಯವರನ್ನು ಹಿಗ್ಗಾಮುಗ್ಗಾ ಬಯ್ಯತೊಡಗಿದರು. ನಾವೆಲ್ಲರೂ ಈ ಘಟನೆಯಿಂದ ಅವರೊಡನೆ ಕೆಲವು ದಿನ ಮಾತು ಬಿಟ್ಟದ್ದು ಉಂಟು. ಅಲ್ಲಿಂದ ಅವಳು ಎಲ್ಲಿಯೂ ಹೋಗದೇ ಉಳಿದುಬಿಟ್ಟಳು. ಅವಳಮ್ಮ ಎರಡನೇ ಮರಿಹಾಕಿದಾಗ ಅವಳ ಮರಿಯೊಡನೆ ಇವಳು ಹಾಲು ಕುಡಿಯಲು ಹೋಗುತ್ತಿದ್ದುದ್ದನ್ನು ನೋಡಲು ನಮಗೆಲ್ಲಾ ಮೋಜು.

ಈ ಪ್ರೀತಿಯನ್ನು ದೇವರಿಗೆ ಸಹಿಸಲು ಸಾಧ್ಯವಾಗಲಿಲ್ಲವೇನೋ, ಒಂದು ದಿನ ಪೇಟೆ ಬೀದಿಯಿಂದ ಬರುತ್ತಿದ್ದ ನಮಗೆ ನಿಮ್ಮಬೆಕ್ಕನ್ನು ಯಾರೋ ಹಕ್ಕಿಪಿಕ್ಕಿಯವರು ಹಿಡಿದುಕೊಂಡು ಹೋದರೆಂದು ಪಕ್ಕದ ಮನೆಯವರು ಹೇಳಿದಾಗ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ಯಾವ ಬೆಕ್ಕು ಎಂದು ತಿಳಿಯಲಿಲ್ಲ. ಮನೆಗೆ ಬಂದರೆ ಸೋನಿ ಅಲ್ಲಿಯೇ ಇದ್ದಳು. ಸರಿ ಅವರು ಇರುವ ಜಾಗಗಳಿಗೆಲ್ಲಾ ಅಂದು ಅಲೆದದ್ದಾಯಿತು. ಎಲ್ಲಿಯೂ ನಮ್ಮ ಸೀಬಿಯ ಅವಶೇಷಗಳಾಗಲೀ ಅವಳಾಗಲೀ ಸಿಗಲಿಲ್ಲ. ದುಃಖ ತಡೆಯಲಾಗದೇ ಅವರಿಗೆ ಶಾಪ ಹಾಕಿದ್ದಾಯಿತು. ಅಂದು ಯಾರೋ ನಮ್ಮನ್ನು ನೋಡಲೆಂದೇ ದೂರದ ಊರಿನಿಂದ ಬಂದದ್ದರಿಂದ ನಾವು ಅವರ ಕಡೆಯೂ ಗಮನ ನೀಡಬೇಕಾಗಿತ್ತು. ಈ ನಡುವೆ ಸೋನಿಯನ್ನು ಎಲ್ಲೂ ಹೋಗಬಾರದೆಂದು ನಾನೇ ಕಟ್ಟಿಹಾಕಿದ್ದೆ. ಅದು ಹೇಗೆ ಬಿಚ್ಚಿಕೊಂಡಳೋ ಹಗ್ಗದ ಸಮೇತವಾಗಿ ಹೊರಟುಹೋಗಿದ್ದಳು. ಹುಡುಕಿದರೆ ಎಲ್ಲಿಯೂ ಇಲ್ಲ. ಹುಡುಕುತ್ತಿರುವಾಗ ಅವಳ ಕ್ಷೀಣವಾದ ದನಿ ಕೇಳುತ್ತಿತ್ತು. ಎಲ್ಲಿಂದ ಎಂಬುದು ಗೊತ್ತಿಲ್ಲ. ಅವಳಿದ್ದದ್ದು ಯಾರೂ ಉಪಯೋಗಿಸದ ಪಾಚಿ ಕಟ್ಟಿದ್ದ ಹಾಳು ನೀರಿನ ಬಾವಿಯಲ್ಲಿ. ಹುಡುಕುತ್ತಾ ಆ ಕತ್ತಲಿನ ಜಾಗಕ್ಕೆ ಟಾರ್ಚ್ ಬಿಟ್ಟಾಗ ಅವಳ ದನಿ ಕೇಳಿತು. ಬಾವಿಯ ಒಳಗೆ ಟಾರ್ಚ್ ಬಿಟ್ಟರೆ ಅರ್ಧ ನೀರಿನಲ್ಲಿ ಮುಳುಗಿ ಒಂದು ಕಲ್ಲಿನ ಮೇಲೆ ಮುಂದಿನ ಕಾಲಿಟ್ಟು ನಮ್ಮೆಡೆಗೆ ನೋಡಿ ಕರುಣಾಜನಕವಾಗಿ ನಮ್ಮೆಡೆಗೆ ನೋಡುತ್ತಿದ್ದ ಅವಳ ಮುಖ ಈಗಲೂ ಕಣ್ಣ ಮುಂದೆ ಬರುತ್ತದೆ. ನನ್ನ, ಅಮ್ಮನ ರೋಧನ ಆ ರಾತ್ರಿ ಇಡೀ ಬೀದಿಗೆಲ್ಲಾ ಮುಟ್ಟಿತ್ತು. ಅದನ್ನ ನೋಡಲಾಗದೇ ಅಲ್ಲಿಯ ಜನ ಒಂದು ಬುಟ್ಟಿಯನ್ನು ಬಾವಿಗೆ ಬಿಟ್ಟು ಅವಳನ್ನು ಎಳೆದು ಕೊಟ್ಟಾಗ ನೆನೆದು ಮುದ್ದೆಯಾಗಿದ್ದ ಅವಳನ್ನು ತಬ್ಬಿಕೊಂಡು ಮನೆಯಲ್ಲಿ ಬಟ್ಟೆಯಿಂದ ಉಜ್ಜಿ ಪಕ್ಕದಲ್ಲೇ ಮಲಗಿಸಿಕೊಂಡು ಇನ್ನೊಂದಿಷ್ಟು ಅತ್ತದ್ದಾಯಿತು. ಮನೆಯಲ್ಲಿ ಒಬ್ಬಳೇ ರಾಣಿಯಾಗಿ ಉಳಿದ ಸೋನಿ ನಮ್ಮ ಮನೆಯ ಸದಸ್ಯೆಯಾಗಿ ಪಾಲನ್ನು ಪಡೆದು ನನ್ನ ತಂಗಿಯಾದಳು. ಮತ್ತೆರಡು ಬಾರಿ ಹಕ್ಕಿಪಿಕ್ಕಿಯವರ ಕೈಗೆ ಸಿಕ್ಕಿ ಅವಳು ಪಾರಾಗಿದ್ದು ಉಂಟು. ಒಮ್ಮೆಯಂತೂ ಅವರನ್ನು ನೋಡಿದ ಅಮ್ಮ ಪೊರಕೆ ತೆಗೆದುಕೊಂಡು ಹೊಡೆಯಲು ಹೋದದ್ದು ಉಂಟು.

ಸೋನಿ ಮೊದಲ ಬಾರಿ ಮರಿ ಹಾಕುವಾಗ ನಮಗೆಲ್ಲಾ ಸಂಭ್ರಮ. ನಾನು ಕೇಳಿದ ಮಟ್ಟಿಗೆ ಬೆಕ್ಕು ಯಾರು ಕಾಣದ ಹಾಗೆ ಮರಿಗಳನ್ನು ಹಾಕುತ್ತದೆ. ಅದರ ಮರಿಗಳ್ನ್ನು ಮುಟ್ಟಲು ಬಿಡುವುದಿಲ್ಲ. ನಮ್ಮ ಸೀಬಿ ಕೂಡ ಹಾಗೇ ಇದ್ದಳು. ಆದರೆ ನಮ್ಮ ಸೋನಿಯೋ ಮಂಚದ ಮೇಲೆ ಮಲಗಿ ನಮ್ಮನ್ನು ಮ್ಯಾವ್ ಮ್ಯಾವ್ ಎಂದು ಕರೆಯತೊಡಗಿದಳು. ನಮಗೆ ಏನೂ ತಿಳಿಯದಿದ್ದರೂ ಅವಳ ಹೊಟ್ಟೆಯನ್ನು ಸವರತೊಡಗಿದೆವು. ಅವಳ ಆಗಿನ ಪ್ರತಿಕ್ರಿಯೆಯಂತೂ ನಮಗೆ ಕಣ್ಣಲ್ಲಿ ನೀರು ತರುತ್ತಿತ್ತು. ಸರಿ ಪ್ರತೀ ಬಾರಿ ಅವಳು ಮರಿ ಹಾಕುವಾಗ ನಾವು ಪಕ್ಕದಲ್ಲಿ ಇರುವುದು ರೂಢಿಯಾಗಿಹೋಯ್ತು. ಅವಳು ಮರಿ ಹಾಕುವುದನ್ನು ನಾನು ಪ್ರತೀ ಬಾರಿಯೂ ನೋಡುತ್ತಿದ್ದೆ.
ನಾವು ಬಾಡಿಗೆ ಮನೆಯಿಂದ ನಮ್ಮ ಸ್ವಂತ ಮನೆಗೆ ಹೋಗಬೇಕಾಗಿ ಬಂತು. ಆಗ ನಮಗೆ ಎದುರಾದ ದೊಡ್ಡ ಸಮಸ್ಯೆ ಸೋನಿಯನ್ನು ಅಲ್ಲಿಗೆ ಹೊಂದಿಕೊಳ್ಳುವಂತೆ ಮಾಡುವುದು. ಮೊದಲೆರಡು ದಿವಸಗಳು ಹೊಸ ಮನೆಯಲ್ಲಿ ಕಟ್ಟಿ ಹಾಕಿದರೂ ಬಿಡಿಸಿಕೊಂಡು ಹಳೆಯ ಮನೆಯ ಬಳಿಗೆ ಓಡಿಹೋಗುತ್ತಿದ್ದಳು. ದಿನ ಕಳೆದಂತೆ ಹೊಸಮನೆಗೆ ಹೊಂದಿಕೊಳ್ಳತೊಡಗಿದಳು. ಇತ್ತೀಚಿನವರೆಗೂ ತನ್ನ ಹಳೆಯ ಸ್ನೇಹಿತರನ್ನು ಕಾಣಲು ಅಲ್ಲಿಗೆ ಹೋಗಿ ವಾಪಸ್ಸಾಗುತ್ತಿದ್ದಳು.

ನಮ್ಮ ಅಪ್ಪನ ಪ್ರೀತಿಯ ಮಗಳಾಗಿದ್ದ ಅವಳಿಗಾಗಿಯೇ ಪ್ರತಿ ದಿನವೂ ರಾತ್ರಿಗೆ ವಿಶೇಷವಾದ ತಿಂಡಿಗಳು. ಅವಳು ತಿಂದು ಸಾಕಾದರೆ ಉಳಿದಿದ್ದು ನಮಗೂ ಸಿಗುತ್ತಿತ್ತು. ಆಗ ನಾವೆಲ್ಲಾ ಆಹಾಹಾ.... ಬಿತ್ರಿ ಹೇಗೆ ತಿಂತಾಳೆ ನೋಡು ಹೋದ ಜನ್ಮದಲ್ಲಿ ಅವರ ತಾಯಿಯಾಗಿರಬೇಕು ಅದಕ್ಕೆ ಈಗ ಸುಖ ಅನುಭವಿಸುತ್ತಿದ್ದಾಳೆ ಎಂದು ಅಸೂಯೆ ಪಡುತ್ತಿದ್ದದ್ದೂ ಉಂಟು. ಅವಳಿಗೆ ಹದಿಮೂರು ತುಂಬಿಬಿಟ್ಟಿತು. ಅದಕ್ಕಾಗಿಯೇ ಊರಿನಿಂದ ಬರುವಾಗ ನನ್ನ ಮೊಬೈಲ್ ನಲ್ಲಿ ಅವಳನ್ನು ಸೆರೆಹಿಡಿದುಕೊಂಡಿದ್ದೆ. ಮನಸ್ಸಿನಲ್ಲಿ ಅನ್ನಿಸಿತ್ತು ನಾನು ಮತ್ತೆ ಬರುವಾಗ ನೋಡಲು ಅವಳು ಸಿಗುತ್ತಾಳೋ ಇಲ್ಲವೋ ಎಂದು. ಹೀಗೆ ಬೆಳೆಯುವ ಋಣಾನುಬಂಧಗಳು ಕೆಲವು ವೇಳೆ ಯಾವ ರೀತಿ ಬೆಸೆದುಕೊಂಡಿರುತ್ತವೆಂದರೆ ಜೀವನ ಪೂರ್ತಿ ಕಳೆದುಕೊಂಡ ನೋವು ಉಳಿದುಬಿಡುತ್ತದೆ. ನಾನು ಮತ್ತೆ ಮನೆಗೆ ಹೋದಾಗ ಅವಳು ಇಲ್ಲದಿದ್ದರೆ ನಾನು ಯಾರನ್ನು ಮುದ್ದಾಡುತ್ತ ಕೂರಲಿ. ಅವಳ ಮಗಳು,ಮೊಮ್ಮಗಳು ನಮ್ಮ ಮನೆಯಲ್ಲಿಯೇ ಇದ್ದಾರೆ. ಆದರೆ ಅವರೊಂದಿಗೆ ನನಗೆ ಯಾವ ನಂಟು ಇಲ್ಲ. ಅವಳ ಸ್ಥಾನವನ್ನು ಅವರು ತುಂಬಲಾಗುವುದಿಲ್ಲ. ದೇವರೇ ನನಗಾಗಿ ಅವಳನ್ನು ಉಳಿಸಿಕೊಡು.......?